ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಕನ್ನಡ ಪ್ರೀತಿ; ಈಗ ಉದ್ಯಾನ ಅಭಿವೃದ್ಧಿಗೆ ಆಸಕ್ತಿ

Last Updated 9 ಡಿಸೆಂಬರ್ 2013, 9:53 IST
ಅಕ್ಷರ ಗಾತ್ರ

ಬೀದರ್: ಜನಪ್ರಿಯ ಕನ್ನಡದ ಲೇಖಕರು,ಕವಿಗಳ ನುಡಿಗಳನ್ನು ಬಸ್‌ ನಿಲ್ದಾಣ ಮತ್ತು ಬಸ್ಸುಗಳಲ್ಲಿ ಹಾಕುವುದು, ಬಸ್‌ ನಿಲ್ದಾಣ­ಗಳಲ್ಲಿ ಪುಸ್ತಕದ ಅಂಗಡಿಗಳಿಗೂ ಅವಕಾಶ ಕಲ್ಪಿಸುವ ಮೂಲಕ ಅಕ್ಷರ ಪ್ರೀತಿ ಬೆಳೆಸಲು ಒತ್ತು ನೀಡಿರುವ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಈಗ ನಿಲ್ದಾಣದ ಅಂಗಳದಲ್ಲಿ ಕೈತೋಟ ಅಭಿವೃದ್ಧಿ ಮುಂದಾಗಿದೆ.

ಉದಗೀರ್‌ ರಸ್ತೆಯಲ್ಲಿ ಹೊಸ ನಿಲ್ದಾಣದ ಎದುರು ಇದುವರೆಗೂ ಗಲೀಜು, ತ್ಯಾಜ್ಯ ಎಸೆಯಲು, ರಾತ್ರಿಯ ಹೊತ್ತು ಆಗಾಗ್ಗೆ ಮೂತ್ರ ವಿಸರ್ಜನೆಗೂ ಬಳಕೆಯಾಗುತ್ತಿದ್ದ ಸ್ಥಳವನ್ನು ಕಿರು ಉದ್ಯಾನವಾಗಿ ಅಭಿವೃದ್ಧಿ ಪಡಿಸಲು ಒತ್ತು ನೀಡುವ ಮೂಲಕ ಹೊಸ ರೂಪ ನೀಡಲು ಮುಂದಾಗಿದೆ.

ಈಗಾಗಲೇ ಒಳಗೆ ಡಿಪೊ ಅಂಗಳದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ. ಅದೇ ರೀತಿ ಈಗ ರಸ್ತೆಗೆ ಹೊಂದಿಕೊಂಡಂತೆ ಬಸ್‌ನಿಲ್ದಾಣದ ಎದುರೂ ಸುಮಾರು ₨ 1.5 ಲಕ್ಷ ವೆಚ್ಚದಲ್ಲಿ ಉದ್ಯಾನ ರೂಪಿಸಲಾಗುತ್ತಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಎಇಇ ದಿವಾಕರ ಯರಗೊಪ್ಪ. ಮೊದಲು ಈ ಸ್ಥಳವು ತ್ಯಾಜ್ಯ ವಿಲೇವಾರಿ ತಾಣವಾಗಿತ್ತು. ಕಿರು ವ್ಯಾಪಾರಿಗಳು ಅಲ್ಲಿಯೇ ನಿಂತು ವ್ಯಾಪಾರ ಮಾಡುವುದು, ತ್ಯಾಜ್ಯ ಬಿಸಾಡುವುದು ಆಗುತ್ತಿತ್ತು. ಜೊತೆಗೆ, ನಗರ­ಸಭೆಯ ಚರಂಡಿಯೂ ಹಾದುಹೋಗಿದೆ. ಬಸ್‌ ನಿಲ್ದಾಣದ ಎದುರಿನ ಈ ಚಿತ್ರಣ ಬದಲಿ­ಸುವುದು ಇದರ ಉದ್ದೇಶವಾಗಿತ್ತು ಎನ್ನುತ್ತಾರೆ.

ಬಸ್‌ ನಿಲ್ದಾಣ ಎದುರಿನ ಚರಂಡಿಯನ್ನು ದುರಸ್ತಿ ಪಡಿಸಿ, ವ್ಯವಸ್ಥಿತಗೊಳಿಸಬೇಕು ಎಂದು­ಕೋರಿ ಈಗಾಗಲೇ  ಪತ್ರ ಬರೆಯಲಾಗಿದೆ. ಆದರೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ನಗರಸಭೆಯು ಚರಂಡಿ ದುರಸ್ತಿಗೆ ಒತ್ತು ನೀಡಿದರೆ, ಸಂಸ್ಥೆಯು ಅಭಿವೃದ್ಧಿಪಡಿಸುವ ಉದ್ಯಾನಕ್ಕೂ ಅರ್ಥ ಬರುತ್ತದೆ ಎಂದರು.

ಪ್ರಸ್ತುತ ಬಸ್‌ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಬಳಿ ಎರಡೂ ಬದಿಯಲ್ಲಿ ರಸ್ತೆಗೆ ಹೊಂದಿ­ಕೊಂಡಂತೆ ಇಳಿಜಾರು ರೂಪದಲ್ಲಿ ಉದ್ಯಾನ ಅಭಿವೃದ್ಧಿ ಮಾಡಲಾಗಿತ್ತು. ಅಲಂಕಾ­ರಿಕ ಗಿಡ ಬೆಳೆಸಲು ಸಿದ್ಧತೆ ಮಾಡಲಾಗಿದೆ. ನಿರೀಕ್ಷೆಯಂತೆ ಈ ಕಾರ್ಯ ಕೈಗೂಡಿದರೆ 2–3 ತಿಂಗಳಲ್ಲಿ ನಿಲ್ದಾಣಕ್ಕೆ ಹೊಸ ರೂಪ ಬರಲಿದೆ.

ಉದ್ಯಾನಕ್ಕೆ ಸುತ್ತಲೂ ಬೇಲಿ ಹಾಕಲಿದ್ದು, ಸಾರಿಗೆ ಸಂಸ್ಥೆಯೇ ವ್ಯವಸ್ಥಾಪಕ ನಿರ್ದೇಶಕರ ನಿಧಿಯಲ್ಲಿ ಲಭ್ಯವಿರುವ ಮೊತ್ತದಲ್ಲಿ  ಉದ್ಯಾ­ನದ ನಿರ್ವಹಣೆ ಮಾಡಲಾಗಿದೆ. ನಿಲ್ದಾಣದ ಒಳಗೂ ಹೆಚ್ಚುವರಿಯಾಗಿ ಲಭ್ಯವಿರುವ ಸ್ಥಳ­ದಲ್ಲಿ ಕಿರು ಉದ್ಯಾನ ಅಭಿವೃದ್ಧಿಗಾಗಿ ₨ 5 ಲಕ್ಷ  ವೆಚ್ಚದ ಪ್ರಸ್ತಾಪ ಕಳುಹಿಸಲಾಗಿದೆ ಎಂದರು.

ಒಂದು ಕಡೆ ಉದ್ಯಾನ ಅಭಿವೃದ್ಧಿಯ ಪ್ರಗತಿ ಕಂಡರೂ, ಇನ್ನೊಂದೆಡೆ ನಿಲ್ದಾಣಕ್ಕೆ ಬರವ ಅಸಂಖ್ಯ ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯ­ವಾಗಿರುವ ಶೌಚಾಲಯದ ಕಳಪೆ ನಿರ್ವಹಣೆ ಕುರಿತು ಪ್ರಯಾಣಿಕರ ಅಸಮಾಧಾನ ಮಾತುಗಳು ಇವೆ. ‘ಉದ್ಯಾನ ಅಭಿವೃದ್ಧಿ ಉತ್ತಮ ಕೆಲಸವೇ. ಆದರೆ, ಶೌಚಾಲಯ ನಿರ್ವಹಣೆ, ಕುಡಿಯುವ ನೀರು ಸೌಲಭ್ಯ ಒದಗಿಸುವ ಕುರಿತು ಸಂಸ್ಥೆ ಅಷ್ಟೇ ಒತ್ತು ನೀಡಬೇಕು. ಅಧಿಕಾರಿಗಳು ಅತ್ತಲೂ ಗಮನಹರಿಸಲಿ’ ಎಂದು ಔರಾದ್‌ ಬಸ್‌ ನಿರೀಕ್ಷೆಯಲ್ಲಿದ್ದ ಪ್ರಯಾಣಿಕ ರಮೇಶ ಪಾಟೀಲ ಪ್ರತಿಕ್ರಿಯಿಸಿದರು.

ಈ ಕುರಿತು ಗಮನಸೆಳೆದಾಗ ಯರಗೊಪ್ಪ ಅವರು, ಶೌಚಾಲಯ ನಿರ್ವಹಣೆಯನ್ನು ಖಾಸಗಿ­ಯವರಿಗೆ ಪೇ ಅಂಡ್‌ ಯೂಸ್‌ ಅನ್ವಯ ನಡೆಸಿಕೊಂಡು ಹೋಗಲು ಗುತ್ತಿಗೆ ನೀಡಲಾಗಿ­ರುತ್ತದೆ. ಇದು ನೇರ ಡಿಟಿಒ ಅವರ ನಿಯಂತ್ರಣಕ್ಕೆ ಬರಲಿದೆ. ಗುತ್ತಿಗೆ ಪಡೆದವರು ಸರಿಯಾಗಿ ನಿರ್ವಹಣೆ ಮಾಡಬೇಕಾಗಿದೆ ಎನ್ನುತ್ತಾರೆ.

ಏನೇ ಆದರೂ ಬಹುತೇಕ ಸರ್ಕಾರಿ ಕಚೇರಿ­ಗಳ ಆವರಣಗಳು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತೆ ಅವ್ಯವಸ್ಥೆಯ ಕೂಪವಾಗಿ­ರುವಾಗ ಇರುವ ಸ್ಥಳವನ್ನು ಉದ್ಯಾನವಾಗಿ ರೂಪಿಸುವ ಸಂಸ್ಥೆಯ ಕಾರ್ಯ ಸ್ವಾಗತಾರ್ಹವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT