ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಯ ನೋವು

Last Updated 15 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಯೋಗಿಗೆ ಆಕ್ಟಿಂಗ್ ಬರೊಲ್ಲ ಅಂತಾ ತುಂಬಾ ಜನ ಹಿಂದಿನಿಂದ ಹೇಳುತ್ತಿದ್ದಾರೆ. ಅವಕಾಶವನ್ನು ಬಳಸಿಕೊಂಡು ಅವರ ಅಭಿಪ್ರಾಯವನ್ನು ಕನಿಷ್ಠಪಕ್ಷ ಒಂದು ಪರ್ಸೆಂಟಾದರೂ ಬದಲಾಯಿಸಲು ಪ್ರಯತ್ನಿಸುತ್ತೇನೆ~ ಎಂದು ಹೇಳುವಾಗ ಲೂಸ್ ಮಾದ ಯೋಗೀಶ್ ವದನದಲ್ಲಿ ನೋವು ತುಂಬಿತ್ತು.

`ಅಲೆಮಾರಿ~ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ದೊರೆತ ಬಳಿಕ ಚಿತ್ರತಂಡ ಪತ್ರಿಕಾಮಿತ್ರರೊಂದಿಗೆ ಮಾತಿಗಿಳಿದಾಗ ಯೋಗಿ ಈ ಬೇಸರ ಹೊರಹಾಕಿದರು. ಯೋಗಿಗೆ ನಟನೆ ಬರೋದಿಲ್ಲ ಎಂದು ಹಲವರು ಮಾತಾಡಿಕೊಳ್ಳುತ್ತಿದ್ದದ್ದು ನನ್ನ ಕಿವಿಗೆ ಬಿದ್ದಿದೆ.

`ಅಲೆಮಾರಿ~ ಚಿತ್ರದಲ್ಲಿ ನಟನಾ ಸಾಮರ್ಥ್ಯ ಪ್ರದರ್ಶಿಸಲು ಅಪಾರ ಅವಕಾಶವಿದೆ. ಇದನ್ನು ಬಳಸಿಕೊಂಡು ಅವರ ಅಭಿಪ್ರಾಯವನ್ನು ಬದಲಿಸುತ್ತೇನೆ ಎಂದು ಯೋಗಿ ಅರೆ ಆತ್ಮವಿಶ್ವಾಸದಿಂದ ನುಡಿದರು. ಆದರೆ ಈ ವಿಚಾರವನ್ನು ಇನ್ನಷ್ಟು ಎಳೆಯಲು ಇಚ್ಛಿಸದ ಯೋಗಿ ಚಿತ್ರದ ಬಗ್ಗೆ ಮಾತನ್ನು ಹೊರಳಿಸಿದರು.

`ಅಲೆಮಾರಿ~ ಹೆಸರು ಹೇಳುವಂತೆ ಹುಡುಕಾಡುತ್ತಾ ಸಾಗುವುದು. ಆದರೆ ಇಲ್ಲಿ ನಾಯಕ ಸುಮ್ಮನೆ ಊರಿಂದೂರಿಗೆ ಅಲೆಯುವುದಿಲ್ಲ. ಬದಲಿಗೆ ಪ್ರೀತಿ ಮತ್ತು ಸಾಧನೆಯ ಹುಡುಕಾಟದಲ್ಲಿ ಪಯಣಿಸುತ್ತಾನೆ ಎಂದು ಕಥೆಯ ಎಳೆ ಬಿಡಿಸಿಟ್ಟರು.

`ಸಿದ್ಲಿಂಗು~ ಚಿತ್ರಕ್ಕಾಗಿ ಕೇಶಮುಂಡನ ಮಾಡಿಸಿಕೊಂಡಿದ್ದ ಯೋಗಿ ಈ ಚಿತ್ರಕ್ಕಾಗಿ ವಿಗ್ ಮೊರೆ ಹೋಗಿದ್ದಾರೆ. ಪಾತ್ರಕ್ಕೆ ತಕ್ಕಂತಹ ಎರಡು ವಿಗ್‌ಗಳನ್ನು ಮುಂಬೈನಿಂದ ತರಿಸಿಕೊಳ್ಳಲಾಗಿದೆ. ಮುಡಿಗೇರಿದ ವಿಗ್ ವಿಚಿತ್ರ ಅನುಭವ ನೀಡುತ್ತಿದೆ ಎಂದು ಯೋಗಿ ಹೇಳಿದರು.

ಅಲೆಮಾರಿಯ ನಾಯಕಿ ರಾಧಿಕಾ ಪಂಡಿತ್‌ಗೆ ತಮ್ಮ ಪಾತ್ರಕ್ಕಿಂತಲೂ ಯೋಗಿಯ ಪಾತ್ರ ಹೆಚ್ಚು ಇಷ್ಟವಾಯಿತಂತೆ. ತಮ್ಮಿಬ್ಬರದೂ ಹೆಚ್ಚು ಅಭಿನಯವನ್ನು ನಿರೀಕ್ಷಿಸುವ ಪಾತ್ರ. `ಹುಡುಗರು~ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ತದ್ವಿರುದ್ಧ ಪಾತ್ರವಿದು. ಮಧ್ಯಮವರ್ಗದ ಮೃದು ಸ್ವಭಾವದ ಬ್ರಾಹ್ಮಣ ಹುಡುಗಿಯ ಪಾತ್ರ. ಚಿತ್ರದ ಕಥೆ ಅದ್ಭುತವಾಗಿದೆ ಎಂದು ರಾಧಿಕಾ ಸಂತಸಪಟ್ಟರು.

ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ಸಂತೋಷ್ ಅಲಿಯಾಸ್ ಸಂತು ಮೊದಲ ಬಾರಿಗೆ ಸ್ವತಂತ್ರವಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಕೂಡ ಅವರದ್ದೆ. ಚಿತ್ರದಲ್ಲಿ ನಾಯಕನಿಗೆ ಗೊತ್ತುಗುರಿ ಇರುವುದಿಲ್ಲ. ಆದರೆ ಕನಸಿರುತ್ತದೆ. ಶೀರ್ಷಿಕೆಗೆ ನ್ಯಾಯ ಒದಗಿಸುತ್ತದೆ ಎಂದು ಸಂತು ಹೇಳಿಕೊಂಡರು.

ಚಿತ್ರದಲ್ಲಿ ಆರು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮೇಕಪ್‌ಗೆ ಚಿತ್ರದಲ್ಲಿ ಒತ್ತು ನೀಡಿದ್ದು, `ಪಾ~ ಚಿತ್ರದಲ್ಲಿ ಮಾಡಿರುವಂತಹ ಮೇಕಪ್ ಇರುವ ಪಾತ್ರವಿದೆಯಂತೆ. ಅಲ್ಲದೆ ಯೋಗಿ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ಮಾಪಕ ಶ್ರೀನಿವಾಸ್, ನಟ ಯೋಗೀಶ್ ಚಿತ್ರರಂಗದಲ್ಲಿ ಹಂತಹಂತವಾಗಿ ಬಡ್ತಿ ಪಡೆಯುತ್ತಿದ್ದಾರೆ ಎಂದು ಹೊಗಳಿ ಮಾತು ಮುಗಿಸಿದರು.

ಬೆಂಗಳೂರು, ಮೈಸೂರು, ಬೆಳಗಾವಿ, ಬಿಜಾಪುರ, ಬೀದರ್ ಮುಂತಾದೆಡೆ ಸುಮಾರು 50 ದಿನ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT