ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ-ಅಮ್ಮನಿಂದಲೇ ಆರುಷಿ ಕೊಲೆ

ನ್ಯಾಯಾಲಯದಲ್ಲಿ ಸಿಬಿಐ ಅಧಿಕಾರಿ ಹೇಳಿಕೆ
Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಗಾಜಿಯಾಬಾದ್ (ಪಿಟಿಐ): ಇಡೀ ರಾಷ್ಟ್ರದ ಗಮನ ಸೆಳೆದ ಆರುಷಿ ಕೊಲೆ ಪ್ರಕರಣದಲ್ಲಿ, ಬಾಲಕಿಯ ಪೋಷಕರೇ ಮಗಳ ಕೊಲೆ ಎಸಗಿದ್ದಾರೆ ಎಂದು ಸಿಬಿಐ ಮಂಗಳವಾರ ನ್ಯಾಯಾಲಯದಲ್ಲಿ ಹೇಳಿದೆ.

ಕೊಲೆಯಾದ ರಾತ್ರಿ ಆರುಷಿ ನಿವಾಸವನ್ನು ಬೇರಾವುದೇ ವ್ಯಕ್ತಿ ಪ್ರವೇಶಿಸಿರುವ ಕುರುಹುಗಳಿಲ್ಲ. ಆರುಷಿಯ ತಂದೆ-ತಾಯಿಯರಾದ ರಾಜೇಶ್- ನೂಪುರ್ ತಲ್ವಾರ್ ದಂಪತಿಯೇ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ತನಿಖೆಯ ನೇತೃತ್ವ ವಹಿಸಿದ್ದ ಎ.ಜಿ.ಎಲ್.ಕೌಲ್ ಅವರು ಹೇಳಿದರು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ನ್ಯಾಯಾಧೀಶ ಎಸ್.ಲಾಲ್ ಅವರ ಮುಂದೆ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿ ಅವರು ಈ ಹೇಳಿಕೆ ನೀಡಿದರು.

2008ರ ಮೇ 15-16ರ ನಡು ರಾತ್ರಿ, ಆರುಷಿ ಮತ್ತು  ಮನೆಗೆಲಸಗಾರ ಹೇಮರಾಜ್ ಅವರ ಕೊಲೆ ನಡೆದ ಸಂದರ್ಭದಲ್ಲಿ ರಾಜೇಶ್- ನೂಪುರ್ ದಂಪತಿ ಮಾತ್ರ ಮನೆಯಲ್ಲಿದ್ದರು ಎಂದರು.

ಹೇಮರಾಜ್ ಶವವನ್ನು ಮೇಲ್ಛಾವಣಿ ಮೇಲಕ್ಕೆ ಎಳೆದು ಹಾಕಿದ್ದು, ಅದನ್ನು ಕೂಲರ್‌ನ ಫೈಬರ್ ಶೀಟ್‌ಗಳಿಂದ ಮುಚ್ಚಿದ್ದು, ಆರುಷಿ ಮಲಗಿದ್ದ ಕೋಣೆಯನ್ನು ಹೊರಗಿನಿಂದ ಭದ್ರವಾಗಿ ಹಾಕಿದ್ದು, ಕೊಲೆ ನಡೆದ ಜಾಗವನ್ನು ಒಪ್ಪ ಓರಣವಾಗುವಂತೆ ಇರಿಸಿದ್ದು- ಹೀಗೆ ಹಲವು ಸುಳಿವುಗಳು ದುಷ್ಕೃತ್ಯವನ್ನು ಎಸಗಿದ್ದು ರಾಜೇಶ್-ನೂಪುರ್ ದಂಪತಿಯೇ ಎಂಬುದನ್ನು ಬೆಟ್ಟು ಮಾಡುತ್ತವೆ. ಆದರೆ ಇದನ್ನು ಪುಷ್ಟೀಕರಿಸಲು ಸಾಕಷ್ಟು ಸಾಕ್ಷ್ಯಗಳು ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಈ ಮುನ್ನ, ಕೌಲ್ ಅವರು 2010ರ ಡಿಸೆಂಬರ್‌ನಲ್ಲಿ ಪ್ರಕರಣ ಕುರಿತು ಪರಿಸಮಾಪ್ತಿ ವರದಿ ಸಲ್ಲಿಸಿದ್ದರು. ಪೋಷಕರೇ ಮಗಳ ಕೊಲೆ ಎಸಗಿದ್ದಾರೆ ಎಂಬುದನ್ನು ಪುಷ್ಟೀಕರಿಸಲು ಹಲವು ಸಾಂದರ್ಭಿಕ ಸಾಕ್ಷ್ಯಗಳು ಇದ್ದರೂ, ಅದನ್ನು ದೃಢಪಡಿಸುವಂತಹ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಅವರು ವರದಿಯಲ್ಲಿ ಹೇಳಿದ್ದರು. ಆದರೆ ಈ ಪರಿಸಮಾಪ್ತಿ ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಧೀಶರು, ತಲ್ವಾರ್ ದಂಪತಿಗೆ ವಿಚಾರಣೆ ಎದುರಿಸುವಂತೆ ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT