ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಮಿಗಳೆಂದರೆ ಯಾರು? ಉತ್ತರ ಸಿಗದ ಪ್ರಶ್ನೆ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಮಿಗಳೆಂದರೆ ಯಾರು? ಈ ಒಂದು ಸರಳ ಪ್ರಶ್ನೆಗೆ ಉತ್ತರ ಪಡೆಯಲು ಹಿಂಸೆ-ಅಹಿಂಸೆಗಳ ದಾರಿಯಲ್ಲಿ ಹಲವಾರು ಹೋರಾಟಗಳು ನಡೆದಿವೆ, ಸಾವಿರಾರು ಅಮಾಯಕರು ಪ್ರಾಣಕಳೆದುಕೊಂಡಿದ್ದಾರೆ, ನೂರಾರು ಕೋಟಿ ತೆರಿಗೆದಾರರ ಹಣ ವ್ಯಯವಾಗಿದೆ. ಆದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು  ಸಾಧ್ಯವಾಗಿಲ್ಲ.  ಜುಲೈನಲ್ಲಿ 75 ಜನರ ಬಲಿತೆಗೆದುಕೊಂಡ ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬೀದಿಗೆ ತಳ್ಳಿದ ಗಲಭೆಯ ಹಿಂದೆ ಇದ್ದದ್ದು ಕೂಡಾ ಇದೇ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರಬೇಕೆಂದು ಪಟ್ಟುಹಿಡಿದ ರಾಜ್ಯದ ವಿದ್ಯಾರ್ಥಿಗಳು `ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ~ (ಆಸು) ಕಟ್ಟಿ ಆರು ವರ್ಷಗಳ ಕಾಲ ಚಳುವಳಿ ನಡೆಸಿದ್ದರು. ಇದರಲ್ಲಿ ಸಾವಿರಕ್ಕೂ ಹೆಚ್ಚು ಚಳವಳಿಗಾರರು ಹುತಾತ್ಮರಾಗಿದ್ದರು, ಚಳವಳಿ ವಿರೋಧಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ನೂರಕ್ಕೂ ಹೆಚ್ಚುಮಂದಿಯನ್ನು ಚಳವಳಿಗಾರರೇ ಹತ್ಯೆ ಮಾಡಿದ್ದರು. ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ನಷ್ಟವಾಗಿತ್ತು. ಕೊನೆಗೆ ಆಗಿನ ಪ್ರಧಾನಿ ರಾಜೀವ್‌ಗಾಂಧಿ `ಆಸು~ ಜತೆಗೂಡಿ ಒಪ್ಪಂದವನ್ನು ಮಾಡಿಕೊಂಡರು. ಐತಿಹಾಸಿಕವೆಂದು ಆ ಕಾಲದಲ್ಲಿ ಬಣ್ಣಿಸಲಾಗಿದ್ದ ಅಸ್ಸಾಂ ಒಪ್ಪಂದದ ಮೂರು ಪ್ರಧಾನ ಅಂಶಗಳೆಂದರೆ ಅಸ್ಸಾಮಿಗಳೆಂದರೆ ಯಾರು ಎನ್ನುವುದನ್ನು ವ್ಯಾಖ್ಯಾನಿಸುವುದು, 1971ರ ಮಾರ್ಚ್ 25ರ ನಂತರ ಅಕ್ರಮವಾಗಿ ಅಸ್ಸಾಂ ಪ್ರವೇಶಿಸಿದವರನ್ನು ಗುರುತಿಸಿ ಗಡಿಪಾರು ಮಾಡುವುದು ಮತ್ತು ಭಾರತ-ಬಾಂಗ್ಲಾ ಗಡಿಯನ್ನು ಭದ್ರಗೊಳಿಸುವುದು. ಇಪ್ಪತ್ತೇಳು ವರ್ಷಗಳಾದರೂ ಒಪ್ಪಂದದ ಯಾವ ಅಂಶವೂ ಜಾರಿಯಾಗಿಲ್ಲ. ಅಸ್ಸಾಮಿಗಳೆಂದರೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಯೇ ಇಲ್ಲ.

ಚಳವಳಿಯ ನೇತೃತ್ವ ವಹಿಸಿದ್ದ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ (ಆಸು) ಮತ್ತು ಅಸ್ಸಾಂ ಗಣಸಂಗ್ರಾಮ ಪರಿಷತ್ ವಿಲೀನಗೊಂಡು ಅಸ್ಸಾಂ ಗಣಪರಿಷತ್ (ಎಜಿಪಿ) ಎಂಬ ರಾಜಕೀಯ ಪಕ್ಷ ಕಟ್ಟಿ ಅಧಿಕಾರಕ್ಕೆ ಬಂದಿತ್ತು. ಒಪ್ಪಂದ ನಡೆದ ನಂತರದ 27 ವರ್ಷಗಳಲ್ಲಿ ಎಜಿಪಿ ಎರಡು ಅವಧಿಗಳಲ್ಲಿ (1985-90 ಮತ್ತು 1996-2001) ಅಧಿಕಾರದಲ್ಲಿತ್ತು. ಹತ್ತುವರ್ಷಗಳ ಕಾಲ ಪ್ರಪುಲ್‌ಕುಮಾರ್ ಮಹಂತ  ಮುಖ್ಯಮಂತ್ರಿಗಳಾಗಿದ್ದರು.  ಒಪ್ಪಂದದ ಶಿಲ್ಪಿಯಾದ ರಾಜೀವ್‌ಗಾಂಧಿಯವರೇ 1989ರ ವರೆಗೆ ಪ್ರಧಾನಿಯಾಗಿದ್ದರು. ಅದರ ನಂತರವೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಅಸ್ಸಾಂ ವಿದ್ಯಾರ್ಥಿ ಚಳವಳಿಯನ್ನು ಬೆಂಬಲಿಸಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆರು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. 
 
ಈಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸ್ಸಾಂ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾದವರು. ಹೀಗಿದ್ದರೂ ಅಸ್ಸಾಂ ಒಪ್ಪಂದದ ಯಾವ ಪ್ರಮುಖ ಅಂಶವೂ ಇಲ್ಲಿಯ ವರೆಗೆ ಜಾರಿಯಾಗಿಲ್ಲ.

`ಅಸ್ಸಾಮಿಗಳ ಸಂಸ್ಕೃತಿ, ಪರಂಪರೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಗೆ ಸಂವಿಧಾನಾತ್ಮಕ, ಆಡಳಿತಾತ್ಮಕ ಮತ್ತು ಶಾಸಕಾಂಗ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು..~ ಎಂದು ಅಸ್ಸಾಂ ಒಪ್ಪಂದದ ಆರನೇ ಪರಿಚ್ಛೇದ ಹೇಳುತ್ತದೆ. ಈ ಕ್ರಮಕೈಗೊಳ್ಳಬೇಕಾದರೆ ಅಸ್ಸಾಮಿಗಳೆಂದರೆ ಯಾರು ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ಇದು ನಿರ್ಧಾರವಾಗದೆ  `ಅಸ್ಸಾಮಿ~ಗಳಿಗೆ ಯಾವ ರಕ್ಷಣೆಯನ್ನೂ ನೀಡಲು ಸಾಧ್ಯ?

ವಿದೇಶಿಯರ ಪತ್ತೆ
ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 1985ರಿಂದ 2010ರ ವರೆಗಿನ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ  ನ್ಯಾಯಮಂಡಳಿಯ ಮೂಲಕ 49,891 ವಿದೇಶಿಯರನ್ನು ಗುರುತಿಸಲಾಗಿದೆ. ಇವರಲ್ಲಿ 2,326 ಮಂದಿಯನ್ನು ದೇಶದಿಂದ ಗಡಿಪಾರು ಮಾಡಲಾಗಿದೆ. ಅಕ್ರಮ ವಲಸಿಗರ ಬಂಧನಕ್ಕಾಗಿಯೇ ಗೋಲ್‌ಪುರ, ಸಿಲ್‌ಚಾರ್ ಮತ್ತು ಕೊಕರ್‌ಝಾರ್‌ಗಳಲ್ಲಿ ಸ್ಥಾಪಿಸಲಾಗಿದ್ದ ವಿಚಾರಣಾ ಶಿಬಿರಗಳಲ್ಲಿ ಕ್ರಮವಾಗಿ 57,16, ಮತ್ತು ಇಬ್ಬರು ಇದ್ದಾರೆ. ಯಾಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಮುಖ್ಯಮಂತ್ರಿ ತರುಣ್ ಗೊಗೊಯ್ `ನ್ಯಾಯಮಂಡಳಿಗಳಿಗೆ ಪ್ರಕರಣವನ್ನು ಒಪ್ಪಿಸಿದ ಕೂಡಲೇ ಅಕ್ರಮ ವಲಸಿಗರೆಲ್ಲರೂ ಓಡಿಹೋಗಿದ್ದರು~ ಎಂಬ ವಿವರಣೆ ನೀಡಿದ್ದರು.

ಅಕ್ರಮ ವಲಸಿಗರನ್ನು ನ್ಯಾಯಮಂಡಳಿ ಮೂಲಕ ಗುರುತಿಸುವ ಕಾಯ್ದೆ ಪರೋಕ್ಷವಾಗಿ ವಲಸಿಗರಿಗೆ ನೆರವಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 2005ರಲ್ಲಿ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಅದರ ನಂತರ ಹಿಂದೆ ಇದ್ದ  `ವಿದೇಶಿಯರ ಕಾಯ್ದೆ~ ಜಾರಿಯಲ್ಲಿದೆ. ಈ ಎಲ್ಲ ಕಸರತ್ತಿಗೆ ಇಪ್ಪತ್ತೇಳು ವರ್ಷಗಳಲ್ಲಿ ಖರ್ಚಾಗಿರುವ ತೆರಿಗೆ ಹಣ ಸುಮಾರು 450 ಕೋಟಿ ರೂಪಾಯಿ. ಸಾಧನೆ?

ಎರಡೂ ದೇಶಗಳ ನಡುವಿನ ಗಡಿಯನ್ನು ಭದ್ರಗೊಳಿಸಬೇಕೆಂಬುದು ಒಪ್ಪಂದದ ಮೂರನೆ ಪ್ರಮುಖ ಅಂಶ. ಗೋಡೆ ನಿರ್ಮಾಣ, ತಂತಿಬೇಲಿ ಮತ್ತಿತರ ತಡೆನಿರ್ಮಾಣದ ಮೂಲಕ ಅಂತರರಾಷ್ಟ್ರೀಯ ಗಡಿ ಭದ್ರಗೊಳಿಸಬೇಕು. ನೆಲ ಮತ್ತು ಜಲದ ಗಡಿಯಲ್ಲಿ ಕಾವಲು ವ್ಯವಸ್ಥೆಯನ್ನು ಬಲಗೊಳಿಸಬೇಕು. ಈ ಮೂಲಕ ಅಕ್ರಮ ವಲಸೆ ನಿರ್ಬಂಧಿಸಲು ಕ್ರಮಕೈಗೊಳ್ಳಬೇಕು ಎಂದು ಒಪ್ಪಂದದ ಒಂಬತ್ತನೆ ಪರಿಚ್ಛೇದ ಹೇಳಿದೆ. ಆದರೆ 27 ವರ್ಷಗಳಾದರೂ ಬಾಂಗ್ಲಾ ಜತೆಗೆ ಅಸ್ಸಾಂ ಹೊಂದಿರುವ 267 ಕಿ.ಮೀ. ಗಡಿಯನ್ನು ಇನ್ನೂ ಪೂರ್ಣವಾಗಿ ಮುಚ್ಚಲು ಸಾಧ್ಯವಾಗಿಲ್ಲ. 60 ಕಿ.ಮೀ.ಉದ್ದದ ಗಡಿಗೆ ತಂತಿಬೇಲಿಯನ್ನೇ ಹಾಕಿಲ್ಲ. ಗಡಿರಸ್ತೆಗಳು ನಿರ್ಮಾಣಗೊಂಡಿಲ್ಲ. ಆದರೆ `ಗಡಿಭದ್ರತೆಗಾಗಿ ಮೀಸಲಿರಿಸಲಾಗಿದ್ದ 345 ಕೋಟಿ ರೂಪಾಯಿ ಹಣದಲ್ಲಿ 288 ಕೋಟಿ ರೂಪಾಯಿ ಖರ್ಚಾಗಿದೆ~ ಎಂದು ರಾಜ್ಯಸರ್ಕಾರ ವಿಧಾನಸಭೆಯಲ್ಲಿ ತಿಳಿಸಿದೆ.

`ಪ್ರಪಂಚದ ಯಾವ ದೇಶದ ಗಡಿ ಕೂಡಾ ಹೀಗಿರಲಾರದು. ಬಾಂಗ್ಲಾದಿಂದ ಜನ ಸಲೀಸಾಗಿ ದೋಣಿಯಲ್ಲಿ ಬರುತ್ತಾರೆ. ಗಡಿ ಭದ್ರತಾ ಪಡೆಯವರ ಕೈಗೆ ಸಿಕ್ಕಿ ಬಿದ್ದರೆ 100-200 ರೂಪಾಯಿ ಕೊಟ್ಟು ಬಚಾವಾಗಿ ಬಿಡುತ್ತಾರೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನದ ಜತೆಗಿನ ಗಡಿಯನ್ನು ಮುಚ್ಚಿ ಹೊನಲುಬೆಳಕಿನ ವ್ಯವಸ್ಥೆ ಮಾಡಲು ಸಾಧ್ಯವಾಗುವುದಾದರೆ ಬಾಂಗ್ಲಾ ಗಡಿಯನ್ನು ಯಾಕೆ ಮುಚ್ಚಲಾಗುವುದಿಲ್ಲ. ಪಾಕಿಸ್ತಾನದಿಂದ ನುಸುಳಿ ಬರುವವರನ್ನು ಗುಂಡಿಟ್ಟು ಸಾಯಿಸ್ತಿರಾ, ಬಾಂಗ್ಲಾದಿಂದ ಬಂದವರನ್ನು ಕರೆತಂದು ಮತದಾರರನ್ನಾಗಿ ಮಾಡ್ತೀರಾ, ಇದು ಯಾವ ನ್ಯಾಯ?~ ಎಂದು ಪ್ರಶ್ನಿಸುತ್ತಾರೆ ಅಖಿಲ ಬೋಡೊ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಿರೋನಿ ಬಸುಮತಾರಿ.

ಅಡ್ವಾಣಿಗೆ ಹಲವು ಪ್ರಶ್ನೆ
ಈ ಬಾರಿ ಗಲಭೆ ನಡೆದ ಕೂಡಲೇ ಇಲ್ಲಿಗೆ ಆಗಮಿಸಿದ್ದ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರು `ಗಲಭೆಗೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಬಾಂಗ್ಲಾದೇಶಿಯರೇ ಕಾರಣ~ ಎಂದು ನೇರವಾಗಿ ಆರೋಪಿಸಿದ್ದರು. `ಆದರೆ ಎನ್‌ಡಿಎ ಸರ್ಕಾರದಲ್ಲಿ ಅಡ್ವಾಣಿಯವರೇ ಗೃಹಸಚಿವರಾಗಿದ್ದಾಗ ಅಕ್ರಮ ವಲಸಿಗರನ್ನು ತಡೆಯಲು ಯಾಕೆ ಕ್ರಮಕೈಗೊಳ್ಳಲಿಲ್ಲ. ಅಸ್ಸಾಂ ಒಪ್ಪಂದದ ಜಾರಿಗೆ ಯಾಕೆ ಪ್ರಯತ್ನಿಸಿಲ್ಲ. ಆರು ವರ್ಷಗಳ ಅವಧಿಯಲ್ಲಿ ಅಸ್ಸಾಂ ಸಮಸ್ಯೆಯ ಚರ್ಚೆಗೆ ಒಂದೇ ಒಂದು ಸಭೆಯನ್ನು ಯಾಕೆ ಕರೆದಿಲ್ಲ~ ಎಂದು ಕೇಳುತ್ತಾರೆ ಅಖಿಲ ಅಸ್ಸಾಂ ಮುಸ್ಲಿಮ್ ವಿದ್ಯಾರ್ಥಿ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಅಬ್ದುರ್ ರಹೀಮ್.

ಅಸ್ಸಾಂನಿಂದ ಆಯ್ಕೆಯಾಗಿರುವ ಕಾರಣಕ್ಕೋ ಏನೋ 2005ರಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಅವರು ಅಸ್ಸಾಂ ಒಪ್ಪಂದದ ಅನುಷ್ಠಾನಕ್ಕಾಗಿಯೇ ಚರ್ಚಿಸಲು ಸಭೆ ಕರೆದಿದ್ದರು. ಅದೇ ವರ್ಷ ಇನ್ನೊಂದು ಸಭೆ ಕರೆಯುವ ಭರವಸೆಯೊಂದಿಗೆ ಆ ಸಭೆ ಕೊನೆಗೊಂಡಿತ್ತು. ಏಳು ವರ್ಷಗಳಾದರೂ ಪ್ರಧಾನಿಯವರು ಮತ್ತೆ ಸಭೆ ಕರೆದಿಲ್ಲ.
ಬಾಂಗ್ಲಾ ಜತೆಗಿನ ಗಡಿಯ ಭದ್ರತೆ ಕೇವಲ ಅಸ್ಸಾಂ ರಾಜ್ಯಕ್ಕೆ ಸಂಬಂಧಿಸಿರುವ ವಿಷಯ ಅಲ್ಲ. ಸದಾ ಅನಿಶ್ಚಿತ ರಾಜಕೀಯದ ತೊಳಲಾಟದಲ್ಲಿರುವ ಬಾಂಗ್ಲಾದೇಶ ಇತ್ತೀಚೆಗೆ ಭಯೋತ್ಪಾದನಾ ಸಂಘಟನೆಗಳ ಆಶ್ರಯತಾಣವಾಗುತ್ತಿದೆ. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮತ್ತು ಭಯೋತ್ಪಾದಕ ಸಂಸ್ಥೆ `ಹುಜಿ~ ಕೂಡಾ ಬಾಂಗ್ಲಾದೇಶವನ್ನೇ ಕೇಂದ್ರವನ್ನಾಗಿ ಮಾಡಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ದೇಶದ ಭದ್ರತೆಯ ದೃಷ್ಟಿಯಿಂದಲೂ ಗಡಿಯನ್ನು ಭದ್ರಗೊಳಿಸುವುದು ಅಗತ್ಯವಾಗಿದೆ. ಆದರೆ ರಾಜಕೀಯ ಪಕ್ಷಗಳು ಸ್ವಂತದ ಅಜೆಂಡಾದ ದೃಷ್ಟಿಯಿಂದಲೇ ಅಕ್ರಮ ವಲಸಿಗರ ಸಮಸ್ಯೆಯನ್ನು ನೋಡುತ್ತಿರುವ ಕಾರಣ `ಅಸ್ಸಾಮಿಗಳೆಂದರೆ ಯಾರು?~ ಎನ್ನುವ ಪ್ರಶ್ನೆ ಇನ್ನಷ್ಟು ಕಾಲ ಕೇಳಿಬರುವ ಸಾಧ್ಯತೆಗಳಿವೆ.

 
 (ನಾಳಿನ ಸಂಚಿಕೆಯಲ್ಲಿ 6ನೇ ಕಂತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT