ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿಯೇ ನನ್ನನ್ನು ಉಳಿಸಿಕೊಂಡಿದ್ದರೆ ಖುಷಿಯಾಗುತಿತ್ತು

Last Updated 16 ಜನವರಿ 2011, 20:30 IST
ಅಕ್ಷರ ಗಾತ್ರ

ತವರಿನ ತಂಡಕ್ಕೆ ಆಡಬೇಕು ಎಂಬ ಆಸೆ ನನಗೂ ಇತ್ತು...
ಈ ರೀತಿ ಹೇಳಿದ ರಾಬಿನ್ ಉತ್ತಪ್ಪ ಕೊಂಚ ಹೊತ್ತು ಮೌನವಾದರು. ತಕ್ಷಣವೇ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯೇ ನನ್ನನ್ನು ಖರೀದಿಸಿದ್ದರೆ ನನಗೂ ಖುಷಿಯಾಗುತಿತ್ತು. ಆದರೆ ಹಾಗೇ ಆಗಲಿಲ್ಲ. ಇದಕ್ಕೆ ನಾನೇನು ಮಾಡಲು ಸಾಧ್ಯ? ಕೊನೆಪಕ್ಷ ಅವರು ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಿತ್ತು’ ಎಂದು ಪ್ರತಿಕ್ರಿಯಿಸಿದರು.

ಕೊಡಗಿನ ಹುಡುಗ ಮತ್ತೊಮ್ಮೆ ಮೌನಕ್ಕೆ ಶರಣಾದರು. ಕೊಂಚ ಹೊತ್ತಿನ ನಂತರ ಮಾತು ಮುಂದು ವರಿಸಿದ ಅವರು, ‘ಆಗಿದ್ದೆಲ್ಲಾ ಒಳ್ಳೆಯದೇ  ಆಯಿತು  ಎಂಬುದು  ಈಗ ಗೊತ್ತಾಗಿದೆ, ಕಾರಣ ಹರಾಜಿನಲ್ಲಿ ನಾನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದೇನೆ’ ಎಂದರು.

ನಿಜ, ರಾಜ್ಯದ ಪ್ರಮುಖ ಆಟಗಾರರಿಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ತವರಿನ ಸ್ವಾದ ಕಳೆದುಕೊಂಡಂತಿದೆ, ಅದರಲ್ಲೂ ರಾಬಿನ್ ಅವರಂಥ ಆಟಗಾರರಿಗೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ತಾಕತ್ತು ಇತ್ತು. ಆದರೆ ಆರ್‌ಸಿಬಿ ತಂಡದವರು ಉತ್ತಪ್ಪ ಅವರನ್ನು ಖರೀದಿಸುವ ಒಲವು ತೋರಲಿಲ್ಲ. ಜೊತೆಗೆ ಅವರನ್ನು ‘ರಿಟೈನ್’ ಮಾಡಿಕೊಳ್ಳಲು ಮುಂದಾಗಲಿಲ್ಲ. ರಾಜ್ಯದ ಕೆಲ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ಪ್ರಿಯರು ಕೂಡ ಹೀಗೆ ಹೇಳುತ್ತಾರೆ.

ಐಪಿಎಲ್ ನಿಯಮಗಳ ಪ್ರಕಾರ ನಾಲ್ಕು ಮಂದಿ ಆಟಗಾರರನ್ನು ಹರಾಜಿಗಿಂತ ಮೊದಲೇ ತಂಡದಲ್ಲಿ  ಉಳಿಸಿಕೊಳ್ಳುವ  ಅವಕಾಶ ಇತ್ತು. ಆದರೆ  ವಿರಾಟ್  ಕೊಹ್ಲಿ  ಅವರನ್ನು ಮಾತ್ರ ಆರ್‌ಸಿಬಿ ತನ್ನಲ್ಲಿ ‘ರಿಟೈನ್’ ಮಾಡಿಕೊಂಡಿತು.ಅದೇನೇ ಇರಲಿ, ಉತ್ತಪ್ಪ ಈಗ ಭರ್ಜರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಈ ಬಗ್ಗೆ ಅವರಿಗೆ ಖುಷಿ ಇದೆ, ಈ ಬಾರಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದು ಗೌತಮ್ ಗಂಭೀರ್ (11.40 ಕೋಟಿ ರೂ.-ಕೋಲ್ಕತ್ತ ನೈಟ್ ರೈಡರ್ಸ್). ಅವರನ್ನು ಬಿಟ್ಟರೆ ಉತ್ತಪ್ಪಗೆ (9.66 ಕೋಟಿ ರೂ.-ಪುಣೆ ವಾರಿಯರ್ಸ್) ಅತಿ ಹೆಚ್ಚು ಹಣ.

‘ಇಷ್ಟೊಂದು ಮೊತ್ತಕ್ಕೆ ಮಾರಾಟವಾಗಬಹುದು ಎಂಬ ನಿರೀಕ್ಷೆ ಖಂಡಿತ ಇರಲಿಲ್ಲ. ಆದರೆ ದೇವರು ನನ್ನ ಮೇಲೆ ಕರುಣೆ ತೋರಿಸಿದ್ದಾನೆ. ಫ್ರಾಂಚೈಸಿಗಳಿಗೆ ನನ್ನ ಸಾಮರ್ಥ್ಯದ ಪರಿಚಯವಾಗಿದೆ’ ಎನ್ನುತ್ತಾರೆ ರಾಬಿನ್.25 ವರ್ಷ ವಯಸ್ಸಿನ ಉತ್ತಪ್ಪ ‘ಮ್ಯಾಚ್ ವಿನ್ನರ್’ ಎಂಬ ಹಣೆಪಟ್ಟಿ ಹೊಂದಿದ್ದಾರೆ. ಇದು ಅವರ ಪ್ಲಸ್ ಪಾಯಿಂಟ್ ಕೂಡ. ಜೊತೆಗೆ ಭರ್ಜರಿ ಸಿಕ್ಸರ್‌ಗಳನ್ನು ಎತ್ತುವ ತಾಕತ್ತು  ಅವರಲ್ಲಿದೆ. ವಿಕೆಟ್ ಕೀಪಿಂಗ್ ಜವಾಬ್ದಾರಿ ಕೂಡ ನಿಭಾಯಿಸಬಲ್ಲರು.

ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲರು. ಈ ಕಾರಣ ಇಷ್ಟು ಮೊತ್ತ ನೀಡಿ ಅವರನ್ನು ಪುಣೆ ಫ್ರಾಂಚೈಸಿ ಖರೀದಿಸಿದೆ. ಐಪಿಎಲ್ ಹಾಗೂ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ತಂಡಕ್ಕೆ ಹಿಂದಿರುಗುವ ವಿಶ್ವಾಸವನ್ನೂ ಅವರು ಹೊಂದಿದ್ದಾರೆ. ಆದರೆ ಅಂತಿಮ ನಿರ್ಧಾರ ಆಯ್ಕೆದಾರರದ್ದು ಎನ್ನಲು ಅವರು ಮರೆಯುವುದಿಲ್ಲ.

ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತವೇ ಚಾಂಪಿಯನ್ ಆಗುವ ಫೇವರಿಟ್ ಎನ್ನುತ್ತಾರೆ.ಅದಕ್ಕೆ ಉತ್ತಪ್ಪ ನೀಡುವ ಕಾರಣ ಟೂರ್ನಿ ಉಪಖಂಡದಲ್ಲಿ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳ ಬೆಂಬಲ ಸಿಗುತ್ತೆ ಎಂಬುವುದು. ಆದರೆ ಈ ಬಾರಿ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಎಡವಿದ್ದು ಅವರಿಗೆ ನಿರಾಸೆ ಉಂಟು ಮಾಡಿದೆ. ‘ಚಾಂಪಿಯನ್ ಆಗುವ ವಿಶ್ವಾಸವಿತ್ತು.ಎಲ್ಲರೂ ಉತ್ತಮ ಪ್ರದರ್ಶನ ತೋರುತ್ತಿದ್ದರು. ಹೆಚ್ಚಿನ ಬ್ಯಾಟ್ಸ್‌ಮನ್‌ಗಳು 500 ರನ್‌ಗಳ ಗಡಿ ದಾಟಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಎಡವಿದೆವು. ಕಳಪೆ ಪಿಚ್ ಇದಕ್ಕೆ ಒಂದು ಕಾರಣ’ ಎನ್ನುತ್ತಾರೆ ಉತ್ತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT