ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ಮಿಶ್ರ ಡಬಲ್ಸ್‌ನಲ್ಲಿ ಭೂಪತಿ-ಸಾನಿಯಾ ಶುಭಾರಂಭ

Last Updated 20 ಜನವರಿ 2012, 19:35 IST
ಅಕ್ಷರ ಗಾತ್ರ

ವೆುಲ್ಬರ್ನ್ (ಐಎಎನ್‌ಎಸ್): ಗೆಲುವಿನ ಹಾದಿಯಲ್ಲಿ ಸಾಗಿರುವ ಸ್ಪಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಮತ್ತು ಸ್ಪೇನ್ ರಫೆಲ್ ನಡಾಲ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದರು.

ಮೆಲ್ಬರ್ನ್ ಪಾರ್ಕ್ ಅಂಗಳದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಫೆಡರರ್ 7-6, 7-5, 6-3ನೇರ ಸೆಟ್‌ಗಳಿಂದ ಕ್ರೋಯೇಷಿಯಾದ ಇವೊ ಕಾರ್ಲೊವಿಕ್ ಅವರನ್ನು ಮಣಿಸಿದರು. 2010ರ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಚಾಂಪಿಯನ್ ಫೆಡರರ್ 53 ನಿಮಿಷಗಳ ಕಾಲ ನಡೆದ ಮೊದಲ ಸೆಟ್‌ನಲ್ಲಿ ಭಾರಿ ಪ್ರತಿರೋಧ ಎದುರಿಸಿದರು.

ಈ ಪಂದ್ಯದಲ್ಲಿ ಅವರು ಒಟ್ಟು 9 ಏಸ್‌ಗಳನ್ನು ಸಿಡಿಸಿದರು. ಎರಡು ಹಾಗೂ ಮೂರನೇ ಸೆಟ್‌ಗಳು ಕ್ರಮವಾಗಿ 46 ಹಾಗೂ 38 ನಿಮಿಷ ನಡೆಯಿತು. ಗಂಟೆಗೆ 203 ಕಿ.ಮೀ ವೇಗದಲ್ಲಿ ಚೆಂಡನ್ನು ಸರ್ವ್ ಮಾಡಿದ ಫೆಡರರ್ ಎರಡನೇ ಸೆಟ್‌ನಲ್ಲೂ ಪ್ರಬಲ ಪ್ರತಿರೋಧ ಎದುರಿಸಿದರು. ಆದರೆ, ಪಂದ್ಯ ಬಿಟ್ಟುಕೊಡಲಿಲ್ಲ.

ರಫೆಲ್ ನಡಾಲ್ 6-2, 6-4, 6-2ರಲ್ಲಿ ಸ್ಲೊವಾಕಿಯಾದ ಲುಕಾಸ್ ಲಾಸ್ಕೊ ಎದುರು ಗೆಲುವು ಸಾಧಿಸಿದರು.

ಎರಡನೇ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ಎದುರಾದರೂ, ಗೆಲುವು ಕಷ್ಟವಾಗಲಿಲ್ಲ. `ಯಾವ ಪಂದ್ಯಗಳು ಸುಲಭವಲ್ಲ. ಪ್ರತಿ ಪಂದ್ಯದಲ್ಲೂ ಕಠಿಣ ಸವಾಲು ಎದುರಾಗಲಿವೆ. ಎಷ್ಟೇ ಸವಾಲು ಬಂದರೂ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ~ ಎಂದು ನಡಾಲ್ ಪ್ರತಿಕ್ರಿಯಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಬೆರ್ನಾರ್ಡ್ ಟಾಮಿಕ್ 4-6, 7-6, 7-6, 2-6, 6-3ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಗೊಪೋಲೊವಾ ಮೇಲೂ, ಫೆಲಿಸಿಯೊನಾ ಲೋಪೆಜ್ 6-3, 6-7, 6-4, 6-7, 6-1ರಲ್ಲಿ ಅಮೆರಿಕದ ಜಾನ್ ಇಸ್ನೆರ್ ವಿರುದ್ಧವೂ, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 7-6, 7-6, 6-1ರಲ್ಲಿ ಕೆವಿನ್ ಆ್ಯಂಡರ್‌ಸನ್ ಮೇಲೂ, ಸ್ಪೇನ್‌ನ ಅಲ್ಮಾರ್ಗೊ 7-6, 6-2, 6-4ರಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧವೂ ಗೆಲುವು ಸಾಧಿಸಿದರು.

ಕ್ಯಾರೊಲಿನ್‌ಗೆ ವಿಜಯ: ಕಳೆದ ವರ್ಷದ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಡೆನ್ಮಾರ್ಕ್‌ನ ಅಗ್ರ ಶ್ರೇಯಾಂಕದ ಕ್ಯಾರೊಲಿನ್ ವೊಜ್‌ನಿಯಾಕಿ ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಈ ಆಟಗಾರ್ತಿ 6-2, 6-2ರಲ್ಲಿ ರೂಮೇನಿಯಾದ ಮೋನಿಕಾ ನಿಕುಲಿಸ್ಕೊ ಎದುರು ಗೆಲುವು ಪಡೆದರು. 76 ನಿಮಿಷ ನಡೆದ ಪಂದ್ಯದಲ್ಲಿ ಎರಡೂ ಸೆಟ್‌ಗಳಲ್ಲಿ ಈ ಆಟಗಾರ್ತಿಗೆ ಪ್ರಬಲ ಪೈಪೋಟಿ ಎದುರಾಗಲಿಲ್ಲ.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಜೆಲೆನಾ ಜಾಂಕೊವಿಕ್ 6-2, 6-0ರಲ್ಲಿ ಕ್ರಿಸ್ಟಿನಾ ಮೆಕ್‌ಹಲೆ ಮೇಲೂ ಜಯ ಪಡೆದರು. ಚೀನಾದ ನಾ ಲೀ 3-0ರಲ್ಲಿ  ಸ್ಪೇನ್‌ನ ಅನಾಬೆಲಾ ಮೆಡಿನಾ ವಿರುದ್ಧ ಗೆದ್ದರು. ಮೆಡಿನಾ ಅರ್ಧದಲ್ಲೇ ನಿವೃತ್ತಿ ಪಡೆದ ಕಾರಣ ಲೀಗೆ ಮುಂದಿನ ಸುತ್ತು ಪ್ರವೇಶಿಸುವುದು ಕಷ್ಟವಾಗಲಿಲ್ಲ.

ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ 6-3, 6-2ರಲ್ಲಿ ಸ್ಲೋವಾಕಿಯಾದ ಡೇನಿಯಲ್ ಹಚಂಚೋವಾ ಮೇಲೂ, ಬೆಲ್ಗೇರಿಯಾದ ವಿಕ್ಟೋರಿಯಾ ಅಜರೆಂಕಾ 6-2, 6-4ರಲ್ಲಿ ಜರ್ಮನಿಯ ಮೋನಾ ಬಾರ್ತೆಲಾ ವಿರುದ್ಧವೂ, ಜರ್ಮನಿಯ ಜೂಲಿಯಾ ಗಾರ್ಜೆಸ್ 3-6, 6-3, 6-1 ರಲ್ಲಿ ಇಟಲಿಯ ರೊಮಿನಾ ಒಪ್ರಾಂಡಿ ಎದುರೂ ಜಯ ಸಾಧಿಸಿದರು.

ಭೂಪತಿ-ಸಾನಿಯಾ ಶುಭಾರಂಭ:
ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಆರನೇ ಶ್ರೇಯಾಂಕದ ಮಹೇಶ್ ಭೂಪತಿ-ಸಾನಿಯಾ ಮಿರ್ಜಾ 6-4, 6-2ರಲ್ಲಿ ರಷ್ಯಾದ ನತಾಲಿ ಗ್ರಾಂಡಿನ್-ಹಾಲೆಂಡ್‌ನ ಜೇನ್ ಜುಲೈನ್ ರೋಜರ್ ಜೋಡಿಯನ್ನು ಮಣಿಸಿ ಶುಭಾರಂಭ ಮಾಡಿತು.

ಭಾರತದ ರೋಹನ್ ಬೋಪಣ್ಣ- ಅಮೆರಿಕದ ಲೀಸಾ ರೇಮಂಡ್ 6-1, 6-0ರಲ್ಲಿ ಕಜಕಸ್ತಾನದ ಗಲಿನಾ ವಾಸ್ಕೊಬೆಯೆವಾ-ಆಸ್ಟ್ರೇಲಿಯಾದ ಅಲೆಕ್ಸಾಂಡ್ರಿಯಾ ಪೆಯಾ ಎದುರು ಜಯ ಪಡೆದು ಎರಡನೇ ಸುತ್ತಿಗೆ ಮುನ್ನಡೆದರು.

ಮೂರನೇ ಸುತ್ತಿಗೆ ಪೇಸ್-ರಾಡೆಕ್: ಭಾರತದ ಲಿಯಾಂಡರ್ ಪೇಸ್-ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಜೋಡಿ ಪುರುಷರ ವಿಭಾಗದ ಡಬಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿತು. ಈ ಜೋಡಿ 6-2, 7-6ರಲ್ಲಿ ಇಟಲಿಯ ಸಿಮೊನೆ ಬೊಲೈಲಿ-ಫಾಬಿಯೊ ಫಾಗ್ನಿನಿ ಅವರನ್ನು ಮಣಿಸಿತು.

ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಅಗ್ರ ಶ್ರೇಯಾಂಕದ ಬಾಬ್ ಹಾಗೂ ಮೈಕ್ ಬ್ರಯಾನ್ ಜೋಡಿ 6-3, 7-6ರಲ್ಲಿ ಆತಿಥೇಯ ಆಸ್ಟ್ರೇಲಿಯಾದ ಲೇಟನ್ ಹೆವಿಟ್-ಪೀಟರ್ ಲೂಜೆಕ್ ಎದುರು ಜಯ ಪಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT