ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಅಡ್ಡಾ!

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

ಆನೆಗಳು ಅಡ್ಡಾಡಲು ಹೇಳಿಮಾಡಿಸಿದಂಥ ಕಾಡು ಇದು. ಅದಕ್ಕೆ ಈ ಕಾಡನ್ನು ಆನೆಗಳ ಸಂರಕ್ಷಣಾ ವಲಯ ಎಂದು ಗುರುತಿಸಿ ರಕ್ಷಿಸಲಾಗುತ್ತಿದೆ. ಹೆಸರು ಚಂಡಿಕಾ ಆನೆಗಳ ವನ್ಯಧಾಮ.

ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಿಂದ 20 ಕಿಮೀ ದೂರದಲ್ಲಿ ಇರುವ ಈ ಕಾಡು ಆನೆಗಳ ಬೀಡು. ಆನೆಗಳು ಸಂಘ ಜೀವಿಗಳು. ಹಾಗೆಯೇ ಬೃಹತ್ ಗಾತ್ರದವು. ಅವು ಒಟ್ಟೊಟ್ಟಿಗೆ ಸುತ್ತಾಡಲು, ಬಯಸಿದಾಗ ಆಹಾರವನ್ನು ತಿನ್ನಲು ಸಾಕಷ್ಟು ವಿಸ್ತಾರವಾದ ಕಾಡೇ ಬೇಕು. ಅಂಥ ಒಂದು ಕಾಡನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ ಒಡಿಶಾ ಸರ್ಕಾರ.

ಪ್ರವಾಸಿಗರು ಈ ಕಾಡಿನಲ್ಲಿ ನಿರ್ಭೀತಿಯಿಂದ ಸುತ್ತಾಡುವ ಗಜಗಳನ್ನು ನೋಡಬಹುದು. ಅವುಗಳ ನೀರಾಟ, ಮರಳ ಎರಚಾಟಗಳನ್ನು ಹತ್ತಿರದಿಂದ ಗಮನಿಸಬಹುದು. ಆದರೆ ಅದೆಲ್ಲಾ ಅರಣ್ಯ ಇಲಾಖೆಯ ಕಣ್ಣೆಚ್ಚರದಲ್ಲಿ ಮಾತ್ರ.
 
ಈ ಕಾಡಿಗೆ ಭುವನೇಶ್ವರದಿಂದ ಕೇವಲ 20 ನಿಮಿಷಗಳ ಪ್ರಯಾಣ. ಈ ಸಾಮೀಪ್ಯದ ಕಾರಣದಿಂದಲೇ ಚಂಡಿಕಾ ವನ್ಯಧಾಮವನ್ನು ಭುವನೇಶ್ವರದ ಹೊರವಲಯ ಎನ್ನಲಾಗುತ್ತದೆ.

193 ಚದರ ಕಿಮೀ ವ್ಯಾಪ್ತಿಯಲ್ಲಿ ಇರುವ ಈ ಕಾಡು ಖುರ್ಧಾ ಕಣಿವೆಯ ಮೇಲ್ಭಾಗದಲ್ಲಿದೆ. 1982ರಲ್ಲಿ ಈ ಕಾಡನ್ನು ಸಂರಕ್ಷಣಾವಲಯ ಎಂದು ಘೋಷಿಸಲಾಯಿತು. ಈ ಕಾಡಿನಲ್ಲಿ ಹಲವು ಜಾತಿಯ ಮರಗಳಿವೆ. ಅದರಲ್ಲಿಯೂ ತೇಗ, ಬಿದಿರು, ಸಾಲ್ ಮರಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಔಷಧೀಯ ಸಸ್ಯಗಳಷ್ಟೇ ಅಲ್ಲದೇ ಆರ್ಕಿಡ್ ಜಾತಿಯ ಅಪರೂಪದ ಪ್ರಭೇದಗಳಿವೆ.

ಆನೆಗಳೊಂದಿಗೆ 30 ಸಸ್ತನಿಗಳು, 27 ಸರೀಸೃಪಗಳು, 120 ಪಕ್ಷಿ ಪ್ರಭೇದಗಳು ಇಲ್ಲಿ ನೆಲೆ ಕಂಡುಕೊಂಡಿವೆ. ಚಿರತೆ, ಕರಡಿ, ಜಿಂಕೆ, ಲಂಗೂರ, ಕೋತಿಗಳು, ಕಿರುಬ, ನರಿ ಕೂಡ ವಾಸಿಸುತ್ತಿವೆ. ಕಾಡ ನಡುವೆ ಸಿಗುವ ತೊರೆಗಳಲ್ಲಿ ಹಾವುಗಳು, ಮೊಸಳೆಗಳೂ ಸ್ಥಾನ ಪಡೆದುಕೊಂಡಿವೆ.

ಜುಲೈ ತಿಂಗಳಲ್ಲಿ ಇಲ್ಲಿಗೆ ನೀರಕ್ಕಿಗಳು ವಲಸೆ ಬರುತ್ತವೆ. ಪಕ್ಷಿ ಪ್ರಿಯರಿಗೂ ಇದು ಉತ್ತಮ ಜಾಗ. ಈ ಕಾಡಿನಲ್ಲಿ ಕೊಚಿಲಬೆರನಾ, ಪಿಟಗೊಡಿಯಾ ಮತ್ತು ಚರಿಚ್ಚಕ್ ಎಂಬ ಪಾಯಿಂಟ್‌ಗಳನ್ನು ಗುರುತಿಸಿ ಅಲ್ಲಿಂದ ವನ್ಯಧಾಮವನ್ನು ಸಂಪೂರ್ಣವಾಗಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT