ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಶಾಸ್ತ್ರಜ್ಞ ಸಂಸದ ವೆಂಕಟಗಿರಿಗೌಡ

Last Updated 22 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಅರ್ಥಶಾಸ್ತ್ರದಲ್ಲಿ ನುರಿತ ಕೆಲವರು ಭಾರತದ ಸಂಸತ್ತಿನ ಸದಸ್ಯರಾಗಿದ್ದರು. ಡಾ.ಬಿ.ಆರ್.ಅಂಬೇಡ್ಕರ್, ಪ್ರಧಾನಿ ಡಾ.ಮನಮೋಹನ್ ಸಿಂಗ್, ಹಣಕಾಸು ಸಚಿವ ಪಿ.­ಚಿದಂಬರಂ, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಅರುಣ್ ಶೌರಿ ಈ ಪಟ್ಟಿಯಲ್ಲಿರುವ ಕೆಲ ಹೆಸರು.

ಈ ಗುಂಪಿಗೆ ಕರ್ನಾಟಕದಿಂದ ಸೇರುವ ಹೆಸರು ಪ್ರೊ.­ಕೃಷ್ಣದಾಸೇ ವೆಂಕಟಗಿರಿಗೌಡ. ಬೆಂಗಳೂರಿನ ಬೈರಪಟ್ಟಣದಲ್ಲಿ ಜನಿಸಿದ ಅವರು ಮೈಸೂರು ವಿವಿಯಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌­ನಿಂದ 1956ರಲ್ಲಿ ಪಿ.ಎಚ್‌ಡಿ ಪಡೆದರು. ಅಲ್ಲಿ ಗೌಡರು ‘ಹಣದುಬ್ಬರ’ ಕುರಿತು ಸಂಶೋಧನೆ ಮಾಡುವಾಗಲೇ ಪ್ರತಿಷ್ಠಿತ ಲಾರ್ಡ್ ಲೆವರ್ ಹುಲ್ಮೆ ಪ್ರಶಸ್ತಿಗಾಗಿ ಆಯ್ಕೆ­ಯಾದರು. ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಗೌಡರು 1967ರಲ್ಲಿ ಬೆಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. 1983 ರಲ್ಲಿ ನಿವೃತ್ತರಾದ ಬಳಿಕ 1984ರ ಲೋಕಸಭಾ ಚುನಾವಣೆ­ಯಲ್ಲಿ ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿ.ಎಸ್.ಕೃಷ್ಣ ಅಯ್ಯರ್ ಎದುರು ಸೋತಿದ್ದರು.

ಆದರೆ 1991ರಲ್ಲಿ 10ನೇ ಲೋಕಸಭೆಗೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್‌ನ ಆರ್‌. ಗುಂಡೂರಾವ್‌ ಅವರನ್ನು ಸೋಲಿಸಿದ್ದರು.

ಬಿಜೆಪಿಯಲ್ಲಿ ಇದ್ದರೂ ಇವರು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರ ಉದಾರೀಕರಣದ ಆರ್ಥಿಕ ನೀತಿಯನ್ನು ಮುಕ್ತವಾಗಿ ಹೊಗಳಿದ್ದರು.

ಇವರ ಕೆಲವು ಕೃತಿಗಳೆಂದರೆ 'Perestroika and Glasnost for India', 'Fiscal Revolution in India', 'Euro-Dollar Flows and International Monetary Stability', 'Inflation—Appreciation of the Indian Rupee'.‘ಬೈರಪಟ್ಟಣದಿಂದ ಬ್ರಿಟನಿನವರೆಗೆ’ ಇವರ ಆತ್ಮಕತೆ.

ಅವರು ಪೆಟ್ರೋ ಡಾಲರ್ ಕುರಿತು ಬರೆದ ಪುಸ್ತಕವು ಎಪ್ಪತ್ತರ ದಶಕದ ಮಧ್ಯ ಭಾಗದಲ್ಲಿ ಭಾರತದ ಒಳಗೆ ಮತ್ತು ವಿದೇಶ­ಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಒಂದು ಸಲ ಸಂದರ್ಶಕರೊಬ್ಬರು, ‘ನೀವು ಮುಂಗೋಪಿ. ಆದ್ದರಿಂದ ಜನರೊಡನೆ ಹೊಂದಿಕೊಂಡು ಹೋಗಲಾರದವರು ಎನ್ನುವ ಭಾವನೆಯಿದೆಯಲ್ಲ?’ ಎಂದಾಗ ‘ಹೌದು ನಾನು ಮುಂಗೋಪಿ, ಜವಾಹರಲಾಲ್ ನೆಹರು­ರವರು ಮುಂಗೋಪಿ ಯಾಗಿರ­ಲಿಲ್ಲವೇ?’ ಎಂದು ಮತ್ತೆ ಕೋಪದಲ್ಲೇ ಉತ್ತರಿಸಿದ್ದರು!

ರಾಜಕೀಯವಾಗಿ ಭಿನ್ನ ದಾರಿಗಳನ್ನು ತುಳಿದ ಗೌಡರು ಮತ್ತು ಮನಮೋಹನ್ ಸಿಂಗ್ ಲಂಡನ್‌ನಲ್ಲಿ ಸಹಪಾಠಿ­ಗಳಾಗಿದ್ದರು. 81 ವರ್ಷ ಬದುಕಿದ್ದ ಅವರು ಎರಡು ಸಲ  ಒಕ್ಕಲಿಗರ ಸಂಘದ  ಅಧ್ಯಕ್ಷರಾಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT