ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಂಬಗಿರಿಯಲ್ಲಿ ಏಕಾದಶಿ ಪೂಜೆ

Last Updated 6 ಜನವರಿ 2012, 9:25 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಆಲಂಬಗಿರಿ ಕಲ್ಕಿ ಲಕ್ಷ್ಮೀವೆಂಕಟ ರಮಣಸ್ವಾಮಿ ದೇವಾಲಯದಲ್ಲಿ ಗುರುವಾರ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರತಿ ವರ್ಷದಂತೆ ವೆಂಕಟರಮಣಸ್ವಾಮಿ ವಿಶೇಷ ವೈಕುಂಠನಾಥನ್ ಅಲಂಕಾರ ಹಾಗೂ ಶ್ರೀದೇವಿ, ಭೂದೇವಿ ಅಮ್ಮನವರಿಗೆ ಶೇಷ ವಾಹನ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೇ ಸಾವಿರಾರು ಭಕ್ತರು ವೈಕುಂಠ ದ್ವಾರದ ಬಳಿ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ಅಲಂಬಗಿರಿ ಕ್ಷೇತ್ರದ ಜೀಣೋದ್ಧಾರ ಕಾರ್ಯ ಕೈಗೊಂಡಿರುವ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಮ್ ವಿಶೇಷ ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರ್ ಕೃಷ್ಣಮೂರ್ತಿ, ನ್ಯಾಯಾಧೀಶರಾದ ಗೋಪಾಲ್, ಪ್ರಕಾಶ್ ನಾಯ್ಡು, ಚಂದ್ರಶೇಖರ್, ಮುದಿಗೌಡರ್  ಭಾಗವಹಿಸಿದ್ದರು. ಭಕ್ತರಿಗೆ ಯೋಗಿನಾರೇಯಣ ಮಠದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಶೇಷ ಉತ್ಸವ: ಆಲಂಬಗಿರಿಯಲ್ಲಿ ಶುಕ್ರವಾರ ವೈಕುಂಠ ದ್ವಾದಶಿ ಅಂಗವಾಗಿ ಕಲ್ಕಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 5ಕ್ಕೆ ಸುಪ್ರಭಾತ, ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಗರುಡವಾಹದಲ್ಲಿ ಅಲಂಕರಿಸಿ ವಿಶೇಷ ಮಂಗಳವಾದ್ಯ ಮತ್ತು ಭಜನಾ ತಂಡದೊಂದಿಗೆ ಉತ್ಸವ ನಡೆಯಲಿದೆ.
ಶಿಡ್ಲಘಟ್ಟ:ವಿವಿಧೆಡೆ ಪೂಜೆ

ಶಿಡ್ಲಘಟ್ಟ: ಹೂವಿನಿಂದ ಅಲಂಕೃತಗೊಂಡ ಉಯ್ಯಾಲೆಯಲ್ಲಿ ವೆಂಕಟೇಶ್ವರ, ಶ್ರೀದೇವಿ, ಭೂದೇವಿಯ ಚಿನ್ನದ ಬಣ್ಣದ ವಿಗ್ರಹಗಳನ್ನಿಟ್ಟು ಭಕ್ತರು ತೂಗುತ್ತಿದ್ದರೆ, ಮುಂದೆ ಸಾಗಿದಂತೆ ವೈಕುಂಠದ ಏಳು ಬಾಗಿಲುಗಳು ಸ್ವಾಗತಿಸುತ್ತವೆ. ಅದನ್ನು ದಾಟಿದೊಡನೆ ವಿವಿಧ ಹೂಗಳಿಂದ ಅಲಂಕೃತಗೊಂಡ ವೈಕುಂಠದಲ್ಲಿ ವೆಂಕಟೇಶ್ವರ ಮತ್ತು ಲಕ್ಷ್ಮಿದೇವಿಯ ಬೃಹತ್ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯುತ್ತಿರುತ್ತದೆ.
 ತಾಲ್ಲೂಕಿನ ಮಳ್ಳೂರು ಗ್ರಾಮದ ಸಮೀಪವಿರುವ ಸಾಯಿನಾಥ ಜ್ಞಾನಮಂದಿರದಲ್ಲಿ ಗುರುವಾರ ವೈಕುಂಠ ಏಕಾದಶಿಯ ಪ್ರಯುಕ್ತ ಸಪ್ತದ್ವಾರದ ವೈಕುಂಠವನ್ನೇ ಸೃಷ್ಟಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ವಿವಿಧ ತಾಲ್ಲೂಕುಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆದರು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ತಂಡೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆದುದು ವಿಶೇಷವಾಗಿತ್ತು. ಗ್ರಾಮಸ್ಥರು ಶ್ವೇತವಸ್ತ್ರಧಾರಿಗಳಾಗಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಭಕ್ತರಿಗೆಲ್ಲ ಪ್ರಸಾದ ವಿನಿಯೋಗ ನಡೆಯಿತು.
 `ವೈಕುಂಠ ಏಕಾದಶಿ ಏಕಾದಶಿಗಳಲ್ಲಿ ವಿಶೇಷ ದಿನ. ಈ ದಿನ ವೆಂಕಟೇಶ್ವರ ಮತ್ತು ವಿಷ್ಣು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂದು ನಂಬಿಕೆಯಿದೆ. ವೈಕುಂಠ ಏಕಾದಶಿಯಂದು ವೈಕುಂಠದ(ಸ್ವರ್ಗದ) ಬಾಗಿಲು ತೆರೆದಿರುತ್ತದೆ. ಆದ್ದರಿಂದ ವೆಂಕಟೇಶ್ವರ ಅಥವಾ ವಿಷ್ಣುವಿನ ದರ್ಶನ ಪಡೆಯುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ. “ವೆಂಕಟೇಶೋ ವಾಸುದೇವೋ ಪ್ರದ್ಯುಮ್ನೊ ಅಮಿತವಿಕ್ರಮಃ, ಸಂಕರ್ಷಣೋ ಅನಿರುದ್ಧಶ್ಚ ಶೇಶಾದ್ರಿಪತಿರೇವಚ” ಎಂದು ವೆಂಕಟೇಶ್ವರ ಸ್ತೋತ್ರವನ್ನು ಪಠಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ~ ಎಂದು ದೇವಾಲಯದ ವ್ಯವಸ್ಥಾಪಕ ನಾರಾಯಣಸ್ವಾಮಿ ತಿಳಿಸಿದರು.
 `ಸಪ್ತ ದ್ವಾರಗಳನ್ನು ದಾಟಿ ವೈಕುಂಠದಲ್ಲಿ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದು, ವಿಘ್ನೇಶ್ವರ, ಸಾಯಿಬಾಬಾ ಮತ್ತು ಅಯ್ಯಪ್ಪಸ್ವಾಮಿಯರ ದರ್ಶನವನ್ನು ಪಡೆದು ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಈ ಪವಿತ್ರ ದಿನ ಎಲ್ಲರೂ ಪಾತ್ರರಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT