ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂಗೆಡ್ಡೆ ಬೆಳೆದ ರೈತನ ಯಶೋಗಾಥೆ

Last Updated 9 ಅಕ್ಟೋಬರ್ 2011, 3:55 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿಯ ರೈತರು ಅರಿಶಿಣ ನಂಬಿ ಬದುಕು ಕಟ್ಟಿಕೊಂಡಿದ್ದರು. ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶದಲ್ಲೂ ಅರಿಶಿಣ ಬಿತ್ತನೆ ಮಾಡಿದ್ದರು. ಆದರೆ, ಬೆಲೆ ಕುಸಿತ ಅವರನ್ನು ದಿಕ್ಕೆಡುವಂತೆ ಮಾಡಿದೆ. ಕೆಲವು ರೈತರು ಅರಿಶಿಣದ ಬದಲಾಗಿ ತರಕಾರಿ, ಹೂವು ಇತ್ಯಾದಿ ಬೆಳೆದು ಆದಾಯಗಳಿಸುತ್ತಿದ್ದಾರೆ. ಇದಕ್ಕೆ ಸಂತೇಮರಹಳ್ಳಿಯ ಪ್ರಗತಿಪರ ರೈತ ಪ್ರಭುಸ್ವಾಮಿ ಉದಾಹರಣೆಯಾಗಿದ್ದಾರೆ.

ಪ್ರಭುಸ್ವಾಮಿ ತಮಗೆ ಸೇರಿದ 3 ಎಕರೆ ಜಮೀನಿನಲ್ಲಿ ಅರಿಶಿಣ ಬೆಳೆದಿದ್ದಾರೆ. ಪ್ರಸ್ತುತ ಬೆಲೆ ಕುಸಿತದಿಂದ ಅವರು ಕಂಗಾಲಾಗಿದ್ದಾರೆ. ಬೆಲೆ ಕುಸಿತದಿಂದ ಆಗಿರುವ ನಷ್ಟ ತುಂಬಿಸಿಕೊಳ್ಳುವ ಉದ್ದೇಶದಿಂದ 20 ಗುಂಟೆ ಜಮೀನಿನಲ್ಲಿ ಪ್ರಾಯೋಗಿಕವಾಗಿ ಆಲೂಗೆಡ್ಡೆ ಬೆಳೆಯಲು ಮುಂದಾದರು. ಅದು ಈಗ ಫಲ ನೀಡಿದೆ. ಸಮೃದ್ಧ ಫಸಲು ಬಂದಿದ್ದು, ಅವರಿಗೆ ಕೊಂಚ ನೆಮ್ಮದಿ ತಂದಿದೆ.

ಆಲೂಗೆಡ್ಡೆ ಅಲ್ಪಾವಧಿ ಬೆಳೆ. ಹೆಚ್ಚು ಶ್ರಮವಿಲ್ಲದೆ ನೀರಾವರಿ ಪ್ರದೇಶದಲ್ಲಿ ಬೆಳೆಯಬಹುದು. ಬಿತ್ತನೆಗೂ ಮೊದಲು ಭೂಮಿ ಹದಗೊಳಿಸಬೇಕು. ನಾಟಿ ಮಾಡಿದ 90 ದಿನದೊಳಗೆ ಆಲೂಗೆಡ್ಡೆ ಕಟಾವಿಗೆ ಬರುತ್ತದೆ. ನಾಟಿ ಮಾಡಿದ ಆರಂಭದಲ್ಲಿ ಹಾಗೂ 25ನೇ ದಿನಕ್ಕೆ ಸಮರ್ಪಕವಾಗಿ ಗೊಬ್ಬರ ಹಾಕಬೇಕು.

ರೈತರು ಆಲೂಗೆಡ್ಡೆಗೆ ತಗಲುವ ಅಂಗಮಾರಿ ರೋಗದ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಎಲೆಯು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ಕಂಡುಬಂದರೆ ತಜ್ಞರ ಸಲಹೆ ಮೇರೆಗೆ ಕ್ರಿಮಿನಾಶಕ ಸಿಂಪಡಿಸಬೇಕು. ರೋಗದ ಲಕ್ಷಣ ಕಾಣಿಸಿಕೊಂಡ ತಕ್ಷಣವೇ ಔಷಧೋಪಚಾರ ಮಾಡಿದರೆ ಬೆಳೆ ನಷ್ಟ ತಪ್ಪಿಸಬಹುದು.

ಗಿಡವೊಂದರಲ್ಲಿ 6ರಿಂದ 8ರವರೆಗೂ ಆಲೂಗೆಡ್ಡೆ ಬಿಡುತ್ತವೆ. ಉತ್ತಮ ಫಸಲು ಬಂದರೆ ಎಕರೆಯೊಂದಕ್ಕೆ 20 ಟನ್‌ನಷ್ಟು ಆಲೂಗೆಡ್ಡೆ ಇಳುವರಿ ಲಭ್ಯ. 20 ಗುಂಟೆಯಲ್ಲಿ 8ರಿಂದ 10ಟನ್‌ವರೆಗೆ ಬೆಳೆಯಬಹುದು ಎನ್ನುತ್ತಾರೆ ಪ್ರಭುಸ್ವಾಮಿ.

`ಪ್ರಸ್ತುತ ಒಂದು ಕ್ವಿಂಟಲ್‌ಗೆ 1 ಸಾವಿರದಿಂದ 1,500 ರೂವರೆಗೂ ಧಾರಣೆಯಿದೆ. 20 ಗುಂಟೆಯಲ್ಲಿ ಆಲೂಗೆಡ್ಡೆ ಬೆಳೆಯಲು ಬಿತ್ತನೆ, ರಸಗೊಬ್ಬರ, ಕ್ರಿಮಿನಾಶಕ ಇತ್ಯಾದಿ ಸೇರಿದಂತೆ ಸುಮಾರು 15ರಿಂದ 20 ಸಾವಿರ ರೂ ಖರ್ಚಾಗಿದೆ. ಉತ್ತಮ ಧಾರಣೆ ಸಿಕ್ಕಿದರೆ ಆದಾಯಗಳಿಸಬಹುದು. ಹೋಬಳಿಯ ರೈತರು ಅರಿಶಿಣ ನಂಬಿ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಪಾವಧಿ ಬೆಳೆ ಬಗ್ಗೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ರೈತರಿಗೆ ಸರಿಯಾದ ಮಾರ್ಗದರ್ಶನ ನೀಡದರೆ ಅನ್ನದಾತರ ಬದುಕು ಸಂಕಷ್ಟಕ್ಕೆ ಸಿಲುಕುವುದು ತಪ್ಪುತ್ತದೆ~ ಎಂಬುದು ಅವರ ಅಭಿಮತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT