ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ: ರಾಜಧಾನಿಯಲ್ಲಿಯೇ ಸಿಗದ ಶುಶ್ರೂಷೆ

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದಿಂದ ಆರು ಕಿ.ಮೀ ದೂರದಲ್ಲಿರುವ ದೇವರಜೀವನಹಳ್ಳಿಯಲ್ಲಿ ಅಪೌಷ್ಟಿಕತೆಯಿಂದ ಬುಧವಾರ ಸಾವನ್ನಪ್ಪಿದ ಮೇಘಲಾ ಪ್ರಕರಣದಿಂದ ರಾಜ್ಯದ ರಾಜಧಾನಿಯ ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಸಮರ್ಪಕ ಶುಶ್ರೂಷೆ ದೊರೆಯುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ನಗರದ ಹೃದಯಭಾಗದಲ್ಲೇ ಇರುವ ದೇವರ ಜೀವನಹಳ್ಳಿಯ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಬಹುತೇಕ ಮಕ್ಕಳಿಗೆ ಪೌಷ್ಟಿಕ ಹಾಗೂ ಔಷಧಿಯುಕ್ತ ಆಹಾರ, ನಿಯಮಿತ ವೈದ್ಯಕೀಯ ತಪಾಸಣೆ ಸೌಲಭ್ಯ ದೊರೆಯುತ್ತಿಲ್ಲ. ದೇವರಜೀವನಹಳ್ಳಿಯ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿವೆ.

ಆದರೆ, ಎಲ್ಲ ಅಂಗನವಾಡಿ ಕೇಂದ್ರಗಳ ಹಣೆಬರಹ ಒಂದೇ ಆಗಿದೆ. ಪ್ರತಿ ಕೇಂದ್ರದಲ್ಲಿಯೂ ಅಪೌಷ್ಟಿಕತೆಯಿಂದ ನರಳುತ್ತಿರುವ 10ಕ್ಕೂ ಹೆಚ್ಚು ಮಕ್ಕಳು ಕಾಣಸಿಗುತ್ತಾರೆ. ಅಂಗನವಾಡಿಯಲ್ಲಿ ದಾಖಲಾಗಿ ಹಲವು ಕಾರಣಗಳಿಂದ ಮನೆಯಲ್ಲಿಯೇ ಉಳಿದಿರುವ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆಯೆಂಬುದು ಮರೀಚಿಕೆಯಾಗಿದೆ ಎನ್ನುವುದು ಸ್ಥಳಕ್ಕೆ ಭೇಟಿ ನೀಡಿದಾಗ ಅರಿವಾಗುತ್ತದೆ.

`ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ದೈಹಿಕ ಹಾಗೂ ಮಾನಸಿಕ ವಿಕಲಾಂಗ ಮಕ್ಕಳ ಮನೆಗೆ ಕೇಂದ್ರದ ಸಹಾಯಕರೇ ಸ್ವತಃ  ತೆರಳಿ ಪೌಷ್ಟಿಕ ಆಹಾರವನ್ನು ವಿತರಿಸುವ ಕಾರ್ಯಕ್ಕೆ ಮುಂದಾಗಬೇಕು. ಆದರೆ ಇದು ಎಲ್ಲ ಕಡೆಗಳಲ್ಲಿ ಪಾಲನೆಯಾಗದೇ ಇರುವುದರಿಂದ ಆರು ವರ್ಷದ ಮೇಘಲಾ ಎಂಬ ಬಡ ಮಗು ಶ್ವಾಸಕೋಶದ ಸೋಂಕಿನಿಂದ ಅಸುನೀಗಿದೆ. ಇಂತಹ `ಮೇಘಲಾ' ದೇವರಜೀವನಹಳ್ಳಿಯಲ್ಲಿ ಗಲ್ಲಿಗಲ್ಲಿಗೂ ಸಿಗುತ್ತಾರೆ' ಎಂದು ಸ್ಥಳೀಯ ನಿವಾಸಿ ಅಜೀರ್ ಹೇಳುತ್ತಾರೆ.

ಮೂಲಸೌಕರ್ಯಗಳ ಕೊರತೆ: ಉತ್ತಮ ಕಟ್ಟಡ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಹಾಗೂ ಸತ್ವಯುತ ಆಹಾರದಿಂದ ಈ ಎಲ್ಲಾ ಕೇಂದ್ರಗಳು ಬಹುದೂರ ಉಳಿದಿವೆ. ದೇವಸ್ಥಾನದ ಪಾಳು ಬಿದ್ದ ಮಂಟಪ, ಶೌಚಾಲಯದ ಪಕ್ಕವಿರುವ ದಾಸ್ತಾನು ಕೊಠಡಿಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಇನ್ನೂ ಕೆಲವೆಡೆ ಸ್ಥಳಾವಕಾಶ ಲಭ್ಯವಿಲ್ಲದ ಕಾರಣ ಒಂದೇ ಕೊಠಡಿಯಲ್ಲಿ ಮೂರು ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಸಂಖ್ಯೆ 70ಕ್ಕಿಂತ ಹೆಚ್ಚಿದೆ. ಕೊಳಚೆ ನೀರು, ಗಬ್ಬುವಾಸನೆಯ ನಡುವೆ  ಮಕ್ಕಳು ಸರ್ಕಾರ ನೀಡುವ `ಪೌಷ್ಟಿಕ ಆಹಾರ'ವನ್ನು ಸೇವಿಸುತ್ತಿದ್ದಾರೆ. 

ಸರ್ಕಾರ ಸಮರ್ಪಕ ಪೌಷ್ಟಿಕ ಆಹಾರ ಒದಗಿಸಿದರೂ, ಶುಚಿತ್ವ ಹಾಗೂ ಮೂಲಸೌಕರ್ಯಗಳೇ ಇಲ್ಲದ ಕೊಠಡಿಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಇರುವ ಮಕ್ಕಳ ಆರೋಗ್ಯ ಸ್ಥಿತಿ ಹದಗೆಡುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರವಿಲ್ಲ. `ಮಳೆಗಾಲ ಬಂತೆಂದರೆ ಅಂಗನವಾಡಿ ಕೇಂದ್ರದ ತುಂಬೆಲ್ಲ ನೀರು. ಕೇಂದ್ರದ ಕೂಗಳತೆ ದೂರದಲ್ಲಿಯೇ ಇರುವ ತ್ಯಾಜ್ಯದ ರಾಶಿಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ. ಮನೆಯಲ್ಲಿ ಮಗುವಿಗೆ ಮೂರು ಹೊತ್ತು ಊಟ ನೀಡಲಾರದಷ್ಟು ಬಡತನವಿದೆ. ಅಂಗನವಾಡಿಗೆ ಕಳುಹಿಸೋಣವೆಂದರೆ ಮಳೆಗಾಲದ ಭಯ. ಈ ಸಂದರ್ಭದಲ್ಲಿ ಮಗುವಿಗೆ ಪೌಷ್ಟಿಕ ಆಹಾರ ಸಮರ್ಪಕವಾಗಿ ದೊರೆಯುವುದಿಲ್ಲ' ಎಂದು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗು ನಜೀರ್‌ನ ತಾಯಿ ರೋಷನಿ ಬೇಗ್ ನೊಂದು ನುಡಿದರು.

ಕೇಂದ್ರ ಸರ್ಕಾರದ ಶಿಶು  ಸಮಗ್ರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆರು ವರ್ಷದವರೆಗೆ ಮಕ್ಕಳಿಗೆ ಪೂರಕ ಆಹಾರ ನೀಡಬೇಕು. ಸಾಮಾನ್ಯವಾಗಿ ಮೂರು ವರ್ಷದೊಳಗಿನ ಬಡಮಕ್ಕಳ ಮನೆಗೆ ಆಹಾರ ವಿತರಣೆ ಹಾಗೂ ಆರು ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಪೂರೈಸಲಾಗುತ್ತದೆ. ಅಪೌಷ್ಟಿಕತೆಯಿಂದ ನರಳುತ್ತಿರುವ ಫಲಾನುಭವಿ ಮಕ್ಕಳಿಗೆ ಮೂರು ಹೊತ್ತು ಊಟ, ಎರಡು ದಿನಗಳಿಗೊಮ್ಮೆ ಹಾಲು ಹಾಗೂ ನಾಲ್ಕು ದಿನಗಳಿಗೊಮ್ಮೆ ಮೊಟ್ಟೆ ವಿತರಿಸಲಾಗುತ್ತದೆ.

ಇಲಾಖೆಗಳ ನಿರ್ಲಕ್ಷ್ಯ?:  ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ತಿಂಗಳು ಫಲಾನುಭವಿಗಳ ಮನೆಗೆ ತೆರಳಿ ಮಗುವಿನ ತೂಕವನ್ನು ಪರೀಕ್ಷೆ ನಡೆಸಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ರವಾನಿಸಬೇಕು. ನಂತರ ಸಮರ್ಪಕ ಔಷಧಿಯೊಂದಿಗೆ, ಪೌಷ್ಟಿಕ ಆಹಾರವನ್ನು ಒದಗಿಸುವುದು ಆರೋಗ್ಯ ಇಲಾಖೆಯ ಸಿಬ್ಬಂದಿ ಜವಾಬ್ದಾರಿಯಾಗಿರುತ್ತದೆ. ಆದರೆ ಬಹುತೇಕ ಕಡೆಗಳಲ್ಲಿ ಇದನ್ನು ಸಮರ್ಪಕವಾಗಿ ಪಾಲನೆ ಮಾಡುತ್ತಿಲ್ಲ ಎಂದು `ಮರ' ಸ್ವಯಂಸೇವಾ ಸಂಸ್ಥೆಯ ಸಹಸ್ಥಾಪಕಿ ಏಕ್ತಾ ಮಿಥೆಲ್ ತಿಳಿಸಿದರು.

ಅಪೌಷ್ಟಿಕ ಮಕ್ಕಳಿಗೆ ಬಿಪಿಎಲ್? ನ್ಯಾಯಮೂರ್ತಿ ಎನ್.ಕೆ.ಪಾಟೀಲ ನೀಡಿರುವ ವರದಿಯನ್ವಯ ಅಪೌಷ್ಟಿಕತೆಯಿಂದ ನರಳುತ್ತಿರುವ ಎಲ್ಲ ಮಕ್ಕಳ ಪೋಷಕರಿಗೆ ಅಗತ್ಯವಾಗಿ ಬಿಪಿಎಲ್ ಕಾರ್ಡ್‌ಗಳನ್ನು ನೀಡುವ ಬಗ್ಗೆ ಹೈಕೋರ್ಟ್ ಆದೇಶವಿದೆ. ಇದರ ಆಧಾರದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವರದಿ ತಯಾರಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಳುಹಿಸಬೇಕು. ಈವರೆಗೆ ಅನುಷ್ಠಾನಗೊಂಡಿಲ್ಲ ಎಂದು ಅವರು ತಿಳಿಸಿದರು.

ಬಿಬಿಎಂಪಿಯ ಪೌಷ್ಟಿಕ ವಿಭಾಗದ ಡಾ.ಸುರೇಶ, `ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಸುಮಾರು 600ಕ್ಕೂ ಅಧಿಕ ಮಂದಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವುದನ್ನು ಪಾಲಿಕೆ ಗುರುತಿಸಿದೆ. ಇದಲ್ಲದೇ ಎರಡು ತಿಂಗಳಿಗೊಮ್ಮೆ ನಡೆಸುವ ಆರೋಗ್ಯ ಶಿಬಿರಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡಬಂದಿದೆ. ಪಾಲಿಕೆಯು ಈಗಾಗಲೇ ಇದನ್ನು ತೊಡೆದುಹಾಕುವತ್ತ ಸೌಕರ್ಯ ಒದಗಿಸುವ ಜತೆ ಅಭಿಯಾನ ಆಯೋಜಿಸಿದೆ' ಎಂದು ಮಾಹಿತಿ ನೀಡಿದರು.

ಕಡುಬಡವರಿಗೂ ಎಪಿಎಲ್!
ಮೃತಪಟ್ಟ ಮೇಘಲಾ ತಾಯಿ ಮುರುಗಮ್ಮ ಕಡು ಬಡವರಾಗಿದ್ದು, ದೃಷ್ಟಿದೋಷ ಹೊಂದಿದ್ದಾರೆ. `ಊದುಬತ್ತಿ ತಯಾರಿಕೆಯಿಂದ ನಾನು ದಿನಕ್ಕೆ  ರೂ.15 ಆದಾಯ ಗಳಿಸುತ್ತಿದ್ದೇನೆ. ನೆಲೆ ನಿಲ್ಲಲು ಸೂರಿಲ್ಲದೇ ಚರ್ಚ್ ಆವರಣದಲ್ಲಿಯೇ ದಿನದೂಡುತ್ತಿದ್ದೇನೆ. ನನಗೆ ಸರ್ಕಾರ ಎಪಿಎಲ್ ಕಾರ್ಡ್ ಒದಗಿಸಿದೆ' ಎಂದರು.

`ವಿಧವೆ ಮತ್ತು ಅಂಧಳಾಗಿರುವ ನನಗೆ ಎಪಿಎಲ್ ಕಾರ್ಡ್ ವಿತರಿಸಲಾಗಿದೆ. ಅಂಗನವಾಡಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪೌಷ್ಟಿಕ ಆಹಾರ ಕೊಡಿಸಲು ಸಾಧ್ಯವಾಗದಷ್ಟು ಅಶಕ್ತಳಾಗಿದ್ದೆ. ಅಂಗನವಾಡಿ ಸಹಾಯಕರೇ ಮಕ್ಕಳ ಮನೆಗೆ ಆಹಾರ ಪೂರೈಸಬೇಕೆಂಬ ನಿಯಮವಿದ್ದರೂ ಅದು ಜಾರಿಯಾಗದೇ ಮಗಳ ಜೀವವನ್ನೇ ಬಲಿಪಡೆಯಲಾಗಿದೆ' ಎಂದು ನೋವಿನಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT