ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಟ್ರೆಂಡ್ಸ್ ಕೃತಿ ಲೋಕಾರ್ಪಣೆ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈನ ಪುರೋಗಾಮಿ ಚಿತ್ರ ಕಲಾವಿದರ ಸಂಘವು (ಪಿಪಿಎ) ಸುಮಾರು 29 ವರ್ಷಗಳ ಹಿಂದೆ ಹೊರತರುತ್ತಿದ್ದ `ಆರ್ಟ್ರೆಂಡ್ಸ್~ ತ್ರೈಮಾಸಿಕ ಚಿತ್ರಕಲಾ ನಿಯತಕಾಲಿಕದ ಅಂಶಗಳನ್ನು ಒಳಗೊಂಡ `ಆರ್ಟ್ರೆಂಡ್ಸ್~ ಕೃತಿ ನಗರದಲ್ಲಿ ಶನಿವಾರ ಲೋಕಾರ್ಪಣೆಗೊಂಡಿತು.

ಲಲಿತ ಕಲಾ ಅಕಾಡೆಮಿಯು ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರರ್ನ್ ಆರ್ಟ್ (ಎನ್‌ಜಿಎಂಎ) ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಟಕಕಾರ ಡಾ. ಗಿರೀಶ್ ಕಾರ್ನಾಡ್ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, `ಸ್ವಾತಂತ್ರ್ಯಾನಂತರದ ಭಾರತದಲ್ಲಿ ಚಿತ್ರ ಕಲಾವಿದರು ಅನುಭವಿಸಿದ ಸಮಸ್ಯೆಗಳನ್ನು ರಂಗಕಲಾವಿದರು ಕೂಡ ಅನುಭವಿಸಿದರು. ಆ ಸಂದರ್ಭದಲ್ಲಿ ಭಾರತೀಯತೆಯನ್ನು ಕಂಡುಕೊಳ್ಳುವುದೇ ಸವಾಲಾಗಿ ಪರಿಣಮಿಸಿತ್ತು~ ಎಂದು ಅಭಿಪ್ರಾಯಪಟ್ಟರು.

`ಆಗ ದೇಶೀಯತೆಯನ್ನು ಕಂಡುಕೊಳ್ಳಲು ಸಾಧ್ಯವಾಗಿದ್ದು, ಜಾನಪದ ಕಲೆಗಳಲ್ಲಿ ಎಂಬುದು ಮುಖ್ಯ. ಆ ಕಾಲದಲ್ಲಿ ಚಿತ್ರಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪಾಶ್ಚಿಮಾತ್ಯ ತಂತ್ರಗಾರಿಕೆ ಮತ್ತು ಸೃಜನಶೀಲತೆಯ ಪ್ರಭಾವ ತೀವ್ರವಾಗಿತ್ತು. ಆದರೆ ಸಂಗೀತ ಕ್ಷೇತ್ರದ ಮೇಲೆ ಪಾಶ್ಚಿಮಾತ್ಯ ಸಂಗೀತ ಪರಿಣಾಮ ಬೀರಲಿಲ್ಲ~ ಎಂದರು.

`60- 70ರ ದಶಕದಲ್ಲಿ ದಕ್ಷಿಣ ಭಾರತ ಹಾಗೂ ದೇಶದ ಚಿತ್ರಕಲಾವಿದರನ್ನು ಪರಿಚಯಿಸುವ ನಿಟ್ಟಿನಲ್ಲಿ ನಿಯತಕಾಲಿಕೆ ಆರಂಭಿಸಿದ್ದು ಶ್ಲಾಘನೀಯ ಕಾರ್ಯ. ಸುಮಾರು 29 ವರ್ಷಗಳ ಬಳಿಕ ಅದನ್ನು ಕೃತಿಯ ರೂಪದಲ್ಲಿ ತಂದಿರುವುದು ಒಳ್ಳೆಯ ಪ್ರಯತ್ನ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಚಿತ್ರ ಕಲಾವಿದ ಎಸ್.ಜಿ. ವಾಸುದೇವ್, `ಜಾಗತೀಕರಣದ ಪ್ರಭಾವ ತೀವ್ರವಾಗಿರುವ ಈ ಸಂದರ್ಭದಲ್ಲಿ ಚಿತ್ರಕಲಾವಿದರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸ್ವಾತಂತ್ರ್ಯಾ ನಂತರದ ಕಾಲದಲ್ಲೂ ಇದೇ ರೀತಿಯ ಸವಾಲುಗಳು ಚಿತ್ರಕಲಾವಿದರಿಗೆ ಎದುರಾಗಿತ್ತು. ಹಾಗಾಗಿ ಸ್ವಾತಂತ್ರ್ಯಾನಂತರದ ಕಾಲದ ಸವಾಲುಗಳನ್ನು ಚಿತ್ರಕಲಾವಿದರು ಎದುರಿಸಿದ ರೀತಿಯನ್ನು ಅರಿಯುವುದರ ಮೂಲಕ ಇಂದಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ~ ಎಂದು ಹೇಳಿದರು.

`ಸುಮಾರು ಎರಡು ದಶಕಗಳ ಕಾಲ ಪ್ರಕಟವಾದ ನಿಯತಕಾಲಿಕದಲ್ಲಿ 200ಕ್ಕೂ ಹೆಚ್ಚು ಚಿತ್ರಕಲಾವಿದರ ಪರಿಚಯ ನೀಡಲಾಗಿತ್ತು. ಹಾಗಾಗಿ ಯುವ ಕಲಾವಿದರಿಗೆ ಇದು ಮಾಹಿತಿ ನೀಡುವ ಅಮೂಲ್ಯ ಕೃತಿ ಎನಿಸಿದೆ~ ಎಂದು ನುಡಿದರು.

ಮಾನವ ಹಕ್ಕುಗಳ ಪರ ಹೋರಾಟಗಾರ್ತಿ ಅನುರಾಧರಾವ್, ಎನ್‌ಜಿಎಂಎ ನಿರ್ದೇಶಕಿ ಶೋಭಾ ನಂಬೀಶನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT