ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತ ಮಠಗಳ ಮೇಲೆ ನಿಗಾ: ಸಮರ್ಥನೆ

Last Updated 18 ಫೆಬ್ರುವರಿ 2011, 18:10 IST
ಅಕ್ಷರ ಗಾತ್ರ

ಬೆಂಗಳೂರು: ಮಠಗಳು ಮತ್ತು ಅವುಗಳ ಅಧೀನದಲ್ಲಿ ಬರುವ ಧಾರ್ಮಿಕ ಸಂಸ್ಥೆಗಳನ್ನು ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಯಿಂದ ಹೊರಗಿಟ್ಟು, ಸಿಖ್, ಜೈನ ಮತ್ತು ಬೌದ್ಧರ ಧಾರ್ಮಿಕ ಸಂಸ್ಥೆಗಳನ್ನು ಕಾಯ್ದೆ ವ್ಯಾಪ್ತಿಗೆ ತರುವ ಸರ್ಕಾರದ ಕ್ರಮವನ್ನು ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ಶುಕ್ರವಾರ ಇಲ್ಲಿ ಸಮರ್ಥಿಸಿಕೊಂಡರು.

ಸಿಖ್, ಜೈನ ಮತ್ತು ಬೌದ್ಧರು ಹಿಂದೂ ಧರ್ಮದ ಭಾಗ ಎಂದು ಸಂವಿಧಾನ ಹೇಳಿದೆ. ಹೀಗಾಗಿ ಅವುಗಳ ಹಣಕಾಸು ವಹಿವಾಟು, ಆಸ್ತಿ ಇತ್ಯಾದಿ ವಿಷಯಗಳಲ್ಲಿ ಲೆಕ್ಕಪರಿಶೋಧನೆ ನಡೆಸಲು ಸರ್ಕಾರಕ್ಕೆ ಅವಕಾಶವಿದೆ. ಆದರೆ ಅವುಗಳ ದೈನಂದಿನ ಆಡಳಿತದಲ್ಲಿ ಕೈಹಾಕುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಹಿಂದೂ ಮಠಗಳಿಗೆ ಈಗಾಗಲೇ ಮಠಾಧೀಶರು ಇದ್ದಾರೆ. ಆದ್ದರಿಂದ ಸರ್ಕಾರ ಕೈಹಾಕುವುದಿಲ್ಲ. ಮಠಗಳನ್ನು ಹೊರತುಪಡಿಸಿ ಇತರ ಧಾರ್ಮಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಲು ಅವಕಾಶವಿದೆ ಎಂದರು.

ಸಕ್ರಮ: 2009ರ ಡಿಸೆಂಬರ್ 7ಕ್ಕೂ ಮೊದಲು ಅನಧಿಕೃತವಾಗಿ ನಿರ್ಮಾಣವಾಗಿರುವ ಪೂಜಾ ಸ್ಥಳಗಳು, ಪ್ರಾರ್ಥನಾ ಮಂದಿರಗಳನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಕ್ರಮಗೊಳಿಸಲಾಗುವುದು. ರಸ್ತೆ, ಉದ್ಯಾನವನ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳಗಳಲ್ಲಿ ಇರುವ ಪ್ರಾರ್ಥನಾ ಮಂದಿರಗಳನ್ನು ಸಾರ್ವಜನಿಕರ ಶಾಂತಿಗೆ ಭಂಗ ಬಾರದ ಹಾಗೆ ಬೇರೆ ಕಡೆಗೆ ಸ್ಥಳಾಂತರಿಸಲಾಗುವುದು. ನೆಲಸಮಗೊಳಿಸಬೇಕಾದ ಸಂದರ್ಭ ಬಂದಲ್ಲಿ ಸಾರ್ವಜನಿಕರ ಒಪ್ಪಿಗೆಯೊಂದಿಗೆ ಮಾಡಲಾಗುವುದು ಎಂದು ತಿಳಿಸಿದರು. ಗದಗ, ಮೈಸೂರು, ಚಾಮರಾಜನಗರ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಈ ರೀತಿಯ ಪ್ರಾರ್ಥನಾ ಮಂದಿರಗಳು ಜಾಸ್ತಿ ಇವೆ. ಸಂಬಂಧಪಟ್ಟ ಪ್ರಾರ್ಥನಾ ಮಂದಿರದ ಆಡಳಿತ ಮಂಡಳಿಗೆ ಷೋಕಾಸ್ ನೋಟಿಸ್ ನೀಡದೆ ಏಕಪಕ್ಷೀಯವಾಗಿ ತೆರವುಗೊಳಿಸಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

2009 ಡಿಸೆಂಬರ್ 7ರ ನಂತರ ನಿರ್ಮಾಣವಾಗಿರುವ ಅನಧಿಕೃತ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಸಾರ್ವಜನಿಕರ ಒಪ್ಪಿಗೆಯೊಂದಿಗೆ ತೆರವುಗೊಳಿಸಲಾಗುವುದು. ಇನ್ನು ಮುಂದೆ ಈ ರೀತಿ ನಿರ್ಮಾಣವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT