ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೀಸ್ ಮಾಧ್ಯಮಗಳಲ್ಲಿ ಸಚಿನ್ ಗುಣಗಾನ!

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರದ್ದೇ ಹೆಚ್ಚು ಸುದ್ದಿ. ಅದು ಮೈಕಲ್ ಕ್ಲಾರ್ಕ್ ಬಳಗ ಮೊದಲ    ಟೆಸ್ಟ್ ಪಂದ್ಯ ಗೆದ್ದಿದ್ದಕ್ಕಿಂತ ಹೆಚ್ಚು! ಪತ್ರಿಕೆಗಳು, ಟಿವಿ   ಚಾನೆಲ್‌ಗಳು ಸಚಿನ್ ಅವರನ್ನು ಮನತುಂಬಿ ಹೊಗಳುತ್ತಿವೆ.

ತೆಂಡೂಲ್ಕರ್ ಬಗ್ಗೆ ಯಾರೇ ಮಾತನಾಡಿದರೂ ಅದು ತಲೆಬರಹದ ಸುದ್ದಿ. ಅವರು ಅಭ್ಯಾಸ ನಡೆಸಿದರೂ ದೊಡ್ಡ ಸುದ್ದಿ, ಆಸ್ಟ್ರೇಲಿಯಾದ ರಸ್ತೆಗಳಲ್ಲಿ ತಿರುಗಿದರೂ ಸುದ್ದಿ. ಪುತ್ರ ಅರ್ಜುನ್ ಜೊತೆಗಿರುವ ಚಿತ್ರಗಳು ಇಲ್ಲಿನ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ.

`ಯಶಸ್ಸನ್ನು ಹೇಗೆ ಪಡೆಯಬಹುದು ಎಂಬುದು ಸಚಿನ್ ಅಭ್ಯಾಸ ನಡೆಸುವ ರೀತಿಯಲ್ಲಿಯೇ ಗೊತ್ತಾಗಿ ಬಿಡುತ್ತದೆ. ಹಾಗಾಗಿ ಅವರು ಅಭ್ಯಾಸ ನಡೆಸುವ ರೀತಿ ಅಧ್ಯಯನಕ್ಕೆ ಆಹಾರ ಒದಗಿಸುತ್ತದೆ. ಕಠಿಣ ಪ್ರಯತ್ನವಿಲ್ಲದೇ ಯಶಸ್ಸು ಪಡೆಯುವುದು ಅಸಾಧ್ಯ ಎಂಬುದಕ್ಕೆ ಸಚಿನ್ ಉದಾಹರಣೆ. ಅವರಿಂದ ಕಲಿಯುವುದು ತುಂಬಾ ಇದೆ. ಯಶಸ್ಸಿನ ದಾರಿ ಯಲ್ಲಿ ಅವರದ್ದು ಹೆಚ್ಚುವರಿ ಪ್ರಯತ್ನ~ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಸಚಿನ್ ಮೆಲ್ಬರ್ನ್ ಟೆಸ್ಟ್ ಪಂದ್ಯದ ಮೊದಲ        ಇನಿಂಗ್ಸ್‌ನಲ್ಲಿ ಪೀಟರ್ ಸಿಡ್ಲ್ ಎಸೆತದಲ್ಲಿ ಬೌಲ್ಡ್ ಆಗಿದ್ದರು. ಚೆಂಡು ಅವರ ಬ್ಯಾಟ್‌ನ ಒಳ ಅಂಚಿಗೆ ಬಡಿದು ವಿಕೆಟ್‌ಗೆ ಅಪ್ಪಳಿಸಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಚಿನ್ ಯಾವ ರೀತಿ ಅಭ್ಯಾಸ ನಡೆಸುತ್ತಿದ್ದಾರೆ ಎಂಬುದನ್ನು ಪತ್ರಿಕೆಯೊಂದು ವರದಿ ಮಾಡಿದೆ.

`ನೆಟ್ಸ್ ಸಹಾಯಕರೊಬ್ಬರನ್ನು ಸಚಿನ್ ಆಸ್ಟ್ರೇಲಿಯಾಕ್ಕೆ ಕರೆ ತಂದಿದ್ದಾರೆ. ರಾಘವೇಂದ್ರ ಎಂಬ ಹುಡುಗನ ಸಹಾಯದಿಂದ ಸಚಿನ್ ಗಂಟೆಗಟ್ಟಲೆ ಅಭ್ಯಾಸ ನಡೆಸಿದರು. ಒಂದು ಗಂಟೆ ಬ್ಯಾಟ್ ಮಾಡಿದರು~ ಎಂದು ಪತ್ರಿಕೆ ಬರೆದಿದೆ.

`ಶತಕ ಗಳಿಸುತ್ತಾರೆ ಎಂಬ ಭಾವನೆ~
ಭಾರತ ವಿರುದ್ಧ ಮಂಗಳವಾರ ಆರಂಭವಾಗಲಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯಕ್ಕೆ ಮುನ್ನ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಮೈಕ್ ಹಸ್ಸಿ ಆತಂಕಕ್ಕೆ ಒಳಗಾಗಿದ್ದಾರೆ. ಆ ಆತಂಕಕ್ಕೆ ಕಾರಣ ಸಚಿನ್ ತೆಂಡೂಲ್ಕರ್.

ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಚಿನ್ ಶತಕ ಸಾಧನೆ ಮಾಡಬಹುದು ಎಂಬ ಭಾವನೆ ಹಸ್ಸಿ ಅವರಲ್ಲಿ ಉದ್ಭವಿಸಿದೆ. ಅದು ತಂಡದ ಗೆಲುವಿನ ಯೋಜನೆಗೆ ಅಡ್ಡಿಯಾಗಬಹುದು ಎಂಬ ಕಾರಣ ಅವರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.

`ಹೌದು, ನಾನು ಕೊಂಚ ನರ್ವಸ್ ಆಗಿದ್ದೇನೆ. ತೆಂಡೂಲ್ಕರ್ ಶತಕಗಳ ಶತಕದ ಸಾಧನೆ ಮಾಡುವ ಹೆಚ್ಚಿನ ಸಾಧ್ಯತೆಗಳಿವೆ. ನನ್ನಲ್ಲೂ ಅದೇ ಭಾವನೆ ಇದೆ. ಜೊತೆಗಿದು ಅವರ ನೆಚ್ಚಿನ ಕ್ರೀಡಾಂಗಣ ಕೂಡ~ ಎಂದಿದ್ದಾರೆ.

`ಈ ಸರಣಿಯಲ್ಲಿ ಅವರು ಶತಕ ಗಳಿಸದಿರಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ. ಈ ಸರಣಿ ಮುಗಿದ ಬಳಿಕ ಬೇರೆ ದೇಶದ ಎದುರು ನಡೆಯಲಿರುವ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಲಿ ಸಂತೋಷ~ ಎಂದು ಹಸ್ಸಿ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಪ್ರೇಮಿಗಳು ಕೂಡ ಸಚಿನ್ ಅವರನ್ನು ಬೆಂಬಲಿಸುತ್ತಿರುವ ಪರಿ ಕಂಡ ಹಸ್ಸಿ ಅಚ್ಚರಿಗೆ ಒಳಗಾಗಿದ್ದಾರೆ. ಏಕೆಂದರೆ ಅವರೆಲ್ಲಾ ಸಚಿನ್ ಶತಕ ಗಳಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT