ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಮಾತೆಗೆ ಧರ್ಮಾತೀತ ಭಕ್ತಿ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಯೇಸು ದೇವನೆನಿಸಿದರೆ, ಆತನನ್ನು ಹೆತ್ತಮ್ಮ ಮರಿಯ ಮಾತೆಯನ್ನು ದೇವಮಾತೆ ಎಂದೇ ಪರಿಗಣಿಸಲಾಗಿದೆ. ಆಕೆಯನ್ನು ಆರೋಗ್ಯ ಮಾತೆ ಎಂದೂ ಕರೆಯುತ್ತಾರೆ. ಜಗತ್ತಿನೆಲ್ಲೆಡೆ ಮರಿಯ ಮಾತೆಗೆ ವಿಶೇಷ ಗೌರವ ಸಲ್ಲುತ್ತದೆ. ಸೆ.8 ಮರಿಯ ಜನ್ಮದಿನ. ಆದರೆ ಇದಕ್ಕೆ ಪೂರ್ವ ಸಿದ್ಧತೆಯಂತೆ ಶಿವಾಜಿನಗರದ ಸೇಂಟ್ ಮೇರೀಸ್‌ ಬೆಸಿಲಿಕಾದಲ್ಲಿ ಆ.28ರಿಂದಲೇ ವಿಶೇಷ ಪ್ರಾರ್ಥನೆ ನಡೆಯುತ್ತಿದೆ.

ಇಲ್ಲಿಗೆ ಬೆಂಗಳೂರು ಸುತ್ತಮುತ್ತಲಿನ ಭಕ್ತರು ಮಾತ್ರವಲ್ಲದೆ ತಮಿಳುನಾಡು, ಕೊಡಗು, ಉತ್ತರ ಕನ್ನಡ ಮುಂತಾದ ಊರುಗಳಿಂದ ಭಕ್ತರು ಬರುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 4ರಿಂದ ರಾತ್ರಿ 9ರವರೆಗೆ ಸುಮಾರು ಹತ್ತರಿಂದ ಹನ್ನೆರಡು ಸಾವಿರ ಭಕ್ತರು ಬರುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿಗೆ ಬರುವ ಭಕ್ತರಲ್ಲಿ ಶೇ 50ರಷ್ಟು ಕ್ರಿಶ್ಚಿಯನ್‌ ಧರ್ಮೇತರರು.

ಶಿವಾಜಿನಗರದ ಸೇಂಟ್‌ ಮೇರೀಸ್ ಬೆಸಿಲಿಕಾದಲ್ಲಿ 12 ದಿನಗಳ ಕಾಲ ನಡೆಯುವ ಈ ಹಬ್ಬ ಬೆಂಗಳೂರಿನಲ್ಲಿ ನಡೆಯುವ ದೊಡ್ಡ ಹಬ್ಬ.
ಪ್ರಾತಃಕಾಲ ನಾಲ್ಕರಿಂದಲೇ ಇಲ್ಲಿ ಹರಕೆ ಒಪ್ಪಿಸುವ ಕ್ರಿಯೆ ನಡೆಯುತ್ತದೆ. 5ರಿಂದ ಜಪಸರ, ಮನವಿ ಮಾಲೆ ಎಂಬ ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಪ್ರತಿ ಒಂದು ಗಂಟೆಗೊಮ್ಮೆ ಬಲಿಪೂಜೆ ಇರುತ್ತದೆ. ಪ್ರತಿದಿನ ಸಂಜೆ ಪ್ರಮುಖ ಧಾರ್ಮಿಕ ಗುರುಗಳು ಧ್ವಜಾರೋಹಣ ಮಾಡುತ್ತಾರೆ.
ಮಕ್ಕಳಾಗದವರು, ಅನಾರೋಗ್ಯ ಪೀಡಿತರು, ಕೌಟುಂಬಿಕ ಶಾಂತಿ ಇಲ್ಲದವರು, ಕೆಲಸದ ಹುಡುಕಾಟದಲ್ಲಿರುವವರು, ಮಕ್ಕಳ ಶ್ರೇಯಸ್ಸಿಗಾಗಿ ಬಂದು ಪ್ರಾರ್ಥನೆ ಮಾಡುವವರಿದ್ದಾರೆ. ಮನಶಾಂತಿಗಾಗಿ ಬರುವವರು ಹಲವರು.

ಸೀರೆ ಉಡುಗೊರೆ
ಪ್ರಾರ್ಥನೆಗೆ ತೆರಳುವ ಎಲ್ಲರೂ ಹೂಗಳ ಜೊತೆ ಮೇಣದ ಬತ್ತಿ ಉರಿಸಿ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದಕ್ಕೆಂದೇ ಚರ್ಚ್‌ನ ಹೊರಗೆ ಹಾಲ್ ಇದೆ. ಇಲ್ಲಿ ಹೂಗಳಿಂದ ಅಲಂಕೃತಗೊಂಡ ಪೀಠದಲ್ಲಿ ಕೆಂಪು ಸೀರೆಯುಟ್ಟ ಮರಿಯ ಮಾತೆಯ ಪ್ರತಿಮೆ ಇದೆ. ಭಕ್ತರು ಮರಿಯ ಮಾತೆಗೆ ಸೀರೆ ಕಾಣಿಕೆ ನೀಡುವುದು ಇಲ್ಲಿನ ವಿಶೇಷಗಳಲ್ಲೊಂದು. ಹತ್ತು ದಿನಗಳ ಕಾಲ ಉಪವಾಸ ಮಾಡುವ ಭಕ್ತರು ಈ ದಿನಗಳಲ್ಲಿ ಬಡವರಿಗೆ ಹಣ ಮತ್ತು ಊಟವನ್ನು ದಾನವಾಗಿ ನೀಡುತ್ತಾರೆ.

ಪವಿತ್ರ ಜಪಸರ
ಮರಿಯ ಮಾತೆಯ ಪವಿತ್ರ ವಾಕ್ಯವೆಂದರೆ ‘ಜಪಸರ ನೋಟ, ಸೈತಾನನ ಓಟ’. ಯಾರ ಕೈಯಲ್ಲಿ ಜಪಸರವಿರುತ್ತದೋ ಅವರ ಬಳಿ ಸೈತಾನರು ಬರುವುದಿಲ್ಲ. ಸೈತಾನರೆಂದರೆ ಕೆಟ್ಟ ದೃಷ್ಟಿ, ದುಶ್ಚಟಗಳು, ಕಷ್ಟ ಕಾರ್ಪಣ್ಯ, ಋಣಾತ್ಮಕವಾದ ಸಂದೇಶಗಳು ಎಂಬುದು. ಹಾಗಾಗಿ ಮರಿಯ ಮಾತೆಯ ಪ್ರಾರ್ಥನೆ ಮಾಡುವಾಗ ಕೈಯಲ್ಲೊಂದು ಜಪಸರವಿರುತ್ತದೆ. ಅದು ಕಡ್ಡಾಯವಿಲ್ಲ. ಹಿಂದೂಗಳು ತಮ್ಮ ದೇವರನ್ನು ಪ್ರಾರ್ಥಿಸುವ ರೀತಿಯಲ್ಲಿಯೇ ಕೈಮುಗಿದು ಪ್ರಾರ್ಥನೆ ಮಾಡುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT