ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ರಾಷ್ಟ್ರೀಯ ದಿನ: ಪ್ರತಿಭಟನೆ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

 ಮೆಲ್ಬರ್ನ್ (ಐಎಎನ್‌ಎಸ್): ರಾಜಧಾನಿ ಕ್ಯಾನ್‌ಬೆರಾದ ಹೋಟೆಲ್ ಕಟ್ಟಡವೊಂದರಲ್ಲಿ  ಗುರುವಾರ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಮತ್ತು ಪ್ರತಿಪಕ್ಷದ ನಾಯಕ ಟೋನಿ ಅಬೋಟ್ ಅವರನ್ನು ಪ್ರತಿಭಟನಾಕಾರರು ಮುತ್ತಿಗೆ ಹಾಕಿದಾಗ ಪೊಲೀಸರು ಅವರಿಬ್ಬರನ್ನು ರಕ್ಷಿಸಿ, ಸುರಕ್ಷಿತವಾಗಿ ಹೊರಕರೆತಂದ ಘಟನೆ ನಡೆದಿದೆ.

`ಆಸ್ಟ್ರೇಲಿಯಾ ರಾಷ್ಟ್ರೀಯ ದಿನ~ (1788ರ ಜನವರಿ 26ರಂದು ಬ್ರಿಟಿಷ್ ಪಡೆಗಳು  ವಸಾಹತು ಸ್ಥಾಪಿಸಲು ಆಗಮಿಸಿದ ದಿವಸ) ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಮುಖಂಡರು ಭಾಗವಹಿಸಿದ್ದರು. ಆಗ ಪ್ರತಿಭಟನಾಕಾರರು ಕಟ್ಟಡದ ಗಾಜುಗಳನ್ನು ಪಟಪಟನೆ ಬಡಿದು `ನಾಚಿಕೆಗೇಡು~, `ಜನಾಂಗೀಯ ನಿಂದನೆ~ ಎಂದು 20 ನಿಮಿಷಗಳ ಕಾಲ ಘೋಷಣೆ ಕೂಗಿದರು.

ಅಷ್ಟು ಹೊತ್ತಿಗೆ ಆಗಮಿಸಿದ ಪೊಲೀಸರು ಪ್ರಧಾನಿ ಮತ್ತು ಪ್ರತಿಪಕ್ಷದ ನಾಯಕರನ್ನು ಪ್ರತಿಭಟನಾಕಾರರ ಜಂಗುಳಿಯ ನಡುವೆಯೇ ಸುರಕ್ಷಿತವಾಗಿ ಹೊರಗೆ ಕರೆತಂದರು ಎಂದು `ಟೆಲಿಗ್ರಾಫ್~ ಪತ್ರಿಕೆ ವರದಿ ಮಾಡಿದೆ.

ಆತಂಕದಿಂದ ಕಂಪಿಸುತ್ತಿದ್ದವರಂತೆ ಕಂಡ ಪ್ರಧಾನಿ ಗಿಲ್ಲಾರ್ಡ್, ಹಳೇ ಸಂಸತ್ ಭವನದ ಸನಿಹದಲ್ಲೇ ಇದ್ದ ಹೋಟೆಲ್‌ನಿಂದ ಹೊರಬಂದಾಗ ಎಡವಿದರು. ಅವರ ಕಾಲಿನಿಂದ ಶೂ ಕಳಚಿ ಬಿತ್ತು. ಆಗ ಅಂಗ ರಕ್ಷಕರು ಅವರ ನೆರವಿಗೆ ಧಾವಿಸಿದರು ಮತ್ತು ಬಿದ್ದಿದ್ದ ಶೂ ಅನ್ನು ಗಿಲ್ಲಾರ್ಡ್ ಮತ್ತು ಟೋನಿ ಅಬೋಟ್ ಅವರು ಕುಳಿತಿದ್ದ ಕಾರಿನತ್ತ ತೆಗೆದುಕೊಂಡು ಹೋದರು. ಈ ಕಾರನ್ನು ಬೆನ್ನಟ್ಟಿದ ಪ್ರತಿಭಟನಾಕರರು ಕಾರಿನ ಗಾಜು ಮತ್ತು ಬಾನೆಟ್‌ಗಳ ಮೇಲೂ ಬಡಿಯತೊಡಗಿದರು.

ಆಸ್ಟ್ರೇಲಿಯಾದ ಮೂಲನಿವಾಸಿಗಳ ಶಿಬಿರದ ಕಚೇರಿಗೆ ಸಂಸತ್ತಿನ ಆವರಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿರುವುದನ್ನು ಪ್ರತಿಪಕ್ಷದ ನಾಯಕ ಟೋನಿ ಅಬೋಟ್ ಪ್ರಶ್ನಿಸಿದ ಕಾರಣ ಮೂಲನಿವಾಸಿಗಳ ಹಕ್ಕಿಗಾಗಿ ಹೋರಾಟ ಮಾಡುತ್ತಿರುವವರು ಪ್ರತಿಭಟನೆ ನಡೆಸಿದರು ಎಂದು `ಟೆಲಿಗ್ರಾಫ್~ ವರದಿ ಮಾಡಿದೆ.
ಮೂಲನಿವಾಸಿಗಳ ಶಿಬಿರದ ಕಚೇರಿಯು 40ನೇ ವರ್ಷದ ಆಚರಣೆಯನ್ನು ಸಂಸತ್ ಆವರಣದಲ್ಲಿರುವ ಹುಲ್ಲುಹಾಸಿನ ಮೇಲೆ ಆಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT