ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಗುಟ್ಟಿನ ಜಾಡು ಹಿಡಿದು...

Last Updated 20 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

1983ರ ವಿಶ್ವಕಪ್ ಗೆದ್ದ ಭಾರತ ತಂಡದ ಯಶಸ್ಸಿನ ಗುಟ್ಟೇನು ಅಂತೀರಾ?
ಸುಮ್ಮನೇ ಆ ತಂಡದ ಮೇಲೆ ಒಮ್ಮೆ ಕಣ್ಣಾಡಿಸಿ. ಕಪಿಲ್ ದೇವ್, ಮೊಹಿಂದರ್ ಅಮರ್‌ನಾಥ್, ರೋಜರ್ ಬಿನ್ನಿ, ಮದನ್ ಲಾಲ್, ರವಿಶಾಸ್ತ್ರಿ, ಕೀರ್ತಿ ಆಜಾದ್...!

ಈ ಆಟಗಾರರ ವಿಶೇಷತೆ ಏನು ಎಂದು ನಿಮಗನಿಸಬಹುದು. ಹೌದು, ಈ ಆಟಗಾರರೇ ಅಂದು ಭಾರತ ತಂಡ ಲಾರ್ಡ್ಸ್ ಅಂಗಳದಲ್ಲಿ ಟ್ರೋಫಿ ಎತ್ತಿ ಹಿಡಿಯಲು ಕಾರಣರಾಗಿದ್ದರು. ಅಂದ ಹಾಗೇ, ಅವರೆಲ್ಲಾ ಆ ವಿಶ್ವಕಪ್‌ನಲ್ಲಿ ಆಡಿದ ಆಲ್‌ರೌಂಡರ್‌ಗಳು. ವಿಶೇಷವೆಂದರೆ ಅಮರ್‌ನಾಥ್ ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಅಮೋಘ ಆಲ್‌ರೌಂಡ್ ಪ್ರದರ್ಶನ ತೋರಿ ‘ಪಂದ್ಯ ಶ್ರೇಷ್ಠ’ ಎನಿಸಿದ್ದರು.

ನಿಜ, ಪ್ರತಿ ತಂಡಕ್ಕೆ ಆಲ್‌ರೌಂಡ್ ಆಟಗಾರ ಶ್ರೀರಕ್ಷೆ ಇದ್ದಂತೆ. ಒಂದು ತಂಡದ ಯಶಸ್ಸು ಪ್ರಮುಖವಾಗಿ ಇಂತಹ ಆಟಗಾರರ ಮೇಲೆ ಅವಲಂಬಿತವಾಗಿರುತ್ತದೆ. ನಾಯಕನಿಗಂತೂ ಸಿಂಹಬಲ. ಏಕೆಂದರೆ ಬೇಕಾದಂತೆ ಯೋಜನೆ, ತಂತ್ರ ರೂಪಿಸಬಹುದು. ಸಮರ್ಥ ಆಲ್‌ರೌಂಡರ್ ತಂಡದಲ್ಲಿದ್ದರೆ 11ರ ಬಳಗದಲ್ಲಿ ಒಬ್ಬ ಪ್ರತ್ಯೇಕ ಬ್ಯಾಟ್ಸ್‌ಮನ್ ಅಥವಾ ಬೌಲರ್‌ಗೆ ಸ್ಥಾನ ನೀಡಬಹುದು. ಆಗ 7, 8ನೇ ಕ್ರಮಾಂಕದವರೆಗೆ ತಂಡ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುತ್ತದೆ. ಅದರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ಇಂತಹ ಆಟಗಾರರ ಅಗತ್ಯ ತುಂಬಾ ಇದೆ. ಹಾಗಾಗಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಬಲ್ಲ ಒಬ್ಬ ಆಟಗಾರ ತಂಡದ ಆಸ್ತಿ ಕೂಡ.

 

ಮೊಹಿಂದರ್ ಅಮರ್‌ನಾಥ್
ಕಪಿಲ್ ದೇವ್

ಈ ಕಾರಣ ಆಲ್‌ರೌಂಡರ್‌ಗೆ ಎಲ್ಲಿಲ್ಲದ ಬೇಡಿಕೆ. 1983ರಲ್ಲಿ ಭಾರತ ಯಶಸ್ಸು ಕಾಣಲು ಪ್ರಮುಖ ಕಾರಣ ಕಪಿಲ್, ಅಮರ್‌ನಾಥ್ ಎನ್ನಬಹುದು. ಪಾಕ್‌ನ ಇಮ್ರಾನ್ ಖಾನ್, ವಾಸೀಮ್ ಅಕ್ರಮ್, ಇಂಗ್ಲೆಂಡ್‌ನ ಇಯಾನ್ ಬಾಥಂ, ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳು.

ಹಾಗಾದರೆ ಈ ಬಾರಿ ವಿಶ್ವಕಪ್‌ನಲ್ಲಿ ಕಣಕ್ಕಿಳಿದಿರುವ ಎಂ.ಎಸ್.ದೋನಿ ಬಳಗದಲ್ಲಿ ಸಮರ್ಥ ಆಲ್‌ರೌಂಡರ್‌ಗಳು ಇದ್ದಾರೆಯೇ?
ಯೂಸುಫ್ ಪಠಾಣ್, ಯುವರಾಜ್ ಸಿಂಗ್ ಅವರನ್ನು ಹೆಸರಿಸಬಹುದು. ಆದರೆ ಅವರು ಅಂದುಕೊಂಡಂತೆ ಸ್ಥಿರ ಪ್ರದರ್ಶನ ತೋರುತ್ತಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಸಮಸ್ಯೆಯೇ ಆಲ್‌ರೌಂಡರ್‌ಗಳ ಕೊರತೆ. ಕಪಿಲ್ ವಿದಾಯದ ಬಳಿಕ ಸಮರ್ಥ ಆಲ್‌ರೌಂಡರ್ ಸಿಗಲೇ ಇಲ್ಲ. ಇದು ನಗ್ನ ಸತ್ಯ. 1983ರ ಬಳಿಕ ಭಾರತ ವಿಶ್ವಕಪ್ ಗೆಲ್ಲಲು ಸಾಧ್ಯವಾಗದ್ದಕ್ಕೆ ಇದೂ ಒಂದು ಕಾರಣ ಇರಬಹುದು!

 

ರೋಜರ್ ಬಿನ್ನಿ

ಆದರೆ ಈಗ ಆಲ್‌ರೌಂಡರ್ ಎನಿಸಿಕೊಂಡಿರುವ ಆಟಗಾರರಲ್ಲಿ ಯುವರಾಜ್ ಅಂದುಕೊಂಡಂತೆ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಈಗಂತೂ ಅವರು ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಸಮಾಧಾನವೆಂದರೆ ಅತ್ಯುತ್ತಮ ಫೀಲ್ಡರ್ ಕೂಡ ಆಗಿರುವುದರಿಂದ ಯುವಿ ಮೇಲೆ ನಂಬಿಕೆ ಇಟ್ಟುಕೊಳ್ಳಬಹುದು.

ಯೂಸುಫ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ಪ್ರಮುಖ ಕಾರಣ ಆಲ್‌ರೌಂಡರ್ ಎಂಬ ಹಣೆಪಟ್ಟಿ. ಬ್ಯಾಟಿಂಗ್ ಅಬ್ಬರದ ಮೂಲಕ ಪಂದ್ಯಕ್ಕೆ ತಿರುವು ನೀಡಬಲ್ಲ ಈ ಬ್ಯಾಟ್ಸ್‌ಮನ್ ಉಪಯುಕ್ತ ಆಫ್ ಸ್ಪಿನ್ನರ್ ಕೂಡ. ಪಠಾಣ್ ಅದನ್ನು ಇತ್ತೀಚಿನ ದಿನಗಳಲ್ಲಿ ಸಾಬೀತುಪಡಿಸಿದ್ದಾರೆ. ಹಾಗಾಗಿ ಅವರೊಬ್ಬ ಅಪಾಯಕಾರಿ ಆಲ್‌ರೌಂಡರ್ ಎಂದು ಹೇಳಬಹುದು. ಕೆಳಕ್ರಮಾಂಕದಲ್ಲಿ ಅವರು ಸಿಡಿದು ನಿಂತರೆ ಎದುರಾಳಿ ತಂಡಗಳ ಕಥೆ ಮುಗಿಯಿತು!

ಹಾಗೇ, ಪಾಕಿಸ್ತಾನ ತಂಡದ ಶಾಹೀದ್ ಅಫ್ರಿದಿ, ಅಬ್ದುಲ್ ರಜಾಕ್, ಆಸ್ಟ್ರೇಲಿಯಾದ ಶೇನ್ ವಾಟ್ಸನ್, ಕೆಮರೂನ್ ವೈಟ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ಶ್ರೀಲಂಕಾ ತಂಡದ ಆ್ಯಂಜೆಲೊ ಮ್ಯಾಥ್ಯೂಸ್, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ನ್ಯೂಜಿಲೆಂಡ್‌ನ ಡೇನಿಯಲ್ ವೆಟೋರಿ, ಇಂಗ್ಲೆಂಡ್‌ನ ಟಿಮ್ ಬ್ರೆಸ್ನಾನ್ ಹಾಗೂ ವೆಸ್ಟ್‌ಇಂಡೀಸ್‌ನ ಡ್ವೇನ್ ಬ್ರಾವೊ, ಕಿರೋನ್ ಪೊಲಾರ್ಡ್ ಅವರಂಥ ಉತ್ತಮ ಆಲ್‌ರೌಂಡರ್‌ಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಕಾಣಸಿಗುತ್ತಾರೆ. ಹಾಗಾಗಿ ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಎಲ್ಲರ ಕಣ್ಣು ಆಲ್‌ರೌಂಡರ್‌ಗಳ ಮೇಲಿದೆ. ಇಲ್ಲಿ ಯಾರು ಮಿಂಚುತ್ತಾರೆ, ಯಾರು ಪಂದ್ಯದ ಹಣೆಬರಹ ಬದಲಾಯಿಸುತ್ತಾರೆ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT