ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗೆ ಶರಣು...

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಕೀಚಕಪ್ರವೃತ್ತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯವೂ ಮುಕ್ತವಾಗಿಲ್ಲ. ಬೆಳಕಿಗೆ ಬಂದ ಪ್ರಕರಣಗಳು ಎರಡು ಮಾತ್ರ. ಆದರೆ ಮುಚ್ಚಿಹೋದ ಪ್ರಕರಣಗಳ ಸಂಖ್ಯೆಯೂ ಸಾಕಷ್ಟಿದೆ ಎಂಬುದು ವಿ.ವಿ ಪ್ರಾಂಗಣದಲ್ಲಿ ಕೇಳಿ ಬರುವ ಮಾತು.

ಹಿರಿಯ ಉಪನ್ಯಾಸಕಿ ಸುಜಾತಾ 2008ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಅದನ್ನು ಮಾಮೂಲಿ ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸುಜಾತಾ ಬರೆದಿಟ್ಟಿದ್ದ ಡೈರಿ ಆರೋಪಿಗಳಿಗೆ ಉರುಳಾಯಿತು. ಆನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ ರಶೀದ್ ಅಹ್ಮದ್  ತಮ್ಮ ಗೆಳೆಯರ ಕೂಟದ ಜತೆಗೂಡಿ ಒಂಬತ್ತು ವರ್ಷ ಕಾಲ ನೀಡಿದ ಲೈಂಗಿಕ, ಮಾನಸಿಕ ಕಿರುಕುಳದ ಬಗ್ಗೆ  ಡೈರಿಯಲ್ಲಿ ಉಲ್ಲೇಖಿಸಿದ್ದರು. ಈ ಪತ್ರ ಸಿಕ್ಕಿದ ಬಳಿಕ ಆಕೆಯ ಕುಟುಂಬದವರು ದೂರು ನೀಡಿದ್ದರೂ ಪ್ರಭಾವಿಗಳ ಒತ್ತಡದಿಂದ ಪ್ರಕರಣ ಮುಚ್ಚಿ ಹೋಗಿತ್ತು. 

 ಅಶ್ಲೀಲ ಇ-ಮೇಲ್: ಈ ಪ್ರಕರಣದ ಬೆನ್ನಲ್ಲೇ ಬಹಿರಂಗಗೊಂಡ ಇನ್ನೊಂದು ಆಘಾತಕಾರಿ ಅಂಶವೆಂದರೆ ಸ್ವತಃ ಆಗಿನ ಕುಲಪತಿಯವರ (ಪ್ರೊ.ಕೆ.ಎಂ.ಕಾವೇರಿಯಪ್ಪ) ಇ-ಮೇಲ್ ವಿಳಾಸದಿಂದ  ಸುಜಾತ ಅವರಿಗೆ ಅಶ್ಲೀಲ ಇ-ಮೇಲ್ ರವಾನೆ ಆಗಿದ್ದು. `ತಮ್ಮ  ಇ-ಮೇಲ್‌ನ ಪಾಸ್‌ವರ್ಡ್ ಕದ್ದು ಯಾರೋ ಈ ರೀತಿ ಮಾಡಿದ್ದಾರೆ ಎಂದು ಆಗಿನ ಕುಲಪತಿ ಸಮಜಾಯಿಷಿ ನೀಡಿ ಕೈ ತೊಳೆದುಕೊಂಡಿದ್ದರು.

ಪ್ರಕರಣಕ್ಕೆ ಮರುಜೀವ: ಈ ನಡುವೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೂಲಂಕಷ ತನಿಖೆಗೆ ಆಗ್ರಹಿಸಿತ್ತು. ಪ್ರಕರಣದ ಬಗ್ಗೆ ದಲಿತ ಸಂಘರ್ಷ ಸಮಿತಿಯು ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿತ್ತು. ಆಯೋಗವು ಪ್ರಕರಣದ ತನಿಖೆ ಬಗ್ಗೆ ವರದಿ ಕೇಳಿದ್ದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಈಗ ಮತ್ತೆ ಪ್ರಕರಣದ ಬೆನ್ನುಹತ್ತಿದೆ.  ಪ್ರೊ. ರಶೀದ್ ಅಹ್ಮದ್ ಅವರನ್ನು ಪೊಲೀಸರು ಇತ್ತೀಚಿಗೆ ಬಂಧಿಸಿದ್ದಾರೆ.

ಹೈಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಸುಜಾತಾ, ಸಾಯುವ ಮುನ್ನ ಬರೆದ ಪತ್ರದ್ಲ್ಲಲಿ ಉಲ್ಲೇಖಿಸಿರುವ ವಿಶ್ವವಿದ್ಯಾಲಯದ ಇತರ ಸಿಬ್ಬಂದಿ ವಿರುದ್ಧವೂ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆಗಿನ ಕುಲಪತಿ ಇ-ಮೇಲ್ ವಿಳಾಸ ಅಶ್ಲೀಲ ಮೆಸೇಜ್ ರವಾನೆ ಆದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಶಿಕ್ಷೆಯಾದ ಪ್ರಕರಣ: ಸುಜಾತ ಆತ್ಮಹತ್ಯೆ ಪ್ರಕರಣ ಸುದ್ದಿಯಲ್ಲಿರುವಾಗಲೇ 2010ರಲ್ಲಿ ಬಯೋಸೈನ್ಸ್ ವಿಭಾಗದ ಇಬ್ಬರು ಸಂಶೋಧನಾ ವಿದ್ಯಾರ್ಥಿನಿಯರು (ಒಬ್ಬರು ದೆಹಲಿಯವರು) ಏಕಾಏಕಿ ಸಂಶೋಧನೆ ಮೊಟಕುಗೊಳಿಸಿ ಮನೆಗೆ ಮರಳಿದ್ದರು.

`ಸಂಶೋಧನೆಗೆ ಮಾರ್ಗದರ್ಶನ ಮಾಡುತ್ತಿರುವ ಸಹಾಯಕ ಪ್ರಾಧ್ಯಾಪಕ ಪ್ರೊ.ತಿಪ್ಪೇಸ್ವಾಮಿ ಅವರ ಲೈಂಗಿಕ ಕಿರುಕುಳದಿಂದಾಗಿ ಸಂಶೋಧನೆ ಮುಂದುವರಿಸುವುದು ಅಸಾಧ್ಯವಾಗಿದೆ~ ಎಂದು ಕುಲಪತಿಗೆ ಹಾಗೂ ಕುಲಾಧಿಪತಿಗಳಾದ ರಾಜ್ಯಪಾಲರಿಗೆ ದೂರು ನೀಡಿದ್ದರು.

ಸುಜಾತ ಪ್ರಕರಣದಿಂದ ಮೊದಲೇ ಕೆಸರು ಅಂಟಿಸಿಕೊಂಡಿದ್ದ ವಿಶ್ವವಿದ್ಯಾಲಯ ಈ ಬಾರಿ ಎಚ್ಚರಿಕೆ ವಹಿಸಿತು. ಆರೋಪಿ ಪ್ರೊ.ತಿಪ್ಪೇಸ್ವಾಮಿಯನ್ನು ಅಮಾನತುಗೊಳಿಸಿತು.

ಮೂವರು ಸದಸ್ಯರ ಸಮಿತಿ ನಡೆಸಿದ ತನಿಖೆಯಲ್ಲಿ ಪ್ರೊ.ತಿಪ್ಪೆಸ್ವಾಮಿ ತಪ್ಪೆಸಗಿರುವುದು ದೃಡಪಟ್ಟಿತು. ಈಗ ಪ್ರೊ.ತಿಪ್ಪೇಸ್ವಾಮಿ ಕಡ್ಡಾಯ ನಿವೃತ್ತಿ ಪಡೆದಿದ್ದಾರೆ. 

ಈ ಬೆಳವಣಿಗೆಗಳಾದ ಬಳಿಕ ವಿಶ್ವವಿದ್ಯಾಲಯ ಎಚ್ಚೆತ್ತುಕೊಂಡಿದೆ. ಲೈಂಗಿಕ ಕಿರುಕುಳ ನಿಯಂತ್ರಣ ಸಮಿತಿಯನ್ನು ಪುನರ್ ರಚಿಸಿದೆ. ಯುಜಿಸಿ ನಿಯಮಾವಳಿ ಪ್ರಕಾರ `ಡಾ.ಮುಷ್ತಿಯಾರಿ ಬೇಗಂ ಅಧ್ಯಕ್ಷತೆಯಲ್ಲಿ 15 ಸದಸ್ಯರನ್ನೊಳಗೊಂಡ ಲೈಂಗಿಕ ಕಿರುಕುಳ ನಿಯಂತ್ರಣ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯರ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿ ಪ್ರತಿನಿಧಿಗಳು, ಮಹಿಳಾ ಪ್ರತಿನಿಧಿ, ಸರ್ಕಾರೇತರ ಸಂಘಟನೆಯ ಪ್ರತಿನಿಧಿ, ಪ್ರಾಧ್ಯಾಪಕಿಯರು ಹಾಗೂ ಕಾನೂನು ತಜ್ಞರು ಇದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಯಾವುದೇ ದೂರು ಬಂದರೂ ಸಮಿತಿ ವಿಚಾರಣೆ ನಡೆಸಲಿದೆ. ವಿದ್ಯಾರ್ಥಿಗಳು ನೇರವಾಗಿ ಕುಲಪತಿಗೆ ಅಥವಾ ಕುಲಸಚಿವರಿಗೆ ದೂರು ಸಲ್ಲಿಸುವುದಕ್ಕೂ ಅವಕಾಶವಿದೆ~ ಎಂದು ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT