ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಾ, ವಿಲಿಯರ್ಸ್ ಜುಗಲ್‌ಬಂದಿ

Last Updated 3 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ): ಉದ್ಯಾನ ನಗರಿಯಲ್ಲಿ ಹಾಲೆಂಡ್ ಬುಧವಾರ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾದರೆ, ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರದ ಪಂದ್ಯ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಕಾರಣ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹಾಲೆಂಡ್ ಕಿಂಚಿತ್ ಸವಾಲು ನೀಡದೆ ಸೋಲೊಪ್ಪಿಕೊಂಡಿತು. ಗ್ರೇಮ್ ಸ್ಮಿತ್ ಪಡೆ ‘ಆರೇಂಜ್ ಬ್ರಿಗೇಡ್’ ಮೇಲೆ ಅಕ್ಷರಶಃ ಸವಾರಿ ನಡೆಸಿತು.

ಪರಿಣಾಮ ಹಾಲೆಂಡ್ 231 ರನ್‌ಗಳ ಸೋಲು ಕಂಡಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಎದುರಾದ ನಾಲ್ಕನೇ ಅತಿ ದೊಡ್ಡ ಸೋಲು. ದಕ್ಷಿಣ ಆಫ್ರಿಕಾ ನೀಡಿದ 352 ರನ್‌ಗಳ ಗುರಿಗೆ ಉತ್ತರವಾಗಿ ಹಾಲೆಂಡ್ 34.5 ಓವರ್‌ಗಳಲ್ಲಿ ಕೇವಲ 120 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಪೀಟರ್ ಬೊರೆನ್ ಟಾಸ್ ಗೆದ್ದು ಎದುರಾಳಿಗೆ ಬ್ಯಾಟಿಂಗ್ ನೀಡಿದ್ದೆ ತಪ್ಪು ಎನ್ನುವಂತಾಯಿತು. ಕಾರಣ ಹಾಶೀಮ್ ಆಮ್ಲಾ ಹಾಗೂ ಎಬಿ ಡಿವಿಲಿಯರ್ಸ್ ಶತಕ ಹೊಡೆಯುವ ಮೂಲಕ ಹಾಲೆಂಡ್ ತಂಡವನ್ನು ಕಾಡಿದ ಪರಿ ಅಷ್ಟಿಷ್ಟಲ್ಲ. ಅವರಿಬ್ಬರು ಮೂರನೇ ವಿಕೆಟ್‌ಗೆ ದಾಖಲೆಯ 221 ರನ್ ಸೇರಿಸಿದರು.

ದಕ್ಷಿಣ ಆಫ್ರಿಕಾದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ತೇವದಿಂದ ಕೂಡಿದ್ದ ಪಿಚ್ ವೇಗಿಗಳಿಗೆ ನೆರವು ನೀಡುತಿತ್ತು. ಅದನ್ನು ಆರಂಭದಲ್ಲಿ ಹಾಲೆಂಡ್‌ನವರು ಸಮರ್ಥವಾಗಿಯೇ ಬಳಸಿಕೊಂಡರು. ಮೊದಲ 15 ಓವರ್‌ಗಳಲ್ಲಿ ಹರಿಣಗಳು ಗಳಿಸಿದ್ದು ಕೇವಲ 58 ರನ್. ಅಷ್ಟರಲ್ಲಿಯೇ ನಾಯಕ ಗ್ರೇಮ್ ಸ್ಮಿತ್ ಹಾಗೂ ಜಾಕ್ ಕಾಲಿಸ್ ಪೆವಿಲಿಯನ್‌ಗೆ ಹಿಂತಿರುಗಿದ್ದರು.ಈ ಸಂದರ್ಭದಲ್ಲಿ ಜೊತೆಗೂಡಿದ್ದು ಆಮ್ಲಾ ಹಾಗೂ ಡಿವಿಲಿಯರ್ಸ್. ಆಮ್ಲಾ ಪಂದ್ಯದ ಏಳನೇ ಓವರ್‌ನಲ್ಲಿಯೇ ಮುದಾಸ್ಸಿರ್ ಬುಖಾರಿ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ವೆಸ್ಲೆ ಬಾರೆಸ್ಸಿಗೆ ಕ್ಯಾಚ್ ನೀಡಿದ್ದರು.

ತಕ್ಷಣವೇ ಅವರು ಪೆವಿಲಿಯನ್‌ಗೆ ಹಿಂತಿರುಗಲು ಹೆಜ್ಜೆ ಇಟ್ಟರು. ಆದರೆ ಅಂಪೈರ್ ರಿಚರ್ಡ್ ಕೆಟ್ಲ್‌ಬರೊ ನಾಟೌಟ್ ಎಂದು ತೀರ್ಪು ನೀಡಿದರು. ಕಾರಣ ವೆಸ್ಲೆ ಕ್ಯಾಚ್ ಪಡೆಯುವ ಮೊದಲು ಚೆಂಡು ನೆಲಕ್ಕೆ ತಾಗಿದ್ದು ಟಿವಿ ರೀಪ್ಲೆನಲ್ಲಿ ಸ್ಪಷ್ಟವಾಗಿತ್ತು. ಆಗ ಆಮ್ಲಾ 18 ರನ್ ಗಳಿಸಿದ್ದರು. ಬಳಿಕ ಹಾಶೀಮ್ ತಮ್ಮ ಎಂಟನೇ ಶತಕ ಗಳಿಸಿಯೇ ಬಿಟ್ಟರು. 130 ಎಸೆತಗಳನ್ನು ಎದುರಿಸಿದ ಅವರು ಎಂಟು ಬೌಂಡರಿಗಳ ನೆರವಿನಿಂದ 113 ರನ್ ಗಳಿಸಿದರು.

ಆದರೆ ವಿಲಿಯರ್ಸ್‌ಗೆ ಇದು ಟೂರ್ನಿಯಲ್ಲಿ ಸತತ ಎರಡನೇ ಶತಕ. ಅತ್ಯುತ್ತಮ. ಫಾರ್ಮ್‌ನಲ್ಲಿರುವ ಅವರು ಕೇವಲ 98 ಎಸೆತಗಳಲ್ಲಿ 134 ರನ್ ಕಲೆಹಾಕಿದರು. ಅದರಲ್ಲಿ ನಾಲ್ಕು ಸಿಕ್ಸರ್ ಹಾಗೂ 13 ಬೌಂಡರಿಗಳಿದ್ದವು. ನಂತರ ಬಂದ ಜೀನ್ ಪಾಲ್ ಡುಮಿನಿ ಕೇವಲ 15 ಎಸೆತಗಳಲ್ಲಿ 40 ರನ್ ಪೇರಿಸಿದರು. ಇದು ತಂಡ 351 ರನ್ ಮೊತ್ತ ಗಳಿಸಲು ಕಾರಣವಾಯಿತು. ಈ ಮೊತ್ತ ಬೆನ್ನಟ್ಟಿದ ಹಾಲೆಂಡ್ ಒಂದು ಹಂತದಲ್ಲಿ 81 ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಆದರೆ ಮತ್ತೆ 39 ರನ್ ಗಳಿಸುವಷ್ಟರಲ್ಲಿ ಎಂಟು ವಿಕೆಟ್‌ಗಳು ಪತನಗೊಂಡವು.

‘ಮುಂದೆ ಸವಾಲಿನ ಪಂದ್ಯಗಳಿವೆ’
‘ಎ ಗುಂಪುನಲ್ಲಿ ಅಗ್ರಸ್ಥಾನ ಪಡೆಯಬೇಕು ಎಂಬುದು ನಮ್ಮ ಗುರಿ ಅಲ್ಲ. ವಿಶ್ವಕಪ್ ಒಂದು ದೊಡ್ಡ ಟೂರ್ನಿ. ನಾವಿನ್ನೂ ಆರಂಭದ ಹಂತದಲ್ಲಿದ್ದೇವೆ. ಪ್ರತಿ ಬಾರಿಯೂ ಒಂದು ಮೆಟ್ಟಿಲನ್ನು ಯಶಸ್ವಿಯಾಗಿ ಹತ್ತಲು ಮಾತ್ರ ಪ್ರಯತ್ನಿಸುತ್ತೇವೆ ’ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಗ್ರೇಮ್ ಸ್ಮಿತ್ ತಿಳಿಸಿದ್ದಾರೆ. ‘ನಿಜ, ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ನಮಗೆ ಮಹತ್ವವಾಗಿವೆ. ಅದಕ್ಕೆ ಮುನ್ನ ನಾವು ಗೆಲುವಿನ ನಾಗಾಲೋಟ ಮುಂದುವರಿಸಬೇಕು. ವಿಶ್ವಾಸ ಹೆಚ್ಚಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಸ್ಕೋರು ವಿವರ
ದಕ್ಷಿಣ ಆಫ್ರಿಕಾ
50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 351
ಹಾಶೀಮ್ ಆಮ್ಲಾ ಸಿ ಕೂಪರ್ ಬಿ ಟೆನ್ ಡಾಶೆಟ್  113
ಗ್ರೇಮ್ ಸ್ಮಿತ್ ಬಿ ಲೂಟ್ಸ್  20
ಜಾಕ್ ಕಾಲಿಸ್ ಸಿ ಬಾರೆಸ್ಸಿ ಬಿ ಟೆನ್ ಡಾಶೆಟ್  02
ಎಬಿ ಡಿವಿಲಿಯರ್ಸ್ ರನ್‌ಔಟ್ (ವೆಸ್ಟ್‌ಡಿಕ್/ಬುಖಾರಿ)  134
ಫಪ್ ಡು ಪ್ಲೆಸಿಸ್ ಔಟಾಗದೆ  18
ಜೀನ್ ಪಾಲ್ ಡುಮಿನಿ ಸಿ ಬೊರೆನ್ ಬಿ ಟೆನ್ ಡಾಶೆಟ್  40
ಮಾರ್ನ್ ವ್ಯಾನ್ ವಿಕ್ ಔಟಾಗದೆ  00
ಇತರೆ: (ಬೈ-2, ಲೆಗ್‌ಬೈ-5, ವೈಡ್-16, ನೋಬಾಲ್-1)  24
ವಿಕೆಟ್ ಪತನ: 1-51 (ಸ್ಮಿತ್; 12.5); 2-58 (ಕಾಲಿಸ್; 15.3); 3-279 (ಆಮ್ಲಾ; 44.5); 4-283 (ಡಿವಿಲಿಯರ್ಸ್; 45.4); 5-349 (ಡುಮಿನಿ; 49.5).
ಬೌಲಿಂಗ್: ಮುದಾಸ್ಸರ್ ಬುಖಾರಿ 10-0-44-0 (ವೈಡ್-2), ಬೆರೆಂಡ್ ವೆಸ್ಟ್‌ಡಿಕ್ 9-0-76-0 (ವೈಡ್-4), ರ್ಯಾನ್ ಟೆನ್ ಡಾಶೆಟ್ 10-0-72-3 (ವೈಡ್-1), ಬರ್ನಾರ್ಡ್ ಲೂಟ್ಸ್ 9-0-60-1 (ನೋಬಾಲ್-1), ಪೀಟರ್ ಸೀಲಾರ್ 10-0-74-0, ಟಾಮ್ ಕೂಪರ್ 2-0-18-0

ಹಾಲೆಂಡ್ 34.5 ಓವರ್‌ಗಳಲ್ಲಿ 120
ಅಲೆಕ್ಸಿ ಕೆರ್ವಿಜೀ ಸಿ ಅಂಡ್ ಬಿ ಜಾಕ್ ಕಾಲಿಸ್  10
ವೆಸ್ಲೆ ಬಾರೆಸಿ ಸ್ಟಂಪ್ಡ್ ವಾನ್ ವಿಕ್ ಬಿ ಡುಮಿನಿ  44
ಟಾಮ್ ಕೂಪರ್ ಸಿ ಡೆಲ್ ಸ್ಟೇನ್ ಬಿ ಜಾಕ್ ಕಾಲಿಸ್  09
ಬಾಸ್ ಜುಡಿರೆಂಟ್ ಎಲ್‌ಬಿಡಬ್ಲ್ಯು ಬಿ ರಾಬಿನ್ ಪೀಟರ್ಸನ್  15
ಟೆನ್ ಡಾಶೆಟ್ ಎಲ್‌ಬಿಡಬ್ಲ್ಯು ಬಿ ಡೆಲ್ ಸ್ಟೇನ್  11
ಟಾಮ್ ಡಿ ಗ್ರೂಥ್ ರನ್‌ಔಟ್ (ಸ್ಮಿತ್)  12
ಪೀಟರ್ ಬೊರೆನ್ ಎಲ್‌ಬಿಡಬ್ಲ್ಯು ಬಿ ರಾಬಿನ್ ಪೀಟರ್ಸನ್  03
ಮುದಾಸ್ಸರ್ ಬುಖಾರಿ ಬಿ ಇಮ್ರಾನ್ ತಹೀರ್  00
ಪೀಟರ್ ಸೀಲಾರ್ ಔಟಾಗದೆ  02
ಬೆರ್ನಾರ್ಡ್ ಲೂಟ್ಸ್ ಬಿ ಇಮ್ರಾನ್ ತಹೀರ್  06
ಬೆರೆಂಡ್ ವೆಸ್ಟ್‌ಡಿಕ್ ಎಲ್‌ಬಿಡಬ್ಲ್ಯು ಬಿ ಇಮ್ರಾನ್ ತಹೀರ್  00
ಇತರೆ: (ವೈಡ್-8)  08
ವಿಕೆಟ್ ಪತನ: 1-26 (ಕೆರ್ವಿಜೀ; 5.1); 2-46 (ಕೂಪರ್; 11.5); 3-81 (ಜುಡಿರೆಂಟ್; 21.3); 4-83 (ಬಾರೆಸ್ಸಿ; 22.4); 5-100 (ಡಾಶೆಟ್; 27.5); 6-109 (ಬೊರೆನ್; 31.4); 7-109 (ಗ್ರೂಥ್; 32.1); 8-110 (ಬುಖಾರಿ; 32.3); 9-120 (ಲೂಟ್ಸ್; 34.3); 10-120 (ವೆಸ್ಟ್‌ಡಿಕ್; 34.5).
ಬೌಲಿಂಗ್: ಡೆಲ್ ಸ್ಟೇನ್ 6-1-26-1 (ವೈಡ್-3), ಮಾರ್ನ್ ಮೊರ್ಕೆಲ್ 5-0-18-0 (ವೈಡ್-1), ಜಾಕ್ ಕಾಲಿಸ್ 6-0-19-2, ಇಮ್ರಾನ್ ತಹೀರ್ 6.5-0-19-3 (ವೈಡ್-2), ರಾಬಿನ್ ಪೀಟರ್ಸನ್ 5-0-22-2 (ವೈಡ್-1), ಜೀನ್ ಪಾಲ್ ಡುಮಿನಿ 6-0-16-1 (ವೈಡ್-1)

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 231 ರನ್ ಜಯ. ಪಾಯಿಂಟ್: ದಕ್ಷಿಣ ಆಫ್ರಿಕಾ-2, ಹಾಲೆಂಡ್-0. ಪಂದ್ಯ ಪುರುಷೋತ್ತಮ: ಎಬಿ ಡಿವಿಲಿಯರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT