ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಜನೇಯ ಸನ್ನಿಧಿಯಲ್ಲಿ ಸಂಕ್ರಾತಿ ಸುಗ್ಗಿ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು ರಸ್ತೆಯಲ್ಲಿರುವ ಬಾಪೂಜಿನಗರಕ್ಕೆ ಸಂಪ್ರದಾಯದ ಸೊಗಡಿದೆ. ನಗರದ ಆಧುನಿಕತೆಗೆ ತೆರೆದುಕೊಂಡಿರುವ ಈ ಬಡಾವಣೆಯ ಆತ್ಮ ಈಗಲೂ ಹಳ್ಳಿಯದ್ದೇ. ವಾಹನದಟ್ಟಣೆ, ಏರುತ್ತಿರುವ ಜನಸಂಖ್ಯೆಯ ಹೊರತಾಗಿಯೂ ಅದು ಉಸಿರಾಡುವುದು ತನ್ನತನವನ್ನು. ಉಸಿರು ಎನ್ನಲು ಕಾರಣ ಅಲ್ಲಿನ ಗಾಳಿ ಆಂಜನೇಯ ಸ್ವಾಮಿ.

ಈ ದೇವಾಲಯಕ್ಕೆ ಇದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ನಿರಂತರವಾಗಿ ಸಾವಿರಾರು ಭಕ್ತಾದಿಗಳು ಪೂಜೆ  ಸಲ್ಲಿಸುತ್ತಾರೆ. ತಾಯತ ಕಟ್ಟಿಸಿಕೊಂಡು ಇಷ್ಟದೇವರು ಕಾಪಾಡುತ್ತಾನೆಂಬ ನಂಬಿಕೆ ಪೋಷಿಸುತ್ತಾರೆ. ಹರಕೆ ಹೊರುತ್ತಾರೆ. ಬಯಕೆ ಈಡೇರಿದ ಮೇಲೆ ಅದನ್ನು ತೀರಿಸುತ್ತಾರೆ.

ಜನರ ಭಕ್ತಿಗೂ ಭಾವಕ್ಕೂ ಸ್ಪಂದಿಸುತ್ತಿರುವ ಬಾಪೂಜಿನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ 11 ವರ್ಷಗಳಿಂದ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ನಗರದ ಯುವಕರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಕನ್ನಡ ಸಾಹಿತ್ಯ, ಕಲೆ, ಇತಿಹಾಸ, ಶಿಲ್ಪಕಲೆ, ನಾಟ್ಯ, ಸಂಗೀತ, ರಂಗಭೂಮಿ, ಜನಪದ ಹಾಗೂ ಸಾಂಸ್ಕೃತಿಕ ಭವ್ಯ ಪರಂಪರೆ ಬಗ್ಗೆ ಅರಿವು ಮೂಡಿಸಲು ರಕ್ಷಣಾ ವೇದಿಕೆ ಇಲ್ಲಿ ಇಂದು (ಶನಿವಾರ) ಸಂಕ್ರಾಂತಿ ಸುಗ್ಗಿಯ ಆಚರಣೆ ನಡೆಸಲಿದೆ.

ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಬೀರೇಶ್ವರ ದೇವಾಲಯದ ಬಳಿಯಲ್ಲಿ ಸಂಕ್ರಾಂತಿ ಸುಗ್ಗಿಯ ಅನಾವರಣಗೊಳ್ಳಲಿದೆ. ಕರ್ನಾಟಕ ರಕ್ಷಣಾ ವೇದಿಕೆಯಲ್ಲಿರುವ ಗ್ರಾಮೀಣ ಹಿನ್ನೆಲೆಯ ಕಾರ್ಯಕರ್ತರು ಹಾಗೂ ಬಾಪೂಜಿನಗರ ಸುತ್ತಮುತ್ತಲಿನ ಜನ ಇದರಲ್ಲಿ ವರ್ಷಗಳಿಂದಲೂ ಭಾಗವಹಿಸುತ್ತಾ ಬಂದಿದ್ದಾರೆ.

ಜನಾಕರ್ಷಣೆಯ ಉದ್ದೇಶದಿಂದ ಸುಗ್ಗಿಗೆ ಸಾಂಸ್ಕೃತಿಕ ಹಬ್ಬದ ಸ್ವರೂಪ ನೀಡಲಾಗಿದೆ.
ಹೆಣ್ಣುಮಕ್ಕಳು ಮನೆ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿ ಇಡುತ್ತಾರೆ. ಸಾರಿಸಿದ ಕಣದ ಮೇಲೆ ತಾವು ಆ ವರ್ಷ ಬೆಳೆದ ಬೆಳೆಯ ರಾಶಿ. ಅದಕ್ಕೆ ಸಾಂಪ್ರದಾಯಿಕ ಪೂಜೆ.

ನಂತರ ಬಡವರಿಗೆ ತಾವು ಬೆಳೆದ ಅಕ್ಕಿ-ಕಾಳುಗಳನ್ನು ದಾನವಾಗಿ ಕೊಡುವ ಸಂಪ್ರದಾಯ. ಮನೆಯ ಗಂಡಸರೆಲ್ಲರೂ ತಮ್ಮ ಮನೆಗಳ ದನಕರುಗಳನ್ನು ತೊಳೆದು, ಅವುಗಳಿಗೆ ಅರಿಶಿನ ಕುಂಕುಮ ಹಚ್ಚಿ, ಕೊಂಬುಗಳಿಗೆ ಬಣ್ಣದಿಂದ ಸಿಂಗಾರ ಮಾಡುತ್ತಾರೆ. ಬಣ್ಣಬಣ್ಣದ ರಿಬ್ಬನ್, ಪೀಪಿಗಳನ್ನು ಕಟ್ಟಿದ ಕೊಂಬುಗಳ ಹಸುಗಳು ಮಿರಮಿರ ಮಿಂಚುತ್ತವೆ.

ಸಂಜೆ ಊರ ಮುಂದೆ ಇರುವ ಸಂಕ್ರಾಂತಿ ಗುಡಿಯ ಹತ್ತಿರ ಆ ಅಲಂಕೃತ ಹಸುಗಳನ್ನು ಕರೆತಂದು, ಬೆಂಕಿಯಲ್ಲಿ ಕಿಚ್ಚುಹಾಯಿಸಿ ಅವುಗಳಿಗೆ ತಿನ್ನಲು ಗೆಣಸು ಕೊಡುತ್ತಾರೆ. ಆಮೇಲೆ ಅವನ್ನು ಸಾಂಪ್ರದಾಯಿಕ ಸ್ವರೂಪದಲ್ಲೇ ಮನೆಗೆ ಕರೆತರುತ್ತಾರೆ. ನಗರದಲ್ಲಿ ಈ ರೀತಿ ಸಂಕ್ರಾಂತಿ ನಡೆಯುತ್ತದೆಂಬುದು ಕೆಲವರಿಗಾದರೂ ಅಚ್ಚರಿಯ ಸಂಗತಿಯಾಗಿರಬಹುದು.

ಸಂಕ್ರಾಂತಿಯನ್ನು ಬಾಪೂಜಿ ನಗರದಲ್ಲಿ ನಡೆಸಿ ಇಂದಿನ ಯುವ ಪೀಳಿಗೆ ಸಂಕ್ರಾಂತಿ ಹಬ್ಬ ಎಂದರೆ ಹೀಗೆ ನಡೆಯುತ್ತದೆ ಎಂದು ಅವರಿಗೆ ಪರಿಚಯ ಮಾಡಿಕೊಡುವ ಉದ್ದೇಶ ಈ ಸುಗ್ಗಿ ಜಾತ್ರೆಗಿದೆ. ಆ ನೆಪದಲ್ಲೇ ಸ್ಥಳೀಯರೆಲ್ಲಾ ಒಟ್ಟಾಗುತ್ತಾರೆ.

ಇದರಲ್ಲಿ ಹೆಚ್ಚುಹೆಚ್ಚು ಜನ ಭಾಗವಹಿಸುವಂತಾಗಬೇಕು ಎಂಬುದು ಸಂಕ್ರಾಂತಿ ಸುಗ್ಗಿಯ ಹಬ್ಬದ ಉಸ್ತುವಾರಿ ಹೊತ್ತಿರುವ ಸ್ಥಳೀಯರಾದ ಎಸ್. ರಾಮಮೂರ್ತಿ, ಎಸ್. ನಂಜುಂಡಸ್ವಾಮಿ, ವೆಂಕಟೇಶ್ ಹಾಗೂ ರಕ್ಷಣಾ ವೇದಿಕೆ ವಿಜಯನಗರ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಕಲಿಸು- ಕನ್ನಡ ಮೋಹನ್ ಕನಸು. ಇವರೆಲ್ಲಾ ಹಬ್ಬವನ್ನು ರಂಗೇರಿಸಲು ಕೆಲಸಗಳನ್ನು ಹಂಚಿಕೊಂಡು ಅನೂಚಾನವಾಗಿ ಮಾಡುತ್ತಾ ಬಂದಿದ್ದಾರೆ.

ವಿಜೃಂಭಣೆ, ಸಡಗರ- ಸಂಭ್ರಮದಿಂದ ನಡೆಯುವ ಈ ಹಬ್ಬಕ್ಕೆ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎ. ನಾರಾಯಣ ಗೌಡರ ಅಧ್ಯಕ್ಷತೆ ಇರುತ್ತದೆ. ವೇದಿಕೆಯ ಕಾರ್ಯಕರ್ತರೆಲ್ಲಾ ಪಂಚೆ ಉಟ್ಟು, ಟವೆಲ್ ತೊಡಬೇಕೆಂದು ಅವರು ಪ್ರತಿವರ್ಷದಂತೆ ಈ ವರ್ಷವೂ ಕರೆ ಕೊಟ್ಟಿದ್ದಾರೆ.

ಸುಗ್ಗಿಯಲ್ಲಿ ಭಾಗವಹಿಸುವ ಜನತೆಗೆ ಅಕ್ಕಿ, ಕಡಲೆಕಾಯಿ, ಗೆಣಸು, ಅವರೇಕಾಯಿ, ಬೆಲ್ಲ, ಕಬ್ಬು, ಸಿಹಿ ತಿಂಡಿಗಳನ್ನು ನೀಡಲಾಗುತ್ತದೆ. ಸಂಪ್ರದಾಯದ ಪ್ರಕಾರ ಅಂದು ಬೆಳಿಗ್ಗೆ ಧ್ವಜಾರೋಹಣ. ನಂತರ ಗ್ರಾಮದೇವತೆಯನ್ನು ಹೂವಿನ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಹೂವು, ಹಸಿರು ತೋರಣ, ಒಡವೆ ವಸ್ತುಗಳಿಂದ ಅಲಂಕರಿಸಿ ಮಂಗಳ ವಾದ್ಯಗಳೊಂದಿಗೆ ಬಾಪೂಜಿನಗರ ಒಳ ಪ್ರದೇಶಕ್ಕೆ ಕರೆದುಕೊಂಡು ಬರುತ್ತಾರೆ.

ಮುತ್ತೈದೆಯರು, ಹೆಣ್ಣು ಮಕ್ಕಳು ಕಲಶ ಮತ್ತು ಆರತಿಯೊಂದಿಗೆ ಸುಗ್ಗಿಯ ಪದಗಳನ್ನು ಹಾಡುತ್ತಾ ಕುಣಿಯುತ್ತಾರೆ. ಕಬ್ಬಿನ ಜಲ್ಲೆ, ಬಾಳೆ ಕಂದು, ಮಾವಿನ ಎಲೆ, ಜೋಳದ ತೆನೆಗಳಿಂದ ನಿರ್ಮಿಸಿರುವ ಭವ್ಯ ಮಂಟಪದಲ್ಲಿ ದೇವಿಯನ್ನು ಕೂರಿಸಿ ಪೂಜೆ ಸಲ್ಲಿಸುತ್ತಾರೆ. ನಂತರ ಕನ್ನಡನಾಡಿನ ಜನಪದ ಸಂಸ್ಕೃತಿಯನ್ನು ಬಿಂಬಿಸುವ ಜನಪದ ತಂಡಗಳಿಂದ ನಂದಿ ಧ್ವಜ, ಪಟ್ಟದ ಕುಣಿತ, ಕರಗದ ಕುಣಿತ, ವೀರಭದ್ರ ಕುಣಿತ, ಕೊರವರ ಕುಣಿತ, ಕರಡಿ ಕುಣಿತ, ಕಂಸಾಳೆ ಕುಣಿತ, ಸೋಮನ ಕುಣಿತ ಮೊದಲಾದ  ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ.

ಈ ವಿಶೇಷವಾದ ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಮುಖ್ಯ ಅತಿಥಿಗಳನ್ನು ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಬರುವುದು ವಿಶೇಷ. ಈ ಅಪರೂಪದ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ.

ವಸತಿ ಸಚಿವರಾದ ವಿ. ಸೋಮಣ್ಣ ದೀಪ ಬೆಳಗುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಕರ್ನಾಟಕ ಪೊಲೀಸ್ ಮಹಾನಿರ್ದೇಶ ಶಂಕರ್ ಬಿದರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನ ಬಳಿಗಾರ್, ನಟ ಸುದೀಪ್‌ರವರು, ಶ್ರೀ ಗಾಳಿ ಆಂಜನೇಯ ದೇವಾಲಯದ ಪ್ರಧಾನ ಅರ್ಚಕರಾದ ರಾಮಾನುಜ ಭಟ್ಟಚಾರ್ಯ ಈ ಬಾರಿ ಸನ್ಮಾನಕ್ಕೆ ಭಾಜನರಾಗಲಿದ್ದಾರೆ.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT