ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ...ವೇಗದ ನಿರೀಕ್ಷೆಯಲ್ಲಿ...!

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಕ್ಟೋಬರ್ 30...ಭಾರತದ ಪಾಲಿಗೆ ಮಹತ್ವದ ದಿನ. ಲಕ್ಷ ಲಕ್ಷ ಅಭಿಮಾನಿಗಳು ಆ ದಿನಕ್ಕಾಗಿ ಕಾಯುತ್ತಿದ್ದಾರೆ. ಕಾರಣ ಅಂದಿನ ಶರವೇಗದ ಮೋಜು, ಮಸ್ತಿಯ ಮಜಾ. ಅಂದು ಭಾರತದಲ್ಲಿ ಮೊದಲ ಬಾರಿ ಫಾರ್ಮುಲಾ ಒನ್ ರೇಸ್ ನಡೆಯುತ್ತಿದೆ. ವೇಗದ ಗಮ್ಮತ್ತನ್ನು ಕಣ್ತುಂಬಿಕೊಳ್ಳಲು ಆ ಕ್ಷಣವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

ಭಾರತದಲ್ಲಿ ಕ್ರಿಕೆಟ್, ಫುಟ್‌ಬಾಲ್, ಟೆನಿಸ್ ಕ್ರೀಡೆಗಳಿಗೆ ಇರುವಷ್ಟು ಆಸಕ್ತಿ ಫಾರ್ಮುಲಾ ಒನ್ ರೇಸ್‌ನತ್ತಲೂ ಇದೆ. ಇಂಗ್ಲೆಂಡ್‌ನ ಲೂಯಿಸ್ ಹ್ಯಾಮಿಲ್ಟನ್ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ನಿರ್ಮಾಣವಾಗಿದ್ದ ವಾತಾವರಣವೇ ಅದಕ್ಕೆ ಸಾಕ್ಷಿ. ನೈಸ್ ರಸ್ತೆಯಲ್ಲಿ ಅವರು ಕಾರು ಚಲಾಯಿಸುವುದನ್ನು ವೀಕ್ಷಿಸಲು ನೂಕುನುಗ್ಗುಲು ಸಂಭವಿಸಿತ್ತು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ರೇಸ್‌ನ ದರ್ಶನ ಸಿಗದೇ ಕೆಲವರು ನಿರಾಸೆಯಿಂದ ಹಿಂತಿರುಗಿದ್ದರು.

ವೇಗ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಫಾರ್ಮುಲಾ ಒನ್ ಡ್ರೈವರ್‌ಗಳೆಂದರೆ ರಸ್ತೆ ಮೇಲಿನ ಪೈಲಟ್‌ಗಳಿದ್ದಂತೆ. ವೇಗವೇ ಅವರ ಸ್ಟೈಲ್. ಅವರು ಶರವೇಗದಲ್ಲಿ ಕಾರು ಚಲಾಯಿಸುವ ಶೈಲಿಯನ್ನು   ಸನಿಹದಿಂದ ಕಣ್ತುಂಬಿಕೊಳ್ಳುವ ಅವಕಾಶ ಭಾರತದ ಅಭಿಮಾನಿಗಳಿಗೆ ಈಗ ಲಭಿಸಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ನೀಡಿ ಟಿಕೆಟ್ ಖರೀದಿಸಿದ್ದಾರೆ.

ಲೂಯಿಸ್ ಹ್ಯಾಮಿಲ್ಟನ್, ಜೆನ್ಸನ್ ಬಟನ್, ಹಾಲಿ ಚಾಂಪಿಯನ್ ಸೆಬಾಸ್ಟಿಯನ್ ವೆಟೆಲ್, ಮಾರ್ಕ್ ವೆಬರ್, ರೇಸಿಂಗ್ ದಾಖಲೆಗಳ ಒಡೆಯ ಮೈಕಲ್ ಶುಮೇಕರ್ ಸೇರಿದಂತೆ ವಿಶ್ವದ ಅತಿರಥ ಮಹಾರಥರು ಈ ರೇಸಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಜೊತೆಯಲ್ಲಿ ಭಾರತದ ನಾರಾಯಣ್ ಕಾರ್ತಿಕೇಯನ್ ಹಾಗೂ ಕರುಣ್ ಚಾಂಧೋಕ್ ಕೂಡ ಇರಲಿದ್ದಾರೆ. ಭಾರತದ `ಫೋರ್ಸ್ ಇಂಡಿಯಾ~ ಕಾರು ಕೂಡ ಓಡಲಿದೆ.

ಅದಕ್ಕಾಗಿ ನವದೆಹಲಿ ಸಮೀಪದ ಗ್ರೇಟರ್ ನೊಯಿಡಾದಲ್ಲಿ `ಬುದ್ಧ ಅಂತರರಾಷ್ಟ್ರೀಯ ರೇಸಿಂಗ್ ಟ್ರ್ಯಾಕ್~ ಸಕಲ ಸಜ್ಜುಗೊಂಡಿದೆ. ಇಲ್ಲಿ ಅಕ್ಟೋಬರ್ 28ರಿಂದ 30ರವರೆಗೆ ಫಾರ್ಮುಲಾ ಒನ್ ರೇಸ್   ನಡೆಯಲಿದೆ. ಅ.30ರ ಮೂರು ಗಂಟೆಗೆ ರೇಸ್‌ನ ಫೈನಲ್ ನಡೆಯಲಿದೆ.

ಸಂಘಟಕರಾದ ಜೇಪಿ ಸಮೂಹದ ಪ್ರಕಾರ ಈ ರೇಸಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ. ಇದನ್ನು 875 ಎಕರೆ ಜಾಗದಲ್ಲಿ ನಿರ್ಮಿಸಲಾಗಿದ್ದು, 5.14 ಕಿ.ಮೀ ವ್ಯಾಪ್ತಿ ಹೊಂದಿದೆ. ಇಲ್ಲಿ ಎಫ್-1 ರೇಸ್ ಆಯೋಜಿಸಲು ಜೇಪಿ ಸಮೂಹಕ್ಕೆ 10 ವರ್ಷದ ಗುತ್ತಿಗೆ ನೀಡಲಾಗಿದೆ. ಜರ್ಮನಿಯ ಹರ್ಮಾನ್ ಟಿಲ್ಕೆ ಇದನ್ನು ವಿನ್ಯಾಸಗೊಳಿಸಿದ್ದಾರೆ. ಒಂದೂವರೆ ಲಕ್ಷ ಅಭಿಮಾನಿಗಳು ವೀಕ್ಷಿಸಲು ಇಲ್ಲಿ ಸ್ಥಳಾವಕಾಶವಿದೆ. ಇದು 2011ರ ರೇಸಿಂಗ್ ಋತುವಿನ 17ನೇ ರೇಸ್ ಆಗಿದೆ.

1993ರವರೆಗೆ ಭಾರತದಲ್ಲಿ ಎಫ್-1 ರೇಸ್‌ಅನ್ನು ಟಿವಿಯಲ್ಲಿ ತೋರಿಸುತ್ತಿರಲಿಲ್ಲ. ಟಿವಿಯಲ್ಲಿ ಪ್ರಸಾರ ಶುರುವಾದ ಮೇಲೆ ಇಲ್ಲೂ ಅಭಿಮಾನಿಗಳು ಹುಟ್ಟಿಕೊಂಡರು. ಭಾರತದಲ್ಲಿ ಎಫ್-1 ರೇಸ್ ಆಯೋಜಿಸಲು 1997ರಲ್ಲೇ ಕಸರತ್ತು ಶುರುವಾಗಿತ್ತು. ಚೆನ್ನೈನ ನಾರಾಯಣ್ ಕಾರ್ತಿಕೇಯನ್ ಭಾರತವನ್ನು ಪ್ರತಿನಿಧಿಸಿದ ಮೊದಲ ಫಾರ್ಮುಲಾ ಒನ್ ಡ್ರೈವರ್.

ಅದು ಭಾರತದಲ್ಲಿ ಮತ್ತಷ್ಟು ಕ್ರೇಜ್ ಸೃಷ್ಟಿಸಿತು. ಫಾರ್ಮಲಾ ಒನ್ ರೇಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಎರಡನೇ ಚಾಲಕ ಚಾಂಧೋಕ್. ಇವರಿಬ್ಬರು ಈಗ ಸ್ವದೇಶದ ಅಭಿಮಾನಿಗಳ ಎದುರು ಕಾರು ಚಲಾಯಿಸಲು ಖುಷಿಯಿಂದ ಕಾಯುತ್ತಿದ್ದಾರೆ.

`ವಿಶ್ವದ ಶ್ರೇಷ್ಠ 24 ಚಾಲಕರು ಫಾರ್ಮಲಾ ಒನ್ ರೇಸ್‌ನಲ್ಲಿ ಪಾಲ್ಗೊಂಡಿರುತ್ತಾರೆ. ಅವರಲ್ಲಿ ನಾನು ಕೂಡ ಒಬ್ಬ. ಇದಕ್ಕಿಂತ ಹೆಮ್ಮೆ ಬೇರೆ ಯಾವುದಿದೆ ಹೇಳಿ. ಚಿಕ್ಕ ವಯಸ್ಸಿನಲ್ಲಿ ನಾನು ಕಂಡ ಕನಸು ನಿಜವಾಯಿತು~ ಎಂದು ಇತ್ತೀಚೆಗೆ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಚಾಂಧೋಕ್ ನುಡಿದಿದ್ದರು. ಈ ಮೊದಲು ಹಿಸ್ಪಾನಿಯಾ ತಂಡದಲ್ಲಿದ್ದ ಚಾಂಧೋಕ್ ಈಗ `ಟೀಮ್ ಲೋಟಸ್~ ತಂಡದ ಪರೀಕ್ಷಾರ್ಥ ಡ್ರೈವರ್ ಆಗಿದ್ದಾರೆ.

`ಭಾರತದಲ್ಲಿ ಮೋಟಾರ್ ಸ್ಪೋರ್ಟ್ಸ್‌ಗೆ ಉತ್ತಮ ಭವಿಷ್ಯವಿದೆ. ನಮಗೆ ಸಿಗುತ್ತಿರುವ ಪ್ರಚಾರವೇ ಅದಕ್ಕೆ ಸಾಕ್ಷಿ. ಹೋದಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ~ ಎನ್ನುತ್ತಾರೆ 34 ವರ್ಷ ವಯಸ್ಸಿನ ಕಾರ್ತಿಕೇಯನ್. ಅವರೀಗ ಸ್ಪೇನ್‌ನ `ಹಿಸ್ಪಾನಿಯಾ ರೇಸಿಂಗ್ ತಂಡ~ವನ್ನು ಪ್ರತಿನಿಧಿಸುತ್ತಿದ್ದಾರೆ. 2005ರಲ್ಲಿ ಕಾರ್ತಿಕೇಯನ್ `ಜೋರ್ಡಾನ್~ ತಂಡ ಪ್ರತಿನಿಧಿಸಿದ್ದರು.

ಆರ್ಥಿಕ ಬೆಳವಣಿಗೆ ಉದ್ದೇಶದಿಂದ ಕೂಡ ಈ ರೇಸ್ ಮಹತ್ವ ಪಡೆದುಕೊಂಡಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸಾವಿರಾರು ಮಂದಿಗೆ ಉದ್ಯೋಗ ಲಭಿಸಲಿದೆ. ಜೊತೆಗೆ ವಿಶ್ವದ ರೇಸಿಂಗ್ ಪ್ರಿಯರ ಗಮನವೆಲ್ಲಾ ಭಾರತದತ್ತ ಹರಿಯಲಿದೆ. ಹಾಗಾಗಿ ಈ ಬಾರಿಯ ದೀಪಾವಳಿ ಭಾರತದ ಪಾಲಿಗೆ ಅದೃಷ್ಟದ ಹಬ್ಬವಾಗಲಿದೆ. ಆದರೆ ಯಾವ ರೀತಿಯಲ್ಲಿ ಆಯೋಜಿಸುತ್ತಾರೆ? ಅದರಲ್ಲಿ ಯಶಸ್ವಿಯಾಗುತ್ತಾರಾ? ಎಂಬ ಕುತೂಹಲ ಅಭಿಮಾನಿಗಳದ್ದು. 
                     
ಎಫ್-1 ಸುತ್ತ-ಮುತ್ತ
ಎಫ್-1 ರೇಸ್‌ನ ಒಟ್ಟು ದೂರು 308.4 ಕಿ.ಮೀ. ಒಟ್ಟು 60 ಲ್ಯಾಪ್‌ಗಳಿರುತ್ತವೆ. ಅದರಲ್ಲಿ 16 ತಿರುವುಗಳಿರುತ್ತವೆ. ಭಾರತ ಹಂತದ ಎಫ್-1 ರೇಸ್‌ನಲ್ಲಿ ರೆಡ್ ಬುಲ್, ಮೆಕ್‌ಲಾರೆನ್, ಫೆರಾರಿ, ಮರ್ಸಿಡೀಸ್, ರೆನಾಲ್ಟ್, ಫೋರ್ಸ್ ಇಂಡಿಯಾ ಸೇರಿದಂತೆ 12 ರೇಸಿಂಗ್ ತಂಡಗಳು ಪಾಲ್ಗೊಳ್ಳಲಿವೆ. ಪ್ರತಿ ತಂಡದಲ್ಲಿ ಎರಡು ಕಾರುಗಳಿರುತ್ತವೆ. ಒಟ್ಟು 24 ಚಾಲಕರಿರುತ್ತಾರೆ.

ತೆರೆಯ ಮೇಲಷ್ಟೆ ಹೆಚ್ಚಿನವರು ರೇಸ್ ನೋಡಿ ಖುಷಿಪಡುತ್ತಾರೆ. ಆದರೆ ಅದರ ಹಿಂದಿನ ವ್ಯವಸ್ಥೆ ಮಾತ್ರ ಬಹು ಕಠಿಣ. ರೇಸ್‌ಗೆ ಮೊದಲು ಸಭೆ ಇರುತ್ತದೆ. ಅದರಲ್ಲಿ 30ಕ್ಕೂ ರೇಸ್ ಎಂಜಿನಿಯರ್‌ಗಳು ಕಾರು ನಿಯಂತ್ರಣದ ಬಗ್ಗೆ ಪಾಠ ಮಾಡುತ್ತಾರೆ. ಕಾಕ್‌ಪಿಟ್ ನಿಯಂತ್ರಣದ ಬಗ್ಗೆ 30 ಪುಟಗಳ ಪುಸ್ತಕದಲ್ಲಿರುವ ಅಂಶಗಳ ವಿವರಣೆ ನೀಡುತ್ತಾರೆ. ಕಾರಿನ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಿಯಂತ್ರಿಸುವ ಬಗ್ಗೆ ಹೇಳುತ್ತಾರೆ. ಸ್ಟೀಯರಿಂಗ್ ವ್ಹೀಲ್‌ನಲ್ಲಿ 24 ಬಟನ್‌ಗಳಿವೆ. ಇದೆಲ್ಲಾ ಒಂದು ಪರೀಕ್ಷೆಗೆ ಓದುವ ರೀತಿ!

ಫಾರ್ಮುಲಾ-1 ರೇಸ್‌ನಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಕಾರು ಮತ್ತು ಅದರ ಚಾಲಕ ಆಗಮಿಸುವುದು ಮಾತ್ರವಲ್ಲ, ಪ್ರತಿ ಕಾರಿನೊಂದಿಗೆ 300-400 ಸಿಬ್ಬಂದಿ ಇರುತ್ತಾರೆ. ಜೊತೆಗೆ ಭದ್ರತಾ ಸಿಬ್ಬಂದಿ ಬರುತ್ತಾರೆ. ಜಂಬೊ ಜೆಟ್‌ನಲ್ಲಿ ಕಾರುಗಳನ್ನು ತಂದಿಳಿಸಲಾಗುತ್ತದೆ.

ಎಫ್-1ಗೂ ಫಿಟ್‌ನೆಸ್ ಬಹುಮುಖ್ಯ. ಮಧ್ಯಾಹ್ನ 12 ಗಂಟೆಯ ಸುಡು ಬಿಸಿಲಿನಲ್ಲಿ ವಾರಕ್ಕೆ 250 ಕಿ.ಮೀಗೂ ಹೆಚ್ಚು ದೂರ ಸೈಕಲ್ ಓಡಿಸುತ್ತಾರೆ. ಸೂರ್ಯ ನೆತ್ತಿ ಮೇಲಿದ್ದಾಗ ಬೀಚ್‌ನಲ್ಲಿ ಓಡುತ್ತಾರೆ. ಏಕೆಂದರೆ ಕಾರನ್ನು ಓಡಿಸುವಾಗ ಅದರ ಕಾಕ್‌ಪಿಟ್ ಉಷ್ಣಾಂಶ ಸಹಿಸಿಕೊಳ್ಳಲು ಈ ರೀತಿಯ ಕಸರತ್ತು ಅಗತ್ಯ. ನಿಮಗೊಂದು ವಿಷಯ ಗೊತ್ತಿರಬಹುದು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಗ ಯಾವುದೇ ಕ್ರೀಡಾಪಟುವಿನ ಹೃದಯ ಬಡಿತ ಹೆಚ್ಚಾಗಿರುತ್ತದೆ. ಅದರಲ್ಲೂ ಕಾರು ರೇಸಿಂಗ್ ವೇಳೆ ಡ್ರೈವರ್‌ಗಳ ಹೃದಯ ನಿಮಿಷಕ್ಕೆ 183 ಬೀಟ್ ತಲುಪುತ್ತದೆಯಂತೆ.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT