ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರಿಸಿದ ಪೂಜಾರ; ಕರ್ನಾಟಕ ತತ್ತರ

ರಣಜಿ ಟ್ರೋಫಿ: ಬಿನ್ನಿ ಬಳಗದ ಸೆಮಿಫೈನಲ್ ಕನಸಿಗೆ ಇತಿಶ್ರೀ ಹಾಡಿದ ಸೌರಾಷ್ಟ್ರ
Last Updated 9 ಜನವರಿ 2013, 19:59 IST
ಅಕ್ಷರ ಗಾತ್ರ

ರಾಜ್‌ಕೋಟ್: ಬಲಗೈ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರಿಗೆ ಎಲ್ಲಾ ಅದೃಷ್ಟ ಒಟ್ಟಿಗೆ ಕೂಡಿ ಬಂದ ಹಾಗಿದೆ. ಮೊದಲ ಸಲ ರಾಷ್ಟ್ರೀಯ ಏಕದಿನ ತಂಡದಲ್ಲಿ ಸ್ಥಾನ ಲಭಿಸಿದ್ದು, ಮಧ್ಯಪ್ರದೇಶ ವಿರುದ್ಧದ ಹಿಂದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದು ಇವೆಲ್ಲವೂ ಇದರಲ್ಲಿ ಸೇರಿದೆ. ಇದರ ಜೊತೆಗೆ ಕರ್ನಾಟಕದ ಬೌಲರ್‌ಗಳನ್ನು ಬಳಲಿ ಬೆಂಡಾಗಿ ಹೋಗುವಂತೆ ಮಾಡಿದ್ದು ಸಹ ಬುಧವಾರ ಸೇರ್ಪಡೆಯಾಯಿತು.

ಇದರ ಪರಿಣಾಮ ಈ ಸಲದ ರಣಜಿ ಋತುವಿನಲ್ಲಿ ಕರ್ನಾಟಕದ ಸೆಮಿಫೈನಲ್ ಪ್ರವೇಶಿಸುವ ಕನಸು ಬಹುತೇಕ ಅಸ್ತಮಿಸಿ ಹೋಗಿದೆ. ಮಂಗಳವಾರ ಇನಿಂಗ್ಸ್ ಹಿನ್ನಡೆ ಅನುಭವಿಸಿದ್ದಾಗಲೇ ಇದಕ್ಕೆ ಮುನ್ನುಡಿ ಬರೆಯಲಾಗಿತ್ತು. ಆದರೆ, ನಾಲ್ಕನೇ ದಿನ ಸ್ಟುವರ್ಟ್ ಬಿನ್ನಿ ಬಳಗದ ಬೌಲರ್‌ಗಳು ಏನಾದರೂ ಚಮತ್ಕಾರ ಮಾಡುತ್ತಾರೆ ಎನ್ನುವ ನಿರೀಕ್ಷೆಯಿತ್ತು. ಆದರೆ, ಸೌರಾಷ್ಟ್ರ ದ್ವಿತೀಯ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 463 ರನ್ ಗಳಿಸುವ ಮೂಲಕ ಕರ್ನಾಟಕದ ನಾಲ್ಕರ ಘಟ್ಟದ ಆಸೆಗೆ ಇತಿಶ್ರೀ ಹಾಡಿತು. ಇದಕ್ಕೆಲ್ಲಾ ಕಾರಣವಾಗಿದ್ದು `ಟಿಂಟು' ಖ್ಯಾತಿಯ ಪೂಜಾರ ದ್ವಿಶತಕ. ಈ ಆಟ ಚೊಚ್ಚಲ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನಾಡುವ ಮುನ್ನವೇ ರಾಜ್‌ಕೋಟ್‌ನ ಈ `ರನ್‌ರಾಜ'ನ ವಿಶ್ವಾಸವನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ.

ಮೊದಲ ಇನಿಂಗ್ಸ್‌ನಲ್ಲಿ 73 ರನ್‌ಗಳ ಮುನ್ನಡೆ ಸಾಧಿಸಿದ್ದು ಸೇರಿದಂತೆ ಆತಿಥೇಯರು ಒಟ್ಟು 536 ರನ್‌ಗಳ ಮುನ್ನಡೆ ಗಳಿಸಿದ್ದಾರೆ. ಗುರುವಾರ ಕೊನೆಯ ದಿನವಾದ ಕಾರಣ ಕರ್ನಾಟಕಕ್ಕೆ ಬ್ಯಾಟಿಂಗ್ ಅವಕಾಶ ಸಿಕ್ಕರೆ `ಟೈಂಪಾಸ್' ಮಾಡಿ ತವರಿನ ಹಾದಿ ಹಿಡಿಯುವುದಷ್ಟೇ ಬಾಕಿಯಿದೆ.

ಲೀಗ್ ಹಂತದಲ್ಲಿ ಸಾಕಷ್ಟು ಕಷ್ಟಪಟ್ಟು ಕ್ವಾರ್ಟರ್ ಫೈನಲ್‌ಗೆ ಮುನ್ನುಗ್ಗಿರುವ ಸೌರಾಷ್ಟ್ರ ಸೆಮಿಫೈನಲ್ ಪ್ರವೇಶಿಸುವ ಸಂಭ್ರಮ ಆಚರಿಸುವ ಕಾತರದಲ್ಲಿದೆ. ಆದರೆ, ಇದಕ್ಕಾಗಿ ಒಂದು ದಿನ ಆಟಕ್ಕುಂಟು ಲೆಕ್ಕಕ್ಕಿಲ್ಲದ `ಆಟ'ವನ್ನು ಆಡಬೇಕಿದೆ. ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕದ ಬೌಲರ್‌ಗಳು ಅಪಾಯ ತಂದೊಡ್ಡದಂತೆ ಎಚ್ಚರಿಕೆ ವಹಿಸಿ ಸವಾಲಿನ ಮೊತ್ತ ಗಳಿಸಿಟ್ಟಿದ್ದು ಇದಕ್ಕೆ  ಕಾರಣ.

ಪೂಜಾರ ಆರ್ಭಟ: ಹಿಂದಿನ ಪಂದ್ಯದಲ್ಲಿ ಪೂಜಾರ ದ್ವಿಶತಕ ಗಳಿಸಿದ್ದರು. ಅದರ ಮುರು ಪಂದ್ಯದಲ್ಲಿಯೇ ಮತ್ತೊಂದು ದ್ವಿಶತಕದ ಸಂಭ್ರಮ. ಐದೂವರೆ ಗಂಟೆಗೂ ಹೆಚ್ಚು ಕಾಲ ಕ್ರೀಸ್‌ನಲ್ಲಿದ್ದ 25 ವರ್ಷದ ಪೂಜಾರ (ಬ್ಯಾಟಿಂಗ್ 261, 275 ಎಸೆತ) ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕವೇ 166 ರನ್‌ಗಳನ್ನು ಕಲೆ ಹಾಕಿದರು. 40 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದೇ ಇದಕ್ಕೆ ಸಾಕ್ಷಿ.

ರಾಷ್ಟ್ರೀಯ ಏಕದಿನ ತಂಡದಲ್ಲಿ ಸ್ಥಾನ ಪಡೆದ ಕಾರಣ ಪೂಜಾರ ರಣಜಿಯ ದಿನದಾಟ ಆರಂಭವಾಗುವ ಮುನ್ನ ನಿತ್ಯವೂ ಬೆಳಿಗ್ಗೆಯೇ ನೆಟ್‌ನಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ಯಾಡಲ್ ಸ್ವಿಪ್ ಶೈಲಿಗೆ ಒತ್ತು ನೀಡುತ್ತಿದ್ದರು. ಇದೇ ಶೈಲಿಯಲ್ಲಿ ಬುಧವಾರ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಅವರ ದ್ವಿಶತಕ ಸಾಧನೆಯ ಹಿಂದೆ ಕರ್ನಾಟಕದ ಕ್ಷೇತ್ರರಕ್ಷಣೆ ವಿಭಾಗದ ದೌರ್ಬಲ್ಯದ `ಕೊಡುಗೆ'ಯು ಇದೆ.

99 ರನ್ ಗಳಿಸಿದ್ದಾಗ ವೇಗಿ ಅಭಿಮನ್ಯು ಮಿಥುನ್ ಓವರ್‌ನಲ್ಲಿ  ಥರ್ಡ್ ಮ್ಯಾನ್ ಬಳಿ ಬೌಂಡರಿ ಬಾರಿಸುವ ಮೂಲಕ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19ನೇ ಶತಕ ದಾಖಲಿಸಿದರು. ಈ ಋತುವಿನಲ್ಲಿ ಎರಡನೇಯದ್ದು. ಆದರೆ, ಈ ಹೊಡೆತವನ್ನು ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾದರು. ಇಲ್ಲವಾದರೆ, ಪಂದ್ಯದ ಗತಿ ಬದಲಾಗುವ ಸಾಧ್ಯತೆಯಿತ್ತು. ಈ ಪಂದ್ಯದಲ್ಲಿ ಕರ್ನಾಟಕ ಆರು ಸಲ ಇಂಥದ್ದೇ ತಪ್ಪುಗಳನ್ನು ಮಾಡಿದೆ.

111 ಎಸೆತಗಳಲ್ಲಿ 18 ಬೌಂಡರಿ ಸೇರಿದಂತೆ ಶತಕ ಗಳಿಸಿದ ನಂತರ ಪಂದ್ಯದ ಪರಿಸ್ಥಿತಿ ಪೂರ್ಣವಾಗಿ ಪೂಜಾರ ತೆಕ್ಕೆಯಲ್ಲಿ ಸೆರೆಯಾಯಿತು. ನಂತರ `ಆನೆ ನಡೆದದ್ದೇ ದಾರಿ' ಎನ್ನುವಂತೆ ಪೂಜಾರ ಗಳಿಸಿದ್ದೇ ರನ್ ಎನ್ನುವಂತಾಯಿತು. ಇದರಿಂದ ತತ್ತರಿಸಿ ಹೋಗಿದ್ದು ಮಾತ್ರ ಕರ್ನಾಟಕದ ನಾಯಕ ಬಿನ್ನಿ.
ಪ್ರತಿ ಓವರ್ ಆದ ಮೇಲೂ ಯಾರ ಕೈಗೆ ಚೆಂಡು ನೀಡಬೇಕು ಎನ್ನುವ ಚಿಂತೆ ಬಿನ್ನಿ ಅವರನ್ನು ಕಾಡುತ್ತಿತ್ತು. ಇಬ್ಬರು ವೇಗಿಗಳು, ಒಬ್ಬ ಮಧ್ಯಮ ವೇಗಿ ಮತ್ತು ನಾಲ್ಕು ಜನ ಸ್ಪಿನ್ ಬೌಲರ್‌ಗಳನ್ನು ಕಣಕ್ಕಿಳಿಸಿದರು `ರನ್‌ಯಂತ್ರ' ಪೂಜಾರ ಅವರನ್ನು ನಿಯಂತ್ರಿಸಲು ಆಗಲಿಲ್ಲ.

ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್ (ಬ್ಯಾಟಿಂಗ್ 70, 116 ಎಸೆತ, 8 ಬೌಂಡರಿ, 1 ಸಿಕ್ಸರ್) 243 ರನ್‌ಗಳನ್ನು ಕಲೆ ಹಾಕಿದರು. ಇದರಿಂದ ಸೌರಾಷ್ಟ್ರ 450 ರನ್‌ಗಳ ಗಡಿ ದಾಟಿತು. ಈ ಮೂಲಕ ಕರ್ನಾಟಕ ವಿರುದ್ಧದ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿತು. 2009-10ರಲ್ಲಿ ಇಲ್ಲಿ ನಡೆದ ಪಂದ್ಯದಲ್ಲಿ ಸೌರಾಷ್ಟ್ರ 407 ರನ್ ಗಳಿಸಿದ್ದು ಇದುವರೆಗಿನ ಅತ್ಯಧಿಕ ರನ್ ಆಗಿತ್ತು.

ಇದಕ್ಕೂ ಮುನ್ನ ಇನಿಂಗ್ಸ್ ಮುನ್ನಡೆಯ ಖುಷಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ ಆರಂಭದಲ್ಲಿ ಸಂಕಷ್ಟ ಅನುಭವಿಸಿತು. ಎಡಗೈ ಬ್ಯಾಟ್ಸ್‌ಮನ್ ಶಿತಾನ್ಶು ಕೊಟಕ್ (7) ಅವರನ್ನು ಅಪ್ಪಣ್ಣ ಸ್ಪಿನ್ ಬಲೆಗೆ ಕೆಡವಿದರು. ಸಾಗರ್ ಜೋಗಿಯಾಗಿ (70, 95ಎಸೆತ, 20 ಬೌಂಡರಿ, 1 ಸಿಕ್ಸರ್) ಜೊತೆಸೇರಿ ಪೂಜಾರ ಎರಡನೇ ವಿಕೆಟ್ ಜೊತೆಯಾಟದಲ್ಲಿ 89 ರನ್‌ಗಳನ್ನು ಕಲೆ  ಹಾಕಿದರು. ಸಾಗರ್ ಅವರನ್ನು ಆಫ್‌ಸ್ಪಿನ್ನರ್ ಕೆ. ಗೌತಮ್ ಔಟ್ ಮಾಡುವ ಮೂಲಕ ಈ ಜೊತೆಯಾಟಕ್ಕೆ ತೆರೆ ಎಳೆದರು.

ಬಯಲಾದ ದೌರ್ಬಲ್ಯ: `ವೇಗದ ಶಕ್ತಿಗಳು' ಎನಿಸಿಕೊಂಡಿದ್ದ ಕರ್ನಾಟಕದ ಬೌಲಿಂಗ್ ದೌರ್ಬಲ್ಯ ಈ ಪಂದ್ಯದಲ್ಲಿ ಬಯಲಾಯಿತು.

ವೇಗಿ ಮಂಡ್ಯದ ಶರತ್ ಒಂದು ವಿಕೆಟ್ ಪಡೆದದ್ದು ಬಿಟ್ಟರೆ ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಮಿಥುನ್ ವಿಕೆಟ್ ಪಡೆಯದೇ ಪರದಾಡಿದರು. ಅಪ್ಪಣ್ಣ ಮತ್ತು ಕೆ. ಗೌತಮ್ ತಲಾ 118 ರನ್ ಬಿಟ್ಟುಕೊಟ್ಟರು..

ಸ್ಕೋರ್ ವಿವರ :

ಸೌರಾಷ್ಟ್ರ ಪ್ರಥಮ ಇನಿಂಗ್ಸ್ 165.3 ಓವರ್‌ಗಳಲ್ಲಿ 469
ಕರ್ನಾಟಕ ಮೊದಲ ಇನಿಂಗ್ಸ್ 102.2 ಓವರ್‌ಗಳಲ್ಲಿ 396
ಸೌರಾಷ್ಟ್ರ ದ್ವಿತೀಯ ಇನಿಂಗ್ಸ್ 90 ಓವರ್‌ಗಳಲ್ಲಿ 3 ವಿಕೆಟ್‌ಗೆ 463
ಶಿತಾನ್ಶು ಕೊಟಕ್ ಸಿ ಸಿ.ಎಂ. ಗೌತಮ್ ಬಿ ಕೆ.ಪಿ. ಅಪ್ಪಣ್ಣ  07
ಸಾಗರ್ ಜೋಗಿಯಾನಿ ಸಿ ಕೆ.ಎಲ್. ರಾಹುಲ್ ಬಿ ಕೆ. ಗೌತಮ್  70
ಚೇತೇಶ್ವರ ಪೂಜಾರ ಬ್ಯಾಟಿಂಗ್  261
ಜಯದೇವ್ ಸಿ ಕರುಣ್ ನಾಯಕ್ (ಬದಲಿ ಆಟಗಾರ) ಬಿ ಶರತ್  31
ಶೆಲ್ಡನ್ ಜಾಕ್ಸನ್ ಬ್ಯಾಟಿಂಗ್  70
ಇತರೆ: (ಬೈ-7, ಲೆಗ್ ಬೈ-10, ವೈಡ್-1, ನೋ ಬಾಲ್-6)  24
ವಿಕೆಟ್ ಪತನ: 1-26 (ಕೊಟಕ್; 5.2), 2-115 (ಸಾಗರ್; 25.5), 3-220 (ಜಯದೇವ್; 44.4)
ಬೌಲಿಂಗ್: ಅಭಿಮನ್ಯು ಮಿಥುನ್ 10-0-52-0, ಕೆ.ಪಿ. ಅಪ್ಪಣ್ಣ 28-1-118-1, ಕೆ. ಗೌತಮ್ 21-2-118-1, ಅಮಿತ್ ವರ್ಮಾ 15-2-63-0, ಕೆ.ಎಲ್. ರಾಹುಲ್ 3-0-28-0, ಸ್ಟುವರ್ಟ್ ಬಿನ್ನಿ 4-0-22-0, ಎಚ್.ಎಸ್. ಶರತ್ 9-0-45-1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT