ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆ ಕಂಗಳ ಸಂತೋಷ್

Last Updated 24 ಜೂನ್ 2012, 19:30 IST
ಅಕ್ಷರ ಗಾತ್ರ

`ಚಿತ್ರರಂಗದಲ್ಲಿ ಗೆಲ್ಲಬೇಕು ಎಂದರೆ ಯೋಗ-ಯೋಗ್ಯತೆ ಎರಡೂ ಇರಬೇಕು. ನನಗೆ ಯೋಗ್ಯತೆ ಇದೆ. ಆದರೆ ಯೋಗ ಬರಬೇಕಿದೆ~ ಎನ್ನುತ್ತಾರೆ ಸಂತೋಷ್.

ಸಕಲೇಶಪುರದ ಕಾಫಿತೋಟಗಳಿಂದ `ಬಣ್ಣದ ಬದುಕಿನಲ್ಲಿ ಗೆಲ್ಲಬೇಕು~ ಎಂಬ ಕನಸು ಹೊತ್ತು ಬಂದಿದ್ದಾರೆ ಅವರು. ಅವಕಾಶ ಕೇಳುವ ಮೊದಲು ಅರ್ಹ ತರಬೇತಿ ಪಡೆದು ಮುಂದಡಿ ಇಡಬೇಕು ಎಂಬ ಎಚ್ಚರಿಕೆಯೂ ಅವರಿಗಿದೆ.

ಅದರಂತೆ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭಿನಯದ ತರಬೇತಿ ಮುಗಿಸಿಕೊಂಡು ಗಾಂಧಿನಗರದಲ್ಲಿ ಅದೃಷ್ಟ ಅರಸಿ ಹೊರಟ ಅವರಿಗೆ ಮೊದಲು ಖಳ ನಟನಾಗಲು ಅವಕಾಶಗಳು ಬಂದವು. `ಬಂದೇ ಬರ‌್ತಾಳೆ~, `ತಂತ್ರ~ ಚಿತ್ರಗಳಲ್ಲಿ ಖಳನಾಗಿ ನಟಿಸಿದರು. `ಅಭಿರಾಮ್~ ಚಿತ್ರದಲ್ಲಿ ನಾಯಕನಾಗುವ ಅವಕಾಶ ಸಿಕ್ಕಿತು. ಅದರ ನಂತರ `ಇಷ್ಟ~ ಚಿತ್ರಕ್ಕೂ ನಾಯಕನಾದರು.
 
`ಇಷ್ಟ~ ನಿರೀಕ್ಷೆಗೆ ತಕ್ಕ ಗೆಲುವು ಪಡೆಯಲಿಲ್ಲವಾದರೂ ಸಂತೋಷ್ ಉದ್ಯಮದಲ್ಲಿ ಗುರುತಿಸಿಕೊಂಡರು. ಅವಕಾಶಗಳು ಬರತೊಡಗಿದವು. ಆದರೆ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೇ ಒಳ್ಳೆಯ ಕತೆ ಇರುವ ಸಿನಿಮಾಗಳಲ್ಲಿ ಮಾತ್ರ ನಟಿಸುವ ಸಂಕಲ್ಪ ಮಾಡಿದ್ದಾರೆ.

ಸದ್ಯಕ್ಕೆ `ನಿನ್ನ ಜೊತೆಯಲಿ~ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ `ಹೂವಿ~ ಮತ್ತು `ಬೆಂಗಳೂರು ಮೆಟ್ರೊ~ ಚಿತ್ರಗಳನ್ನೂ ಒಪ್ಪಿಕೊಂಡಿದ್ದಾರೆ.

ತಾರೇಶ್ ರಾಜು ನಿರ್ದೇಶನದ `ಬೆಂಗಳೂರು ಮೆಟ್ರೋ~ ಚಿತ್ರವನ್ನು ಶಂಕರ್‌ನಾಗ್ ಅವರ ಕನಸನ್ನು ಆಧರಿಸಿ ಮಾಡಲಾಗುತ್ತಿದೆಯಂತೆ. ವಿಶಾಲ್ ರಾಜು ಅವರ `ಹೂವಿ~ ಚಿತ್ರದಲ್ಲಿ ಸಂತೋಷ್‌ಗೆ ಉತ್ತರ ಕರ್ನಾಟಕದ ಹಳ್ಳಿಯ ಹುಡುಗನ ಪಾತ್ರ. ಅದಕ್ಕಾಗಿ ಜವಾರಿ ಶೈಲಿಯಲ್ಲಿ ಮಾತನಾಡುವುದನ್ನು ಸಂತೋಷ್ ಕಲಿಯುತ್ತಿದ್ದಾರೆ.

`ಒಳ್ಳೆಯ ಪಾತ್ರಗಳಲ್ಲಿ ನಟಿಸುವ ಮತ್ತು ಒಳ್ಳೆಯ ನಿರ್ದೇಶಕರ ಕೈಕೆಳಗೆ ಕೆಲಸ ಮಾಡುವಾಸೆ~ ಎನ್ನುವ ಈ ಆಸೆ ಕಂಗಳ ತರುಣನದು ಮನೆಯಲ್ಲಿ ಖಾಲಿ ಕುಳಿತಿದ್ದರೂ ಪರವಾಗಿಲ್ಲ. ಒಳ್ಳೆಯ ಚಿತ್ರಗಳಲ್ಲಷ್ಟೇ ನಟಿಸಬೇಕು ಎಂಬ ದೃಢ ನಿರ್ಧಾರ.

ತನಗೆ ಹೊಂದಿಕೆಯಾಗುವುದಾದರೆ ನೆಗೆಟಿವ್ ಪಾತ್ರಕ್ಕೂ ಸೈ ಎನ್ನುವ ಸಂತೋಷ್‌ಗೆ ಮಾಸ್ ಹೀರೋ ಆಗಿ ಗುರುತಿಸಿಕೊಳ್ಳುವಾಸೆ. ಎಂಥದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವ ಆತ್ಮವಿಶ್ವಾಸವೂ ಅವರಿಗಿದೆ.

ನೃತ್ಯ, ಆಕ್ಷನ್, ಅಭಿನಯ ತರಬೇತಿಗಳನ್ನು ಪಡೆದಿರುವ ಸಂತೋಷ್, ಪ್ರತೀದಿನ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಅದರಿಂದ ಫಿಟ್ ಆಗಿದ್ದಾರೆ. ಬಿಡುವಿನ ಸಮಯದಲ್ಲಿ ಕ್ರಿಕೆಟ್ ಆಡುವ, ಊರಿಗೋದಾಗ ಕೃಷಿ ಕೆಲಸದಲ್ಲೂ ನಿರತರಾಗುವ ಅವರಿಗೆ ನಟನೆಯಲ್ಲಿಯೇ ಮುಂದುವರಿಯುವ ಬಯಕೆ.

ರಾಜ್‌ಕುಮಾರ್ ಅವರ ಅಭಿಮಾನಿಯಾಗಿರುವ ಸಂತೋಷ್ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದಾರಂತೆ. `ಸಿನಿಮಾ ನೋಡುವುದರಿಂದ ಅದರಲ್ಲಿರುವ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬಹುದು~ ಎನ್ನುವ ಅವರು ಅನುಕರಣೆಯನ್ನು ಕಟುವಾಗಿ ವಿರೋಧಿಸುತ್ತಾರೆ.

ಅಂದಹಾಗೆ, ಚಿತ್ರರಂಗದಲ್ಲಿ ಸಂತೋಷ್ ಎಂಬ ಹೆಸರಿನವರು ಬಹಳ ಮಂದಿ ಇರುವುದರಿಂದ ತಮ್ಮ ಹೆಸರು ಬದಲಾವಣೆ ಬಗ್ಗೆಯೂ ಅವರು ಚಿಂತಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT