ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ರಕ್ಷಣಾ ಕಾಯ್ದೆ ದುರುಪಯೋಗ: ಪತ್ರ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅರಣ್ಯ ಹಕ್ಕುಗಳ ಸಂರಕ್ಷಣಾ ಕಾಯ್ದೆ- 2006ರ ದುರುಪಯೋಗವಾಗುತ್ತಿದ್ದು, ದಾಖಲೆಗಳನ್ನು ಪರಿಶೀಲಿಸದೇ ಅರಣ್ಯೇತರ ವಾಸಿಗಳಿಗೆ ಭೂಮಿಯನ್ನು ನೀಡಲಾಗುತ್ತಿದೆ. ಈ ಕುರಿತು ರಾಜ್ಯದ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ~ ಎಂದು ಕೇಂದ್ರ ಅರಣ್ಯ ಮಹಾನಿರ್ದೇಶಕ ಡಾ. ಪಿ.ಜೆ.ದಿಲೀಪ್ ಕುಮಾರ್ ತಿಳಿಸಿದರು.

ಅರಣ್ಯ ಇಲಾಖೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ `ಅರಣ್ಯ ಸುಸ್ಥಿರ ನಿರ್ವಹಣೆಯಲ್ಲಿ ಜೀವನಾಧಾರವನ್ನು ಬಲಪಡಿಸುವ ಬಗೆ~ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಅರಣ್ಯ ಸಂಬಂಧಿತ ಕಾನೂನುಗಳಿಗೆ ಕಿಮ್ಮತ್ತು ನೀಡದೇ ಮಣಿಪುರ ಸೇರಿದಂತೆ ಉತ್ತರ ಭಾರತದಲ್ಲಿ ಅರಣ್ಯ ನಾಶ ಯಥೇಚ್ಛವಾಗಿ ನಡೆಯುತ್ತಿದೆ. ಈ ಬಗ್ಗೆ ಇಲಾಖೆಯು ಗಮನಹರಿಸಿ ಕಡಿವಾಣ ಹಾಕಬೇಕು~ ಎಂದು ಹೇಳಿದರು.

 ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, `ಅರಣ್ಯ ವಾಸಿಗಳ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದಲೇ ಈ ಕಾಯ್ದೆಯನ್ನು ರಚಿಸಲಾಗಿದೆ. ಆದರೆ, ಸಂಸ್ಕೃತಿಯ ನೆಪದಲ್ಲಿ ಅರಣ್ಯವಾಸಿಗಳನ್ನು ಸಮಾಜ ಶಾಸ್ತ್ರದ ಅಧ್ಯಯನ ವಸ್ತುವಾಗಿ ಪರಿಗಣಿಸಬೇಕೇ ಅಥವಾ ಅವರನ್ನು ಇತರರಂತೆ ಮುಖ್ಯವಾಹಿನಿಗೆ ತರಬೇಕೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ~ ಎಂದು ಹೇಳಿದರು.

`ನಿವಾಸಿಗಳನ್ನು ಅರಣ್ಯದಿಂದ ಸ್ಥಳಾಂತರಗೊಳಿಸದೇ ಅಗತ್ಯವಿರುವ ಪುನಶ್ಚೇತನ ಶಿಬಿರಗಳನ್ನು ಏರ್ಪಡಿಸುವ ಬಗ್ಗೆಯೂ ಚಿಂತನೆ ನಡೆಸಬೇಕಿದೆ~ ಎಂದ ಅವರು, `ಅರಣ್ಯ ಪ್ರದೇಶಗಳಲ್ಲಿ ಕೃಷಿ ಭೂಮಿಯು ಸೇರ್ಪಡೆಗೊಳ್ಳುತ್ತದೆ. ಆದರೆ ಕೃಷಿ ಚಟುವಟಿಕೆಗಳು ಏಕತಳಿಯ ಬೆಳೆಗಳಿಗೆ ಸೀಮಿತಗೊಳ್ಳದೆ, ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕು~ ಎಂದು ಹೇಳಿದರು.

ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, `ರಾಜ್ಯದ ಪಶ್ಚಿಮ ಘಟ್ಟ ಮತ್ತು ಇತರೆ ಅರಣ್ಯ ಪ್ರದೇಶಗಳಲ್ಲಿ ಐನೂರು ಗ್ರಾಮ ಅರಣ್ಯ ಸಮಿತಿಗಳು ಕ್ರಿಯಾಶೀಲವಾಗಿದ್ದು, ಒಟ್ಟು 15 ರಿಂದ 20 ಸಾವಿರ ಸದಸ್ಯರನ್ನು ಒಳಗೊಂಡಿದೆ~ ಎಂದರು.

`ಸಮಿತಿಯ ಸದಸ್ಯರು ಸೌರ ಶಕ್ತಿ, ಗೋಬರ್ ಗ್ಯಾಸ್, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಅರಣ್ಯ ಸಂರಕ್ಷಣೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ~ ಎಂದು ಹೇಳಿದರು.

ಜಪಾನಿನ ಪ್ರತಿನಿಧಿ ಹಿರೋಶಿ ಸುಜುಕಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಣ್ಣ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT