ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ವೈಫಲ್ಯ: ಶ್ರೀರಾಮರೆಡ್ಡಿಆರೋಪ

Last Updated 20 ಏಪ್ರಿಲ್ 2011, 9:15 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ. ಜನವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಸಿಪಿಎಂನ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ಸಿಪಿಎಂ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರದ ಆರೋಪವಿದ್ದರೂ ಪ್ರಧಾನಿ ಮತ್ತು ಮುಖ್ಯಮಂತ್ರಿ ರಾಜೀನಾಮೆ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.|

ರಾಜ್ಯದಲ್ಲಿ ಪ್ರಥಮ ಬಾರಿಗೆ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರ ಭರವಸೆಗಳನ್ನು ನೀಡುವುದರಲ್ಲೇ ಕಾಲ ವ್ಯಯ ಮಾಡುತ್ತಿದೆ ಹೊರತು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿಲ್ಲ.ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಮತ್ತು ಸಂಘಟಿತ ವಲಯದ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡಲು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರಿಗೆ ಜನಪರ ಕಾಳಜಿಯಿಲ್ಲ ಎಂದು ದೂರಿದರು.

ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ಬಾರದಷ್ಟು ವ್ಯಾಪಿಸಿದ್ದು, ಬಡವರು, ಜನಸಾಮಾನ್ಯರು ಜೀವನ ನಿರ್ವಹಿಸಲಾಗದಂತಹ ಪರಿಸ್ಥಿತಿ ತಲೆದೋರಿದೆ. ಚುನಾವಣಾ ಪ್ರಣಾಳಿಕೆಯಲ್ಲಿ 2 ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದ ಬಿಜೆಪಿ ತನ್ನ ಮಾತನ್ನು ಉಳಿಸಿಕೊಂಡಿಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷಗಳೇ ಕಳೆದರೂ ಬಡವರ, ಜನಸಾಮಾನ್ಯರ ಸ್ಥಿತಿ ಸುಧಾರಿಸಿಲ್ಲ. ಬಡವರು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಟಿ.ಎ.ಹನುಮಂತರಾಯ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ‘ತಾಲ್ಲೂಕಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ 2-3ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು’ ಎಂದರು. ಮುಖ್ಯರಸ್ತೆಯ ಇಕ್ಕಲಗಳಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗುವುದು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ತಿಳಿಸಿದರು. ನಿವೇಶನ ವಿತರಣೆ ಮತ್ತು ಮನೆ ನಿರ್ಮಾಣಕ್ಕೆ 105 ಎಕರೆಗಳಷ್ಟು ಜಮೀನು ಗುರುತಿಸಲಾಗಿದ್ದು, ಶೀಘ್ರವೇ ಫಲಾನುಭವಿಗಳಿಗೆ ವಿತರಿಸಲಾಗವುದು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನಾಗಪ್ಪ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಸದಸ್ಯೆ ನಾರಾಯಣಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾರಾಣಿ, ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚನ್ನರಾಯಪ್ಪ, ಸಿಪಿಎಂ ತಾಲ್ಲೂಕು ಘಟಕದ ಅಧ್ಯಕ್ಷ ರಘುರಾಮಿರೆಡ್ಡಿ, ಕಾರ್ಯದರ್ಶಿ ಕೊಲಿಮಿಪಲ್ಲಿ ವೆಂಕಟಸ್ವಾಮಿರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ಕಾರ್ಯದರ್ಶಿ ಜಿ.ಎನ್.ಶ್ರೀರಾಮಪ್ಪ, ಮುಖಂಡರಾದ ಸಿ.ಡಿ.ಗಂಗುಲಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT