ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ತಾಯಿ ಕಂದಾಯ ನೀಡಿ!

Last Updated 24 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ಸಾಲಿಗ್ರಾಮ: ‘ಮನೆಯಲ್ಲಿ ಯಾರ್ ಇದ್ದೀರಿ ಸ್ವಲ್ಪ ಹೊರಗೆ ಬನ್ನಿ ಅಮ್ಮ... ನಾವು ಕಂದಾಯ ಇಲಾಖೆಯಿಂದ ಬಂದಿರೋದು, ನಿಮ್ಮ ಜಮೀನಿನ ಕಂದಾಯ ಬಹಳ ವರ್ಷಗಳಿಂದ ಕಟ್ಟಿಲ್ಲ, ದಯಮಾಡಿ ಕಂದಾಯ ಕಟ್ಟಿ ರಶೀದಿ ಕೊಟ್ಟು ಹೋಗುತ್ತೇವೆ’..

-ಈ ರೀತಿ ಮನವಿ ಮಾಡಿ ಕಂದಾಯ ವಸೂಲಿ ಮಾಡುತ್ತಿರುವವರು ಬೇರೆ ಯಾರೂ ಅಲ್ಲ, ಕೆ.ಆರ್.ನಗರ ತಾಲ್ಲೂಕಿನ ತಹಶೀಲ್ದಾರ್ ಟಿ.ಜವರೇಗೌಡ. ಕಳೆದ ಹತ್ತು ವರ್ಷಗಳಿಂದ ತರಿ, ಖುಷ್ಕಿ ಹಾಗೂ  ತೋಟಗಳ ಕಂದಾಯವನ್ನು ಕಟ್ಟದೇ ಇರುವ ರೈತರ ಮನೆಯ ಬಾಗಿಲಿಗೆ ತೆರಳಿ ಕಂದಾಯ ವಸೂಲಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆಯೇ ರೈತರ ಮನೆಯ ಬಾಗಿಲು ತಟ್ಟಿ ಕಂದಾಯವನ್ನು ವಿನೂತನವಾಗಿ ವಸೂಲಿ ಮಾಡುತ್ತಿದ್ದಾರೆ.

ಹಲವು ಮಹಿಳೆಯರು ತಮ್ಮ ಮನೆಯ ಬಾಗಿಲಿನಲ್ಲಿ ನಿಂತು ಕಂದಾಯ ಕೇಳುತ್ತಿರುವ ವ್ಯಕ್ತಿ ಯಾರೆಂದು ತಿಳಿಯದೆ ‘ಕಾಲುವೆಯಲ್ಲಿ ನೀರಿಲ್ಲ ಬತ್ತ ಬೆಳೆಯಕ್ಕೆ ಆಗ್ತಿಲ್ಲ ಕಂದಾಯ ವಸೂಲಿ ಮಾಡಕ್ಕೆ ಬಂದಿದ್ದಿರಲ್ಲಾ! ನಾವು ಬತ್ತ ಬೆಳೆಯಲು ಮೊದಲು ಕಾಲುವೆಗೆ ನೀರು ಬಿಡಿಸಿ   ಆಮೇಲೆ ಕಂದಾಯಕ್ಕೆ ಬನ್ನಿ ಎಂದು ಉದಾಸೀನವಾಗಿ ಉತ್ತರ ನೀಡುತ್ತಿದ್ದು ಕಂಡು ಬಂತು.ಇದರಿಂದ ವಿಚಲಿತರಾಗದ ತಹಶೀಲ್ದಾರ್ ಟಿ.ಜವರೇಗೌಡ, ಉಪತಹಶೀಲ್ದಾರ್ ಪ್ರಸನ್ನಮೂರ್ತಿ, ಆರ್.ಐ.ಯದುಗಿರೀಶ್, ಗ್ರಾಮ ಲೆಕ್ಕಿಗರಾದ ಪ್ರಭಾಕರ್, ಕುಮಾರ್, ಸಂಜೀವ್‌ಮೂರ್ತಿ ಕಂದಾಯ ವಸೂಲಿ ಮಾಡಿಯೇ ಮುಂದಕ್ಕೆ ಹೋಗುತ್ತಿದ್ದರು.

ಇಲಾಖೆಯ ಈ ವಿನೂತನ ಕಾರ್ಯಕ್ರಮದಿಂದ ರೈತರಿಗೆ ಮುಜುಗರವಾದರೂ ಕಂದಾಯ ಮಾತ್ರ ವಸೂಲಿ ಆಗುತ್ತಿದೆ. ಜತೆಗೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೂಡ ಸಾಧ್ಯವಾಗುತ್ತಿದೆ. ಕೆಲ ರೈತರಿಗೆ ತಮ್ಮಜಮೀನು ಎಷ್ಟು ಇದೆ ಅಲ್ಲದೆ ದಾಖಲೆಯಲ್ಲಿ ಎಷ್ಟು ಇದೆ ಎಂಬುದು ಗೊತ್ತಿಲ್ಲದೆ ಕಂಗಾಲಾಗಿರುತ್ತಾರೆ. ಇಂತಹ ರೈತರಿಗೆ ಸ್ಥಳದಲ್ಲೇ ಮಾಹಿತಿ ನೀಡಿ ತಿದ್ದುಪಡಿ ಮಾಡ ಕೊಡುವಂತೆ ನೌಕರರಿಗೆ ಸೂಚನೆ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಐದು ದಿನಗಳಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇರುವ ಹೋಬಳಿಗಳ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ ಸರಾಸರಿ ರೂ 65ರಿಂದ 70 ಸಾವಿರ ಕಂದಾಯವನ್ನು ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ತಹಶೀಲ್ದಾರ್ ಟಿ.ಜವರೇಗೌಡ ಅವರೊಂದಿಗೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿರುತ್ತಾರೆ. ಕಂದಾಯ ವಸೂಲಿಗೆ ಇಲಾಖೆ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮಕ್ಕೆ ರೈತರು ಕೂಡ ಮುಕ್ತವಾಗಿ ಸ್ಪಂದಿಸುತ್ತಿರುವುದು ಕಂಡು ಬರುತ್ತಿದೆ.
-ಯಶವಂತ್ ಸಾಲಿಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT