ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಇಲ್ಲದೆ ನಲುಗುತ್ತಿರುವ ನವಿಲುಧಾಮ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಬಂಕಾಪುರದ `ನವಿಲುಧಾಮ~ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಯಾವುದೇ ಅಭಿವೃದ್ಧಿ ಕಾಣದೇ ಹೆಸರಿಗಷ್ಟೇ ಇದೆ.

ರಾಜ್ಯದಲ್ಲಿ ಅತಿ ಹೆಚ್ಚು ನವಿಲುಗಳು ಬಂಕಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿವೆ. ನವಿಲುಗಳ ಸಂತತಿಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡು ಅವುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ 2006 ರಲ್ಲಿ  ಬಂಕಾಪುರ ಕೋಟೆ ಪ್ರದೇಶದ 139.10 ಎಕರೆ ಜಮೀನನ್ನು ಮೀಸಲಿರಿಸಿ `ನವಿಲುಧಾಮ~ ಎಂದು ಘೋಷಿಸಿತು.

ಆಗ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ನವಿಲುಧಾಮದ ಉದ್ಘಾಟನೆ ನೆರವೇರಿಸಿದ್ದರು. ನವಿಲುಗಳನ್ನು ಬೇಟೆಗಾರರಿಂದ ರಕ್ಷಿಸಲು ಆರಂಭದಲ್ಲಿ ನವಿಲುಧಾಮದ ಇಡೀ ಪ್ರದೇಶಕ್ಕೆ ತಂತಿಬೇಲಿಯನ್ನು ಅಳವಡಿಸಲಾಗಿತ್ತು. ಅದನ್ನು ಬಿಟ್ಟರೆ, ನಂತರದಲ್ಲಿ ಬಂದ ಸರ್ಕಾರಗಳು ಇತ್ತ ಗಮನವನ್ನೇ ಹರಿಸಿಲ್ಲ.

ಅಭಿವೃದ್ಧಿ ಮರೀಚಿಕೆ: ತಂತಿ ಬೇಲಿ ಹಾಗೂ ನೈಸರ್ಗಿಕವಾಗಿರುವ ಕಂದಕಗಳು, ಗಿಡ ಮರಗಳು ಅಲ್ಲಿನ 3,000ಕ್ಕೂ ಹೆಚ್ಚಿನ ನವಿಲುಗಳಿಗೆ ರಕ್ಷಣೆ ನೀಡಿದ್ದರೂ ಆಗಾಗ್ಗೆ ನವಿಲುಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಸಾಮಾನ್ಯವಾಗಿವೆ.

ನವಿಲುಧಾಮದ ಆವರಣದಲ್ಲಿಯೇ ಇರುವ ಕಿಲಾರಿ ತಳಿ ಸಂಶೋಧನಾ ಕೇಂದ್ರದ ಒಬ್ಬರು ಹಾಗೂ ಅರಣ್ಯ ಇಲಾಖೆಯಿಂದ ಇನ್ನೊಬ್ಬರು ಕಾವಲುಗಾರರನ್ನು ಬಿಟ್ಟರೆ ನವಿಲುಗಳ ಸಂರಕ್ಷಣೆಗೆ ಬೇರಾವ ಸಿಬ್ಬಂದಿ ಇಲ್ಲ.
ಕೇಂದ್ರ ಸರ್ಕಾರ 1963 ರಲ್ಲಿ ನವಿಲನ್ನು `ರಾಷ್ಟ್ರೀಯ ಪಕ್ಷಿ~ ಎಂದು ಘೋಷಣೆ ಮಾಡಿದೆ. 1972ರಲ್ಲಿ ವನ್ಯಜೀವ ಸಂರಕ್ಷಣಾ ಕಾಯ್ದೆಯಡಿ ನವಿಲುಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಹೆಚ್ಚಿನ ಗಮನ ನೀಡಲಾಗಿದೆ. ಆದರೆ ಇಲ್ಲಿನ ನವಿಲುಗಳಿಗೆ ಯಾವುದೇ ಹೆಚ್ಚಿನ ರಕ್ಷಣೆ ಇಲ್ಲದಾಗಿದೆ.

ಅನುದಾನವಿಲ್ಲ: ನವಿಲುಧಾಮ ಸ್ಥಾಪಿಸಿ ಆರು ವರ್ಷಗಳಾದರೂ ಅದರ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಅನುದಾನ ನೀಡುವಂತೆ ಪ್ರತಿ ವರ್ಷವೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಆದರೆ, ಯಾವುದೇ ಅನುದಾನ ಬಂದಿಲ್ಲ ಎಂದು ಹೇಳುತ್ತಾರೆ ಕಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಪರಮೇಶ್ವರ ನಾಯಕ.

ನವಿಲುಧಾಮದ ಸಂಪೂರ್ಣ ಅಭಿವೃದ್ಧಿಗಾಗಿ ಅರಣ್ಯ ಇಲಾಖೆ ಜತೆಗೂಡಿ ನೀಲ ನಕ್ಷೆ ತಯಾರಿಸಲಾಗಿದೆ. ನಾಲ್ಕು ಕಡೆಗಳಲ್ಲಿ ವೀಕ್ಷಣಾ ಗೋಪುರ, ಹತ್ತು ಅಡಿ ಎತ್ತರದ ತಂತಿಬೇಲಿ, ಕಂದಕಗಳಲ್ಲಿ ವೀಕ್ಷಣೆಗೆ ಆಗಮಿಸುವ ಜನರು ಸಲೀಸಾಗಿ ಓಡಾಡಲು 3-4 ಕಡೆ ತೂಗು ಸೇತುವೆ, ಪ್ರವಾಸಿಗರಿಗೆ ಕುಳಿತು ಊಟ ಮಾಡುವ ವ್ಯವಸ್ಥೆ, ರಸ್ತೆಗಳ ಸುಧಾರಣೆ, ಟ್ರ್ಯಾಕಿಂಗ್ ಪಾತ್, ನವಿಲುಧಾಮದ ಮುಖ್ಯ ಗೇಟ್ ಬಳಿ ಕೋಟೆ ತರಹದ ಕಾಂಪೌಂಡ್ ಹಾಗೂ ರಾಷ್ಟ್ರೀಯ ಹೆದ್ದಾರಿ -4 ರಿಂದ ಹಾನಗಲ್ ಕ್ರಾಸ್‌ವರೆಗೆ ದ್ವಿಪಥ ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೀಲನಕ್ಷೆಯಲ್ಲಿ ಸೇರಿಸಲಾಗಿದೆ.

ಅದಕ್ಕಾಗಿ ಐದು ಕೋಟಿ ರೂಪಾಯಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿ ಮೂಲಕ ಈ ವರ್ಷವೂ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT