ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ ವೈದ್ಯರಿಗೆ ಔಷಧಿ ಕೊರತೆ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ)ದ ಅಡಿಯಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 550 ಆಯುಷ್ ವೈದ್ಯರಿಗೆ ಸುಮಾರು 14 ತಿಂಗಳಿಂದ ಔಷಧಿ ಪೂರೈಕೆ ಆಗಿಲ್ಲ. ಇದರಿಂದಾಗಿ ರೋಗಿಗಳು ಪರದಾಡುವಂತಹ ಸ್ಥಿತಿ ಎದುರಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎನ್‌ಆರ್‌ಎಚ್‌ಎಂ ಅಡಿಯಲ್ಲಿ ಆಯುಷ್ ವೈದ್ಯರ ಹುದ್ದೆಗಳನ್ನು ನೀಡಲಾಗಿದೆ. ಇವರಿಗೆ ಔಷಧಿ ಪೂರೈಸುವ ಜವಾಬ್ದಾರಿ ಆಯುಷ್ ಇಲಾಖೆಯದ್ದು. ಇಲಾಖೆಯು ನೀಡುವ ಬೇಡಿಕೆ ಆಧರಿಸಿ, ಕೇಂದ್ರ ಸರ್ಕಾರದಿಂದ ಔಷಧಿಗಳನ್ನು ಸರಬರಾಜು ಮಾಡಲಾಗುತ್ತದೆ. ಆದರೆ, ಅನುದಾನ ಕೊರತೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಆಯುಷ್ ವೈದ್ಯರಿಗೆ ಔಷಧಿ ಪೂರೈಕೆಯಾಗಿಲ್ಲ.

ಆಯುಷ್ ವೈದ್ಯರು ಅಲೋಪತಿ ಔಷಧಿ ಬಳಸುವುದಕ್ಕೆ ಅನುಮತಿ ಇಲ್ಲ. ಅತ್ತ, ಆಯುಷ್ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದ ಔಷಧಿಗಳು ದೊರೆಯುತ್ತಿಲ್ಲ; ಇತ್ತ ಅಲೋಪತಿ ಔಷಧಿಯನ್ನೂ ನೀಡುವಂತಿಲ್ಲ. ಇದರಿಂದಾಗಿ ವೈದ್ಯರು `ಅಡಕತ್ತರಿ~ಗೆ ಸಿಲುಕಿದ್ದಾರೆ. ಇದರ ಪರಿಣಾಮ, ಸಾವಿರಾರು ಬಡ ರೋಗಿಗಳು ಔಷಧಿ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ. ~ಎಲ್ಲ ರೋಗಿಗಳಿಗೂ ದುಬಾರಿಯಾಗಿರುವ ಅಲೋಪತಿ ಔಷಧಿಗಳನ್ನು ಕೊಳ್ಳುವುದಕ್ಕೆ ಆಗುವುದಿಲ್ಲ. ಅಲ್ಲದೇ, ಬಹುತೇಕರು ಆಯುರ್ವೇದ, ಯುನಾನಿ ಚಿಕಿತ್ಸಾ ಪದ್ಧತಿಯನ್ನೇ ಅವಲಂಬಿಸಿದ್ದಾರೆ. ದೀರ್ಘಾವಧಿ ಕಾಯಿಲೆಗಳಾದ ರಕ್ತದೊತ್ತಡ, ಮಾನಸಿಕ ಒತ್ತಡ, ಅಸ್ತಮಾ ಮೊದಲಾದವುಗಳಿಗೆ ಆಯುಷ್‌ನಲ್ಲಿ ಪರಿಣಾಮಕಾರಿ ಚಿಕಿತ್ಸೆ ಇದೆ. ಹೀಗಾಗಿ, ರೋಗಿಗಳು ಆಯುಷ್ ವೈದ್ಯರ ಚಿಕಿತ್ಸೆ ಮತ್ತು ಔಷಧಿ ಮೊರೆ ಹೋಗುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎನ್‌ಆರ್‌ಎಚ್‌ಎಂ ಕಾರ್ಯಕ್ರಮ ಅಧಿಕಾರಿ ಡಾ.ನಟರಾಜ್, ನಂಜುಂಡಪ್ಪ ವರದಿ ಆಧರಿಸಿ ಹಿಂದುಳಿದ ತಾಲ್ಲೂಕುಗಳಿಗೆ ವೈದ್ಯರನ್ನು ನೇಮಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಹೊನ್ನಾಳಿ, ಜಗಳೂರು ತಾಲ್ಲೂಕುಗಳಲ್ಲಿ 11 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರನ್ನು ನೇಮಿಸುವುದಷ್ಟೇ ನಮ್ಮ ಜವಾಬ್ದಾರಿ. ಔಷಧಿ ಪೂರೈಕೆ ಮಾಡುವುದು ಆಯುಷ್ ಇಲಾಖೆಯ ಜವಾಬ್ದಾರಿ ಎಂದರು.

`ಇಲಾಖೆಯ ಕೇಂದ್ರ ಕಚೇರಿಯ ಮಟ್ಟದಲ್ಲಿ ಔಷಧಿ ಪೂರೈಕೆ ಪ್ರಕ್ರಿಯೆ ನಡೆಯುತ್ತದೆ. ತಾಂತ್ರಿಕ ಕಾರಣಗಳಿಂದ ಔಷಧಿ ಪೂರೈಕೆಯಲ್ಲಿ ವಿಳಂಬವಾಗಿದೆ. ನಾವೂ ಅಗತ್ಯ ಔಷಧಿಗೆ ಬೇಡಿಕೆ ಸಲ್ಲಿಸಿದ್ದೇವೆ. ಉನ್ನತ ಅಧಿಕಾರಿಗಳ ಸೂಚನೆಯಂತೆ, ಬಳಕೆ ಪ್ರಮಾಣಪತ್ರವನ್ನು ಸಹ ನೀಡಿದ್ದೇವೆ. ಶೀಘ್ರವೇ ಔಷಧಿ ಪೂರೈಕೆ ಆಗುವ ಸಾಧ್ಯತೆ ಇದೆ~ ಎನ್ನುತ್ತಾರೆ ಆಯುಷ್ ಇಲಾಖೆ ಉಪ ನಿರ್ದೇಶಕ ಡಾ.ಯು. ಸಿದ್ದೇಶ್.

`ಕೇಂದ್ರದಿಂದ ಅಗತ್ಯ ಅನುದಾನ ಬಂದಿರಲಿಲ್ಲ. ಇದರಿಂದಾಗಿ ಎನ್‌ಆರ್‌ಎಚ್‌ಎಂ ಅಡಿ ನೇಮಕವಾಗಿರುವ ವೈದ್ಯರಿಗೆ ಔಷಧಿ ನೀಡುವಲ್ಲಿ ತೊಂದರೆಯಾಗಿತ್ತು. ಇನ್ನೆರಡು ವರ್ಷಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಇಲಾಖೆಯ ಆಸ್ಪತ್ರೆಗಳಲ್ಲಿ ಇಂಥ ಸಮಸ್ಯೆ ಇಲ್ಲ~ ಎಂದು ರಾಜ್ಯ ಆಯುಷ್ ಇಲಾಖೆ ನಿರ್ದೇಶಕ ಗಾ.ನಂ. ಶ್ರೀಕಂಠಯ್ಯ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT