ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಗೌರವ ಕಾಪಾಡಿಕೊಂಡಿದ್ದ ನಾಯಕ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬಂಗಾರಪ್ಪ ನಾಡು ಕಂಡ ವಿಭಿನ್ನ ರೀತಿಯ ರಾಜಕಾರಣಿ. ನೇರ ಮಾತು, ನೇರ ನಡೆಯ ನಿಷ್ಠುರ ವ್ಯಕ್ತಿಯಾಗಿದ್ದ ಅವರ ಅಗಲಿಕೆಯಿಂದ ನಾಡು ಧೀಮಂತ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ~ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಹೇಳಿದರು.

ನಗರದಲ್ಲಿ ಶನಿವಾರ ಸಮತಾ ಸೈನಿಕ ದಳ ಹಾಗೂ ಭಾರತೀಯ ರಿಪಬ್ಲಿಕನ್ ಪಕ್ಷ ಜಂಟಿಯಾಗಿ ಆಯೋಜಿಸಿದ್ದ ಬಂಗಾರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

`ಅವರು ಪದೇ ಪದೇ ಪಕ್ಷಗಳನ್ನು ಬದಲಿಸುತ್ತಿದ್ದರೂ, ಅವರ ರಾಜಕೀಯ ನಿಲುವುಗಳು ಸ್ಪಷ್ಟವಿರುತ್ತಿದ್ದವು. ಆತ್ಮಗೌರವಕ್ಕೆ, ತತ್ವ ಸಿದ್ಧಾಂತಗಳಿಗೆ ಧಕ್ಕೆಯಾಗುವ ಸಂದರ್ಭದಲ್ಲಿ ಪಕ್ಷಗಳಿಂದ ಏಕಾಂಗಿಯಾಗಿ ಹೊರ ನಡೆಯುತ್ತಿದ್ದರು. ಅವರು ಜನ ನಾಯಕರಾಗಿ ಆತ್ಮಗೌರವ ಕಾಪಾಡಿಕೊಂಡಿದ್ದವರು~ ಎಂದು ನುಡಿದರು.

`ದೇವರಾಜ ಅರಸು ನಂತರ ರಾಜ್ಯದಲ್ಲಿ ಅತ್ಯಂತ ಜನಪ್ರಿಯ ರಾಜಕಾರಣಿಯಾಗಿದ್ದವರು ಬಂಗಾರಪ್ಪ. ಬೆತ್ತಲೆಪೂಜೆ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದ್ದ ಬಂಗಾರಪ್ಪ ಅವರ ಬದ್ಧತೆ, ಇಂದಿನ ರಾಜಕಾರಣಿಗಳಲ್ಲಿ ಕಾಣುತ್ತಿಲ್ಲ~ ಎಂದು ವಿಷಾದಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಎಸ್.ವಿ.ಅಮೀನ್ ಮಾತನಾಡಿ, `ಬದ್ಧತೆಗೆ ಹೆಸರಾಗಿದ್ದ ಬಂಗಾರಪ್ಪ ತಳಮಟ್ಟದ ಜನರೊಡನೆ ಒಡನಾಟ ಹೊಂದಿದ್ದರು. ಹಿಂದುಳಿದ ವರ್ಗಗಳು ಹಾಗೂ ರೈತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ಅವರು ರೈತರಿಗೆ ಉಚಿತ ವಿದ್ಯುತ್ ನೀಡುವ ತೀರ್ಮಾನ ಕೈಗೊಂಡ ಅಪ್ಪಟ ಜನಪರ ರಾಜಕಾರಣಿಯಾಗಿದ್ದರು~ ಎಂದರು.

ಶ್ರದ್ಧಾಂಜಲಿ ಸಭೆಯಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜೆ.ಶ್ರೀನಿವಾಸನ್, ಸಮತಾ ಸೈನಿಕ ದಳ ಹಾಗೂ ಭಾರತೀಯ ರಿಪಬ್ಲಿಕನ್ ಪಕ್ಷಗಳ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಗ್ ಪಟೇಲ್, ದಲಿತ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ವೈ.ಮರಿಸ್ವಾಮಿ, ದಲಿತ ನೌಕರರ ಮುಖಂಡ ಶ್ರಿಕಾಂತ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT