ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಆಸ್ತಿ: ಕೊನೆಯಾಗದ ಕಾನೂನು ಸಮರ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ತಮ್ಮ ರಾಜಮನೆತನದ ಆಸ್ತಿ ಉಳಿಸಿಕೊಳ್ಳುವುದಕ್ಕಾಗಿ ಸರ್ಕಾರದ ವಿರುದ್ಧ ನಡೆಸಿದ ಹೋರಾಟ ಅಂತಿಂಥದ್ದಲ್ಲ. ಅದು ಇನ್ನೂ ಇತ್ಯರ್ಥ ಆಗುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದರು.

‘ಬೆಂಗಳೂರು ಹೃದಯ ಭಾಗದಲ್ಲಿನ 470 ಎಕರೆ ಅರಮನೆ ಮೈದಾನ ಸರ್ಕಾರಕ್ಕೆ ಸೇರಬೇಕು, ಅದು ಈ ರಾಜ್ಯದ ಆಸ್ತಿ’ ಎಂದು 90ರ ದಶಕದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಆರಂಭವಾದವು.

ಅಂದಿನಿಂದಲೇ ಸರ್ಕಾರದ ಕಣ್ಣು ಈ ಆಸ್ತಿ ಮೇಲೆ ಬಿತ್ತು. ಒಂದು ಹಂತದಲ್ಲಿ 1992ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಆದರೆ, ಅಂದಿನ ರಾಜ್ಯಪಾಲ ಖುರ್ಷಿದ್‌ ಆಲಂ ಖಾನ್‌ ಅವರು ಅದಕ್ಕೆ ಒಪ್ಪಲಿಲ್ಲ. ‘ಸುಗ್ರೀವಾಜ್ಞೆ ಮೂಲಕ ಆಸ್ತಿ ವಶಪಡಿಸಿ­ಕೊಳ್ಳು­ವುದು ಕಷ್ಟ. ಇದಕ್ಕೆ ರಾಷ್ಟ್ರಪತಿಗಳ ಅಂಕಿತಬೇಕಾಗುತ್ತದೆ’ ಎಂದು ಸರ್ಕಾರದ ನಿರ್ಧಾರವನ್ನು ತಿರಸ್ಕರಿಸಿದರು ಎನ್ನುತ್ತವೆ ರಾಜಮನೆತನದ ಮೂಲಗಳು.

ಈ ಹಂತದಲ್ಲಿ ಸರ್ಕಾರಕ್ಕೆ ಸ್ವಲ್ಪ ಹಿನ್ನಡೆಯಾದರೂ ಅದರ ನಂತರವೂ ಪಟ್ಟು ಸಡಿಲಿಸಲಿಲ್ಲ. 1996ರವರೆಗೂ ಈ ನಿಟ್ಟಿನಲ್ಲಿ ಯಾವ ಪ್ರಯತ್ನವೂ ನಡೆಯಲಿಲ್ಲ. ಪ್ರಧಾನಿ­ಯಾಗಿದ್ದ ಪಿ.ವಿ.ನರಸಿಂಹರಾವ್‌ ಕೂಡ ಆಸ್ತಿ ವಶಪಡಿಸಿ­ಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿ-­ದ್ದರು ಎನ್ನಲಾಗಿದೆ.

ಇನ್ನೇನು ನಿರಾಳ ಎಂದು ಒಡೆಯರ್‌ ಮತ್ತು ಅವರ ಕುಟುಂಬ ನಿಟ್ಟುಸಿರು ಬಿಡುತ್ತಿರುವಾಗಲೇ 1994ರಲ್ಲಿ ಜನತಾದಳ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಎಚ್‌.ಡಿ.­ದೇವೇಗೌಡರು  ರಾಜ್ಯದ ಮುಖ್ಯ­ಮಂತ್ರಿಯೂ ಆದರು. 1996ರ ಮಾರ್ಚ್‌ನಲ್ಲಿ ಆಸ್ತಿ ವಶಕ್ಕೆ ಸುಗ್ರೀವಾಜ್ಞೆ ಬೇಡ, ಮಸೂದೆಯನ್ನೇ ರೂಪಿಸುವು­ದಾಗಿ ತೀರ್ಮಾನ ಪ್ರಕಟಿಸಿದರು. ಆಗ ಅವರ ಸಂಪುಟದಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಎಂ.ಸಿ.ನಾಣಯ್ಯ ಅವರು ಕಾನೂನು ಸಚಿವರು.

ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ)– 1996ರ ಮಸೂದೆಗೆ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿದವು. ರಾಜವಂಶಸ್ಥರಿಗೆ ಜಮೀನಿನ ಬಾಬ್ತಾಗಿ ₨11 ಕೋಟಿ ನೀಡುವ ಅಂಶವನ್ನೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಅದಕ್ಕೆ ಅಂಕಿತ ಹಾಕದ ಆಗಿನ ರಾಜ್ಯಪಾಲರು,  ರಾಷ್ಟ್ರ­ಪತಿಗಳ ಅನುಮೋದನೆಗಾಗಿ  ಕಳುಹಿಸಿದರು.

ಈ ಮಸೂದೆ ದೆಹಲಿಗೆ ರವಾನೆ­ಯಾಗುವುದಕ್ಕೂ ದೇವೇಗೌಡರು ಈ ದೇಶದ ಪ್ರಧಾನಿ ಆಗುವುದಕ್ಕೂ ತಾಳೆಯಾಯಿತು. ಮುಖ್ಯಮಂತ್ರಿಯಾಗಿ ಮಸೂದೆ ಅಂಗೀಕರಿಸಲು ಕಾರಣಕರ್ತರಾಗಿದ್ದ ದೇವೇಗೌಡರೇ ನಂತರ ದೇಶದ ಪ್ರಧಾನಿಯಾದಾಗ ಅದಕ್ಕೆ (1996ರ ನವೆಂಬರ್‌ 15ರಂದು) ರಾಷ್ಟ್ರಪತಿಯವರ ಅನುಮೋದನೆ ದೊರೆಯಿತು. 1996ರ ನವೆಂಬರ್‌ 27ರ ಕೇಂದ್ರ ಸರ್ಕಾರದ ಗೆಜೆಟ್‌­ನಲ್ಲಿ  ಅದು ಪ್ರಕಟವೂ ಆಯಿತು.

ರಾಜಮನೆತನಕ್ಕೆ ಆಘಾತ: ಈ ಘಟನೆಗಳು ರಾಜಮನೆತನಕ್ಕೆ ದೊಡ್ಡ ಆಘಾತ ಉಂಟು ಮಾಡಿ­ದವು. ಸರ್ಕಾರದ ವಿರುದ್ಧ ಅಂದು ಆರಂಭಿ­ಸಿದ ಕಾನೂನು ಸಮರ ಇವತ್ತಿಗೂ ನಿಂತಿಲ್ಲ.

ಈ ಕಾಯ್ದೆಯನ್ನು ಪ್ರಶ್ನಿಸಿ ನರಸಿಂಹರಾಜ ಒಡೆಯರ್‌ ಮತ್ತು ಅವರ ಸಹೋದರಿಯರು ಹೈಕೋರ್ಟ್‌ ಮೆಟ್ಟಿಲು ಹತ್ತಿದರು. ಇವರ ಅರ್ಜಿಯನ್ನು 1997ರ ಮಾರ್ಚ್‌ 31ರಂದು ಹೈಕೋರ್ಟ್‌ ವಜಾ ಮಾಡಿ, ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿಯಿತು.

ವಿಚಾರಣೆ ಹಂತದಲ್ಲಿ: ಬಳಿಕ ಅವರು ಸುಪ್ರೀಂಕೋರ್ಟ್‌ ಕದ ತಟ್ಟಿದರು. ಹಲವು ವಿಶೇಷ ಮೇಲ್ಮನವಿಗಳ ಮೂಲಕ ಸರ್ಕಾರದ ತೀರ್ಮಾನವನ್ನು ಪ್ರಶ್ನೆ ಮಾಡಿದರು. ವಾದ– ಪ್ರತಿವಾದ ಆಲಿಸಿದ ಕೋರ್ಟ್‌ 1997ರ ಏಪ್ರಿಲ್‌ 20ರಂದು ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತು. ಬಳಿಕ ಸುಪ್ರೀಂಕೋರ್ಟ್‌ನ ಏಳು ಸದಸ್ಯರ ಪೀಠ ವಿಚಾರಣೆ ನಡೆಸಿತು. ಅದು ಕೂಡ ಅಂತಿಮ ತೀರ್ಮಾನಕ್ಕೆ ಬರದೆ ಒಂಬತ್ತು
ಸದಸ್ಯರ ನ್ಯಾಯಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿತು. ಅದು ಇನ್ನೂ ವಿಚಾರಣೆ ಹಂತದಲ್ಲೇ ಉಳಿದಿದೆ.

ಇದು ನ್ಯಾಯಾಂಗ ಹೋರಾಟ­ವಾದರೆ ಈ ನಡುವೆ ಆಗಾಗ್ಗೆ ಸಣ್ಣಪುಟ್ಟ ಸಮಸ್ಯೆಗಳು ಸೃಷ್ಟಿಯಾದವು.ಅರಮನೆ ಮೈದಾನ ಬಳಸುವ ವಿಚಾರದಲ್ಲಿ ಸರ್ಕಾರದ ಜತೆ ಹಲವು ಬಾರಿ ವಾದ– ವಿವಾದಗಳು ನಡೆದು, ಅದು ಕೂಡ ಕೋರ್ಟ್‌ ಮೆಟ್ಟಿಲು ಹತ್ತಲು ಕಾರಣವಾಯಿತು. ಅದಕ್ಕೂ ಕೋರ್ಟ್‌ ಸೂಕ್ತ ಮಾರ್ಗದರ್ಶನ­ಗಳನ್ನು ನೀಡಿದೆ. ಅದರ ಬಳಿಕವೂ ಅದು ವಿವಾದ­ವಾಗಿಯೇ ಉಳಿದಿದೆ. ಒಂದೊಂದು ಸರ್ಕಾರ ಬಂದಾಗಲೂ ಒಂದೊಂದು ರೀತಿಯ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿಕೊಂಡು ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂಬುದು ಒಡೆಯರ್‌ ಕುಟುಂಬದವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT