ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೆ ಎರಡು ಸೊನ್ನೆ ಸಾಕು

ಗುರಿ ತೋರುವ ಗುರುವಿಗೆ ನಮನ...
Last Updated 5 ಸೆಪ್ಟೆಂಬರ್ 2013, 8:07 IST
ಅಕ್ಷರ ಗಾತ್ರ

ಕೋಲಾರ: ಆನೆಯ ಚಿತ್ರ ಬರೆಯಲು ಮುಖ್ಯವಾಗಿ ಏನು ಬೇಕು? ರೇಖೆ ಬೇಕು ಎಂದ ಒಬ್ಬ ಬಾಲಕ. ಸೊನ್ನೆ ಬೇಕು ಎಂದ ಮತ್ತೊಬ್ಬ ಬಾಲಕ. ಅದನ್ನು ಅಲ್ಲಗೆಳೆಯದೆಯೇ ಚಿತ್ರಕಲಾ ಶಿಕ್ಷಕ ಕೆ.ವಿ.ಕಾಳಿದಾಸ ಆನೆಗೆ ಎರಡು ಸೊನ್ನೆ ಸಾಕು ಎಂದು ಸೀಮೆಸುಣ್ಣವನ್ನು ಕೈಗೆತ್ತಿಕೊಂಡರು. ಒಂದು ದೊಡ್ಡದು, ಮತ್ತೊಂದು ಚಿಕ್ಕದು ಎಂದು ಕಪ್ಪು ಹಲಗೆಯ ಮೇಲೆ ದೊಡ್ಡ ಸೊನ್ನೆ ಬರೆದರು. ಅದರೊಳಗೆ ಸೇರಿಸಿಯೇ ಮತ್ತೊಂದು ಚಿಕ್ಕ ಸೊನ್ನೆ ಬರೆದರು. ಚಿಕ್ಕ ಸೊನ್ನೆ ಮುಂಭಾಗದಲ್ಲಿ ಒಂದು ಗೆರೆ, ದೊಡ್ಡ  ಸೊನ್ನೆಯ ಹಿಂಭಾಗದಲ್ಲಿ ಒಂದು ಗೆರೆ ಬರೆದರು...ನೋಡ ನೋಡುತ್ತಲೇ ಆನೆಯೊಂದು ಮೂಡಿತು. ಮಕ್ಕಳು ವಾಹ್! ಎಂದು ಉದ್ಗಾರ ತೆಗೆದರು.

ಇಂಥ ಅಚ್ಚರಿಯ ಕಲಿಕೆ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಎರಡು ವರ್ಷದಿಂದ ಸಾಧ್ಯವಾಗಿದೆ. ಚಿತ್ರಕಲೆಯನ್ನು ಬಹು ನೆಲೆಯಲ್ಲಿ ಗ್ರಹಿಸುವುದು ಮತ್ತು ವ್ಯಾಖ್ಯಾನಿಸುವುದು ಕಾಳಿದಾಸರ ಬೋಧನಾ ವೈಖರಿಯ ವಿಶೇಷ.

ತಾಲ್ಲೂಕಿನ ಕೋಟಿಗಾನಹಳ್ಳಿ ಮೂಲದ, 44 ವರ್ಷ ವಯಸ್ಸಿನ ಕಾಳಿದಾಸ ಪ್ರೌಢಶಾಲಾ ವಿಭಾಗದ ಗ್ರಂಥಾಲಯದ ಕಿರಿದಾದ ಕೊಠಡಿಯಲ್ಲೇ ಚಿತ್ರಕಲೆ ತರಗತಿಗಳನ್ನು ನಡೆಸುತ್ತಿದ್ದಾರೆ. ದಿನಕ್ಕೆ ಕನಿಷ್ಠ ಮೂರು ಗಂಟೆ ಕಾಲ ಚಿತ್ರಕಲೆಯ ಪಾಠ ಮಾಡುವ ಕಾಳಿದಾಸ ತಮ್ಮ ವಿಶಿಷ್ಟ ಬೋಧನಾ ವೈಖರಿಯಿಂದ ಚಿತ್ರಕಲೆ ಕಲಿಕೆಯನ್ನು ಮಕ್ಕಳಿಗೆ ಆಪ್ತವಾಗಿಸುತ್ತಿದ್ದಾರೆ.

ಚಿತ್ರಕಲೆಯನ್ನು ಕಲಿಕೆಯ ಮಾಧ್ಯಮವಾಗಿ ಅವರು ಗಣಿತ ಮತ್ತು ವಿಜ್ಞಾನ ವಿಷಯಗಳನ್ನೂ ಅವರು ಮಕ್ಕಳಿಗೆ ಹೇಳಿಕೊಡುವುದು ವಿಶೇಷ. ಗಣಿತ ಶಿಕ್ಷಕರು ಹೇಳಿಕೊಡುವ ಜಾಮಿತಿಯ ಆಕೃತಿಗಳು (ಜಮೆಟ್ರಿಕಲ್ ಶೇಪ್ಸ್) ಹಾಗೂ ವಿಜ್ಞಾನ ಶಿಕ್ಷಕರು ಹೇಳಿಕೊಡುವ ವಿಜ್ಞಾನ ಸಂಬಂಧಿ ಚಿತ್ರಗಳನ್ನು ಅತ್ಯಂತ ಸುಲಭರೀತಿಯಲ್ಲಿ ಗ್ರಹಿಸಿ, ಸೃಜನಶೀಲವಾಗಿ ಮತ್ತೆ ರಚಿಸುವ ವಿಧಾನಗಳ ಬಗ್ಗೆಯೂ ಕಾಳಿದಾಸ ಪ್ರಾಯೋಗಿಕ ಪಾಠ ಮಾಡುತ್ತಾರೆ.

ಆ ಮೂಲಕವೇ ಚಿತ್ರಕಲೆಯ ಬಗ್ಗೆಯೂ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಾರೆ. ಹೀಗಾಗಿಯೇ `ಡ್ರಾಯಿಂಗ್ ಕ್ಲಾಸ್' ಅನ್ನು ಯಾವ ವಿದ್ಯಾರ್ಥಿಯೂ ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ವಿಜ್ಞಾನದ ಮಾದರಿಗಳನ್ನೂ ಮಕ್ಕಳಿಗೆ ತಯಾರಿಸಿಕೊಟ್ಟಿರುವುದು ಅವರೊಳಗಿನ ಕಲಾವಿದನ ಬದ್ಧತೆಯ ಕಡೆಗೂ ಗಮನ ಸೆಳೆಯುತ್ತದೆ.

ಚಿತ್ರಕಲೆಗೆ ದುಬಾರಿಯಾದ ಬಣ್ಣ, ಪೇಪರ್‌ಗಳೇನೂ ಬೇಕಾಗಿಲ್ಲ. ಸಾಧಾರಣ ಪೆನ್ಸಿಲ್ ಅಥವಾ ಪೆನ್ ಇದ್ದರಷ್ಟೇ ಸಾಕು. ಅದ್ಭುತವಾದ ಚಿತ್ರಗಳನ್ನು ಬರೆಯಬಹುದು ಎಂದು ಪ್ರತಿಪಾದಿಸುವ ಕಾಳಿದಾಸ, ಸರಳ ರೇಖಾ ಚಿತ್ರಕಲೆಯ ಸಾಮರ್ಥ್ಯವನ್ನು ಮಕ್ಕಳಲ್ಲಿ ತುಂಬುತ್ತಿದ್ದಾರೆ.

ಹೀಗಾಗಿಯೇ ಮಕ್ಕಳು ಬಿಡುವಿದ್ದಾಗಲೆಲ್ಲಾ ಅವರ ಕೊಠಡಿಗೆ ಬಂದು ಚಿತ್ರಕಲೆಯ ಪಾಠಕ್ಕಾಗಿ ಕಾಯುತ್ತಾರೆ. ಗ್ರಂಥಾಲಯದಲ್ಲೇ ಚಿತ್ರಕಲೆಯ ಪಾಠವನ್ನೂ ಮಾಡುವ ಅವರ ಗ್ರಂಥಪಾಲಕರ ಜವಾಬ್ದಾರಿಯನ್ನೂ ಹೊತ್ತಿರುವುದರಿಂದ ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಮೂಡಿಸುತ್ತಿದ್ದಾರೆ.

ಮಕ್ಕಳಿಗೆ ಚಿತ್ರಕಲೆಯ ಪ್ರಯೋಗಪಾಠಗಳನ್ನು ಹೇಳಿಕೊಡುವ ಸಲುವಾಗಿಯೇ ಈ ಶಿಕ್ಷಕ, ಶಾಲೆಯ ಗೋಡೆಗಳ ಮೇಲೆ ವರ್ಲಿ ಚಿತ್ರಗಳನ್ನು ರಚಿಸಿ ಶಾಲಾ ಆವರಣದ ಅಂದವನ್ನು ಹೆಚ್ಚಿಸಿರುವುದು ಮತ್ತೊಂದು ವಿಶೇಷ. ರಾಜ್ಯ, ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುವ ಕಾಳಿದಾಸ ಚಿತ್ರಕಲೆಯನ್ನೇ ಉಸಿರಾಡುತ್ತಿರುವ ಅಪರೂಪದ ಶಿಕ್ಷಕ. ಚಿತ್ರಕಲೆಯ ಜೊತೆಗೆ ಸಾಹಿತ್ಯದ ಅಭಿರುಚಿಯನ್ನೂ ಹೊಂದಿರುವ ಅವರು ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮಾನ ಮನಸ್ಕ ಗೆಳೆಯರೊಡನೆ ಸೇರಿ ಸಮಚಿಂತಕರ ಬಳಗವನ್ನೂ ಹುಟ್ಟುಹಾಕಿದ್ದಾರೆ.

ಚಿತ್ರಕಲೆಯ ಕಲಿಕೆಯು ವಿದ್ಯಾರ್ಥಿಗಳ ಏಕಾಗ್ರತೆಗೆ ದಾರಿಯಾಗುತ್ತದೆ. ಹಸ್ತಾಕ್ಷರವನ್ನು ಅಂದವಾಗಿ ಬರೆಯಲು ಸಾಧ್ಯವಾಗುತ್ತದೆ. ಸೌಂದರ್ಯ ಪ್ರಜ್ಞೆ, ಸೂಕ್ಷ್ಮ ಮನಃಸ್ಥಿತಿಯೂ ಮೂಡುತ್ತದೆ. ಇಂಥ ಹಲವು ನೆಲೆಗಳಲ್ಲಿ ಚಿತ್ರಕಲೆಯನ್ನು ಗ್ರಹಿಸಬೇಕಾಗಿದೆ. ಹೀಗಾಗಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ಸರ್ಕಾರ ನೇಮಿಸುವುದು ಅಗತ್ಯ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT