ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಮಪ್ರಭು ದೇವರ ಜಾತ್ರೆ ಇಂದಿನಿಂದ

Last Updated 2 ಸೆಪ್ಟೆಂಬರ್ 2013, 7:19 IST
ಅಕ್ಷರ ಗಾತ್ರ

ತೇರದಾಳ(ಬನಹಟ್ಟಿ): ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ, ಅಲ್ಲಿದ್ದಾತ ರುದ್ರನೊಬ್ಬ, ಆ ಬೆಟ್ಟಕ್ಕೂ ಆ ರುದ್ರಂಗೆಯೂ ಪ್ರಳಯವುಂಟೆಂಬುದು ಗುಹೇಶ್ವರಾ ನಿಮ್ಮ ಶರಣ ಬಲ್ಲನು.

ಈ ರೀತಿ ವಿಶೇಷ ಬೆಡಗಿನ ವಚನಗಳನ್ನು ನಿರ್ಮಿಸುವುದರ ಜೊತೆಗೆ ವಚನ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಲ್ಲಮಪ್ರಭು ದೇವರು. ಅಲ್ಲಮಪ್ರಭು ದೇವರು ತೇರದಾಳ ಪಟ್ಟಣದ ಆರಾಧ್ಯ ದೈವ. ಇದೇ 2 ಮತ್ತು 3 ರಂದು ಅಲ್ಲಮಪ್ರಭು ದೇವರ ಜಾತ್ರೆ ವಿಜೃಂಭಣೆಯಿಂದ ನಡೆಯುವುದು.

ತ್ರಿದಳ, ತೇರಾಳ, ತೇರ್ದಾಳ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ತೇರದಾಳ ಪಟ್ಟಣದ ಮೂಲ ಹೆಸರು ಕಂಪಣ. ಈ ಪಟ್ಟಣಕ್ಕೆ ಅಲ್ಲಮಪ್ರಭು ದೇವರು ಬಂದು ನೆಲೆಸಿದ್ದರು. 

ಪ್ರತಿ ವರ್ಷ ಇಲ್ಲಿ ಕೊನೆಯ ಶ್ರಾವಣ ಸೋಮವಾರ ಅಲ್ಲಮಪ್ರಭು ದೇವರ ಐತಿಹಾಸಿಕ ಜಾತ್ರೆ ನಡೆಯುತ್ತದೆ. ಇದು ಶತಶತಮಾನಗಳಿಂದ ಸತತವಾಗಿ ನಡೆದು ಬಂದಿರುವುದು ವಿಶೇಷ. ಸೋಮವಾರ ಸ್ಥಳೀಯ ನಾಡಗೌಡರ ಮನೆಯಿಂದ ದೇವಸ್ಥಾನಕ್ಕೆ ಆರತಿ ಬಂದು ನಂತರ ಪಲ್ಲಕ್ಕಿ ಉತ್ಸವ, ನಂದಿಕೋಲು ಉತ್ಸವ, ಭೃಂಗಿ ಸ್ವಾಮಿಗಳ ಮತ್ತು ದೇವಕನ್ಯೆಯರ ಗಾಯನ ನಡೆಯುತ್ತದೆ. ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸುತ್ತವೆ. ಈ ಜಾತ್ರೆ ಹಲವಾರು ವಿಶೇಷ ಕೂಡಿದೆ.

ನಂಬಿಕೆಗಳು:  ಜನರು ತಮ್ಮ ಇಷ್ಟಾರ್ಥಗಳಿಗಾಗಿ ಹರಿವಾಣ ಸೇವೆಯನ್ನು ಮಾಡುವರು.

ಪ್ರತಿವರ್ಷ ಅಲ್ಲಮಪ್ರಭು ದೇವರ ದೇವಸ್ಥಾನ ಗೋಧಿ ಕಾಳಿನಷ್ಟು ಮುಂದೆ ಚಲಿಸುತ್ತದೆ ಎಂಬ ನಂಬಿಕೆ. ಆದ್ದರಿಂದ ಇಲ್ಲಿ ರಥೋತ್ಸವ ನಡೆಯದೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ. 

ದೇವಸ್ಥಾನದ ಆವರಣದಲ್ಲಿರುವ ಮರಳಿನ ಮೇಲೆ ಓಂಕಾರ ಬರೆದು ಅದನ್ನು ತೆಗೆದುಕೊಂಡು ಹೋಗಿ ಮನೆ ಮತ್ತು ಹೊಲ ತೋಟಗಳಲ್ಲಿ ಹಾಕಿದರೆ ವಿಷಕಾರಿ ಜಂತುಗಳು ಬರಲಾರವು ಎಂಬುದು ಮತ್ತೊಂದು ನಂಬಿಕೆ.

ಎರಡನೆಯ ದಿನ ಕುಸ್ತಿ ಟೂರ್ನಿಗಳು ನಡೆಯುತ್ತವೆ. ಇಲ್ಲಿಯ ಕುಸ್ತಿಗೆ ಎಲ್ಲಿಲ್ಲದ ಮಹತ್ವ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಪಂಜಾಬ ರಾಜ್ಯಗಳಿಂದ ಶ್ರೇಷ್ಠ ಕುಸ್ತಿ ಪಟುಗಳು  ಕುಸ್ತಿ ಕಲೆ ಪ್ರದರ್ಶನ ಮಾಡುತ್ತಾರೆ.

ಹಿಂದೂ, ಜೈನ ಮತ್ತು ಮುಸ್ಲಿಂ ಸಮುದಾಯದ ಜನರು ಒಟ್ಟಾಗಿ ಕೂಡಿ ಮಾಡುವ ಜಾತ್ರೆ ಇದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT