ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ ಆಗರವಾದ ಪಿಡಬ್ಲ್ಯುಡಿ ಕಚೇರಿ!

Last Updated 3 ಅಕ್ಟೋಬರ್ 2011, 8:40 IST
ಅಕ್ಷರ ಗಾತ್ರ

ಕುಷ್ಟಗಿ: ಇಲ್ಲಿಯ ಲೋಕೋಪಯೋಗಿ ಇಲಾಖೆ ಉಪವಿಭಾಗದ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಒಬ್ಬ ಸಿಬ್ಬಂದಿಯೂ ಇಲ್ಲದೇ ಕಚೇರಿ ಭಣಗುಡುತ್ತಿದ್ದುದು ಗುರುವಾರ ಬೆಳಗಿನ ಅವಧಿಯಲ್ಲಿ ಕಂಡುಬಂದಿತು.

ನಾಲ್ವರು ಶಾಖಾ ಎಂಜಿನಿಯರ್, ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಮತ್ತು ಹೆಚ್ಚುವರಿ ಸಿಬ್ಬಂದಿ ಅಷ್ಟೇ ಏಕೆ ಸಿಬ್ಬಂದಿಯನ್ನು ನಿಯಂತ್ರಿಸಬೇಕಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಹ ಇಲ್ಲದಿರುವುದು ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಕಚೇರಿಗೆ ತೆರಳಿದ ಸುದ್ದಿಗಾರರಿಗೆ ಕಂಡುಬಂದಿತು.

ಎಲ್ಲರೂ ಹೋಗಿದ್ದೆಲ್ಲಿ ಎಂದು ಕೇಳಿದರೆ ನಂತರ ಅಲ್ಲಿಗೆ ಆಗಮಿಸಿದ ಒಬ್ದ ಸಿಬ್ಬಂದಿ, `ಸಾಹೇಬ್ರು, ಮ್ಯಾನೇಜರು ಲೋಕಾಯುಕ್ತರನ್ನ ಭೇಟಿ ಮಾಡದ್ಕ ಗದಗ್‌ಗೆ ಹೋಗ್ಯಾರಿ ಎಂದರು. ಉಳಿದವರು ಎಂದರೆ ನಿರುತ್ತರ. ದೈನಂದಿನ ಹಾಜರಿ ಪುಸಕ್ತದಲ್ಲಿ ಎಸ್.ಡಿ.ಎ ಅಯ್ಯಪ್ಪ, ಶಾಂತಮ್ಮ ಮತ್ತು ಮಹ್ಮದ್ ಎಂಬ ಮೂವರು ಮಾತ್ರ ಸಹಿ ಮಾಡಿದ್ದರು. ಸಹಿ ಮಾಡಿದ್ದ ಅಯ್ಯಪ್ಪ ಜಾಗ ಖಾಲಿ ಮಾಡಿದ್ದರು.

ಖಾಲಿ ಖಾಲಿ: ದೈನಂದಿನ ಹಾಜರಿ ಪುಸ್ತಕವನ್ನು ಪರೀಕ್ಷಿಸಿದಾಗ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಮ್ಯಾನೇಜರ್‌ರರು ಕೆಲಸ ದಿನಗಳಿಂದಲೂ ಸಹಿ ಮಾಡದಿರುವುದು ಅಚ್ಚರಿ ಮೂಡಿಸಿತು.

ಎಂಜಿನಿಯರ್‌ಗಳಾದ ಹಳ್ಳಪ್ಪ ಕಂಠಿ ಎಂಬುವವರು ನಾಲ್ಕು ದಿನ, ಭೀಮಸೇನ ವಜ್ರಬಂಡಿ ಎಂಬುವವರು ಐದು ದಿನ, ರಾಜಶೇಖರ ತುರಕಾಣಿ ಎಂಬುವವರು ಎರಡು ದಿನ, ತಾಜುದ್ದೀನ ಮೂರು ದಿನ ವ್ಯವಸ್ಥಾಪಕ ಸ್ಥಾನದಲ್ಲಿರುವ ಎಫ್.ಡಿ.ಎ ಮಲ್ಲಿಕಾರ್ಜುನ ಎಂಬುವವರು ಒಂದು ದಿನ ಕುಲಶೇಗರನ್ ಎಂಬ ಎಸ್.ಡಿ.ಎ ಮೂರು ದಿನ ಸಹಿ ಮಾಡದಿರುವುದು ಲಭ್ಯ ದಾಖಲೆಯಿಂದ ಸ್ಪಷ್ಟವಾಯಿತು.

ಆದರೆ ಕಡಿಮೆ ವೇತನದಲ್ಲಿ ದುಡಿಯುವ ಸಿಪಾಯಿಗಳು ಮಾತ್ರ ನಿತ್ಯವೂ ಹಾಜರಾಗಿ ಸಹಿ ಮಾಡಿದ್ದು ಕಂಡುಬಂದಿತು.

ಕೇಳೋರಿಲ್ರಿ: ಎ.ಇ.ಇ ಇಳಕಲ್‌ದಿಂದ ಬರುತ್ತಾರೆ, ಆದರೆ ಅವರೂ ಕಚೇರಿಯಲ್ಲಿರುವುದಿಲ್ಲ, ರಾಜಕೀಯ ವ್ಯಕ್ತಿಗಳ ನಿಕಟವರ್ತಿಗಳಾಗಿರುವ ಎಂಜಿನಿಯರ್‌ಗಳನ್ನು ನಿಯಂತ್ರಿಸುವ `ಶಕ್ತಿ~ ಹಿರಿಯ ಎಂಜಿನಿಯರ್‌ಗೆ ಇಲ್ಲ. ಯಾರಾದರೂ ಕೇಳಿದರೆ `ಸೈಟ್‌ಗೆ ಹೋಗ್ಯಾರ‌್ರಿ~ ಎಂಬ ಉತ್ತರ ಸಿದ್ಧವಾಗಿರುತ್ತದೆ. ಸರ್ಕಾರಿ ಕಚೇರಿ ಬಂದ್ರೂ ನಡಿಯುತ್ತೆ ಬರದಿದ್ರೂ ನಡಿಯುತ್ತೆ ಎಂಬಂತಾಗಿದೆ. ಒಟ್ಟಿನಲ್ಲಿ ಈ ಕಚೇರಿಯಲ್ಲಿ ಹೇಳೋರಿಲ್ಲ ಕೇಳೋರಿಲ್ರಿ ಎಂದು ಸಾರ್ವಜನಿಕರಾದ ಪ್ರಕಾಶ್ ಶೆಟ್ಟರ್, ಲಿಂಗನಗೌಡ ಇತರರು ದೂರಿದರು.

ತರಾಟೆ: ಕಚೇರಿಗೆ ಬಂದ ಸುದ್ದಿಗಾರರ ಮುಂದೆ ದೈನಂದಿನ ಹಾಜರಿ ಪುಸ್ತಕವನ್ನು ತೋರಿಸಿದ ಕೆಲ ಸಿಬ್ಬಂದಿಯನ್ನು ಕೆಲ ಎಂಜಿನಿಯರ್‌ಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡದ್ದು ಗೊತ್ತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT