ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಭಟಿಸಿದ ಮಳೆ: ಬೆಳೆ ಹಾನಿ, ಕುಸಿದ ಮನೆ

Last Updated 19 ಸೆಪ್ಟೆಂಬರ್ 2013, 6:58 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೋಟ್ಯಂತರ ರೂಪಾಯಿ ಬೆಳೆ ಹಾನಿ ಯಾಗಿದ್ದು, ಹಲವಾರು ಮನೆಗಳು ಕುಸಿದಿವೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಕೆರೆ ಏರಿ ಒಡೆದು ಹೋಗಿತ್ತು. ಕೆರೆಯಿಂದ ಹರಿದು ಬಂದ ನೀರು 227 ಎಕರೆ ವಿಸ್ತೀರ್ಣದ ಸಮೀಪದ ಚಿಕ್ಕಎಮ್ಮಿಗ ನೂರು ಕೆರೆಗೆ ಹರಿದಿದೆ. ಕೆರೆ ಕೋಡಿ ಬೀಳಲು ಅರ್ಧ ಅಡಿ ಬಾಕಿ ಇದೆ.

ಚಿಕ್ಕಎಮ್ಮಿಗನೂರು ಕೆರೆಯ ಅಚ್ಚುಕಟ್ಟು ಪ್ರದೇಶದ ಮುಂಭಾಗ ದಲ್ಲಿನ ಚಿಕ್ಕಎಮ್ಮಿಗನೂರಿನ ಸುಮಾರು 100 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ರೈತರಿಗೆ ಸುಮಾರು
` 1.5 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಕೊಡಗವಳ್ಳಿಹಟ್ಟಿ ಗ್ರಾಮದ ಪುಟ್ಟಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಜಿ.ಲೋಹಿತ್‌ ಕುಮಾರ್‌, ಎಂ.ಬಿ.ತಿಪ್ಪೇಸ್ವಾಮಿ, ಬೋರಯ್ಯ,

ಪಿ.ರಾಘವೇಂದ್ರ, ಗೌಡ್ರ ರಾಮಣ್ಣ, ನರಸಿಂಹಪ್ಪ, ನಾರಾಯಣಪ್ಪ ಸೇರಿದಂತೆ ಹಲವು ರೈತರು ಅಳಲು ತೋಡಿಕೊಂಡರು.
ಗುಂಜಿಗನೂರು ಕೆರೆಯಿಂದ ಹಳ್ಳದಲ್ಲಿ ನೀರು ರಭಸವಾಗಿ ಹರಿದು ಬಂದ ಪರಿಣಾಮ ಕೊಡಗವಳ್ಳಿ, ಕಡೂರು, ಚಿಕ್ಕಜಾಜೂರು, ರಾಂಪುರ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಮೆಕ್ಕೆಜೋಳ, ರಾಗಿ, ಹತ್ತಿ ಮೊದಲಾದ ಫಸಲಿಗೆ ಬಂದಿದ್ದ ಎಲ್ಲಾ ಬೆಳೆಗಳು ಭಾಗಶಃ ಹಾನಿಗೊಳಗಾಗಿದೆ. ಚಿಕ್ಕಜಾಜೂರು– ರಾಂಪುರ ವ್ಯಾಪ್ತಿ ಯಿಂದ ಕೊಡಗವಳ್ಳಿಹಟ್ಟಿವರೆಗೆ ಸುಮಾರು ` 1 ಕೋಟಿ ಮೌಲ್ಯದ ಬೆಳೆ ನಷ್ಟವಾಗಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಲೋಹಿತ್‌ಕುಮಾರ್‌ ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಯ:  ರೈತರಿಗೆ ಮಳೆಯಿಂದ ಆಗಿರುವ ನಷ್ಟದ ವರದಿಯನ್ನು ಶೀಘ್ರವಾಗಿ ಒಪ್ಪಿಸುವಂತೆ ತಹಶೀಲ್ದಾರ್ ಅವರು ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಸಹ ಇದುವರೆಗೂ ಯಾವ ಅಧಿಕಾರಿಗಳು ರೈತರನ್ನು ಸಂಪರ್ಕಿಸಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಉನ್ನತ ಅಧಿಕಾರಿಗಳ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

ಕುಸಿದ ಮನೆಗಳು: ಅಧಿಕ ಮಳೆಯಿಂದಾಗಿ ಮನೆಗಳು ದಿನ ನಿತ್ಯ ಬೀಳುತ್ತಿರುವ ವರದಿಗಳು ಕೇಳಿಬರುತ್ತಿವೆ. ಗೊಡಗವಳ್ಳಿ ಗ್ರಾಮದ ಪರಿಶಿಷ್ಟರ ಕಾಲೊನಿಯ ಕುಬೇರಪ್ಪ ಅವರ ಮನೆ ಮಂಗಳವಾರ ರಾತ್ರಿ ಮಳೆಯಿಂದ ಬಿದ್ದಿದೆ. ಇದೇ ಗ್ರಾಮದ ಚಂದ್ರಪ್ಪ, ನಾಗೇಂದ್ರಮ್ಮ, ಓದಪಾಲಯ್ಯ, ಲಕ್ಮಮ್ಮ, ಹೊಸಹಳ್ಳಿ ಗ್ರಾಮದ ಹನುಮಂತಪ್ಪ, ಮಹೇಂದ್ರಪ್ಪ, ಮಲ್ಲಮ್ಮ, ದೇವಮ್ಮ, ರೇಣುಕಮ್ಮ, ಸವಿತಾ ಅವರ ಮನೆಗಳ ಗೋಡೆಗಳು ಸಹ ಬಿದ್ದಿದ್ದು ಚಿಕ್ಕಎಮ್ಮಿಗನೂರು ಪಿಡಿಒ ಶಶಿಕುಮಾರ್‌ ಸ್ಥಳ ಪರೀಶೀಲನೆ ನಡೆಸಿ ವರದಿಯನ್ನು ಸಲ್ಲಿಸಿದ್ದಾರೆ.

ಗುಂಜಿಗನೂರು ವರದಿ: ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮದ ಪರಿಶಿಷ್ಟರ ಕಾಲೊನಿಯ ಜಯಪ್ಪ ಎಂಬುವರ ಮನೆ ಬಿದ್ದು ಹೋಗಿದೆ. ವಿಷಯ ತಿಳಿದ ಗ್ರಾಮ ಪಂಚಾಯ್ತಿ ಸದಸ್ಯ ಶಿವಣ್ಣ, ಕಂದಾಯ ಕಾರ್ಯದರ್ಶಿ ಮಲ್ಲಿಕಾರ್ಜುನ್‌ ಬುಧವಾರ
ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಶೃಂಗೇರಿ ಹನುಮನಹಳ್ಳಿ ಗೊಲ್ಲರಹಟ್ಟಿಯ ನಾಗಮ್ಮ, ರುದ್ರಮ್ಮ, ರಾಮಕ್ಕ ಹಾಗೂ ಶಿವಕ್ಕ ಅವರ ಮನೆಗಳು ಮಳೆಯಿಂದಾಗಿ ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT