ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ವಿವಾದ: ವೊಡಾಫೋನ್‌ಗೆ ಗೆಲುವು

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

 ನವದೆಹಲಿ (ಪಿಟಿಐ): ದೂರಸಂಪರ್ಕ ಸಂಸ್ಥೆ ವೊಡಾಫೋನ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್, 2007ರಲ್ಲಿ ಹಚ್ ಎಸ್ಸಾರ್ ಸಂಸ್ಥೆ ಸ್ವಾಧೀನಪಡಿಸಿಕೊಂಡ ವಹಿವಾಟಿಗೆ ಸಂಬಂಧಿಸಿದಂತೆ  ರೂ.  11,000 ಕೋಟಿಗಳಷ್ಟು  ಆದಾಯ ತೆರಿಗೆ ಮತ್ತು ದಂಡ ಪಾವತಿಸಬೇಕಾದ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್,   ದೂರಗಾಮಿ ಪರಿಣಾಮ ಬೀರುವ ಐತಿಹಾಸಿಕ ತೀರ್ಪು ನೀಡಿದೆ.

ಸಾಗರೋತ್ತರ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಅಧಿಕಾರವು ದೇಶಿ ತೆರಿಗೆ ಪ್ರಾಧಿಕಾರಗಳಿಗೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠವು ಶುಕ್ರವಾರ ಇಲ್ಲಿ ಬಹುಮತದ ತೀರ್ಪು ನೀಡಿ, ಬಾಂಬೆ ಹೈಕೋರ್ಟ್‌ನ ಈ ಮೊದಲಿನ ತೀರ್ಪು ರದ್ದುಪಡಿಸಿದೆ. ಆದಾಯ ತೆರಿಗೆ ಇಲಾಖೆಯ ವಾದವನ್ನೂ ಸಾರಾಸಗಟಾಗಿ ತಳ್ಳಿ ಹಾಕಿದೆ.

ವಿದೇಶಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಉದ್ದಿಮೆ ಸಂಸ್ಥೆಗಳ ಮಧ್ಯೆ ನಡೆದ ಸ್ವಾಧೀನ ಪ್ರಕ್ರಿಯೆಯು, ದೇಶದ ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಂತರ ತೀರ್ಪಿನ ಅನ್ವಯ ವೊಡಾಫೋನ್ ಸಂಸ್ಥೆ ಠೇವಣಿ ಇರಿಸಿದ್ದ ್ಙ 2,500 ಕೋಟಿಗಳನ್ನು ಶೇ 4ರ ಬಡ್ಡಿ ದರದಲ್ಲಿ ಆದಾಯ ತೆರಿಗೆ ಇಲಾಖೆಯು ಎರಡು ತಿಂಗಳಲ್ಲಿ ಮರಳಿಸಬೇಕು. ್ಙ 8,500 ಕೋಟಿಗಳ ಬ್ಯಾಂಕ್ ಖಾತರಿ ಮೊತ್ತವನ್ನೂ 4 ವಾರಗಳಲ್ಲಿ ಮರಳಿಸಬೇಕು ಎಂದು  ಪೀಠವು  ಸುಪ್ರೀಂಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚಿಸಿದೆ.

2007ರ ಮೇ ತಿಂಗಳಿನಲ್ಲಿ ನಡೆದ ಸ್ವಾಧೀನ ಪ್ರಕ್ರಿಯೆಯಲ್ಲಿ, ಬ್ರಿಟನ್ ಮೂಲದ ವೊಡಾಫೋನ್,  ಹಚಿಸನ್ ಎಸ್ಸಾರ್ ಲಿಮಿಟೆಡ್‌ನ (ಎಚ್‌ಇಎಲ್) ಶೇ 67ರಷ್ಟು ಪಾಲನ್ನು  ಹಾಂಕಾಂಗ್ ಮೂಲದ ಹಚಿಸನ್ ಗ್ರೂಪ್‌ನಿಂದ ಖರೀದಿಸಿತ್ತು.ವೊಡಾಫೋನ್ ಸಂಸ್ಥೆಯು 1994ರಿಂದಲೇ ದೇಶದಲ್ಲಿ ಅಸ್ತಿತ್ವದಲ್ಲಿ ಇದೆ. ಇಲ್ಲಿಯವರೆಗೆ ್ಙ 20,242 ಕೋಟಿಗಳಷ್ಟು ಮೊತ್ತವನ್ನು  ನೇರ ಮತ್ತು ಪರೋಕ್ಷ ತೆರಿಗೆ ರೂಪದಲ್ಲಿ ಬೊಕ್ಕಸಕ್ಕೆ ಪಾವತಿಸಿದೆ. ಈ ಸ್ವಾಧೀನ ಪ್ರಕ್ರಿಯೆಯು ದಿನಬೆಳಗಾಗುವುದರೊಳಗೆ ನಡೆದಿಲ್ಲ ಎಂದು ನ್ಯಾ. ಕಪಾಡಿಯಾ ಹೇಳಿದ್ದಾರೆ.

ನ್ಯಾ. ಕಪಾಡಿಯಾ ಅವರಲ್ಲದೇ ನ್ಯಾ. ಕೆ. ಎಸ್. ರಾಧಾಕೃಷ್ಣನ್ ಮತ್ತು ನ್ಯಾ. ಸ್ವತಂತ್ರ ಕುಮಾರ್ ಅವರು ಪೀಠದ ಇತರ ಸದಸ್ಯರಾಗಿದ್ದರು. ನ್ಯಾ. ರಾಧಾಕೃಷ್ಣನ್ ಅವರು ಭಿನ್ನಮತದ ತೀರ್ಪು ನೀಡಿದ್ದಾರೆ.

ಸ್ವಾಧೀನ ಪ್ರಕ್ರಿಯೆಯು ಆದಾಯ ತೆರಿಗೆಗೆ ಒಳಪಡುವುದಿಲ್ಲ ಎಂದು ಕಾನೂನು ಸಮರದ ಉದ್ದಕ್ಕೂ ಪ್ರತಿಪಾದಿಸುತ್ತಲೇ ಬಂದಿದ್ದ, ವಿಶ್ವದ ಅತಿ ದೊಡ್ಡ ದೂರಸಂಪರ್ಕ ಸಂಸ್ಥೆ ವೊಡಾಫೋನ್, ಸುಪ್ರೀಂಕೋರ್ಟ್ ತೀರ್ಪಿಗೆ ತನ್ನ ಸಂತಸ ವ್ಯಕ್ತಪಡಿಸಿದೆ.

ಭಾರತದ ಮೊಬೈಲ್ ಬಳಕೆದಾರರಿಗೆ ನೆರವಾಗಲು ಗ್ರಾಮೀಣ ಪ್ರದೇಶ ಮತ್ತು `ತ್ರೀಜಿ~ ಸಂಪರ್ಕ ಜಾಲದಲ್ಲಿ ಗಮನಾರ್ಹ ಪ್ರಮಾಣದ ಬಂಡವಾಳ ಹೂಡಿಕೆ ಮಾಡುವುದನ್ನು ನಾವು ಮುಂದುವರೆಸುತ್ತೇವೆ ಎಂದು ವೊಡಾಫೋನ್ ಗ್ರೂಪ್‌ನ  ಮುಖ್ಯ ಕಾರ್ಯನಿರ್ವಾಹಕ  ವಿಟ್ಟೊರಿಯೊ ಕೊಲಾವೊ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಎರಡನೇ ಅತಿದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆ ವೊಡಾಫೋನ್‌ಗೆ ಕಾನೂನು ಸಮರದಲ್ಲಿ ದೊರೆತಿರುವ ಈ ಗೆಲುವು, ವಿದೇಶಿ ಬಂಡವಾಳ ಹೂಡಿಕೆ ಮೇಲೆ ಸಕಾರಾತ್ಮಕ  ಪ್ರಭಾವ ಬೀರುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದ ವರಮಾನದ ಮೇಲೆ ಈ ತೀರ್ಪು ಬೀರುವ ಪ್ರತಿಕೂಲ ಪರಿಣಾಮಗಳ ಹಿನ್ನೆಲೆಯಲ್ಲಿ, ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಇತರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ವಿವರವಾಗಿ ಚರ್ಚಿಸಿದರು.

ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಸರ್ಕಾರವು ಈಗಾಗಲೇ ಸಂಪನ್ಮೂಲಗಳ ತೀವ್ರ ಕೊರತೆ ಎದುರಿಸುತ್ತಿದ್ದು, ಈ ತೀರ್ಪಿನ ಫಲವಾಗಿ  ವರಮಾನಕ್ಕೆ ಇನ್ನಷ್ಟು ಖೋತಾ ಬೀಳಲಿದೆ.

ಉನ್ನತ ಸಮಿತಿ ರಚನೆ: ತೀರ್ಪಿನ ಅಧ್ಯಯನ ನಡೆಸಲು ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ)  ಹಿರಿಯ ಅಧಿಕಾರಿಗಳ ಸಮಿತಿ ರಚಿಸಿದೆ. 275 ಪುಟಗಳ ತೀರ್ಪನ್ನು ವಿವರವಾಗಿ ಅಧ್ಯಯನ ನಡೆಸಿ ಭವಿಷ್ಯದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಲಹೆ ನೀಡಲು 10 ಸದಸ್ಯರ ಸಮಿತಿ ರಚಿಸಲಾಗಿದೆ.

 `ಫಿಕ್ಕಿ~ ಸ್ವಾಗತ: ಈ ಐತಿಹಾಸಿಕ ನಿರ್ಧಾರವು, ಭಾರತದ ನ್ಯಾಯಾಂಗ ವ್ಯವಸ್ಥೆ  ಮತ್ತು ಅರ್ಥ ವ್ಯವಸ್ಥೆಯ ಸದೃಢ ಸಾಂಸ್ಥಿಕ ಅಡಿಪಾಯದ ಬಗ್ಗೆ ವಿದೇಶಿ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲಿದೆ. ಗಡಿಯಾಚೆಗಿನ ಸ್ವಾಧೀನ ಮತ್ತು ವಿಲೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಉದ್ದಿಮೆ ಸಂಸ್ಥೆಗಳ ಆತ್ಮವಿಶ್ವಾಸ ವೃದ್ಧಿಸಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಪ್ರತಿಕ್ರಿಯಿಸಿದೆ.

ಹೂಡಿಕೆಗೆ ಉತ್ತೇಜಕರ

ಸಾಗರೋತ್ತರ ವಹಿವಾಟಿನ ತೆರಿಗೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು, ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಲು ಉತ್ತೇಜನ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಕಾನೂನು ಸಮರದಲ್ಲಿ ಸಿಲುಕಿಕೊಂಡಿರುವ ಇದೇ ಬಗೆಯ ಪ್ರಕರಣಗಳಿಗೂ ಈ ತೀರ್ಪು ಮಾದರಿ ಆಗಲಿದೆ. ಬೊಕ್ಕಸಕ್ಕೆ ಬರಬೇಕಾದ ವರಮಾನವು ನಷ್ಟಕ್ಕೆ ಒಳಗಾದರೂ, ಭವಿಷ್ಯದಲ್ಲಿನ ವಿದೇಶಿ ಬಂಡವಾಳ ಹೂಡಿಕೆಗೆ ಇದು ಗಮನಾರ್ಹ ಪ್ರಮಾಣದಲ್ಲಿ ಉತ್ತೇಜನ ನೀಡಲಿದೆ.

ಇದೇ ಬಗೆಯ ವಹಿವಾಟಿನ ಸ್ವರೂಪ ಮತ್ತು ಸ್ವಾಧೀನ ಉದ್ದೇಶ ಹೊಂದಿರುವ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಮನೆ ಮಾಡಿದ್ದ ಅನುಮಾನಗಳನ್ನೆಲ್ಲ ಈ ತೀರ್ಪು  ದೂರ ಮಾಡಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಇಂತಹ ಕಾನೂನು ತೊಡಕುಗಳೆಲ್ಲ ಇನ್ನು ಮುಂದೆ ಬಗೆಹರಿಯಲಿವೆ. ಫಾಸ್ಟರ್ ಖರೀದಿಸಿದ ಎಬಿಮಿಲ್ಲರ್ಸ್, ಸನೊಫಿ ಅವೆಂಟಿಸ್ ಸ್ವಾಧೀನಪಡಿಸಿಕೊಂಡ ಶಾಂತಾ ಬಯೊಟೆಕ್, ಕ್ರಾಫ್ಟ್ ಫುಡ್ಸ್ ವಶಪಡಿಸಿಕೊಂಡಿರುವ ಕ್ಯಾಡ್‌ಬರಿ ಮತ್ತು ವೇದಾಂತದ ವಶವಾಗಿರುವ ಕೇರ್ನ್ ಇಂಡಿಯಾ - ಪ್ರಕರಣಗಳು ಇದೇ ಬಗೆಯ ಆದಾಯ ತೆರಿಗೆ ಪಾವತಿ ವಿವಾದಕ್ಕೆ ಗುರಿಯಾಗಿವೆ.

ಇನ್ನೂ ಜಾರಿಗೆ ಬರಬೇಕಾಗಿರುವ `ನೇರ ತೆರಿಗೆ ನೀತಿ ಸಂಹಿತೆ~ (ಡಿಟಿಸಿ) ಮಸೂದೆಯಲ್ಲಿ, ಸಾಗರೋತ್ತರ ವಹಿವಾಟುಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರಲು  ಕೇಂದ್ರ ಸರ್ಕಾರ ಉದ್ದೇಶಿಸಿದೆ.  ಹೀಗಾಗಿ ಕೋರ್ಟ್‌ನ ಈ ತೀರ್ಪು ಸೀಮಿತ ಪ್ರಸ್ತುತಿ ಹೊಂದಿರಲಿದೆ ಎಂದೂ ಪರಿಣತರು ವಿಶ್ಲೇಷಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT