ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ಮನೆಗಳ ಸಾಲ ಮನ್ನಾಕ್ಕೆ ಆಗ್ರಹ

Last Updated 25 ಡಿಸೆಂಬರ್ 2012, 6:26 IST
ಅಕ್ಷರ ಗಾತ್ರ

ಗದಗ: ಆಶ್ರಯ ಮನೆಗಳ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ, ಆಶ್ರಯ ಕಾಲೊನಿ ನಿವಾಸಿಗಳ ಹೋರಾಟ ಸಮಿತಿ ನೇತತ್ವದಲ್ಲಿ ಆಶ್ರಯ ಕಾಲೊನಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ  ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಗಂಗಿಮಡಿ ಮತ್ತು ನರಸಾಪುರ ಆಶ್ರಯ ಕಾಲೊನಿಯ ಜನರು ಗಂಗಿಮಡಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದರು. ಆಶ್ರಯ ನಿವಾಸಿಗಳಿಗೆ ಮನೆಗಳ ಮಂಜೂರು ಮಾಡುವುದು, ಹಕ್ಕುಪತ್ರ ವಿತರಿಸುವುದು, ಆಶ್ರಯ ಪ್ರದೇಶಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

2001ರಲ್ಲಿ ನಿರ್ಮಿಸಿದ ನರಸಾಪುರ ಆಶ್ರಯ ಕಾಲೊನಿಯಲ್ಲಿ  600 ಕುಟುಂಬಗಳು ವಾಸವಾಗಿವೆ. ಆದರೆ, ಈ ಪ್ರದೇಶಕ್ಕೆ ಕನಿಷ್ಟ ಮೂಲಸೌಲಭ್ಯ ಕಲ್ಪಿಸಿಲ್ಲ. 12 ವರ್ಷಗಳ ಹಿಂದೆಯೇ ಮನೆಗಳ ಹಂಚಿಕೆಯಾಗಿದ್ದರೂ ಆ ಮನೆಗಳಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ವಿತರಿಸಿಲ್ಲ. ಹಕ್ಕುಪತ್ರ ನೀಡಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಯಾವುದೇ ಮುನ್ಸೂಚನೆ ಇಲ್ಲದೆ ಖಾಸಗಿ ಸಂಸ್ಥೆಯೊಂದು ಸರ್ಕಾರ ನಿಗದಿಗೊಳಿಸಿದ ಮರುಪಾವತಿ ಸಾಲಕ್ಕಿಂತ ದುಪ್ಪಟ್ಟು ಹಣ ಪಾವತಿಸಬೇಕೆಂದು ಹೇಳುತ್ತಿದೆ ಎಂದು ಸಮಿತಿಯ ಇಮ್ತಿಯಾಜ್ ಮಾನ್ವಿ ಆರೋಪಿಸಿದರು.

ಜಿಲ್ಲೆಯಲ್ಲಿ ಸತತ ಎರಡನೇ ವರ್ಷವೂ ಬರಗಾಲವಿದ್ದು ಕೂಲಿ ಮಾಡಿ ಬದುಕುವ ಆಶ್ರಯ ನಿವಾಸಿಗಳು ಕೂಲಿಗಾಗಿ ಗುಳೆ ಹೋಗುವ ಪ್ರಸಂಗ ನಿರ್ಮಾಣವಾಗಿದೆ. ಸರ್ಕಾರದ ಯಾವುದೇ ಆದೇಶವಿಲ್ಲದೇ ಹಾಗೂ ದಾಖಲೆಗಳಿಲ್ಲದೇ ಖಾಸಗಿ ಸಂಸ್ಥೆಯೊಂದು ಮನೆಯೊಂದಕ್ಕೆ ರೂ.54 ಸಾವಿರ ಕೇಳುತ್ತಿರುವುದು ಬಡಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲೊನಿಗೆ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಘೋಷಿಸಿದ ಆಶ್ರಯ ಮನೆಗಳ ಬಡ್ಡಿ ಮನ್ನಾ ಕೈಬಿಟ್ಟು ಸಂಪೂರ್ಣ ಸಾಲ ಮನ್ನಾ ಮಾಡುವುದರ ಜೊತೆಗೆ ಹಕ್ಕುಪತ್ರ ನೀಡಬೇಕು. ಸದ್ಯ ಮನೆಗಳಲ್ಲಿ ಇರುವ ಫಲಾನುಭವಿಗಳೇ ನಿಜವಾದ ಫಲಾನುಭವಿಗಳಾಗಿದ್ದ ಅವರಿಗೆ ಮನೆ ಮಂಜೂರು ಮಾಡಬೇಕು.

ನರಸಾಪುರ ಆಶ್ರಯ ಕಾಲೊನಿಯನ್ನು ಕೊಳಚೆ ನಿರ್ಮೂಲನಾ  ಮಂಡಳಿ ಕಾಯ್ದೆ 1973ರ ಪ್ರಕಾರ ಸ್ಲಂ ಎಂದು ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಮಿತಿ ಕಾರ್ಯದರ್ಶಿ ರಸೂಲಸಾಬ ಮುಳಗುಂದ, ತಿಪ್ಪವ್ವ ಮುಟಗಾರ, ಹುಸೇನಸಾಬ ನದಾಫ, ಶರೀಫ ಬಿಳೆಯಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT