ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ವೊಜ್‌ನಿಯಾಕಿಗೆ ಆಘಾತ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಎಎಫ್‌ಪಿ/ಐಎಎನ್‌ಎಸ್):  ಅಗ್ರ ಶ್ರೇಯಾಂಕದ ಆಟಗಾರ್ತಿ ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್‌ನಿಯಾಕಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕು ಎನ್ನುವ ಕನಸು ನುಚ್ಚುನೂರಾಗಿದೆ. ಈ ನಿರಾಸೆಗೆ ಕಾರಣವಾಗ್ದ್ದಿದು, ಹಾಲಿ ಚಾಂಪಿಯನ್ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್.

ಮೆಲ್ಬರ್ನ್ ಪಾರ್ಕ್ ಅಂಗಳದಲ್ಲಿ ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕದ ಕೈಸ್ಟರ್ಸ್ 6-3, 7-6ರಲ್ಲಿ ವೊಜ್‌ನಿಯಾಕಿ ಅವರನ್ನು ಸೋಲಿಸಿದರು.

43 ನಿಮಿಷ ನಡೆದ ಮೊದಲ ಸೆಟ್‌ನಲ್ಲಿ ಹೋರಾಟದಲ್ಲಿ ಡೆನ್ಮಾರ್ಕ್‌ನ ಆಟಗಾರ್ತಿ ಅಲ್ಪ ಪ್ರತಿರೋಧ ತೋರಿದರು. ಎರಡನೇ ಸೆಟ್‌ನಲ್ಲೂ  ಪ್ರಬಲ ಹೋರಾಟ ನೀಡಿದರೂ, ಕೆಲ ಅನಗತ್ಯ ತಪ್ಪುಗಳನ್ನು ಎಸಗಿ ಪಂದ್ಯ ಕೈ ಚೆಲ್ಲಿದರು. ಈ ಪಂದ್ಯದಲ್ಲಿ ಅಗ್ರ ಆಟಗಾರ್ತಿ ಮೂರು ಏಸ್‌ಗಳನ್ನು ಸಿಡಿಸಿದರು. ಈ ಹೋರಾಟ ಒಟ್ಟು 105 ನಿಮಿಷ ನಡೆಯಿತು.

ನಾಲ್ಕನೇ ಆಸ್ಟ್ರೇಲಿಯಾ ಓಪನ್ ಟೂರ್ನಿ  ಆಡುತ್ತಿರುವ 21 ವರ್ಷದ ಕ್ಯಾರೊಲಿನ್ ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದರು. 2009ರ ಅಮೆರಿಕ ಓಪನ್ ಟೂರ್ನಿಯಲ್ಲಿ ಫೈನಲ್‌ನಲ್ಲಿ ಎಡವಿದ್ದರು.

ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲಬೇಕೆನ್ನುವ ಆಸೆ ಈ ಸಲವೂ ಈಡೇರಲಿಲ್ಲ. ಈ ಮೂಲಕ ಅಗ್ರ ರ‌್ಯಾಂಕಿಂಗ್ ಪಟ್ಟವನ್ನು ಕಳೆದುಕೊಂಡರು. 2010ರ ಅಕ್ಟೋಬರ್‌ನಲ್ಲಿ ಬೀಜಿಂಗ್‌ನಲ್ಲಿ ನಡೆದ ಚೀನಾ ಓಪನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಈ ಸ್ಥಾನ ಗಳಿಸಿಕೊಂಡಿದ್ದರು.

`ಕಿಮ್ ಆರಂಭದಿಂದಲೂ ಪ್ರಬಲ ಪೈಪೋಟಿ ನೀಡಿದರು. ಅದು ನನ್ನನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿತು. ಕೆಲ ಅನಗತ್ಯ ಹೊಡೆತಗಳಿಗೆ ಮುಂದಾಗಿ ತಪ್ಪು ಮಾಡಿದೆ. ಸರ್ವ್ ಮಾಡುವುದರಲ್ಲಿಯೂ ತಪ್ಪುಗಳಾದವು~ ಎಂದು ಕ್ಯಾರೊಲಿನ್ ಪ್ರತಿಕ್ರಿಯಿಸಿದರು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಕ್ಲೈಸ್ಟರ್ಸ್ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಎದುರು ಪೈಪೋಟಿ ನಡೆಸಲಿದ್ದಾರೆ. ಅಜರೆಂಕಾ ಎಂಟರ ಘಟ್ಟದ ಪಂದ್ಯದಲ್ಲಿ 6-7, 6-0, 6-2ರಲ್ಲಿ ಪೋಲ್ಯಾಂಡ್‌ನ ಜನಿಸ್ಕಾ ರಾದ್ವಾಸ್ಕ ಎದುರು ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಪ್ರಶಸ್ತಿ ಸನಿಹ ಫೆಡರರ್: ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ಫೆಡರರ್ 6-4, 6-3, 6-2ರಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೆಟ್ರೊ ಎದುರು ಗೆಲುವು ಸಾಧಿಸಿದರು.

43 ನಿಮಿಷ ನಡೆದ ಮೊದಲ ಸೆಟ್‌ನಲ್ಲಿ ಪ್ರಬಲ ಪ್ರತಿರೋಧ ತೋರಿದ್ದಷ್ಟೇ ಪೆಟ್ರೊ ಸಾಧನೆ. 2010ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಫೆಡರರ್ ಈ ಸಲವೂ ಪ್ರಶಸ್ತಿಯತ್ತ ಹೆಜ್ಜೆ ಹಾಕಿದ್ದಾರೆ.

ಮೆಲ್ಬರ್ನ್ ಪಾರ್ಕ್ ಅಂಗಳದಲ್ಲಿ ನಾಲ್ಕು ಸಲ (2007, 2006, 2007 ಹಾಗೂ 2010) ಟ್ರೋಫಿ ಎತ್ತಿ ಹಿಡಿದಿರುವ ಫೆಡರರ್ ಈ ಸಲವೂ ಚಾಂಪಿಯನ್ ಆಗುವ ಭರವಸೆ ಮೂಡಿಸಿದ್ದಾರೆ. ಆದರೆ, ಅಗ್ರ ಶ್ರೇಯಾಂಕದನೊವಾಕ್ ಜೊಕೊವಿಚ್ ಅವರ ಪ್ರಬಲ ಸವಾಲು ಎದುರಾಗಲಿದೆ. `ಈ ಪಂದ್ಯ ಸಾಕಷ್ಟು ಖುಷಿ ನೀಡಿದೆ. ಪ್ರಬಲ ಹೋರಾಟ ಎದುರಾದರೂ, ಸಂತಸ ನೀಡಿತು~ ಎಂದು ಫೆಡರರ್ ಪ್ರತಿಕ್ರಿಯಿಸಿದರು.

ನಡಾಲ್ ಎಂಟರ ಘಟ್ಟದ ಪಂದ್ಯದಲ್ಲಿ 6-7, 7-6, 6-4, 6-3ರಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ಅವರನ್ನು ಸೋಲಿಸಿದರು. 75 ನಿಮಿಷ ನಡೆದ ಮೊದಲ ಸೆಟ್‌ನ ಹೋರಾಟದಲ್ಲಿ 2009ರ ಚಾಂಪಿಯನ್ ಸೋಲು ಕಂಡರು. ನಂತರದ ಮೂರು ಸೆಟ್‌ಗಳಲ್ಲಿ ಪ್ರಬಲ ಪೈಪೋಟಿ ಎದುರಿಸಿ ಸೆಮಿಫೈನಲ್ ಪ್ರವೇಶಿಸಿದರು.

ಸಾನಿಯಾ-ವೆಸ್ನಿನಾ ಜೋಡಿಗೆ ಗೆಲುವು: ಭಾರತದ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಈ ಜೋಡಿ ಎಂಟರ ಘಟ್ಟದಲ್ಲಿ 6-3, 5-7, 7-6ರಲ್ಲಿ ಎರಡನೇ ಶ್ರೇಯಾಂಕದ ಅಮೆರಿಕದ ಲಿಜಿಯಲ್ ಹಬರ್-ಲೀಸಾ ರೈಮೆಂಡ್ ಅವರನ್ನು ಮಣಿಸಿದರು.

ಸಾನಿಯಾ  ಗ್ರ್ಯಾನ್ ಸ್ಲಾಮ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುತ್ತಿರುವುದು ಇದು ಎರಡನೇ ಸಲ. ಈ ಮೊದಲು 2011ರ ವಿಂಬಲ್ಡನ್ ಟೂರ್ನಿಯಲ್ಲಿ ಈ ಹಂತಕ್ಕೆ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT