ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನ ಅಂಗಳದಲ್ಲಿ ಹಾರೈಕೆಗಳ ಸುರಿಮಳೆ...

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಮನೆ `ಅಮ್ಮ~ದಲ್ಲಿ ಬುಧವಾರ ಹಬ್ಬದ ಸಂಭ್ರಮ. ಎಲ್ಲೆಡೆ ಹೂವಿನ ಕಂಪು. ಗಣ್ಯಾತಿಗಣ್ಯರ ದೌಡು, ಶುಭಾಶಯಗಳ ಸುರಿಮಳೆ.  ಇದು ಲಕ್ಷ್ಮಿ ಹಬ್ಬದ ಕಾರಣಕ್ಕಾಗಿ ಅಲ್ಲ. ಬದಲಿಗೆ ಇಲ್ಲಿ ನಡೆದದ್ದು ಬಂಗಾರಪ್ಪನವರ 78ನೇ ಹುಟ್ಟುಹಬ್ಬದ ಆಚರಣೆ.

ಅವರ ಪತ್ನಿ ಶಕುಂತಲಾ ಅವರು ಪತಿಗೆ ಸಿಹಿ ತಿನಿಸುವ ಮೂಲಕ ಈ ಸಂಭ್ರಮದ `ಹಬ್ಬ~ಕ್ಕೆ ಚಾಲನೆ ನೀಡಿದರು. ಪುತ್ರರಾದ ಮಧು, ಅಳಿಯ ಶಿವರಾಜಕುಮಾರ್, ಪುತ್ರಿ, ಸೊಸೆಯಂದಿರು ಹಾಗೂ ಬಂಧು ಬಳಗದವರು ಸಾಥ್ ನೀಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಆರ್.ಕೃಷ್ಣಪ್ಪ, ಉದ್ಯಮಿ ಮೋಹನ ಕುಂದಾಪುರ, ಶಾಸಕ ಇ.ಕೃಷ್ಣಪ್ಪ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗೋವಿಂದರಾಜು ಸೇರಿದಂತೆ ಹಲವು ಗಣ್ಯರು ಸಂಭ್ರಮದಲ್ಲಿ ಪಾಲ್ಗೊಂಡು ಬಂಗಾರಪ್ಪನವರಿಗೆ ಶುಭ ಕೋರಿದರು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ದೂರವಾಣಿ ಮೂಲಕ ಶುಭ ಕೋರಿದರು.

ಸುಮಾರು 25 ಅಂಗವಿಕಲ ಮಕ್ಕಳಿಗೆ ಬಟ್ಟೆ ಮತ್ತು ಪುಸ್ತಕ ವಿತರಣೆ ಮಾಡಿದ್ದು ಹುಟ್ಟುಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಿತು.

ಸಂತಸ ಪಡುವಂಥದ್ದಲ್ಲ: ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಬಂಗಾರಪ್ಪನವರು, `ಭ್ರಷ್ಟಾಚಾರ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿ ಇರುವವರು ನನ್ನ ರಾಜಕೀಯ ವಿರೋಧಿಗಳು ಇರಬಹುದು. ಆದರೆ ವ್ಯಕ್ತಿಗತವಾಗಿ ಅವರು ನನ್ನ ವಿರೋಧಿಗಳಲ್ಲ. ಆದುದರಿಂದ ಜೈಲುವಾಸದ ವಿಷಯ ಸಂತೋಷಪಡುವಂಥದ್ದು ಅಲ್ಲ. ರಾಜಕೀಯವಾಗಿ ಟೀಕೆ- ಟಿಪ್ಪಣಿಗಳು ಇರುವುದು ಸಹಜ. ಅಂದ ಮಾತ್ರಕ್ಕೆ ಅವರ ಈಗಿನ ಪರಿಸ್ಥಿತಿಯ ಕುರಿತಾಗಿ ಸಂತಸ ಪಡುವ ಮನೋಭಾವ ನನ್ನದಲ್ಲ~ ಎಂದು ಸ್ಪಷ್ಟಪಡಿಸಿದರು.

`ಅವರ ಮೇಲಿರುವ ಆರೋಪಗಳ ಕುರಿತು ಕೋರ್ಟ್ ನಿರ್ಧಾರ ತೆಗೆದುಕೊಳ್ಳಲಿದೆ. ಸದ್ಯ ಅವರು ಕಾನೂನಿನ ವ್ಯಾಪ್ತಿಯಲ್ಲಿ ಇದ್ದಾರೆ. ಈ ಬಗ್ಗೆ ಹೆಚ್ಚಿಗೆ ಏನೂ ಹೇಳಬಯಸುವುದಿಲ್ಲ~ ಎಂದರು.

ರಾಜೀನಾಮೆ ಒಳಿತು: ಗೃಹ ಸಚಿವ ಆರ್.ಅಶೋಕ ಅವರ ಮೇಲಿರುವ ಆರೋಪಗಳ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಂಗಾರಪ್ಪ, `ಇದು ಗೃಹ ಸಚಿವರೊಬ್ಬರ ನೈತಿಕತೆಯ ಪ್ರಶ್ನೆ. ತನಿಖೆ ಮಾಡುವಾಗ ಆರೋಪಿ ಅಧಿಕಾರದಲ್ಲಿ ಇದ್ದರೆ, ಅದರ ಪ್ರಭಾವ ಬಳಸುವ ಸಾಧ್ಯತೆಗಳಿವೆ. ವೈಯಕ್ತಿಕವಾಗಿ ಆರೋಪ ಇರುವ ಸಂದರ್ಭದಲ್ಲಿ, ದಾಖಲೆ ಸಹಿತ ಅದನ್ನು ಬಹಿರಂಗಪಡಿಸಿದಾಗ ಯಾವುದೇ ವ್ಯಕ್ತಿ ತಮ್ಮ ಸ್ಥಾನದಲ್ಲಿ ಮುಂದುವರಿಯುವುದು ಉಚಿತವಲ್ಲ. ಆದುದರಿಂದ ಅಶೋಕ ಅವರು ರಾಜೀನಾಮೆ ನೀಡುವುದು ಒಳಿತು~ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT