ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವರ ನೀಡುವುದೇ ಯುಕ್ತ!

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಜ್ಯದ ಹಲವು ಶಾಸಕರು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ ಎಂಬ ಸಂಗತಿ ಇತ್ತೀಚೆಗೆ  ಪತ್ರಿಕೆಗಳಲ್ಲಿ ವರದಿಯಾಗಿದೆ.   ಶಾಸಕರು ಪ್ರತೀ ವರ್ಷ ಕಡ್ಡಾಯವಾಗಿ  ಲೋಕಾ­ಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿದೆ. ಆದರೆ ಹಲವರು ಇದನ್ನು ಗಂಭೀರವಾಗಿ ಪರಿಗಣಿ­ಸುತ್ತಿಲ್ಲ. ಅಷ್ಟೇ ಅಲ್ಲ, ಜನಪ್ರತಿನಿಧಿಗಳು ಸಲ್ಲಿಸಿ­ರುವ ಆಸ್ತಿ ವಿವರವೂ ಎಷ್ಟರಮಟ್ಟಿಗೆ ಸತ್ಯಾಂಶ­ದಿಂದ ಕೂಡಿದೆ ಎನ್ನುವುದನ್ನು ಸಾರ್ವಜನಿಕರು  ತಿಳಿಯಲು ಆಗುತ್ತಿಲ್ಲ. ಏಕೆಂದರೆ ಲೋಕಾ­ಯುಕ್ತ, ಜನಪ್ರತಿನಿಧಿಗಳ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲು ನಿರಾಕರಿಸುತ್ತದೆ.

ಆಗ ವಿಧಾನಸಭಾ ಚುನಾವಣೆ ಸಮೀಪಿಸಿತ್ತು. ಮಾರ್ಚ್ ೧೮ರಂದು ನಾನು,  ಕೆಲವು ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ  ನೀಡುವಂತೆ ಕೋರಿದ್ದೆ. ಆದರೆ ಲೋಕಾಯುಕ್ತ ಆ ಮಾಹಿತಿ ನೀಡಲು ನಿರಾ­ಕರಿಸಿತು.

ಅದಕ್ಕೆ ಲೋಕಾಯುಕ್ತ ಕೊಟ್ಟ ಕಾರಣ: ‘ಮಾಹಿತಿ ಹಕ್ಕು ಕಾಯ್ದೆಯಡಿ ನಾಗರಿಕರಿಗೆ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಸಂಗತಿ­ಗಳ ಬಗ್ಗೆ ಮಾತ್ರ ಮಾಹಿತಿ ನೀಡಲಾಗುತ್ತದೆ. ನೀವು ಕೆಲವು ವ್ಯಕ್ತಿಗಳ ಖಾಸಗಿ ವಿವರಗಳ ಬಗ್ಗೆ ಮಾಹಿತಿ ಕೇಳಿದ್ದೀರಿ. ಇದು ಸಾರ್ವಜನಿಕ ಪ್ರಾಧಿ­ಕಾರ ಅಥವಾ ಆಡಳಿತಕ್ಕೆ ಸಂಬಂಧಿಸಿದ ಸಾರ್ವ­ಜನಿಕ ವಿಷಯವಲ್ಲ’. ಜೊತೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ‘ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಅಪರಾಧದ ಹಿನ್ನೆಲೆ ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳು ಮುಖ್ಯವೇ ಹೊರತು ಅವರ ವೈಯಕ್ತಿಕ ಆಸ್ತಿ ವಿವರಗಳಲ್ಲ. ಅಂತಹ ವ್ಯಕ್ತಿಗತ ವಿವರ ನೀಡುವು­ದರಿಂದ ಅವರ ಖಾಸಗಿ ಬದುಕನ್ನು ಅತಿಕ್ರಮಿಸಿ ದಂತಾಗುತ್ತದೆ ಮತ್ತು ಇಂತಹ ಕ್ರಮ ಅವರ ಆಸ್ತಿ ಮತ್ತು ಕುಟುಂಬದ ಜೀವಕ್ಕೆ ಹಾನಿ ಉಂಟು ಮಾಡಬಹುದು. ಇಂತಹ ಮಾಹಿತಿಯನ್ನು ಬಹಿರಂಗಪಡಿಸುವಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ’ ಎಂದು  ಮಾಹಿತಿ ನೀಡಲು ನಿರಾಕರಿಸಿದರು.

ಬಳಿಕ ನಾನು ಮತ್ತೆ ಲೋಕಾಯುಕ್ತದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಪತ್ರ ಬರೆದು ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲರ ಆಸ್ತಿ ವಿವರಗಳನ್ನು ತಮ್ಮ ನಾಮಪತ್ರದೊಂದಿಗೆ ಘೋಷಿಸಬೇಕು. ಆ ಆಸ್ತಿ ವಿವರವನ್ನು ಚುನಾ­ವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ­ವಾಗಿ ಪ್ರಕಟಿಸಲಾಗುತ್ತದೆ. ಈ ವಿವರಗಳನ್ನು ಯಾರು ಬೇಕಾದರೂ ಪಡೆಯಬಹುದಾಗಿದೆ.

ನಾನು ಆಸ್ತಿ ವಿವರ ಕೇಳಿರುವ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿದ್ದಾರೆ. ಈಗಾಗಲೇ ಚುನಾವಣೆಗೆ ನಿಂತು ತಮ್ಮ ಆಸ್ತಿಯನ್ನು ಘೋಷಿಸಿ­ಕೊಂಡವರೇ ಆಗಿದ್ದಾರೆ. ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸುವ ಸಂಭವ­ವಿರುವುದರಿಂದ ಲೋಕಾಯುಕ್ತಕ್ಕೆ ಅವರು ನೀಡಿರುವ ಆಸ್ತಿ ವಿವರಗಳನ್ನು ಏಕೆ ಕೊಡ­ಲಾಗು­ವುದಿಲ್ಲ ಎಂದು  ಕೇಳಿದೆ. ಅದಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಉತ್ತರಿಸಿ ಮಾಹಿತಿಯ ವ್ಯಾಖ್ಯೆಯಲ್ಲಿ ‘ಏಕೆ’ ಎಂಬುದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಒಂದು ವಿಷಯದ ಸಮರ್ಥನೆಗೆ ಕಾರಣ ಕೇಳಿದಂತಾಗುತ್ತದೆ. 

ಸಾರ್ವಜನಿಕ ಮಾಹಿತಿ ಪ್ರಾಧಿಕಾರಗಳು ಸಾರ್ವಜನಿಕರಿಗೆ ಯಾವುದನ್ನು ಏಕೆ ಮಾಡಿದೆ ಅಥವಾ ಮಾಡಿಲ್ಲ ಎಂದು ಸಮರ್ಥನೆ ನೀಡುವ ಅಗತ್ಯವಿಲ್ಲ. ಏಕೆಂದರೆ ಸಾರ್ವಜನಿಕರು ಮಾಹಿತಿಗಾಗಿ ಕೇವಲ ಕೋರಿಕೆ ಸಲ್ಲಿಸುತ್ತಾರೆ, ಸ್ಪಷ್ಟೀಕರಣ ಹಾಗೂ ಕಾರಣ ನೀಡುವುದು ಪ್ರಾಧಿಕಾರದ ಆಂತರಿಕ ವಿಚಾರಗಳು ಎಂಬರ್ಥದಲ್ಲಿ ಮತ್ತೆ ಮಾಹಿತಿ ನೀಡಲು ಸ್ಪಷ್ಟವಾಗಿ ನಿರಾಕರಿಸಿದರು.

ನನ್ನ ಪ್ರಶ್ನೆ ಇಷ್ಟು. ಅಧಿಕಾರಿಗಳ ಅಥವಾ ಉದ್ಯಮಿಗಳ ಆಸ್ತಿ ವಿವರ ಕೇಳುವುದು ಅವರ ಖಾಸಗಿ ಬದುಕಿನ ಅತಿಕ್ರಮಣ ಎನಿಸಬಹುದು. ಹಲವರು ಮಾಹಿತಿ ಹಕ್ಕಿನ ಹೆಸರಿನಲ್ಲಿ ಬೇರೆ­ಯವರ ವೈಯಕ್ತಿಕ ಬದುಕಿಗೆ ಹಾನಿ ಉಂಟು ಮಾಡಿ, ಮಾನಸಿಕ ಹಿಂಸೆ ನೀಡಿ ಲಾಭ ಮಾಡಿ­ಕೊಳ್ಳಲು ಪ್ರಯತ್ನಿಸಬಹುದು. ಆರ್‌ಟಿಐ ಸೆಕ್ಷನ್ ೮(೧)ಜೆ ಅನ್ವಯ ಬಾಂಬೆ ಹೈಕೋರ್ಟ್ ವ್ಯಕ್ತಿಯೊಬ್ಬ ಹೊಂದಿರುವ ಆಸ್ತಿಯು ಸಾರ್ವಜನಿಕ ಚಟುವಟಿಕೆ ಇಲ್ಲವೇ ಹಿತಾಸಕ್ತಿಗೆ ಸಂಬಂಧಿಸದೇ ಇದ್ದಲ್ಲಿ ಆ ಕುರಿತು ಮಾಹಿತಿ ಅಧಿಕಾರಿ ವಿವರಗಳನ್ನು ಒದಗಿಸುವ ಅಗತ್ಯ ಇಲ್ಲ ಎಂದು ಹೇಳಿರುವುದು ಸರಿಯಾಗೇ ಇದೆ. (ಅವರನ್ನು ಬಾ್ಲ್ಯಾಕ್‌ಮೇಲ್ ಮಾಡುವ ಉದ್ದೇಶವಿಲ್ಲದೆ ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪ್ರಾಮಾಣಿಕ ಪ್ರಯತ್ನ­ವಾದರೆ ನಿಜಕ್ಕೂ ಅದೂ ತಪ್ಪಲ್ಲ.)  ಆದರೆ ಸಾರ್ವಜನಿಕ ಬದುಕಿನಲ್ಲೇ ಇರುವ ಜನಪ್ರತಿನಿಧಿ­ಗಳ ಆಸ್ತಿ ವಿವರ ನೀಡುವುದು ಹೇಗೆ ಖಾಸಗಿ ಬದುಕಿನ ಅತಿಕ್ರಮಣವಾಗುತ್ತದೆ?

ಜನಪ್ರತಿನಿಧಿ­ಗಳನ್ನು ಲೋಕಾಯುಕ್ತ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಚುನಾವಣಾ ಆಯೋಗ ಬೇರೆ ಬೇರೆಯಾಗಿ ವ್ಯಾಖ್ಯಾನಿಸಿವೆಯೇ? ಚುನಾವಣಾ ಆಯೋಗ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಕಡ್ಡಾಯ­ವಾಗಿ  ತಮ್ಮ ಹಾಗೂ ಕುಟುಂಬದ ಆಸ್ತಿ ಮತ್ತು ಅಪರಾಧಗಳ ಘೋಷಣೆ  ಮಾಡಬೇಕೆಂದು ಆದೇಶಿಸಿದೆ. ಆ ಪ್ರಕಾರ ಈ ಆಸ್ತಿ ವಿವರಗಳು ಸಾರ್ವ­ಜನಿಕ ದಾಖಲೆಗಳಾಗಿ ಯಾರು ಬೇಕಾ­ದರೂ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯ­ಬಹುದಾಗಿರುತ್ತದೆ. ಇಲ್ಲಿ ಬಾರದ ಖಾಸಗಿ ಬದುಕಿನ ಅತಿಕ್ರಮಣದ ವಿಚಾರ ಲೋಕಾಯುಕ್ತ ದವರು ಇದೇ ಜನಪ್ರತಿನಿಧಿಗಳ ಆಸ್ತಿ ವಿವರ ನೀಡಿದರೆ ಆಗ ಅತಿಕ್ರಮಣ ಹೇಗಾಗು­ತ್ತದೆ?

ಚುನಾವಣೆಗೆ ನಿಲ್ಲುವ ಒಬ್ಬ ವ್ಯಕ್ತಿ ಕೋಟ್ಯಂತರ ರೂಪಾಯಿ ಆಸ್ತಿ ಘೋಷಿಸುತ್ತಾನೆ. ಈ ಸಂದರ್ಭದಲ್ಲಿ ಅವನ ಆಸ್ತಿಗೆ ಹಾನಿ ಆಗುತ್ತದೆಯೇ? ಅವನ ಕುಟುಂಬಕ್ಕೆ ಯಾರಾ­ದರೂ ಜೀವ ಬೆದರಿಕೆ ಒಡು್ಡತಾ್ತರೆಯೇ? (ರಾಜಕೀಯದವರು ಸಾಮಾನ್ಯರಿಗೆ ಹೆದರು­ವಷ್ಟು ಪುಕ್ಕಲು ವ್ಯಕಿ್ತಗಳೇ ? ಆಸ್ತಿ ವಿವರ ಪಡೆದು ಒಬ್ಬ ಸಾಮಾನ್ಯ ವ್ಯಕ್ತಿ ಈ ದೇಶದ ರಾಜ­ಕಾರಣಿಯನ್ನು ಹೆದರಿಸುವುದನು್ನ  ಯಾರೂ ಊಹಿಸಲಿಕ್ಕೆ ಸಾಧ್ಯವಿಲ್ಲ. ಹಾಗೆ ನೋಡಿದರೆ ನಿಜವಾಗಿ ಜೀವ ಬೆದರಿಕೆ ಮತ್ತು ಹಾನಿ ಹಲವು ಜನಪ್ರತಿನಿಧಿಗಳಿಂದ ಸಾರ್ವಜನಿಕರಿಗೇ ಆಗಿ­ರುತ್ತದೆ) ಲೋಕಾಯುಕ್ತದವರು ಆಸ್ತಿ ವಿವರ ನೀಡುವುದರಿಂದ ಇಂತಹ ಪ್ರಮಾದಗಳು ಘಟಿಸುತ್ತವೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹೇಗೆ ನಿರ್ಧಾರಕ್ಕೆ ಬರುತ್ತಾರೆ?

ಇನ್ನೊಂದು ಸ್ವಾರಸ್ಯದ ಸಂಗತಿಯೆಂದರೆ ಲೋಕಾಯುಕ್ತ,  ೨೦೦೮ರ ಜುಲೈ ೧ರಿಂದ ಇಂತಹ ವಿವರಗಳನ್ನು ನೀಡುತ್ತಿಲ್ಲ ಎಂದು
ಹೇಳಲಾಗಿದೆ.

೨೦೦೮ರ ಆಗಸ್ಟ್ ನಲ್ಲಿ  ಇದೇ ಲೋಕಾಯುಕ್ತ  ನನಗೆ ಇದೇ ಮೂವರು ಜನಪ್ರತಿನಿಧಿಗಳ ಆಸ್ತಿ ವಿವರಗಳ ದಾಖಲೆಗಳ ಪ್ರತಿ ನೀಡಿದೆ. ಆಗ ಈ ವಿವರಗಳನ್ನು ಲೋಕಾಯುಕ್ತ ಹೇಗೆ ನೀಡಿತು ಎಂದು ಕೇಳಿದರೆ ಅದಕ್ಕೆ ಸ್ಪಷ್ಟೀಕರಣ ಕೊಡು­ವುದು ಮಾಹಿತಿ ಹಕ್ಕು ಕಾಯ್ದೆಯಡಿ ಬರುವು­ದಿಲ್ಲ ಎಂದು ನುಣುಚಿಕೊಳ್ಳುವುದು ಸರಿಯೇ?

ಜನಪ್ರತಿನಿಧಿಯೊಬ್ಬರ ಆಸ್ತಿ ಅವರೇ ಘೋಷಿಸಿ­ಕೊಂಡಂತೆ ಎಂಟು ವರ್ಷಗಳಲ್ಲಿ ಎಂಟು ಪಟ್ಟು ಹೆಚ್ಚಾಗುತ್ತದೆ. ಮತ್ತೊಬ್ಬ ಜನಪ್ರತಿನಿಧಿಯ ಆಸ್ತಿ ನಾಲ್ಕು ವರ್ಷಗಳಲ್ಲಿ ಶೇ ೧೪೩ರಷ್ಟು ಹೆಚ್ಚಾಗುತ್ತದೆ. ಮುಂದಿನ ಎಂಟೇ ತಿಂಗಳಲ್ಲಿ ಶೇ ೮೧ರಷ್ಟು ಹೆಚ್ಚಾಗುತ್ತದೆ. ಮತ್ತೆ ನಾಲ್ಕು ವರ್ಷಗಳಲ್ಲಿ ಶೇ ೮೫ರಷ್ಟು ಹೆಚ್ಚಾಗುತ್ತದೆ. ಲೋಕಾಯುಕ್ತ, ಜನಪ್ರತಿನಿಧಿಗಳ ಆಸ್ತಿ ವಿವರಗಳನ್ನು ಪ್ರತೀ ವರ್ಷ ಪಡೆಯುತ್ತದೆ. ಆದರೆ ಇಂತಹ ಆಸ್ತಿಯಲ್ಲಿ ಎಷ್ಟು ಪ್ರಮಾಣದ ಹೆಚ್ಚಳ ಆಗಿದೆ? ಅದು ಕಾನೂನು ಬದ್ಧವಾಗಿದೆಯೇ? ಜನಪ್ರತಿನಿಧಿಗಳ ವರಮಾನಕ್ಕೆ ತಕ್ಕ ಪ್ರಮಾಣದಲ್ಲಿದೆಯೇ? ಎಂಬ ಬಗ್ಗೆ ತನಿಖೆ ನಡೆಸಿ ಅದನ್ನು ಸಾರ್ವಜನಿಕವಾಗಿ ಪ್ರಕಟಿಸಿದೆಯೇ ಎಂಬ ಬಗ್ಗೆ ಯಾವ ಮಾಹಿತಿ­ಯೂ ಇಲ್ಲ.

ಆದರೆ ಇದೇ ಕೆಲಸವನ್ನು ‘ಕರ್ನಾಟಕ ಎಲೆಕ್ಷನ್ ವಾಚ್’ ಮಾಡಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ಸಾರ್ವಜನಿಕರಿಗೆ ತಮ್ಮ ಜನಪ್ರತಿನಿಧಿಗಳ  ಬಗ್ಗೆ ತಿಳಿದುಕೊಳ್ಳಲು ಎಲ್ಲಾ ರೀತಿಯ ಮುಕ್ತ ಅವಕಾಶವಿರಬೇಕು. ಲೋಕಾಯುಕ್ತ, ಜನಪ್ರತಿನಿಧಿಗಳ ಆಸ್ತಿ ವಿವರ­ಗಳನ್ನು ನೀಡಲು ನಿರಾಕರಿಸುವ ಮೂಲಕ ಅವರಿಗೆ ರಕ್ಷಣೆ ನೀಡುತ್ತಿದೆ ಎಂದೇ ಭಾವಿಸ­ಬೇಕಾಗಿದೆ. ಏಕೆಂದರೆ ಈ ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಸಲ್ಲಿಸುವ ಆಸ್ತಿ ವಿವರ ಏನು ಎಂಬುದು ಯಾರಿಗೂ ತಿಳಿಯುವುದೇ ಇಲ್ಲವಲ್ಲ! ಇದು ಯಾರಿಗೂ ತಿಳಿಯಲಾರದು ಎಂದಾದ ಮೇಲೆ ಎಲ್ಲಾ ಜನಪ್ರತಿನಿಧಿಗಳೂ ಸರಿಯಾದ ಆಸ್ತಿ ವಿವರಗಳನ್ನೇ ಘೋಷಿಸಿರುತ್ತಾರೆ ಎಂದು ಹೇಗೆ ನಂಬುವುದು?

ಉದಾಹರಣೆಗೆ ೨೦೦೮ರಲ್ಲಿ ರಾಜಕೀಯ ಮುಖಂಡರೊಬ್ಬರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದ ಆಸ್ತಿ ವಿವರಗಳೇ ಬೇರೆ. ಅದೇ ವರ್ಷ ಅವರು ಲೋಕಾಯುಕ್ತಕ್ಕೆ ನೀಡಿರುವ ಆಸ್ತಿ ವಿವರಗಳೇ ಬೇರೆ! ಲೋಕಾಯುಕ್ತ ಈ ಬಗ್ಗೆ ತನಿಖೆ ನಡೆಸಿ ಈವರೆಗೆ ವಿವರಣೆ ಕೇಳಿದೆಯೋ ಇಲ್ಲವೋ ಗೊತ್ತಿಲ್ಲ. ಮತದಾರರ ನಂಬಿಕೆಗೆ ಮೋಸ ಮಾಡಿ ವಿವಿಧ ರಾಜಕೀಯ ‘ಆಪರೇಷನ್‌’ಗಳಿಗೆ ಒಳಗಾಗಿ ರಾತೊೋ ರಾತ್ರಿ ಅಕ್ರಮ ಸಂಪತ್ತು ಗಿಟ್ಟಿಸುವ ಹಲವು ಜನ­ಪ್ರತಿನಿಧಿಗಳು ನೇರವಾಗಿ ಚುನಾವಣೆಗೆ ಸ್ಪರ್ಧಿ­ಸದೆ ಹಿತ್ತಲ ಬಾಗಿಲಿನಿಂದ ಮೇಲ್ಮನೆ ಪ್ರವೇಶಿ­ಸುವ ಪ್ರವೃತ್ತಿ ಇದೆ. ಇಂತಹ ಜನಪ್ರತಿನಿಧಿಗಳು ಯಾವ ಪ್ರಮಾಣದಲ್ಲಿ ಬೆಳೆದಿದ್ದಾರೆ (?) ಎಂದು ತಿಳಿದುಕೊಳ್ಳುವ ಹಕ್ಕು ಜನಸಾಮಾನ್ಯರಿಗೆ ಇಲ್ಲವೇ? ಅಂತಹ ಮಾಹಿತಿಯನ್ನು ನಿರಾಕರಿ­ಸುವುದು ಜನರಿಗೆ ಮಾಡುವ ದ್ರೋಹವಲ್ಲವೇ?

ಅವರ ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಒರೆಹಚ್ಚುವ ಮತ್ತು ಸತ್ಯವನ್ನು ಬಯಲಿ­ಗೆಳೆಯುವ ಹಕ್ಕು ಜನರಿಗಿಲ್ಲವೇ? ಲೋಕಾಯುಕ್ತ ಈ ಮಾಹಿತಿಯೇ ನೀಡುವುದಿಲ್ಲ ಎಂದರೆ ಬೇರೆ ಯಾವ ಮೂಲದಿಂದ ಈ ಮಾಹಿತಿ ಪಡೆಯಲು ಸಾಧ್ಯ? ಇದು ಲೋಕಾಯುಕ್ತ, ಜನಪ್ರತಿನಿಧಿಗಳ  ಅಕ್ರಮ ಸಂಪತ್ತಿನ ರಕ್ಷಣೆಗೆ ಪರೋಕ್ಷವಾಗಿ ನಿಂತಂತೆ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT