ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಯಾತ್ಮಿಕ ಹೊಳಹು ಇರಲಿ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಿಂದಿನದ್ದು ಮುಗಿದುಹೋಯಿತು. ಮುಂದಿನದ್ದು ಇನ್ನೂ ಬರಬೇಕಿದೆ. ಈ ಕ್ಷಣವೊಂದೇ ಸತ್ಯ. ಈ ಕ್ಷಣವನ್ನು ಸಾರ್ಥಕಗೊಳಿಸಿಕೊಳ್ಳಿ. ಅತ್ಯಂತ ಆತ್ಮೀಯರು ಮನೆಗೆ ಭೇಟಿ ನೀಡಿದಾಗ ಹೇಗೆ ಕಾಲ ಕಳೆಯುತ್ತೀರೊ ಹಾಗೆ ಈ ಕ್ಷಣವನ್ನು ಅನುಭವಿಸಿ.

ವರ್ತಮಾನವೆಂಬ ಭರವಸೆಯ ಮೇಲೆ ಗಮನ ಕೇಂದ್ರೀಕರಿಸಿ. ಯಾವುದೇ ಸಂಗತಿ, ವ್ಯಕ್ತಿ, ವಿಚಾರ ಅಥವಾ ಸನ್ನಿವೇಶ ಅಪರಿಪೂರ್ಣ ಎನಿಸಬಹುದು. ಆದರೆ, ಅದನ್ನು ಭವಿಷ್ಯದಲ್ಲಿ ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಬಹುದು. ನಿಮ್ಮ ಪತಿ ಹಿಂದೆಂದೂ ನಿಮಗೆ ಭಾವನಾತ್ಮಕ ಸಾಂಗತ್ಯ ನೀಡದೇ ಇರಬಹುದು. ಮುಂದೆಯೂ ನೀಡದೇ ಇರಬಹುದು.

ನಿಮ್ಮ ಹೆಂಡತಿ ಈವರೆಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳದೇ ಇರಬಹುದು. ಮುಂದೆಯೂ ಅರ್ಥ ಮಾಡಿಕೊಳ್ಳದೇ ಹೋಗಬಹುದು. ಆದರೆ, ಈ ಕ್ಷಣದಲ್ಲಿ ಆತ ಇದ್ದಾರೆ. ಆಕೆ ಇದ್ದಾಳೆ. ಇದು ಅಮೂಲ್ಯ. ನೀವು ಹಿಂದೆ ಹೋಗಿ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ.
 
ಆದರೆ, ಇಲ್ಲಿಂದ, ಈ ಕ್ಷಣದಿಂದ ಹೊಸದಾದ, ಸುಂದರ ಸಂಬಂಧ ರೂಪಿಸಿಕೊಳ್ಳಬಹುದು. ನೀವು ಒಮ್ಮೆಲೇ ಭವಿಷ್ಯಕ್ಕೆ ಹಾರಲು ಸಾಧ್ಯವಿಲ್ಲ. ಆದರೆ, ಮತ್ತಷ್ಟು ಪ್ರಗತಿಪರವಾದ, ಉನ್ನತ ಮನೋಭಾವದಿಂದ ಸುಂದರ ನಾಳೆಯನ್ನು ಈಗಿನಿಂದಲೇ ಸೃಷ್ಟಿಸಿಕೊಳ್ಳಬಹುದು.

ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಬೇಷರತ್ತಾಗಿ ಸ್ವೀಕರಿಸಿ. ಪರಸ್ಪರರ ಹಸ್ತಕ್ಷೇಪ, ಆಕ್ಷೇಪವಿಲ್ಲದೇ ನಿಮ್ಮದೇ ಆದ ಜೀವನದ ಕಥೆಯಲ್ಲಿ ನೀವು ಬದುಕಬೇಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಾನೊಬ್ಬನೇ/ಳೆ ಸರಿ, ನೀನು ತಪ್ಪು ಎಂಬ ಮನೋಭಾವ ಬಿಡಿ. ಇಬ್ಬರೂ ಸರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನೀವಿಬ್ಬರೂ ಸಮಾನಾಂತರವಾಗಿ ನಡೆಯುತ್ತಲೇ ಒಬ್ಬರಿಗೊಬ್ಬರು ಪೂರಕವಾಗಿ, ಆಸರೆಯಾಗಿ ಇರಬಹುದು.

ನಿಮ್ಮ ಜೀವನ ಸಂಗಾತಿಯ ಕುರಿತು ಮನಸ್ಸಿನಲ್ಲಿ ಕಿರಿಕಿರಿಯ ಭಾವ ಮೂಡಿದಲ್ಲಿ ಈ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಳ್ಳಿ. ನಾನು ಪೂರ್ವಗ್ರಹದಿಂದ ಮುಕ್ತನಾಗ್ದ್ದಿದೇನೆಯೇ? ಆತ ಆತನಾಗಿರಲು, ಆಕೆ, ಆಕೆಯಾಗಿರಲು ಅವಕಾಶ ನೀಡಿದ್ದೇನೆಯೇ? ಆತ/ಆಕೆ ಹೇಳುವುದು ಸರಿಯಾಗಿದೆ ಎಂದು ಹೇಳಿದ್ದೇನೆ.ನಾನು ಎಲ್ಲವನ್ನೂ ಸ್ವೀಕರಿಸುತ್ತಿರುವೆನೇ? ಎಂದು ಕೇಳಿಕೊಳ್ಳಿ.

ಈ ಪ್ರಕ್ರಿಯೆಯಲ್ಲಿ ನಿಮ್ಮ ಕಿರಿಕಿರಿ ಮಾಯವಾದಲ್ಲಿ ನೀವು ಹೊಸ ಬಿಡುಗಡೆಯನ್ನು ಅನುಭವಿಸುತ್ತೀರಿ. ನಿಮ್ಮಳಗೆ ಬೆರಗು ಮೂಡುತ್ತದೆ. ಈ ಭಾವ ತುಂಬಾ ಹಿತವಾದದ್ದು. ಬದುಕಿನ ಮಾಂತ್ರಿಕತೆಗೆ ನಿಮ್ಮನ್ನು ನೀವು ಒಡ್ಡಿಕೊಳ್ಳುತ್ತೀರಿ.

ಮತ್ತೊಬ್ಬರೊಂದಿಗೆ ಸೌಹಾರ್ದಯುತವಾಗಿ ಇರಬೇಕಾದರೆ ನಿಮ್ಮಳಗೆ ಶಾಂತಿ ನೆಲೆ ನಿಂತಿರಬೇಕು. ಆಗ ಬಿಡುಗಡೆಯ ಭಾವವನ್ನು, ಸುಭದ್ರ, ಸುರಕ್ಷತೆಯ ಭಾವವನ್ನು ಅನುಭವಿಸುತ್ತೀರಿ. ನೀವು ಆಗ ಜಗತ್ತಿನ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯನ್ನು ನಂಬಿರುತ್ತೀರಿ. ಈ ವ್ಯಕ್ತಿ ಎಂದೆಂದಿಗೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ. ಅದು ಮತ್ತಾರೋ ಅಲ್ಲ ನೀವೇ ಆಗಿರುತ್ತೀರಿ.

ನಿಮ್ಮ ಸಂಗಾತಿಯ ವರ್ತನೆಯತ್ತ ನೀವು ತೋರುವ ಉಗ್ರ ಪ್ರತಿಕ್ರಿಯೆ ನಿಮ್ಮ ಶಾಂತಿಯನ್ನು ಹಾಳು ಮಾಡುತ್ತದೆ. ಹತಾಶೆಯಿಂದ ಕುದಿಯುವ ಬದಲು ಕೂಡಲೇ ಆ ರೀತಿ ಪ್ರತಿಕ್ರಿಯಿಸದಂತೆ, ಪೂರ್ವಗ್ರಹಕ್ಕೆ ಒಳಗಾಗದಂತೆ, ಸಿಟ್ಟಾಗದಂತೆ ನಿಮ್ಮ ಮನಸ್ಸಿಗೆ ತರಬೇತಿ ನೀಡಿ. ಅದಕ್ಕೆ ಸ್ತಬ್ಧತೆಯನ್ನು ಕಲಿಸಿ.

ನೀವಿಬ್ಬರೂ ಸಂಬಂಧಕ್ಕೆ ಆಧ್ಯಾತ್ಮಿಕ ಸ್ಪರ್ಶ ನೀಡಿದಾಗ ನಿಮ್ಮಿಬ್ಬರ ವರ್ತನೆಯಲ್ಲಿ, ನಡೆ, ನುಡಿಯಲ್ಲಿ ಯಾವುದೇ ಹುಳುಕು ಇರುವುದಿಲ್ಲ. ಮತ್ತೊಬ್ಬರನ್ನು ಘಾಸಿಗೊಳಿಸುವ, ಟೀಕಿಸುವ, ಮತ್ತೊಬ್ಬರ ಮೇಲೆ ಸವಾರಿ ನಡೆಸುವ ಮನೋಭಾವ ಕರಗಿಹೋಗುತ್ತದೆ. ಬೇಡಿಕೆಗಳು ಇಲ್ಲವಾಗುತ್ತವೆ. ಯಾವುದೇ ಪ್ರತಿರೋಧವಿಲ್ಲದೆ ಮತ್ತೊಬ್ಬರಿಗೆ ಇಷ್ಟವಾಗುವ ವಿಚಾರವನ್ನು ಗೌರವಿಸುವ ಸಹಜ ವರ್ತನೆ ನಿಮ್ಮದಾಗುತ್ತದೆ.

ಮತ್ತೊಬ್ಬರ ಇಷ್ಟಾನಿಷ್ಟ ಗೌರವಿಸಲು, ಅದಕ್ಕೆ ಅವಕಾಶ ಮಾಡಿಕೊಡಲು ನೀವು ಸದಾ ಸಿದ್ಧರಾಗಿರುತ್ತೀರಿ. ನಿರೀಕ್ಷೆಯ ಭಾರ ನಿಮ್ಮ ಸಂಬಂಧದಲ್ಲಿ ಇರುವುದಿಲ್ಲ. ಇನ್ನೊಬ್ಬರಿಗೆ ಮಾನಸಿಕ, ದೈಹಿಕ ಒತ್ತಡವಾಗದಂತೆ ನೀವು ನಡೆದುಕೊಳ್ಳುತ್ತೀರಿ. ಪ್ರತಿಯೊಂದೂ ಅದ್ಭುತವಾಗಿ, ದೈವಿಕವಾಗಿ ಕಾಣತೊಡಗುತ್ತದೆ. ನೀವು ಧ್ಯಾನ ಮಾಡುವುದನ್ನೇ ನಿಲ್ಲಿಸಬಹುದು. ಆದರೆ, ದಯವಿಟ್ಟು ಧ್ಯಾನ ಮಾಡಿ.

ಶಾಂತಿ, ನೆಮ್ಮದಿಯಿಂದ ಬದುಕಿದಾಗ ಸಂಗಾತಿಗಳ ಪ್ರತಿರೋಧ ವ್ಯವಸ್ಥೆ ಬಲಗೊಳ್ಳುತ್ತದೆ. ವರ್ಷಗಳಿಂದ ಉಳಿದುಕೊಂಡ ಪಶ್ಚಾತ್ತಾಪ ಕ್ಯಾನ್ಸರ್‌ಗೆ, ಕಟುವಾದ ಟೀಕೆ ಮತ್ತು ತಮ್ಮ ಕೈಬಿಟ್ಟಿದ್ದಾರೆ ಎಂಬ ಹತಾಶೆ ಆಥ್ರೈಟಿಸ್‌ಗೆ, ಅಪರಾಧಿ ಭಾವ ಮೈಗ್ರೇನ್‌ಗೆ, ಭಯ ಖಿನ್ನತೆಗೆ, ಸಿಟ್ಟು ರಕ್ತದೊತ್ತಡ ಮತ್ತು ಹೃದಯಾಘಾತಕ್ಕೆ, ಕಹಿಯಾದ ಭಾವ ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ನೀವು ಓದಿರಬಹುದು.
 
ಆದರೆ, ನೀವು ಇಂತಹ ಅದ್ಭುತ ಸಂಬಂಧದಲ್ಲಿ ಇದ್ದಾಗ ನಕಾರಾತ್ಮಕ ಭಾವನೆಗಳೆಲ್ಲ ಮಂಜಿನಂತೆ ಮಾಯವಾಗುತ್ತವೆ. ಮನಸ್ಸು ಶಾಂತಿಯಿಂದ ಕೂಡಿರುತ್ತದೆ. ದೇಹದ ಪ್ರತಿರೋಧ ವ್ಯವಸ್ಥೆ ಚುರುಕಾಗಿರುತ್ತದೆ.

ನಿಮ್ಮ ಸಂಬಂಧ ಸುಮಧುರ ಪರಿಮಳದಿಂದ ಕೂಡಿದ ಹೂಗಳ ಉದ್ಯಾನ ಅಂದುಕೊಳ್ಳಿ. ನೀವು ಸರಿಯಾಗಿ ವರ್ತಿಸದಿದ್ದಲ್ಲಿ, ಪ್ರೀತಿಯನ್ನು ಕಡೆಗಾಣಿಸಿದಲ್ಲಿ ನೀವು ಹಲವು ಹೂಗಳನ್ನು ಹೊಸಕಿ ಹಾಕುತ್ತೀರಿ. ದಾಂಪತ್ಯವೆಂಬ ಉದ್ಯಾನದಲ್ಲಿ ಕಳೆಯ ಗಿಡ ಬೆಳೆಯಲು ಅವಕಾಶ ನೀಡುತ್ತೀರಿ. ಆದರೆ, ನೀವು ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸಿದಾಗ, ಗೌರವಿಸಿದಾಗ, ಪ್ರೋತ್ಸಾಹಿಸಿದಾಗ ಆ ಉದ್ಯಾನ ಸುಂದರ ಹೂಗಳಿಂದ ಕಂಗೊಳಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT