ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

Last Updated 21 ಏಪ್ರಿಲ್ 2011, 7:10 IST
ಅಕ್ಷರ ಗಾತ್ರ

ಹಾವೇರಿ: ಹಾವೇರಿ ನಗರಸಭೆಯು ನಗರದ ಅಭಿವೃದ್ಧಿಗೆ ಗಮನ ಹರಿಸದೇ ಕೇವಲ ಭ್ರಷ್ಟಾಚಾರದಲ್ಲಿಯೇ ಮುಳುಗಿದೆ. ಕೂಡಲೇ ಅದರ ಎಲ್ಲ ವ್ಯವಹಾರವನ್ನು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ನಗರದಲ್ಲಿ ರಸ್ತೆತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ನಗರದ ಮೈಲಾರ ಮಹಾದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೂರಾರು ಪ್ರತಿಭಟನಾಕಾರರು, ನಗರಸಭೆ ಕಾರ್ಯವೈಖರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿದರು. ನಂತರ ಮಾನವ ಸರಪಳಿ ರಚಿಸಿ ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆತಡೆ ನಡೆಸಿದರು.

ಈ ಸಂದರ್ಭದಲ್ಲಿ ಭ್ರಷ್ಟ ನಗರಸಭೆಗೆ, ಭ್ರಷ್ಟ ಸದಸ್ಯರಿಗೆ ಹಾಗೂ ಭ್ರಷ್ಟ ನಗರಸಭೆ ಅಧಿಕಾರಿಗಳಿಗೆ ಧಿಕ್ಕಾರ ಎನ್ನುವ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸಮಸ್ಯೆಗಳನ್ನು ನಿರ್ಲಕ್ಷ್ಯಿಸಿದ ನಗರಸಭೆ ಅಧಿಕಾರಿಗಳ, ಸದಸ್ಯರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು. ನಗರಸಭೆಯಲ್ಲಿ ನಡೆದ ಅವ್ಯವಹಾರಗಳನ್ನು ತಕ್ಷಣವೇ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಾವೇರಿ ನಾಗರಿಕ ವೇದಿಕೆ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ, ಹಾವೇರಿ ನಗರವು ಜಿಲ್ಲೆಯಾಗಿ 12 ವರ್ಷ ಕಳೆದರು ನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿದೆ. ಕಳೆದ ಹಲವು ವರ್ಷಗಳಿಂದ ಒಬ್ಬರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದರೂ  ಅವರು ಕೂಡಾ ಜಿಲ್ಲಾ ಕೇಂದ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸದೇ ಇರುವುದು ನಗರದ ಜನರ ದುರ್ದೈವ ಎಂದು ಹೇಳಿದರು.

ಜಿಲ್ಲಾ ಕೇಂದ್ರದಲ್ಲಿ ಸುಮಾರು 70 ಸಾವಿರ ಜನಸಂಖ್ಯೆಯಿದೆ. ಅವರಿಗೆ ಸಮರ್ಪಕವಾದ ನೀರು ನೀಡದೇ ಹದಿನೈದು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಒಳಚರಂಡಿ ಕಾಮಗಾರಿ ನೆಪದಿಂದ ಕಳೆದ ಎರಡು ವರ್ಷಗಳಿಂದ ನಗರದ ಯಾವುದೇ ಒಂದು ರಸ್ತೆಯ ದುರಸ್ತಿ ಕಾರ್ಯ ಮಾಡಿಲ್ಲ. ಇನ್ನೂ ಬೀದಿ ದೀಪ, ಕಸದ ತೊಟ್ಟೆ, ಸಾರ್ವಜನಿಕ ಶೌಚಾಲಯಗಳು ಇಲ್ಲ. ನಗರದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸಿದರೂ ಒಂದೇ ಒಂದು ಸೂಕ್ತವಾದ ವಾಹನ ನಿಲುಗಡೆಯಿಲ್ಲ. ಗಟಾರುಗಳನ್ನು ಸ್ವಚ್ಛಗೊಳಿಸದೇ ತುಂಬಿ ತುಳುಕುತ್ತಿವೆ. ಆದರೂ ಜನಪ್ರತಿನಿಧಿಗಳು ಮಾದರಿ ನಗರವನ್ನಾಗಿ ಮಾಡುತ್ತೇವೆ ಎಂದು ಸವಕಲು ಹೇಳಿಕೆ ನೀಡುತ್ತಲೇ ನಗರದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಹಾಗೂ ಸಾರ್ವಜನಿಕರಿಂದ ತೆರಿಗೆ ಮೂಲಕ ನಗರಸಭೆಗೆ ಕೋಟಿಗಟ್ಟಲೆ ಹಣ ಬಂದಿದೆ. ಆದರೆ, ಈ ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬುದೇ ತಿಳಿಯುತ್ತಿಲ್ಲ. ಎರಡು ವರ್ಷದಿಂದ ನಡೆಯುತ್ತಿರುವ ನಗರದ ಒಳಚರಂಡಿ ಕಾಮಗಾರಿ ಆಮೆ ಗತಿಯಲ್ಲಿ ನಡೆದಿದ್ದು, ನಗರದ ರಸ್ತೆಗಳಲ್ಲಿ ತಗ್ಗು ದಿಣ್ಣೆಗಳು ಬಿದ್ದಿವೆ. ಧೂಳುಗಳಿಂದ ಆವೃತಗೊಂಡಿವೆ. ಈ ಧೂಳಿನಿಂದ ನಗರದ ಶೇ.20 ರಷ್ಟು ಜನತೆ ಅಸ್ತಮಾ ಖಾಯಿಲೆಯಿಂದ ಬಳಲುವಂತಾಗಿದೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ಈಗಲಾದರೂ ನಗರಸಭೆ ಎಚ್ಚೆತ್ತುಕೊಂಡು ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಿ ರಸ್ತೆಗಳನ್ನು ನಿರ್ಮಿಸಬೇಕು. ನಗರದ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ನಗರದಲ್ಲಿರುವ ಹೆಚ್ಚಾಗಿರುವ ಹಂದಿ, ಬಿಡಾಡಿ ದನ, ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು. ನಗರದ ಎಲ್ಲ ವಾರ್ಡ್‌ಗಳಲ್ಲಿ ಪ್ರತಿ 50 ಮೀಟರ್‌ಗೆ ಒಂದರಂತೆ ಕಸ ಹಾಕುವ ಡಬ್ಬಿಗಳನ್ನು ಇಡಬೇಕು ಎಂದು ನಗರಸಭೆಯನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಎಫ್. ಕಟ್ಟೇಗೌಡರ, ಜಿ.ಪಂ. ಮಾಜಿ ಅಧ್ಯಕ್ಷ ಪರಮೇಶಪ್ಪ ಮೆಗಳಮನಿ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಎಸ್. ಕಳ್ಳಿಮನಿ, ಮಾಜಿ ಸದಸ್ಯ ಎಸ್.ಎಂ. ಕನ್ನಗೌಡರ, ಎಸ್.ಜಿ. ಹೊನ್ನಪ್ಪನವರ, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಕಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ, ಕಮ್ಯುನಿಷ್ಟ ಪಕ್ಷದ ರುದ್ರಪ್ಪ ಜಾಬೀನ, ಕರುನಾಡ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶಿವಯೋಗಿ ಮರಡೂರ, ಎಸ್.ಎಂ. ಹಳ್ಳಿಕೇರಿ, ಎಸ್.ಎಚ್. ಕುಲಕರ್ಣಿ, ಎಸ್.ಸಿ. ತಾರಳಿ, ಪರಶುರಾಮ ಅಗಡಿ, ಬಿ.ಸಿ. ದೇಸಾಯಿ, ನಾಗರಾಜ ಬಡಿಗೇರ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT