ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗತಿಯಲ್ಲಿ ಸಾಗುತ್ತಿರುವ ಕಸ್ತೂರಬಾ ರಸ್ತೆ ಕಾಮಗಾರಿ

Last Updated 8 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಂದಗತಿಯಲ್ಲಿ ವಾಹನ ಸಂಚಾರ. ಸಾಲುಗಟ್ಟಿ ನಿಲ್ಲುವ ನೂರಾರು ವಾಹನಗಳು. ಹತ್ತಾರು ನಿಮಿಷ ರಸ್ತೆಯಲ್ಲೇ ನಿಲ್ಲಬೇಕಾದ ಸ್ಥಿತಿ. ಪಾದಚಾರಿಗಳಿಗೆ ನಡೆಯಲು ಆಸ್ಪದವೇ ಇಲ್ಲ. ಬಾಗಿದ ಕಬ್ಬಿಣದ ಸರಳುಗಳ ನಡುವೆ ಸಂಚಾರ. ಸ್ವಲ್ಪ ಆಯ ತಪ್ಪಿದರೂ ಅಪಾಯ...

ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಕಸ್ತೂರಬಾ ರಸ್ತೆಯಲ್ಲಿ ಹಲವು ತಿಂಗಳಿಂದ ಇದೇ ಸ್ಥಿತಿ ಇದೆ. ಇದೆಲ್ಲಾ ಬಿಬಿಎಂಪಿ ಕೈಗೊಂಡಿರುವ ರಸ್ತೆ ವಿಸ್ತರಣೆ ಯೋಜನೆಯ ಪರಿಣಾಮ ಎಂದರೆ ತಪ್ಪಾಗಲಾರದು.

ಶಿವಾಜಿನಗರ, ಚಿನ್ನಸ್ವಾಮಿ ಕ್ರೀಡಾಂಗಣ, ಮಲ್ಯ ಆಸ್ಪತ್ರೆ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಕಸ್ತೂರ ಬಾ ರಸ್ತೆಯು ಸದಾ ಸಂಚಾರ ದಟ್ಟಣೆಯ ಪ್ರದೇಶ, ಇತ್ತ ಎಂ.ಜಿ.ರಸ್ತೆ, ಕಬ್ಬನ್ ಉದ್ಯಾನಕ್ಕೂ ಸಮೀಪವಿರುವುದರಿಂದ ಸದಾ ವಾಹನ ಮತ್ತು ಪಾದಾಚಾರಿಗಳದ್ದೇ ಓಡಾಟ. ಇನ್ನೂ ಶನಿವಾರ, ಭಾನುವಾರ ಶಾಪಿಂಗ್‌ಗೆಂದು ಜಮಾಯಿಸುವ ನಗರದ ಮಂದಿ ಈ ರಸ್ತೆಯ ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ.   

ಬಿಬಿಎಂಪಿಯು ಸಂಚಾರ ದಟ್ಟಣೆಯ ತೀವ್ರತೆಯನ್ನು ಕಡಿಮೆಗೊಳಿಸುವ ಸಲುವಾಗಿ 1 ಕೋಟಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ 736 ಮೀಟರ್ ಉದ್ದವಿರುವ ಕಸ್ತೂರಬಾ ರಸ್ತೆಯ ವಿಸ್ತರಣೆಗಾಗಿ ಒಂದೂವರೆ ವರ್ಷದ ಹಿಂದೆ ಚಾಲನೆ ನೀಡಿದ್ದು, ಇನ್ನೂ ಕಾಮಗಾರಿ ನಡೆಯುತ್ತಲೇ ಇದೆ!

  ರಸ್ತೆಯ ಬಲ ಭಾಗದ ಅಂಚಿನಲ್ಲಿರುವ ವೆಂಕಟಪ್ಪ ಆರ್ಟ್ ಕಲಾ ಗ್ಯಾಲರಿ ಸೇರಿದಂತೆ ಪ್ರೆಸ್ಟೀಜ್ ಒಬೆಲಿಸ್ಕ್ ಕಟ್ಟಡದ 12 ಅಡಿ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಈ  ಕಟ್ಟಡದ ಹೊರ ಗೋಡೆಯನ್ನು ಸಂಪೂರ್ಣ ಕೆಡವಲಾಗಿದ್ದು, ಈ ಭಾಗದಲ್ಲಿ ಪಾದಚಾರಿಗಳು ರಸ್ತೆಯಲ್ಲಿ ಓಡಾಡಲು ಪರದಾಡುವಂತಾಗಿದೆ.

ಕಲ್ಲು ಮರಳಿನ ಹಾದಿ: ಈ ಭಾಗದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದುರಿಂದ ಪ್ರತಿ ದಿನ 20 ಸಾವಿರಕ್ಕಿಂತಲೂ ಹೆಚ್ಚು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದರೂ ಕಳೆದ ಡಿಸೆಂಬರ್‌ನಲ್ಲಿ ಮುಗಿಯ ಬೇಕಿದ್ದ ಕಾಮಗಾರಿ ಕುಂಟುತ್ತಾ ಸಾಗಿದೆ. ಪಾದಾಚಾರಿ ಮಾರ್ಗದಲ್ಲಿ ಜಲ್ಲಿ ಕಲ್ಲು ಮರಳು ರಾಶಿ ಹಾಕಿರುವುದರಿಂದ ಪಾದಾಚಾರಿಗಳು ಮಾರ್ಗವನ್ನು ಬಿಟ್ಟು ರಸ್ತೆಯಲ್ಲಿ ಚಲಿಸುವಂತಾಗಿದೆ. ಇನ್ನೂ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಲು ಸಾಧ್ಯವೇ ಇರದಂತೆ ರಸ್ತೆಯಲ್ಲೇ  ಜಲ್ಲಿಕಲ್ಲುಗಳನ್ನು ಸುರಿಯಲಾಗಿದೆ.

ಅಲ್ಲಲ್ಲಿ ಹೊಂಡ ಇರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಬೈಕ್ ಓಡಿಸುವುದು ದುಸ್ಸಾಹಸವೆನಿಸಿದ್ದು, ಮಳೆಯ ನೀರು, ಕಾಮಗಾರಿ ತ್ಯಾಜ್ಯ ಸೇರಿ ಒಟ್ಟಾರೆ ರಸ್ತೆಯು ಕೆಸರಿನ ರಾಡಿಯಾಗಿದೆ. ಸರ್ಕಾರಿ ಸ್ವಾಮ್ಯದ ವೆಂಕಟಪ್ಪ ಆರ್ಟ್ ಕಲಾಗ್ಯಾಲರಿಯ ಆವರಣವನ್ನು ಸಂಪೂರ್ಣ ಒಡೆದು ಹಾಕಲಾಗಿದ್ದು, ಈ ಕಟ್ಟಡವು ಭದ್ರತೆಯ ಆತಂಕವನ್ನು ಎದುರಿಸುತ್ತಿದೆ. ಒಟ್ಟಾರೆ ಕಾಮಗಾರಿಯ ಹೆಸರಿನಲ್ಲಿ ಆವರಣದ ಕಲ್ಲುಗಳನ್ನು ತೆಗೆದುಹಾಕಲಾಗಿದ್ದು, ತೆರವುಗೊಳಿಸುವ ಕಾರ್ಯವನ್ನು ಮಾಡಿಲ್ಲ.

ವಿಳಂಬಕ್ಕೆ ಕಾರಣ?

ಪಾಲಿಕೆಯು 16.8 ಮೀಟರ್ ಅಗಲವಿರುವ ಈ ರಸ್ತೆಯನ್ನು 24 ಮೀಟರ್‌ಗೆ ವಿಸ್ತರಿಸಲು ಒಂದೂವರೆ ವರ್ಷ ತೆಗೆದುಕೊಂಡಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಇನ್ನೂ ಈ  ಕಾಮಗಾರಿಯು ಆರಂಭ ಹಂತದಲ್ಲಿದ್ದು, ಕೇವಲ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಕೆಲಸ ಆರಂಭಗೊಂಡಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಸಮೀಪವಿರುವ ನೀರು ಸಂಪರ್ಕ ಮತ್ತು ವಿದ್ಯುತ್ ಸಂಪರ್ಕಗಳನ್ನು ಬೇರೇಡೆ ವರ್ಗಾಯಿಸಲು ಮತ್ತು ಖಾಸಗಿ ಭೂಮಿಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ನೆಪವೊಡ್ಡಿ ಪಾಲಿಕೆ ನುಣುಚಿಕೊಳ್ಳುತ್ತಿದ್ದು, ಕಂಪೆನಿಗಳು 10 ರಿಂದ 12 ಅಡಿ ಜಾಗ ಬಿಟ್ಟುಕೊಟ್ಟು ವರ್ಷವೇ ಕಳೆದಿದೆ.

`ಕಾಮಗಾರಿ ವಿಳಂಬಗೊಳ್ಳಲು ಗುತ್ತಿಗೆದಾರರನೇ ಕಾರಣ. ಈ ಬಗ್ಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯ ಎಡಭಾಗದ ಕಾಮಗಾರಿಯನ್ನು ಬೇರೆಯವರಿಗೆ ಗುತ್ತಿಗೆ ವಹಿಸುವುದರ ಕುರಿತು ಚಿಂತನೆ ನಡೆದಿದೆ~ ಎಂದು ಹೆಸರು ಹೇಳಲು ಇಚ್ಚಿಸಿದ ಪಾಲಿಕೆ ಎಂಜಿನಿಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ರಸ್ತೆ ಅವ್ಯವಸ್ಥೆ-ಅನುಭವ
ದಿನವೂ ಸರ್ಕಸ್

ಈ ರಸ್ತೆಯಲ್ಲಿ ವಾಹನ ನಡೆಸುವುದು ಒಂದು ಸರ್ಕ್‌ಸ್‌ನಂತೆ. ರಸ್ತೆ ವಿಭಜಕಗಳು ಮುರಿದಿರುವುದರಿಂದ ವಾಹನ ಸವಾರರು ಸರಿಯಾದ ನಿಯಮವನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಮುಂದುವರಿದರೆ ಅಪಘಾತಗಳಾಗುವ ಸಂಭವ ಹೆಚ್ಚಿದೆ.
- ನಂದೀಶ್ (ಬೈಕ್ ಸವಾರ)

ನಿರ್ಲಕ್ಷ್ಯ ಸಲ್ಲ
ಕಾಮಗಾರಿಗೆ ಉಪಯೋಗಿಸುವ ಜಲ್ಲಿಕಲ್ಲುಗಳನ್ನು ರಸ್ತೆಯಲ್ಲಿ ಸುರಿದಿರುವುದರಿಂದ ಮಳೆಯ ಸಂದರ್ಭದಲ್ಲಿ ರಸ್ತೆ ಮತ್ತು ಪಾದಾಚಾರಿ ಮಾರ್ಗ ಯಾವುದೆಂದೇ ತಿಳಿಯಲು ಸಾಧ್ಯವಿಲ್ಲ. ಇನ್ನೂ ಪಾದಚಾರಿಗಳಿಗೆ ಮೀಸಲಾದ ಜಾಗದಲ್ಲಿ ಸಹ ಬೈಕ್‌ಗಳು ಸಂಚರಿಸುತ್ತವೆ. ಕಾಮಗಾರಿಯ ಬಗ್ಗೆ ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ
- ಲಕ್ಷ್ಮೀ (ಪಾದಾಚಾರಿ)

ಸಾಹಸದ ಕೆಲಸ
ಈ ರಸ್ತೆಯ ಅಜು ಬಾಜುನಲ್ಲಿರುವ ಅಂಗಡಿಗಳಲ್ಲಿ ನಿಲ್ಲಿಸಲಾಗಿರುವ ವಾಹವನ್ನು ರಸ್ತೆಗೆ ತರುವುದೇ ಒಂದು ಸಾಹಸ. ಇಕ್ಕಟ್ಟಾದ ರಸ್ತೆಯ ವಿಸ್ತರಣೆಯ ಕಾಮಗಾರಿ ಇಷ್ಟು ವಿಳಂಬಗೊಂಡರೆ ಜನ ಸಾಮಾನ್ಯರು ಪಾಲಿಕೆಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ?
ಲಕ್ಷ್ಮಿಕಾಂತ  (ಸೇಲ್ಸ್‌ಮ್ಯಾನ್)

ತ್ವರಿತಗೊಳಿಸಿ
ನಗರದ ಕೇಂದ್ರ ಭಾಗದಲ್ಲಿರುವ ಕಸ್ತೂರ ಬಾ ರಸ್ತೆಯ ಕಾಮಗಾರಿಯನ್ನು ಸರಿಯಾಗಿ ನಡೆಸದೇ ಇದರ ಅಂದವನ್ನು ಹಾಳುಮಾಡಲಾಗಿದೆ. ಇನ್ನು ಮುಂದೆಯಾದರೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಕಾಮಗಾರಿಯನ್ನು ತ್ವರಿತಗೊಳಿಸಬೇಕಿದೆ.
ನಿರಂಜನ್ ( ವಿದ್ಯಾರ್ಥಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT