ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ ಪುನರುತ್ಥಾನವಾಗಬೇಕು

Last Updated 9 ಫೆಬ್ರುವರಿ 2011, 12:10 IST
ಅಕ್ಷರ ಗಾತ್ರ

ಗದಗ: ಪ್ರಸ್ತುತ ಪರಿಸ್ಥಿತಿಯಲ್ಲಿ ಆಚಾರ ಪುನರುತ್ಥಾನಗೊಳಿಸುವ ಅವಶ್ಯಕತೆ ಇದೆ ಎಂದು ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜೆ.ಎಸ್.ಪಾಟೀಲ ಅಭಿಪ್ರಾಯಪಟ್ಟರು.
ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಮಂಗಳವಾರ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಏರ್ಪಡಿಸಿದ್ದ ಬಸವ ತತ್ವ ಒಕ್ಕೂಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವತತ್ವವನ್ನು ಪ್ರಚಾರ ಮಾಡುವುದು, ವಚನವನ್ನು ಓದುವುದು, ಬರೆಯುವುದು ಎಲ್ಲವನ್ನು ಮಾಡಿ ಅದನ್ನು ಆಚಾರದಲ್ಲಿ ತರದೇ ಹೋದರೆ ಶರಣರು ತಿಳಿಸಿರುವಂತೆ ನರಕಕ್ಕೆ ಹೋಗಬೇಕಾಗುತ್ತದೆ. ಆದ್ದರಿಂದ ಆಚಾರ ಮಾಡುವುದಕ್ಕೆ ಮೊದಲು ಪ್ರಾರಂಭಿಸಬೇಕು’ ಎಂದರು.‘ಆಚಾರಕ್ಕೆ ಹೊಸ ಶಕ್ತಿ, ಸ್ವರೂಪ ಕೊಡಬೇಕಾಗಿದೆ. ಕೇವಲ ಬಾಯಿ ಮಾತಿನಲ್ಲಿ ಹೇಳದೇ ಕೃತಿಯ ಮೂಲಕ ಮಾಡಿ ತೋರಿಸಬೇಕಾಗಿದೆ. ಬಸವ ಸಂಘಟನೆಗಳು ಸಹ ಒಗ್ಗಟ್ಟಿನಿಂದ ಆಚಾರವನ್ನು ಅನುಸರಿಸಿಕೊಂಡು ಹೋಗಬೇಕು’ ಎಂದರು.

‘ಇಡೀ ವಿಶ್ವಕ್ಕೆ ಪ್ರಜಾಸತ್ತೆಯ ಮಾದರಿಯನ್ನು 12ನೇ ಶತಮಾನದಲ್ಲಿ ಶರಣರು ರೂಪಿಸಿದ್ದ ಅನುಭವ ಮಂಟಪ ನೀಡಿದೆ. ವಚನದ ಮೂಲಕ ಸಾವಿರಾರು ಸಂವಿಧಾನಗಳನ್ನು ಕಟ್ಟಬಹುದಾಗಿದೆ. ವಚನದಲ್ಲಿ ಎಲ್ಲ ವಿಚಾರದ ಬಗ್ಗೆಯೂ ತಿಳಿಸಿದ್ದಾರೆ’ ಎಂದರು.‘ಬಸವಣ್ಣನ ಕಾಯಕ ತತ್ವವನ್ನು ಮರೆತು ಹೋಗಿರುವುದರಿಂದ ದೇಶ ಇಂದು ಪ್ರಕ್ಷುಬ್ಧ ವಾತಾವರಣದಲ್ಲಿ ಬದುಕು ನಡೆಸಬೇಕಾಗಿದೆ. ಬಸವ ತತ್ವಗಳನ್ನು ಅನುಸರಣೆ ಮಾಡಿದರೇ ಇಡೀ ವಿಶ್ವವೇ ಶಾಂತಿಯಿಂದ ನೆಲಸಬಹುದು. ಎಲ್ಲ ರಂಗದಲ್ಲೂ ಅಭಿವೃದ್ಧಿ ಕಾಣಬಹುದು’ ಎಂದರು.

‘ಆಶಯ ನುಡಿಗಳನ್ನಾಡಿದ ಡಾ.ಟಿ.ಆರ್. ಚಂದ್ರಶೇಖರ, ವರ್ಗ, ಜಾತಿ, ಲಿಂಗ, ವೃತ್ತಿ ಬೇಧ-ಭಾವ ತೊರೆದು ಸಾಮಾಜಿಕತೆಯ ನೆಲೆಯಲ್ಲಿ ಬಸವ ಸಂಘಟನೆಯನ್ನು ರೂಪಿಸಿಕೊಳ್ಳಬೇಕು’ ಎಂದರು.ಕಾಯಕ ಸಂಸ್ಕೃತಿಯನ್ನು ಮೈಗೂಡಿಸಿ ಕೊಳ್ಳಬೇಕು. ದುಡಿಯುವ ವರ್ಗ ಸಾಮರಸ್ಯದಿಂದ ಬದುಕಬೇಕು’ ಎಂದು ತಿಳಿಸಿದರು.

ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲ್ಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಫಕೀರ ಸಿದ್ಧರಾಮ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT