ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಿಲ್ಲದ ಅಲೆ ಅಪ್ಪಳಿಸುವ ಬಗೆ

Last Updated 14 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಲೋಕೇಶ್‌ ಮತ್ತು ಗಿರಿಜಾ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ  ಕಲಾವಿದರು. ಇವರ ಕುಡಿ ಪೂಜಾ ಮತ್ತು ಸೃಜನ್‌ ಕೂಡಾ ಕಲಾವಿದರು. ಸೃಜನ್‌ ಪತ್ನಿ ಗ್ರೀಷ್ಮಾ ಕಿರುತೆರೆ ಕಲಾವಿದೆ. ಲೋಕೇಶ್‌ ನಿಧನದ ನಂತರ ಕಲಾಕ್ಷೇತ್ರದಲ್ಲಿ ಒಂದು ಕೊರತೆಯಂತೂ ಎದ್ದುಕಾಣುತ್ತಿದೆ. ಅವರಿಗಂಟಿಕೊಂಡೇ ಇದ್ದ ಈ ಜೀವಗಳು ಅವರಿಲ್ಲದೇ ಹೇಗಿದ್ದಾರೆ ಎಂದು ನೋಡಿದರೆ, ಜೀವನ್ಮುಖಿ ಸಂಸಾರ ಅದು. 
***
‘ಅವರಿಲ್ಲ ಎಂದುಕೊಂಡೇ ಇಲ್ಲ. ಹಾಗಂದುಕೊಂಡರೆ ತಾನೇ ಕೊರಗು! ಲೋಕೇಶ್‌ ನಮ್ಮ ಜೊತೆಗಿದ್ದಾರೆ ಎಂದುಕೊಂಡೇ ಬದುಕುತ್ತಿದ್ದೇವೆ. ಕೆಲವೊಮ್ಮೆ ಬೆಳಗ್ಗೆದ್ದು ಕಾಫಿ ಲೋಟ ಹಿಡಿದು ಲೋಕೀ.. ಎಂದು ಕರೆಯುತ್ತೇನೆ. ಅಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ. ಇಲ್ಲೇ ಎಲ್ಲೋ  ಶೂಟಿಂಗ್‌ಗೆ ಹೋಗಿದ್ದಾರೆ. ಸ್ವಲ್ಪ ದಿನದಲ್ಲಿ ಬರುತ್ತಾರೆ ಎನ್ನುವ ಭರವಸೆ­ಯಲ್ಲಿಯೇ ಮುಂದುವರಿ­ಯುತ್ತಿದ್ದೇವೆ. ಅವರ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ನಾವೆಲ್ಲ ಸಾಗು­ತ್ತಿದ್ದೇವೆ.

ಎಲ್ಲರೂ ಒಂದಲ್ಲ ಒಂದು ದಿನ ಹೋಗು­ವುದಕ್ಕೇ ಬಂದವರು. ಒಂದು ಕ್ಷಣ, ಜೊತೆಗಿಲ್ಲವಲ್ಲ ಎಂದು ಬೇಸರವಾದರೂ ಅದಕ್ಕಾಗಿ ಕೊರಗುತ್ತಿಲ್ಲ. ನಮ್ಮೆಲ್ಲ ಕೆಲಸದಲ್ಲಿ ಅವರಿದ್ದಾರೆ ಎಂದುಕೊಂಡು ಬದುಕುತ್ತಿದ್ದೇವೆ. ಈ ಭಾವವೇ ನಮ್ಮ ಶಕ್ತಿ. ಆದರೂ ಅವರು ಈಗ ಇರಬೇಕಿತ್ತು ಎಂದು ಆಗಾಗ ಅನ್ನಿಸು­ವುದಿದೆ. ಅವರಿದ್ದು, ನಮ್ಮ ಕೆಲಸಗಳನ್ನು ನೋಡು­ವಂತಿದ್ದರೆ ಖುಷಿಪಡು­ತ್ತಿದ್ದರು ಎಂದು­ಕೊಳ್ಳುವುದೂ ಇದೆ. ಇವೆಲ್ಲದರ ನಡುವೆಯೂ ನಮ್ಮ ಸಂತೋಷ­ವನ್ನು ನಾವೇ ತಂದು­ಕೊಳ್ಳುವ ಶಕ್ತಿ ಪಡೆದಿದ್ದೇವೆ. ಇದೆಲ್ಲ ಅವರ ಕಾಣಿಕೆ ಎಂಬುದನ್ನು ಮರೆತಿಲ್ಲ.

ಲೋಕೇಶ್‌ ಸರಳ ಜೀವನದಲ್ಲಿ ಸುಖ ಕಂಡವರು. ಹಣದ ಹಿಂದೆ ಹೋದವರಲ್ಲ. ಇರುವುದರಲ್ಲಿ ಸುಖ ಕಾಣಬೇಕು. ಇಲ್ಲದವರಿಗೆ ಹಂಚಬೇಕು ಎನ್ನುತ್ತಿದ್ದವರು. ನಾವೂ ಅದನ್ನೇ ರೂಢಿಸಿಕೊಂಡಿದ್ದೇವೆ. ಪ್ರಾಮಾಣಿಕವಾಗಿ ಬದುಕುತ್ತಿದ್ದೇವೆ. ಆ ತೃಪ್ತಿ ನಮಗಿದೆ. ಲೋಕೇಶ್‌ ನಟರಾಗಿದ್ದರೂ ತುಂಬ ಸರಳವಾಗಿ ಬದುಕಿದವರು. ಕೇವಲ ಐದು ಜೊತೆ ಬಟ್ಟೆ ಇಟ್ಟುಕೊಂಡಿದ್ದರು. ಹೊಸ ಬಟ್ಟೆ ತೊಗೊಳ್ಳಿ ಎಂದರೆ ‘ಸುಮ್ನೆ ಪೆಟ್ಟಿಗೆಯಲ್ಲಿಟ್ಟು ಏನು ಮಾಡಲಿ? ಎಷ್ಟು ಬೇಕೋ ಅಷ್ಟಿದ್ದರೆ ಸಾಕು’ ಎನ್ನುತ್ತಿದ್ದರು. ಯಾವುದಕ್ಕೂ ಆಸೆಪಡುತ್ತಿರಲಿಲ್ಲ. ನಾವಿಬ್ಬರೂ ಹಳೇ ಸ್ಕೂಟರ್‌ನಲ್ಲೇ ಓಡಾಡುತ್ತಿದ್ದೆವು. ಬಹಳ ವರ್ಷಗಳ ನಂತರ ಬೈಕ್‌ ಕೊಂಡಿದ್ದರು. ಕೊನೆಯ ದಿನಗಳಲ್ಲಿ ಕತ್ರಿಗುಪ್ಪೆಯಲ್ಲಿ ಮನೆ ಮಾಡಿದ ನಂತರ ಕಾರು ಕೊಂಡಿದ್ದರು.

ತನಗೆ ಕಾಯಿಲೆ ಇದ್ದರೂ ಯಾವತ್ತೂ ಕೊರಗಿದವರಲ್ಲ. ಬಂದದ್ದು ಬಂದಂತೆ ಸ್ವೀಕರಿಸುವ ಸ್ವಭಾವ ಅವರದು. ಕೊನೆಗಾಲದಲ್ಲಿ ಮಧುಮೇಹ ಹೆಚ್ಚಾಗಿ ಸರ್ಜರಿಯೂ ಆಗಿತ್ತು. ಆದರೂ, ದಿನಾ ದಿನಾ ಸಾಯುತ್ತಿದ್ದೇನೆ ಎಂದುಕೊಂಡು ಕೊರಗಿದವರಲ್ಲ. ಜೀವನೋತ್ಸಾಹ ಕಳೆದುಕೊಂಡಿರಲಿಲ್ಲ. ಆ ದಿನ ಮನೆಯಲ್ಲಿ ಯಾವುದೋ ಕಾರ್ಯಕ್ರಮವಿತ್ತು. ಆವತ್ತು ಖುಷಿಯಿಂದಲೇ ಇಡೀ ದಿನ ಓಡಾಡಿಕೊಂಡಿದ್ದ ಅವರು ಹಾಗೇ ಹೋಗಿಬಿಟ್ಟರು. 

ಸರಳ ಜೀವನ ಮತ್ತು ಸಹಕಾರದ ಬದುಕು ಅವರೇ ಹಾಕಿಕೊಟ್ಟ ಮಾದರಿ. ಹಾಗಾಗಿ ನಮಗೆ ಬದುಕು ಯಾವತ್ತೂ ದುಸ್ತರ ಅನ್ನಿಸಲಿಲ್ಲ. ನಮ್ಮ ಕೈಲಾಗುವ ಸಹಾಯಗಳನ್ನು ಮಾತ್ರ ಮಾಡುತ್ತೇವೆ. ಖುಷಿ ಖುಷಿಯಾಗಿಯೇ ಇರಬೇಕು ಎಂಬುದು ನಾವೇ ಹಾಕಿಕೊಂಡ ನಿಯಮ.

ಅಸಹಾಯಕರಿಗೆ ಸಹಾಯ ಮಾಡಬೇಕು ಎಂಬುದು ಲೋಕೇಶ್‌ ಕಾಳಜಿಯಾಗಿತ್ತು. ಅದಕ್ಕಾಗಿ ಬಡ, ಹಿರಿಯ ಕಲಾವಿದರಿಗೆ ಸಹಾಯವಾಗುವಂತೆ ವೈದ್ಯಕೀಯ ವೆಚ್ಚ ಭರಿಸುತ್ತಿದ್ದೇವೆ. ಲೋಕೇಶ್‌ ಇದ್ದರೂ ಇದನ್ನೇ ಮಾಡುತ್ತಿದ್ದರು. ಈಗಷ್ಟೇ ಲೋಕೇಶ್‌ ಹೆಸರಿನಲ್ಲಿ ಪ್ರೊಡಕ್ಷನ್‌ ಆರಂಭಿಸಿದ್ದೇವೆ. ಕಿರುತೆರೆಯಲ್ಲಿ ‘ಚೋಟಾ ಚಾಂಪಿಯನ್‌’ ಮತ್ತು ‘ಚಾಲೆಂಜ್‌’ ಎಂಬ ರಿಯಾಲಿಟಿ ಶೋ ಆರಂಭಿಸಿದ್ದೇವೆ.

ಮಗ ಸೃಜನ್‌ ನಟನೆ, ನಿರೂಪಣೆಯ ಜೊತೆಗೆ ಪ್ರೊಡಕ್ಷನ್‌ ಕೆಲಸವನ್ನೂ ನಿಭಾಯಿಸುತ್ತಿದ್ದಾನೆ. ನಾನೂ ಅವಕಾಶ ಸಿಕ್ಕಾಗೆಲ್ಲ ರಂಗಭೂಮಿ, ಕಿರುತೆರೆ, ಹಿರಿತೆರೆ ಎಲ್ಲದರಲ್ಲೂ ನಟಿಸುತ್ತಿದ್ದೇನೆ. ಲೋಕೇಶ್‌ ಹೆಸರಿನಲ್ಲಿ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಸದಾ ಚಟುವಟಿಕೆಯಿಂದ ಇದ್ದರೆ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. ಇದೇ ನಮ್ಮ ಕುಟುಂಬದ ಶಕ್ತಿ. ನಮ್ಮ ಕೈಲಾಗುವಷ್ಟು ಕಲಾಸೇವೆಯಲ್ಲಿ ತೊಡಗಿಕೊಂಡಿದ್ದೇವೆ. ಇದೆಲ್ಲವೂ ಲೋಕೇಶ್‌ ಲೋಕದಲ್ಲಿಲ್ಲ ಎನ್ನುವುದನ್ನು ಮರೆಸಿಬಿಡುತ್ತದೆ.
-ಗಿರಿಜಾ ಲೋಕೇಶ್

ಈಗಲೂ ಅವರಿದ್ದಂತೆ...
‘ಹೆಂಡತಿಯನ್ನು ನಿಜವಾಗಿ  ಪ್ರೀತಿಸುವವರು ಆಕೆಯನ್ನು ವಿಧವೆಯಂತೆ ಕಾಣಬೇಕು’ ಎಂದು ಒಮ್ಮೆ ನಾಣಿ ಹೇಳಿದ್ದರು. ಆ ಮಾತು ಕೇಳಿ ಸಹಿಸಲಾರದ ಸಿಟ್ಟು ಬಂದಿತ್ತು. ನಮ್ಮ ಮದುವೆಯಾದಾಗಿನಿಂದ ನಾಣಿ ನನ್ನ ಯಾವ ಕೆಲಸಗಳಿಗೂ ಸಹಾಯ ಮಾಡುತ್ತಿರಲಿಲ್ಲ. ಮೊದಮೊದಲು ನನಗದು ತುಂಬ ಸಿಟ್ಟು ತರಿಸುತ್ತಿತ್ತು. ಎಂಥ ಗಂಡನಪ್ಪ ! ಹೆಂಡತಿಯ ಬಗ್ಗೆ ಒಂಚೂರೂ ಕಾಳಜಿ ಇಲ್ಲ. ನನ್ನ ಬೇಕು ಬೇಡಗಳನ್ನು ಕೇಳುತ್ತಿಲ್ಲ ಎಂದು ಸಿಟ್ಟಾಗುತ್ತಿದ್ದೆ. ನಾನಾಗಿ ಕೇಳದ ಹೊರತು ಅವರು ನನ್ನ ಕೆಲಸಗಳಿಗೆ ಸಹಾಯ ಮಾಡುತ್ತಿರಲಿಲ್ಲ. ನನಗೆ ಸ್ವಾಭಿಮಾನ ಸ್ವಲ್ಪ ಹೆಚ್ಚು. ನಾನಾಗಿ ಕೇಳುತ್ತಿರಲಿಲ್ಲ. ನನ್ನ ಕೆಲಸಗಳನ್ನು ಕಷ್ಟವಾದರೂ ನಾನೇ ಮಾಡಿಕೊಳ್ಳುತ್ತಿದ್ದೆ.

‘ಹೆಂಡತಿ ಗಂಡನನ್ನು ಪ್ರತಿಯೊಂದಕ್ಕೂ ಅವಲಂಬಿಸದೇ ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು’ ಎಂಬುದು ಅವರ ಕಾಳಜಿಯಾಗಿತ್ತು. ಹೀಗಾಗಿ ನಾನು ಅವರನ್ನು ಅವಲಂಬಿಸುವ ಪ್ರಮೇಯವೇ ಬರಲಿಲ್ಲ. ನಾವಿಬ್ಬರು ಜೊತೆಯಾಗಿ ನಾಟಕಗಳಿಗೆ ಹೋಗುತ್ತಿದ್ದೆವಷ್ಟೇ. ಮತ್ತೆ ನಮ್ಮದೇ ಕೆಲಸಗಳಲ್ಲಿ ಮುಳುಗಿರುತ್ತಿದ್ದೆವು. ಅವರ ಈ ಗುಣವೇ ನನ್ನನ್ನು ಸ್ವತಂತ್ರಳನ್ನಾಗಿ ಮಾಡಿತ್ತು. ಗಂಡನನ್ನು ಹೆಚ್ಚು ಅವಲಂಬಿಸಿದವರಿಗಷ್ಟೇ ಅವರಿಲ್ಲದ ಜೀವನ ಕಷ್ಟ ಎನ್ನಿಸುವುದು. ನಾಣಿ ನನ್ನನ್ನು ನಿಜವಾಗಿಯೂ ತುಂಬ ಪ್ರೀತಿಸುತ್ತಿದ್ದರು. ಅದಕ್ಕಾಗಿಯೇ ಹಾಗೆ ನಡೆಸಿಕೊಂಡರು ಎಂದು ಈಗ ಅನ್ನಿಸುತ್ತಿದೆ.

ಈಗ ಅನ್ನಿಸುತ್ತಿದೆ, ಇದರಿಂದ ನಾಣಿ ಅವರ ಕೆಲಸಗಳಿಗೆ ಸಹಾಯವೇ ಆಯಿತು. ಹೆಂಡತಿಯ ಬೇಕುಬೇಡಗಳನ್ನು ಕೇಳುತ್ತಾ, ಈಡೇರಿಸುತ್ತಾ ಹೋಗಿದ್ದಿದ್ದರೆ ಅವರೂ ನಾಟಕಗಳಲ್ಲಿ ಸಂಪೂರ್ಣವಾಗಿ ತೊಡಗುವುದು ಸಾಧ್ಯವಾಗುತ್ತಿರಲಿಲ್ಲ. ನಾನೂ ಸ್ವತಂತ್ರವಾಗಿ ಯೋಚಿಸುವುದು ಸಾಧ್ಯವಾಗುತ್ತಿರಲಿಲ್ಲವೋ ಏನೋ.  


ಇದರರ್ಥ ನಾಣಿ ಯಾರಿಗೂ ಸಹಾಯ ಮಾಡುತ್ತಿರಲಿಲ್ಲ ಎಂದಲ್ಲ. ಈ ಅಸಹಾಕಾರ ಹೆಂಡತಿಯ ವಿಚಾರಕ್ಕೆ ಮಾತ್ರವೇ ಇತ್ತು. ಅದು ಆಕೆ ಸ್ವತಂತ್ರವಾಗಿ ಬದುಕುವುದನ್ನು ರೂಢಿಸಿಕೊಳ್ಳಲಿ ಎಂಬ ಉದಾತ್ತ ಧೋರಣೆಯಾಗಿತ್ತು. ಆದರೆ ಸ್ನೇಹಿತರು, ಹೊರಗಿನವರು ಯಾರಾದರೂ ಸಹಾಯ ಕೇಳಿದರೆಂದರೆ ಸಂಪೂರ್ಣವಾಗಿ ಕೆಲಸ ಮುಗಿಯುವವರೆಗೂ ಕೈಬಿಡುತ್ತಿರಲಿಲ್ಲ.
ಈಗಲೂ ಅವರು ಇಲ್ಲ ಎಂದುಕೊಂಡೇ ಇಲ್ಲ. ಇಲ್ಲೇ ನಾಟಕದ ಕೆಲಸಕ್ಕೆ ಹೋಗಿದ್ದಾರೆ. ಇನ್ನೇನು ಬಂದುಬಿಡುತ್ತಾರೆ ಎನ್ನಿಸುವಷ್ಟು ಕಾಡುತ್ತಿರುತ್ತಾರೆ. ಮನೆತುಂಬ ಓಡಾಡುತ್ತಿದ್ದ ಅವರು ಚೈತನ್ಯದ ಚಿಲುಮೆಯಾಗಿದ್ದರು. ನಮ್ಮ ಮನೆಯಲ್ಲಿ ಎಲ್ಲರೂ ಹಾಗೇ ಇದ್ದೇವೆ. ಆದರೂ ನಮ್ಮ ಮಾತಿನ ನಡುವೆ ಅವರಿಲ್ಲ ಎಂಬ ಬೇಸರದ ಅಲೆಯೊಂದು  ತಣ್ಣಗೆ ಅಪ್ಪಳಿಸುತ್ತಲೇ ಇರುತ್ತದೆ.
***
ಅವರಿಲ್ಲದ ನಿರ್ವಾತ ನನ್ನ ಪ್ರತಿ ನಾಟಕದ ಸಂದರ್ಭದಲ್ಲಿ ಕಾಡುತ್ತಿದೆ. ಅದು ಚಿಕ್ಕ ನಾಟಕವೇ ಇರಬಹುದು, ದೊಡ್ಡ ಬಜೆಟಿನ ನಾಟಕವೇ ಇರಲಿ ನಾಣಿಗೆ ಅದು ಸಂಭ್ರಮದ ಕೆಲಸವಾಗಿತ್ತು. ಮಕ್ಕಳಂತೆ ಓಡಾಡುತ್ತಿದ್ದರು. ಎಲ್ಲ ಕೆಲಸದಲ್ಲೂ ಪರಿಪೂರ್ಣತೆ ಬಯಸುತ್ತಿದ್ದರು.
ನಾಣಿ ಅವರಿಗೆ ನಾಟಕದ ಮೇಲಿನ ಪ್ರೀತಿ ಎಷ್ಟಿತ್ತೆಂದರೆ ನಾಟಕಕ್ಕೆ ಸಂಬಂಧಿಸಿದ ಕೆಲಸ ಯಾರೇ ಮಾಡುತ್ತಿದ್ದರೂ ಖುಷಿಯಾಗುತ್ತಿದ್ದರು. ಹೆಗ್ಗೋಡಿನಲ್ಲಿ ಕೆ.ವಿ.ಸುಬ್ಬಣ್ಣ ಮತ್ತು ಅವರ ಮಗ ಅಕ್ಷರ ನಡೆಸುತ್ತಿದ್ದ ರಂಗಭೂಮಿ ಚಟುವಟಿಕೆಗಳನ್ನು ಕಂಡು ತುಂಬ ಮೆಚ್ಚಿಕೊಂಡಿದ್ದರು. ಪ್ರತಿ ವರ್ಷ ಅಲ್ಲಿನ ಶಿಬಿರಕ್ಕೆ ಹೋಗುತ್ತಿದ್ದರು. ನಾಟಕ ಎಂದರೆ ಬರಿ ನಟನೆ ಮಾತ್ರವಲ್ಲ. ನಾಟಕದ ಎಲ್ಲ ವಿಭಾಗದಲ್ಲೂ ಪರಿಣತಿ ಪಡೆದಿರಬೇಕು ಎಂದು ಹೇಳುತ್ತಿದ್ದರು.

ನನಗೆ ಮತ್ತು ಮಕ್ಕಳಿಗೆ ಹಿಂದಿನಿಂದ ಆಡಿಕೊಳ್ಳುವ ಸ್ವಭಾವ ಸ್ವಲ್ಪ ಜಾಸ್ತಿ. ಅದರಲ್ಲಿ ಬೇರೆಯವರನ್ನು ನೋಯಿಸುವ ಉದ್ದೇಶವಿರುವುದಿಲ್ಲ. ಆದರೂ ತಮಾಷೆ ಮಾಡಿಕೊಂಡು ನಗುವುದು ನಮ್ಮ ಗುಣ. ಆದರೆ ಅದು ನಾಣಿ ಅವರಿಗೆ ಹಿಡಿಸುತ್ತಿರಲಿಲ್ಲ. ‘ನೀವೇನಾದರೂ ಹೇಳಬೇಕೆಂದಿದ್ದರೆ ಅವರ ಮುಂದೆಯೇ ಹೇಳಿ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಮಹಿಳೆಯರ ಕುರಿತು ಅವರಿಗಿದ್ದ ಗೌರವ ಅಷ್ಟಿಷ್ಟಲ್ಲ. ಮಹಿಳೆಯರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಅವರು ವಯಸಾದ ಸ್ತ್ರೀಯರನ್ನು ಕಂಡರೆ ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು.

ನಾಣಿ ಯಾವುದೇ ತಿಥಿಯ ಮನೆಗೂ ಹೋಗುತ್ತಿರಲಿಲ್ಲ. ಬದುಕಿದ್ದಾಗ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ಅದು ಬಿಟ್ಟು ಸತ್ತ ಮೇಲೆ ಏನು ಮಾಡಿದರೂ ಪ್ರಯೋಜನವಿಲ್ಲ ಎನ್ನುತ್ತಿದ್ದರು. ಅವರ ಅಮ್ಮ ವೃದ್ಧಾಪ್ಯ ಕಾಲದಲ್ಲಿ ಮಲಗಿದಲ್ಲೇ ಇದ್ದಾಗ ಅವರ ಎಲ್ಲ ಕೆಲಸವನ್ನೂ ತಾನೇ ಮಾಡುತ್ತಿದ್ದರು. ಸೊಸೆಯಂದಿರು ಮನಸಿಲ್ಲದ ಮನಸಿನಿಂದ ಚಾಕರಿ ಮಾಡುವುದು ಸಹಜ ಎಂದುಕೊಂಡ ಅವರು, ‘ಅಸಹ್ಯಪಟ್ಟುಕೊಂಡು ಯಾರೂ ಸೇವೆ ಮಾಡಬಾರದು’ ಎಂದು ಹೇಳುತ್ತಿದ್ದರು.

ಅದಕ್ಕಾಗಿ ಅಮ್ಮನ ಚಾಕರಿಯನ್ನು ತಾವೇ ಮಾಡಿದ್ದರು. ನಾಣಿಯವರಿಗೆ ತಮ್ಮ ಬಗ್ಗೆ ಹೇಳಿಕೊಳ್ಳುವ ಸ್ವಭಾವ ಸ್ವಲ್ಪ ಹೆಚ್ಚೇ ಇತ್ತು. ಅದು ಅವರ ಮುಗ್ಧತೆಯಷ್ಟೇ. ಅವರು ತಮ್ಮ ಆತ್ಮಕತೆ ಬರೆಯಬೇಕು ಎಂದುಕೊಂಡಿದ್ದರು. ಆದರೆ ಅದಕ್ಕೆ ಮುನ್ನವೇ ಹೋಗಿಬಿಟ್ಟರು. ನನಗೆ ಆತ್ಮಕತೆ ಬರೆಯುವ ಆಲೋಚನೆ ಇರಲಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಬರೆಯತೊಡಗಿದೆ. ಅದಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂತು. ಪ್ರಶಸ್ತಿಯೂ ಬಂತು. ಅವರಿದ್ದಾಗ ಮನೆಯಲ್ಲಿ ವಾತಾವರಣ ಹೇಗಿತ್ತೋ ಈಗಲೂ ಹಾಗೆಯೇ ಇದೆ.
–ಭಾರ್ಗವಿ ನಾರಾಯಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT