ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ಸಮಂತಾ ಸ್ಟಾಸರ್ ಸವಾಲು ಅಂತ್ಯ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಎಪಿ/ಐಎಎನ್‌ಎಸ್): ಅಮೆರಿಕ ಓಪನ್ ಟೂರ್ನಿಯಲ್ಲಿ ಕಳೆದ ವರ್ಷ ಚಾಂಪಿಯನ್ ಆಗಿದ್ದ ಆತಿಥೇಯ ರಾಷ್ಟ್ರದ ಸಮಂತಾ ಸ್ಟಾಸರ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು.

ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ್ತಿ ಎನಿಸಿದ್ದ ಸ್ಟಾಸರ್ ಮಂಗಳವಾರ ನಡೆದ ಪಂದ್ಯದಲ್ಲಿ 6-7, 3-6ರಲ್ಲಿ ರೊಮೇನಿಯಾದ ಶ್ರೇಯಾಂಕ ರಹಿತ ಆಟಗಾರ್ತಿ ಸರೊನಾ ಸಿರೆಸ್ತಿಯಾ ಎದುರು ಮುಗ್ಗರಿಸಿದರು. ಈ ಮೂಲಕ ಸ್ಥಳೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಮೊದಲ ಸೆಟ್‌ನಲ್ಲಿ ಭಾರಿ ಪ್ರತಿರೋಧ ತೋರಿದರೂ ಸ್ಟಾಸರ್‌ಗೆ ಗೆಲುವು ಲಭಿಸಲಿಲ್ಲ. ಗಂಟೆಗೆ 178 ಕಿ.ಮೀ ವೇಗದಲ್ಲಿ ಚೆಂಡನ್ನು ಸರ್ವ್ ಮಾಡಿದರು. ಇದಕ್ಕೆ ಪ್ರತಿಯಾಗಿ ಸರೊನಾ ಸಹ 177 ಕಿ.ಮೀ. ವೇಗದಲ್ಲಿ ಸರ್ವ್ ಮಾಡಿ ತಿರುಗೇಟು ನೀಡಿದರು. ಒಟ್ಟು 91 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಸರೊನಾ ಕೆಲ ಅತ್ಯುತ್ತಮ ಸ್ಟ್ರೋಕ್‌ಗಳನ್ನು ಸಿಡಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ಎರಡನೇ ಸುತ್ತಿಗೆ ಶರ್ಪೋವಾ: 2008ರ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ರಷ್ಯಾದ ಮರಿಯಾ ಶರ್ಪೋವಾ 6-0, 6-1ರ ನೇರ ಸೆಟ್‌ಗಳಿಂದ ಅರ್ಜೆಂಟೀನಾದ ಗಿಸೆಲಾ ಡುಲ್ಕೋ ಎದುರು ಗೆಲುವು ಪಡೆದರು. 58 ನಿಮಿಷ ಕಾಲ ನಡೆದ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕದ ಶರ್ಪೋವಾಗೆ ಎರಡೂ ಸೆಟ್‌ಗಳಲ್ಲಿ ಪ್ರಬಲ ಪ್ರತಿರೋಧ ಎದುರಾಗಲಿಲ್ಲ. 

ಮಹಿಳಾ ವಿಭಾಗದ ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 6-2, 6-0ರಲ್ಲಿ ರಷ್ಯಾದ ವೆರಾ ದುಷವೇನಾ ಮೇಲೂ, ರಷ್ಯಾದ ವೆರಾ ಜೊನರೇವಾ 7-6, 6-7, 6-3ರಲ್ಲಿ ರೊಮೇನಿಯಾದ ಡಿ. ಅಲೆಕ್ಸಾಂಡ್ರಾ ವಿರುದ್ಧವೂ, ಜರ್ಮನಿಯ ಸಬಿನಿ ಲಿಸಿಕಿ 6-2, 4-6, 6-4ರಲ್ಲಿ ಸ್ಲೊವಾಕಿಯಾದ ಸ್ಟೆಫೆನಿಯಾ ವೊಯಿಗೆಲಾ ಮೇಲೂ, ಇಸ್ರೇಲ್‌ನ ಶಹರ್ ಪೀರ್ 6-2, 6-0ರಲ್ಲಿ ಆಸೀಸ್‌ನ ಇಸಬೆಲ್ಲಾ ಹೊಲೆಂಡ್ ವಿರುದ್ಧವೂ, ರಷ್ಯಾದ ನಾಡಿಯಾ ಪೆಟ್ರೋವಾ 6-3, 3-6, 6-0ರಲ್ಲಿ ಜೆಕ್ ಗಣರಾಜ್ಯದ ಆ್ಯಂಡ್ರಿಯಾ ಹವಂಚೊವಾ ಮೇಲೂ, ರಷ್ಯಾದ ಅನಸ್ತೇಸಿಯಾ ಪೆವ್ಲೊಂಚೆಂಕೊವಾ 7-6, 6-1ರಲ್ಲಿ ಕ್ಲಾರಾ ಜೊಕೊಪೊಲೊವಾ ವಿರುದ್ಧವೂ, ಅಮೆರಿಕದ ವನಿಯಾ ಕಿಂಗ್ 7-6, 6-3ರಲ್ಲಿ ಉಕ್ರೇನ್‌ನ ಕ್ಯಾಥೆರಿನ್ ಬಂದರೆಂಕೊ, ಮೇಲೂ ಗೆಲುವು ಸಾಧಿಸಿದರು.

ಜೊಕೊವಿಚ್ ಶುಭಾರಂಭ: ಕಳೆದ ಸಲದ ಚಾಂಪಿಯ್ ಸರ್ಬಿಯಾದ ನೊವಾಕ್ ಜೊಕೊವಿಚ್ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು.

ಅಗ್ರ ಶ್ರೇಯಾಂಕದ ಈ ಆಟಗಾರ ಮೊದಲ ಸುತ್ತಿನ ಪಂದ್ಯದಲ್ಲಿ 6-2, 6-0, 6-0ರಲ್ಲಿ ಇಟಲಿಯ ಪಾಲೊ ಲೊರೆಂಜಿ ಎದುರು ಗೆಲುವು ಸಾಧಿಸಿದರು. 2011ರಲ್ಲಿ ಮೂರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದ ನೊವಾಕ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ನೆಚ್ಚಿನ ಆಟಗಾರ ಎನಿಸಿದ್ದಾರೆ. 

`ಯಾವುದೇ ಟೂರ್ನಿಯಿರಲಿ ಅಲ್ಲಿ ಉತ್ತಮ ಆರಂಭ ಪಡೆಯಬೇಕು ಎನ್ನುವುದು ನನ್ನ ಗುರಿ. ಅದು ಈಡೇರಿದೆ. ನನ್ನ ಪ್ರದರ್ಶನದ ಬಗ್ಗೆ ತೃಪ್ತಿ ಇದೆ~ ಎಂದು ನೊವಾಕ್ ಪ್ರತಿಕ್ರಿಯಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಅಮೆರಿಕದ ಆ್ಯಂಡಿ ರ‌್ಯಾಡಿಕ್ 6-3, 6-4, 6-1ರಲ್ಲಿ ಹಾಲೆಂಡ್‌ನ ರಾಬಿನ್ ಹಾಸ್ ಮೇಲೂ, ನಾಲ್ಕನೇ ಶ್ರೇಯಾಂಕದ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ 4-6, 6-3, 6-4, 6-2ರಲ್ಲಿ ಅಮೆರಿಕದ ರ‌್ಯಾನ್ ಹ್ಯಾರಿಸನ್ ವಿರುದ್ಧವೂ, ಸ್ಪೇನ್‌ನ ಡೇವಿಡ್ ಫೆರರ್ 6-1, 6-4, 6-2ರಲ್ಲಿ ಪೊರ್ಚುಗಲ್‌ನ ರುಯಿ ಮಚೋಡ್ ಮೇಲೂ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದರು.

ಆಸ್ಟ್ರೇಲಿಯಾದ ಜೇಮ್ಸ ಡಕ್‌ವರ್ತ್ 6-3, 6-4, 6-4ರಲ್ಲಿ ಇಸ್ತೋನಿಯಾದ ಜುರ್ಗೆನ್ ಜೋಪ್ ಮೇಲೂ, ಜಪಾನ್‌ನ 24ನೇ ಶ್ರೇಯಾಂಕದ ಆಟಗಾರ ಕೈ ನಿಷಿಕೋರಿ 6-1, 7-6, 6-0ರಲ್ಲಿ ಫ್ರಾನ್ಸ್‌ನ ಸ್ಪೆಪಾನೆ ರಾಬರ್ಟ್ ವಿರುದ್ಧವೂ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT