ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆಯಲ್ಲಿ ಅರಳಿದ ಶಿಕ್ಷಕರ ಗೌರವ

Last Updated 12 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಾಮಾಜಿಕ ಅಸಮಾನತೆ ಹಾಗೂ ಜಾತಿ ವ್ಯವಸ್ಥೆ ವಿರುದ್ಧ ಮಕ್ಕಳಲ್ಲಿ ಹೋರಾಟ ಮಾಡುವ ಗುಣ ಬೆಳೆಸಲು ಶಿಕ್ಷಕರು ಸನ್ನದ್ಧರಾಗಬೇಕಿದೆ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಕರೆ ನೀಡಿದರು. ನಗರದಲ್ಲಿ ಶುಕ್ರವಾರ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸರ್ವಶಿಕ್ಷಣ ಅಭಿಯಾನದಿಂದ ಹಮ್ಮಿಕೊಂಡಿದ್ದ ‘ಟೀಚರ್’ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ 9ನೇ ಶೈಕ್ಷಣಿಕ ಹಬ್ಬಕ್ಕೆ ಬೆಲ್ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಾಥಮಿಕ ಶಾಲಾ ಶಿಕ್ಷಕ ಅಸ್ಪೃಶ್ಯದ ಪ್ರಾಣಿ ಯಾಗಿದ್ದಾನೆ. ಆತ ಎಚ್ಚರ ತಪ್ಪಿದರೆ ಸಮಾಜಕ್ಕೆ ಕಂಟಕರಾಗುವ ವ್ಯಕ್ತಿಗಳು ಸೃಷ್ಟಿಯಾಗುತ್ತಾರೆ. ಸಮಾಜಕ್ಕೆ ದ್ರೋಹ ಮಾಡದಿರುವ ಪ್ರಪಂಚದ ಏಕೈಕ ವ್ಯಕ್ತಿಯಂದರೆ ಶಿಕ್ಷಕ ಮಾತ್ರ. ಆದರೆ, ಆತನ ಬಗ್ಗೆಯೂ ನಿರ್ಲಕ್ಷ್ಯದ ಧೋರಣೆಯಿದೆ. ಇಂಥ ಶಿಕ್ಷಕರಿಗೆ ಆತ್ಮಗೌರವ ತುಂಬಲು ‘ಅರಮನೆ’ ಕಾದಂಬರಿ ಬರೆದೆ. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂತು. ಈ ಪ್ರಶಸ್ತಿ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಸಂದಿರುವ ಗೌರವವಾಗಿದೆ’ ಎಂದು ನುಡಿದರು.

ಮಕ್ಕಳಲ್ಲಿ ಜಾತಿ ವಿನಾಶ ಕಲ್ಪನೆ ತುಂಬಬೇಕಿದೆ. ಶಿಕ್ಷಕರಿಗೆ ಮಾತೃಭಾಷೆಯ ಸ್ಪಷ್ಟ ಉಚ್ಚಾರಣೆ ಗೊತ್ತಿರಬೇಕಿದೆ. ಶಾಲೆಯಲ್ಲಿ ದಿನಕ್ಕೊಂದು ಕಥೆ ಹೇಳಿದರೆ ಒಳ್ಳೆಯದು. ಶಿಕ್ಷಕರು ಮತ್ತು ವಿದ್ಯಾರ್ಥಿ ಗಳ ನಡುವೆ ಅನೋನ್ಯತೆ ಇರಬೇಕು. ನಿರಂತರ ಅಧ್ಯಯನಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಹೆಂಡತಿ, ಮಕ್ಕಳ ಮೇಲಿನ ಸಿಟ್ಟನ್ನು ಶಾಲೆಯಲ್ಲಿ ಹೊರಹಾಕುವ ಶಿಕ್ಷಕರಿದ್ದಾರೆ. ಮೇಲ್ವರ್ಗದ ಮಕ್ಕಳನ್ನು ಮುಟ್ಟಲು ಮೂರಡಿ ಕೋಲು ಬಳಸುತ್ತಾರೆ. ದಲಿತ ಮಕ್ಕಳನ್ನು ಮುಟ್ಟಲು ಆರಡಿ ಕೋಲು ಬಳಸುವ ಶಿಕ್ಷಕರಿದ್ದಾರೆ. ಇಂಥ ಮನೋಭಾವ ಸರಿಯಲ್ಲ. ಶಿಕ್ಷಕರ ಮೇಲೆ ಈಗ ಟನ್‌ಗಟ್ಟಲೆ ಜವಾಬ್ದಾರಿಯಿದೆ ಎಂದು ಎಚ್ಚರಿಸಿದರು.

ಸರ್ಕಾರ ಹಲವು ಸವಲತ್ತು ನೀಡಿದರೂ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಚಿಣ್ಣರು ಶಾಲೆಗೆ ಬರುವಂತಹ ವಾತಾವರಣ ಸೃಷ್ಟಿಸಬೇಕು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಎಫ್.ಸಿ. ಚೇಗರೆಡ್ಡಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ಅಂಧಕಾರ ಬೆಳೆಯುತ್ತಿದೆ. ಮೌಢ್ಯದ ವಿರುದ್ಧ ಅಕ್ಷರವೇ ಆಯುಧವಾಗಿಬೇಕಿದೆ ಎಂದು ಆಶಿಸಿದರು.

ಸಮಾಜದ ಆಗುಹೋಗುಗಳ ಬಗ್ಗೆ ಶಿಕ್ಷಕರಿಗೆ ಅರಿವು ಇರಬೇಕು. ಆದರೆ, ಅಂಥ ವಾತಾವರಣ ಕಡಿಮೆಯಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಕೂಗು ಈಗ ಕೇಳಿಬರುತ್ತಿದೆ. ಸಾರ್ವತ್ರಿಕ ಮತ್ತು ಗುಣಮಟ್ಟದ ಶಿಕ್ಷಣ ಕುರಿತು ಚರ್ಚಿಸಲು ಈ ವೇದಿಕೆ ಕಲ್ಪಿಸಲಾಗಿದೆ ಎಂದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರನಾಯಕ್ ಮಾತನಾಡಿದರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಬಿ.ಎ. ರಾಜಶೇಖರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಬಿಜಿವಿಎಸ್‌ನ ರಾಜ್ಯ ಉಪಾಧ್ಯಕ್ಷೆ ಸಿ. ಸೌಭಾಗ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಉದಯಕುಮಾರ್, ಜಿ. ವಿನುತಾ, ಬಂಗಾರನಾಯಕ ಹಾಜರಿದ್ದರು. ಇದೇ ಸಂದರ್ಭದಲ್ಲಿ ಗಾಳಿಪಟ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT