ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ ನೋಡಿ

Last Updated 7 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನೋಡುವ ಕಣ್ಗಳ ಭಾಗ್ಯ
ಕೇಳುವ ಕಿವಿಗಳ ಭಾಗ್ಯ
ಮೆಲ್ಲುವ ಬಾಯ್ಗಳ ಭಾಗ್ಯ
ಭಾಗ್ಯ! ಭಾಗ್ಯ!!
ಬೆಂಗಳೂರಿನ ಭಾಗ್ಯ; ಬೆಂಗಳೂರಿಗರ ಭಾಗ್ಯ!

ಹೌದು ಮಳೆಗಾಲ ಮುಗಿಯುತ್ತಿದ್ದಂತೆ ಬೆಂಗಳೂರಲ್ಲಿ ಏನೆಲ್ಲಾ ಭಾಗ್ಯಗಳು ನಾಗರಿಕರ ಮುಂದೆ ತೆರೆದುಕೊಳ್ಳುತ್ತಿವೆ. ಅವೂ ಸಾಲು ಸಾಲು!
ಬೆಂಗಳೂರು ಹಬ್ಬ ಆಯ್ತು. ಅದರ ಬೆನ್ನಿಗೇ ಬೃಹತ್ ಕನ್ನಡ ಸಾಹಿತ್ಯ ಸಮ್ಮೇಳನ. ಅದರ ಬೆನ್ನಲ್ಲೇ ಬಂದಿದೆ ಏರೋ ಇಂಡಿಯಾ 2011 ಪ್ರದರ್ಶನ.

ಇದು ಎರಡು ವರ್ಷಗಳಿಗೊಮ್ಮೆ ದೊರೆಯುವ ಮಹಾ ಅವಕಾಶ. ರಕ್ಷಣಾ ಇಲಾಖೆ ಇದರ ರೂವಾರಿ. ಯಲಹಂಕದ ವಾಯು ಪಡೆ ಮೈದಾನದಲ್ಲಿ ನಡೆದರೂ ಇದು ಅಂತರರಾಷ್ಟ್ರೀಯ ಮಹತ್ವದ, ಆಕರ್ಷಣೆಯ ಪ್ರದರ್ಶನ. ಇದರಲ್ಲಿ ಭಾಗವಹಿಸಲೆಂದೇ ಅಮೆರಿಕದಂತಹ ದೊಡ್ಡ ರಾಷ್ಟ್ರದ ಅತಿ ಬೃಹತ್ ಕಾಯದ ವಿಮಾನವೂ ಇಲ್ಲಿಗೆ ಹಾರಿಬರುತ್ತದೆ.

ನಮ್ಮ ದೇಶದ ರಕ್ಷಣಾ ಸಾಮರ್ಥ್ಯದ, ತಾಂತ್ರಿಕ ಪ್ರಗತಿಯ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಹೆಮ್ಮೆಯಿಂದ ತೋರುವುದು ಪ್ರದರ್ಶನದ ಒಂದು ಮುಖ್ಯ ಉದ್ದೇಶ. ಹಾಗೆಯೇ, ಇತರ ದೇಶಗಳೂ. ಇದರಿಂದ ಹಲವು ಉಪಯೋಗ: ನಾಗರಿಕರಲ್ಲಿ ರಕ್ಷಣೆ ಬಗ್ಗೆ ಭರವಸೆ ಮೂಡಿಸುವುದು; ದೇಶಸೇವೆಯತ್ತ ಯುವಶಕ್ತಿಗಳನ್ನು ಆಕರ್ಷಿಸುವುದು; ತಮ್ಮ ಕೌಶಲ್ಯ, ಶಕ್ತಿ, ಮನೋಬಲಗಳನ್ನು ಮತ್ತಷ್ಟು ಹದಗೊಳಿಸಿಕೊಳ್ಳುವುದು; ದೃಢ ಮಾಡಿಕೊಳ್ಳುವುದು. ಅದರ ಜೊತೆ ಜೊತೆಗೇ ತಮ್ಮ ವೈಮಾನಿಕ ಕ್ಷೇತ್ರದ ತಾಂತ್ರಿಕ ಅಭಿವೃದ್ಧಿಯನ್ನು ಜಗತ್ತಿಗೆ ಸಾರಿ ಹೇಳುವುದು; ಈ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಕುದುರಿಸಿಕೊಳ್ಳುವುದು. ಅದೇ ಹೊತ್ತಿಗೆ ಇತರ ದೇಶಗಳವರಲ್ಲಿ ಅಪರೂಪದ್ದೇನಾದರೂ ಇದ್ದಲ್ಲಿ ನಾವೂ ತಿಳಿಯುವುದು; ಕೊಂಡು, ನಮ್ಮದಾಗಿಸಿಕೊಳ್ಳುವುದು.

ಈ ವಹಿವಾಟು ಆರ್ಥಿಕವಾಗಿ ಯಾವ ಪರಿ ಜರುಗುತ್ತದೆ ಎಂದರೆ, ಕಳೆದ ಬಾರಿಯ ಏರ್‌ಶೋನಲ್ಲಿ 1.10 ಲಕ್ಷ ಕೋಟಿ ರೂಪಾಯಿ ವ್ಯಾಪಾರ ಆಗಿದೆಯಂತೆ. ಈ ಬಾರಿ ಇನ್ನೂ ಹೆಚ್ಚಾದೀತು!

ಶೋ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲೂ ವೈವಿಧ್ಯ; ಬಾಹ್ಯಾಕಾಶ ತಂತ್ರಜ್ಞಾನ ಕುರಿತು ವಿಚಾರ ಸಂಕಿರಣಗಳೂ ನಡೆಯುತ್ತವೆ ಸುಸಜ್ಜಿತ ಸಭಾಂಗಣಗಳಲ್ಲಿ. ವಿಮಾನಗಳ ಪ್ರದರ್ಶನಗಳು ನಡೆಯುವುದು ವಿಸ್ತಾರ ಬಯಲಿನಲ್ಲಿ. ಹಾಗೇ ಅವುಗಳ ಕಸರತ್ತು ನಡೆಯುವುದು ವಿಶಾಲ ಬಾನಂಗಳದಲ್ಲಿ! ಅದು ನೋಡುವ ಕಣ್ಗಳ ಭಾಗ್ಯ!

ವಿಶ್ವ ಮಾನ್ಯತೆಯ ಈ ಪ್ರದರ್ಶನಕ್ಕಾಗಿ ವಿವಿಧೆಡೆಯಿಂದ ಬರುವ ಪ್ರತಿನಿಧಿಗಳ ಸಂಖ್ಯೆಯೇ 800ಕ್ಕೂ ಹೆಚ್ಚು. ವಿಮಾನ ತಂತ್ರಜ್ಞಾನ ಕುರಿತು ಬೋಧಿಸುವ, ಜಗತ್ತಿನ 20 ದೇಶಗಳ 150 ವಿಶ್ವವಿದ್ಯಾಲಯಗಳ ಭಾಗವಹಿಸುವಿಕೆ ಇಲ್ಲಿರುತ್ತೆ. ಅಂದಮೇಲೆ, ಇದರ ಮಹತ್ವ ಇನ್ನೇನು ಹೇಳುವುದು.

ಅಷ್ಟಕ್ಕೂ ಅದೆಲ್ಲಾ ಸಾರ್ವಜನಿಕರಿಗೆ ಅದು ಕಬ್ಬಿಣದ ಕಡಲೆ, ಬೇಕಾಗಿಯೂ ಇಲ್ಲ. ಆದರೆ, ಆಗಸದಲ್ಲಿ ಸೊಯ್ಯನೆ ಮೇಲೇರಿ, ದೊಂಬರಾಟ ಮಾಡುವ ಬಣ್ಣದ ಚಿಟ್ಟೆಗಳಂತಹ ವಿಮಾನಗಳ ಬೆಡಗನ್ನು ನೋಡುವುದೇ ಮಹಾಭಾಗ್ಯ. ಬಣ್ಣ ಬಣ್ಣದ ಹೊಗೆ ಉಗುಳುತ್ತಾ ಶಿಸ್ತಾಗಿ ಹಾರುತ್ತಾ ನೀಲಿ ಆಗಸದಲ್ಲಿ ಕಾಮನಬಿಲ್ಲು ಮೂಡಿಸುವಾಗಿನ ಸೊಬಗೇ ಸೊಬಗು. ಭರ್ರೋ ಎಂದು ಕಿವಿಗಡಚುಕ್ಕುವಂತೆ ಭೋರ್ಗರೆಯುತ್ತಾ ಹಾರಿ, ದೂರ ಅಲ್ಲೆಲ್ಲೊ ಮಾಯವಾಗಿ ಮತ್ತೆ ಮಿಂಚಿನಂತೆ ಪ್ರತ್ಯಕ್ಷವಾಗುವ ಚಮತ್ಕಾರ ಇನ್ನೊಂದು ಬಗೆಯದು.

ಮದುವೆ ಮನೆಗೆ ಬೀಗರು ಅಥವಾ ಒಲಿಂಪಿಕ್ ಕ್ರೀಡಾಕೂಟಕ್ಕೆ ಕಲಿಗಳು ಬರುವಂತೆ ಈಗಾಗಲೇ ವಿವಿಧ ದೇಶಗಳ ಯುದ್ಧ ವಿಮಾನಗಳು ಒಂದೊಂದಾಗಿ ಆಗಮಿಸುತ್ತಿವೆ. ಇವುಗಳ ಬಣ್ಣ, ವಿನ್ಯಾಸ, ನೆಲದ ಮೇಲೆ ನಿಲ್ಲುವ ಠೀವಿ, ಹಾರುವಾಗಿನ ನೈಪುಣ್ಯ ಇವೆಲ್ಲಾ ನಿಜಕ್ಕೂ ನೋಡುವಂತಹದ್ದು.

ಆಕಾಶ ನೋಡೋಕೆ ನೂಕುನುಗ್ಗಲು. ಯಾಕೆ ಅನ್ನೋ ಮಾತಂತೂ ಇಲ್ಲಿ ಪೂರ್ಣ ಅನ್ವಯವಾಗುತ್ತೆ. ಲಕ್ಷಗಟ್ಟಲೆ ಜನರಿಂದಾಗಿ ಸಂದಣಿ; ನೂಕುನುಗ್ಗಲು ಆಗುವುದು ಸಹಜ. ಕೆಲವರಿಗೆ ಟಿಕೆಟು ದುಬಾರಿ ಆದೀತು. ಅಂತಹವರು ನಿರಾಸೆ ಹೊಂದಬೇಕಿಲ್ಲ. ಮೈದಾನ ಗೋಡೆಯ ಹೊರ ಬಯಲಲ್ಲಿ ನಿಂತೂ ಈ ಅಪರೂಪದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಎಷ್ಟೋ ಜನ ಹಾಗೇ ಮಾಡುತ್ತಾರೆ.

ಇಷ್ಟೆಲ್ಲಾ ಆಕರ್ಷಣೆಯ ನಡುವೆ ಜನರು ವಹಿಸಬೇಕಾದ ಜವಾಬ್ದಾರಿಯೂ ಇದೆ. ಈ ಪ್ರದರ್ಶನ ಯಾವ ಅವಘಡವೂ ಇಲ್ಲದೆ ನಡೆಯಬೇಕಾದರೆ ಜನ ಏನೇನು ಮಾಡಬಾರದು ಎಂಬ ಕೆಲ ಸೂಚನೆಗಳನ್ನೂ ಸಂಘಟಕರು ಪ್ರಕಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ತಿಂಡಿ ತಿನಿಸಿನ ಚೂರು, ಪೊಟ್ಟಣಗಳನ್ನು ಮೈದಾನದಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಎಸೆಯಬಾರದು. ವಿಶೇಷವಾಗಿ ಸಮೀಪದ ಗ್ರಾಮೀಣರು ಹತ್ತಿರದ ಕೆರೆ-ಕಟ್ಟೆಗಳಲ್ಲಿ ಮೀನು ಹಿಡಿಯುವುದು, ಡಾಬಾಗಳ ಮಾಂಸ-ಮೂಳೆ ಮೊದಲಾದುವನ್ನು ಕೆರೆ ಅಂಗಳದಲ್ಲಿ ಎಸೆಯುವುದು ಇತ್ಯಾದಿ ಮಾಡಬಾರದು. ಏಕೆಂದರೆ, ಆ ಆಹಾರದ ಆಕರ್ಷಣೆಗೆ ಬಂದ ಹಕ್ಕಿಗಳು ಕೆಳಹಂತದಲ್ಲಿ ಹಾರಾಡುವ ವಿಮಾನಗಳಿಗೆ ಡಿಕ್ಕಿ ಹೊಡೆದರೆ.... ಘೋರ ದುರಂತವೇ ಸಂಭವಿಸುತ್ತದೆ.

ವಿಮಾನಗಳಿಗೆ ಹಕ್ಕಿಗಳೇ ಶತ್ರುಗಳು! ಛೇ, ಹಾಗಾಗದಿರಲಿ; ನೀವು ಯಂತ್ರ ಹಕ್ಕಿಗಳ ಚಮತ್ಕಾರವನ್ನು ನೋಡುವುದನ್ನು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT