ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೀಸ್‌ಗೆ ಆಘಾತ; ಫೈನಲ್‌ಗೆ ವೆಸ್ಟ್ ಇಂಡೀಸ್

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ: ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಒಮ್ಮೆ ಗುಡುಗಲು ಆರಂಭಿಸಿದರೆ ಎಂಥ ತಂಡಗಳಾದರೂ ತತ್ತರಿಸಲೇಬೇಕು. ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಆಗಿದ್ದು ಅದೇ. ಕೆರಿಬಿಯನ್ ನಾಡಿನ ಗೇಲ್ ಅವರ ಬ್ಯಾಟಿಂಗ್ ಚಂಡಮಾರುತಕ್ಕೆ ಸಿಕ್ಕ ಆಸ್ಟ್ರೇಲಿಯಾ ತತ್ತರಿಸಿ ಹೋಯಿತು.

ಪರಿಣಾಮ ವೆಸ್ಟ್‌ಇಂಡೀಸ್ ತಂಡದವರು ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಇದೇ ಮೊದಲ ಬಾರಿ ಚುಟುಕು ವಿಶ್ವಕಪ್‌ನ ಅಂತಿಮ ಹಣಾಹಣಿಯಲ್ಲಿ ಆಡಲು ಈ ತಂಡದವರು ಅವಕಾಶ ಪಡೆದುಕೊಂಡಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಎರಡನೆ ಸೆಮಿಫೈನಲ್‌ನಲ್ಲಿ ವಿಂಡೀಸ್‌ನ 205 ರನ್‌ಗಳ ಭಾರಿ ಸವಾಲಿನ ಎದುರು ಆಸ್ಟ್ರೇಲಿಯಾ ತಂಡದವರು 16.4 ಓವರ್‌ಗಳಲ್ಲಿ 131 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡರು. ಡರೆನ್ ಸಮಿ ಬಳಗ 74 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

ಆರಂಭಕ್ಕೂ ಮುನ್ನವೇ ತುಂಬಾ ಕುತೂಹಲ ಮೂಡಿಸಿದ್ದ ಈ  ಸೆಮಿಫೈನಲ್ ಈ ರೀತಿ ಏಕಪಕ್ಷೀಯವಾಗಿ ಕೊನೆಗೊಳ್ಳಬಹುದು ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಏಕೆಂದರೆ ಈ ಟೂರ್ನಿಯಲ್ಲಿ ಬಲಿಷ್ಠ ತಂಡ ಎಂಬ ಹಣೆಪಟ್ಟಿ ಹೊಂದಿದ್ದ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಹಾಗಾಗಿ ನೆಚ್ಚಿನ ತಂಡವಾಗಿ ಹೊರಹೊಮ್ಮಿತ್ತು.

ಆದರೆ ಗೇಲ್ (75; 41 ಎಸೆತ, 5 ಬೌಂ, 6 ಸಿ.) ಆರ್ಭಟಕ್ಕೆ ಶರಣಾಗಲೇಬೇಕಾಯಿತು. ಇದರೊಂದಿಗೆ ಟ್ವೆಂಟಿ-20 ಚಾಂಪಿಯನ್ ಆಗಬೇಕೆಂಬ ಆಸ್ಟ್ರೇಲಿಯಾದ ಕನಸು ಈ ಬಾರಿಯೂ ಛಿದ್ರವಾಯಿತು. ಈ ತಂಡ ಒಮ್ಮೆಯೂ ಚುಟುಕು ವಿಶ್ವಕಪ್ ಗೆದ್ದಿಲ್ಲ.

ಬೌಲಿಂಗ್‌ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದ ಈ ತಂಡ ಕಠಿಣ ಸವಾಲಿನ ಎದುರು ಬ್ಯಾಟಿಂಗ್‌ನಲ್ಲಿ ಆರಂಭದಲ್ಲಿಯೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 43 ರನ್ ಆಗುವಷ್ಟರಲ್ಲಿ 6 ವಿಕೆಟ್ ಪತನಗೊಂಡಿದ್ದವು. ಈ ಟೂರ್ನಿಯಲ್ಲಿ ತುಂಬಾ ಭರವಸೆ ಮೂಡಿಸಿದ್ದ ಶೇನ್ ವಾಟ್ಸನ್ ಏಳು ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ಇದಕ್ಕೆ ವಿಂಡೀಸ್‌ನ ಸ್ಯಾಮುಯೆಲ್ಸ್ ಬದ್ರಿ ಹಾಗೂ ರವಿ ರಾಂಪಾಲ್ ಅವರ ಅಮೋಘ ಬೌಲಿಂಗ್ ದಾಳಿಯೇ ಕಾರಣ. ಹಾಗಾಗಿ ನಾಯಕ ಜಾರ್ಜ್ ಬೇಲಿ (63; 29 ಎ, 6 ಬೌಂ, 4 ಸಿ.) ಅವರ ಏಕಾಂಗಿ ಹೋರಾಟ ನಡೆಯಲಿಲ್ಲ. ಅವರು ಪ್ಯಾಟ್ ಕಮಿನ್ಸ್ ಜೊತೆಗೂಡಿ ಏಳನೇ ವಿಕೆಟ್‌ಗೆ 68 ರನ್ ಸೇರಿಸಿದರು. ಇವರಿಬ್ಬರು ಸೇರಿ ಒಂದೇ ಓವರ್‌ನಲ್ಲಿ 25 ರನ್ ಗಳಿಸಿದರು. ಅಷ್ಟರಲ್ಲಿ ಕೀರನ್ ಪೊಲಾರ್ಡ್ ಇವರಿಬ್ಬರ ವಿಕೆಟ್ ಕಬಳಿಸಿ ಕೆರಿಬಿಯನ್ ಬಳಗ ಮೇಲುಗೈ ಸಾಧಿಸಲು ಕಾರಣರಾದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಮುಂದಾದ ನಾಯಕ ಡರೆನ್ ಸಮಿ ಅವರ ಕ್ರಮವನ್ನು ಬ್ಯಾಟ್ಸ್‌ಮನ್‌ಗಳು ಸಮರ್ಥಿಸಿಕೊಂಡರು. ಐದನೇ ಓವರ್‌ವರೆಗೆ ನಿಧಾನಕ್ಕೆ ಆಡುತ್ತಿದ್ದ ಗೇಲ್ ಒಮ್ಮೆಲೇ ಆರ್ಭಟಿಸಲು ಶುರು ಮಾಡಿದರು. ಸಿಕ್ಸರ್‌ಗಳ ಹಿಂದೆ ಸಿಕ್ಸರ್ ಎತ್ತಿದರು. ಅವರಿಗೆ ಮಾರ್ಲೊನ್ ಸ್ಯಾಮುಯೆಲ್ಸ್ (26; 20 ಎ) ಜೊತೆಯಾದರು.

ಡ್ವೇನ್ ಬ್ರಾವೊ  (37; 31 ಎ.) ಕೂಡ ಮಿಂಚಿದರು. ಗೇಲ್ ಕೊನೆಯವರೆಗೆ ಔಟಾಗದೆ ಉಳಿದರು. ಆದರೆ ಅವರು ಎದುರಿಸಿದ್ದು ಕೇವಲ 41 ಎಸೆತ. 20ನೇ ಓವರ್‌ನಲ್ಲಿ ಗೇಲ್ ಹಾಗೂ ಪೊಲಾರ್ಡ್ ಸೇರಿ 25 ರನ್ ಕಲೆಹಾಕಿದರು. ಪೊಲಾರ್ಡ್ 15 ಎಸೆತಗಳಲ್ಲಿ 38 ರನ್ ಗಳಿಸಿದರು.

ವಿಂಡೀಸ್ 2004ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆದ ಮೇಲೆ ಪ್ರಮುಖ ಟೂರ್ನಿಯಲ್ಲಿ ಗೆದ್ದಿಲ್ಲ. ಈಗ ಚುಟುಕು ವಿಶ್ವಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಭಾನುವಾರ ರಾತ್ರಿ ಆತಿಥೇಯ ಶ್ರೀಲಂಕಾ ಎದುರು ಪೈಪೋಟಿ ನಡೆಸಲಿದೆ.

ಸ್ಕೋರ್ ವಿವರ

ವೆಸ್ಟ್‌ಇಂಡೀಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 205

ಜಾನ್ಸನ್ ಚಾರ್ಲ್ಸ್ ಸಿ ವೇಡ್ ಬಿ ಮಿಶೆಲ್ ಸ್ಟಾರ್ಕ್  10

ಕ್ರಿಸ್ ಗೇಲ್ ಔಟಾಗದೆ  75

ಮಾರ್ಲೊನ್ ಸ್ಯಾಮುಯೆಲ್ಸ್ ಬಿ ಪ್ಯಾಟ್ ಕಮಿನ್ಸ್  26

ಡ್ವೇನ್ ಬ್ರಾವೊ ಸಿ ಜಾರ್ಜ್ ಬೇಲಿ ಬಿ ಕಮಿನ್ಸ್  37

ಕೀರನ್ ಪೊಲಾರ್ಡ್ ಸಿ ಡೇವಿಡ್ ವಾರ್ನರ್ ಬಿ ಕ್ಸೇವಿಯರ್ ಡೋಹರ್ತಿ  38

ಇತರೆ (ಬೈ-6, ಲೆಗ್‌ಬೈ-5, ವೈಡ್-8)  19

ವಿಕೆಟ್ ಪತನ: 1-16 (ಚಾರ್ಲ್ಸ್; 2.5); 2-57 (ಸ್ಯಾಮುಯೆಲ್ಸ್; 7.2); 3-140 (ಬ್ರಾವೊ; 15.5); 4-205
(ಪೊಲಾರ್ಡ್; 19.6)

ಬೌಲಿಂಗ್: ಮಿಶೆಲ್ ಸ್ಟಾರ್ಕ್ 4-0-32-1 (ವೈಡ್-3), ಶೇನ್ ವಾಟ್ಸನ್ 4-0-35-0, ಪ್ಯಾಟ್ ಕಮಿನ್ಸ್ 4-0-36-2
 
(ವೈಡ್-1), ಕ್ಸೇವಿಯರ್ ಡೋಹರ್ತಿ 3-0-48-1, ಬ್ರಾಡ್ ಹಾಗ್ 3-0-21-0, ಡೇವಿಡ್ ಹಸ್ಸಿ 2-0-22-0

ಆಸ್ಟ್ರೇಲಿಯಾ 16.4 ಓವರ್‌ಗಳಲ್ಲಿ 131

ಡೇವಿಡ್ ವಾರ್ನರ್ ಬಿ ಸ್ಯಾಮುಯೆಲ್ಸ್ ಬದ್ರಿ  01

ಶೇನ್ ವಾಟ್ಸನ್ ಬಿ ಸ್ಯಾಮುಯೆಲ್ಸ್ ಬದ್ರಿ  07

ಮೈಕ್ ಹಸ್ಸಿ ಸಿ ಅಂಡ್ ಬಿ ಮಾರ್ಲೊನ್ ಸ್ಯಾಮುಯೆಲ್ಸ್ 

 18

ಕೆಮರೂನ್ ವೈಟ್ ಸಿ ರಾಮ್ದಿನ್ ಬಿ ರವಿ ರಾಂಪಾಲ್  05

ಜಾರ್ಜ್ ಬೇಲಿ ಸಿ ರಸೆಲ್ ಬಿ ಕೀರನ್ ಪೊಲಾರ್ಡ್  63

ಡೇವಿಡ್ ಹಸ್ಸಿ ಸಿ ಅಂಡ್ ಬಿ ರವಿ ರಾಂಪಾಲ್  00

ಮ್ಯಾಥ್ಯೂ ವೇಡ್ ಸಿ ಬದ್ರಿ ಬಿ ಸುನಿಲ್ ನಾರಾಯಣ್  01

ಪ್ಯಾಟ್ ಕಮಿನ್ಸ್ ಸಿ ಜಾನ್ಸನ್ ಚಾರ್ಲ್ಸ್ ಬಿ ಕೀರನ್ ಪೊಲಾರ್ಡ್  13

ಮಿಶೆಲ್ ಸ್ಟಾರ್ಕ್ ಬಿ ರವಿ ರಾಂಪಾಲ್  02

ಬ್ರಾಡ್ ಹಾಗ್ ಸ್ಟಂಪ್ಡ್ ದೆನೇಶ್ ರಾಮ್ದಿನ್ ಬಿ ಸುನಿಲ್ ನಾರಾಯನ್  07

ಕ್ಸೇವಿಯರ್ ಡೋಹರ್ತಿ ಔಟಾಗದೆ  09

ಇತರೆ (ಲೆಗ್‌ಬೈ-3, ವೈಡ್-2)  05

ವಿಕೆಟ್ ಪತನ: 1-2 (ವಾರ್ನರ್; 0.6); 2-22 (ಮೈಕ್ ಹಸ್ಸಿ; 3.1); 3-29 (ವಾಟ್ಸನ್; 4.3); 4-42 (ವೈಟ್; 6.1); 5-42 (ಡೇವಿಡ್ ಹಸ್ಸಿ; 6.3); 6-43 (ವೇಡ್; 7.2); 7-111 (ಬೇಲಿ; 13.2); 8-111 (ಕಮಿನ್ಸ್; 13.3); 9-121 (ಹಾಗ್; 15.1); 10-131    (ಸ್ಟಾರ್ಕ್; 16.4)

ಬೌಲಿಂಗ್: ಸ್ಯಾಮುಯೆಲ್ಸ್ ಬದ್ರಿ 4-0-27-2, ಮಾರ್ಲೊನ್ ಸ್ಯಾಮುಯಲ್ಸ 3-0-26-1 (ವೈಡ್-1), ರವಿ

ರಾಂಪಾಲ್ 3.4-0-16-3 (ವೈಡ್-1), ಸುನಿಲ್ ನಾರಾಯಣ್ 3-0-17-2, ಆ್ಯಂಡ್ರೆ ರಸೆಲ್ 1-0-25-0, ಡರೆನ್ ಸಮಿ 1-0-11-0, ಕೀರನ್ ಪೊಲಾರ್ಡ್ 1-0-6-2

ಫಲಿತಾಂಶ: ವೆಸ್ಟ್‌ಇಂಡೀಸ್ ತಂಡಕ್ಕೆ 74 ರನ್‌ಗಳ ಜಯ ಹಾಗೂ ಫೈನಲ್ ಪ್ರವೇಶ. ಪಂದ್ಯ ಶ್ರೇಷ್ಠ: ಕ್ರಿಸ್ ಗೇಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT