ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಭದ್ರತೆಗೆ ಸುಗ್ರೀವಾಜ್ಞೆ

Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎರಡು ಮೂರಾಂಶದಷ್ಟು ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಆಹಾರ ಧಾನ್ಯ ಒದಗಿಸುವ `ಸುಗ್ರೀವಾಜ್ಞೆ'ಗೆ ಕೇಂದ್ರದ ಯುಪಿಎ ಸರ್ಕಾರ ಬುಧವಾರ ಕೊನೆಗೂ ತನ್ನ ಅನುಮೋದನೆ ನೀಡಿತು.

ರಾಷ್ಟ್ರಪತಿಗಳ ಸಹಿಯೊಂದಿಗೆ ಜಾರಿಗೆ ಬರಲಿರುವ ಸುಗ್ರೀವಾಜ್ಞೆ ಪ್ರತಿಯೊಬ್ಬರಿಗೆ ಐದು ಕೆ.ಜಿ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳನ್ನು ಕ್ರಮವಾಗಿ ಮೂರು, ಎರಡು ಮತ್ತು ಒಂದು ರೂಪಾಯಿಗೆ ಪೂರೈಸಲು ಅವಕಾಶ ಕಲ್ಪಿಸಲಿದೆ. ಸುಗ್ರೀವಾಜ್ಞೆಯು ಗುರುವಾರ ರಾಷ್ಟ್ರಪತಿಗಳ ಸಹಿಗೆ ಹೋಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದರೊಂದಿಗೆ ಯುಪಿಎ ಸರ್ಕಾರದ ಮಹತ್ವದ `ಆಹಾರ ಭದ್ರತಾ ಯೋಜನೆ'ಗೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾದಂತಾಗಿದೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ `ಆಹಾರ ಭದ್ರತೆ ಕಾಯ್ದೆ' ಜಾರಿಗೆ ಮುಂದಾಗಿದೆ. ಹೋದ ತಿಂಗಳು ಈ ವಿಷಯದ ಮೇಲಿನ ನಿರ್ಧಾರವನ್ನು ಮುಂದಕ್ಕೆ ಹಾಕಿದ್ದ ಸಚಿವ ಸಂಪುಟ ಸಭೆ ಇಂದು ಸುಗೀವಾಜ್ಞೆ ಹೊರಡಿಸುವ ಮಹತ್ವದ ನಿರ್ಣಯ ಕೈಗೊಂಡಿತು.

ಇದರೊಂದಿಗೆ ಬಹುಸಂಖ್ಯಾತ ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪೂರೈಕೆ ಮಾಡುವ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿದಂತಾಗಿದೆ. ಸರ್ಕಾರ ಈ ಉದ್ದೇಶಕ್ಕಾಗಿ   ರೂ 1,25,000 ಕೋಟಿ ಖರ್ಚು ಮಾಡಲಿದೆ. ಇದು ಜಗತ್ತಿನ ಅತಿ  ದೊಡ್ಡ ಯೋಜನೆ ಎಂದು ಭಾವಿಸಲಾಗಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ಆರಂಭಕ್ಕೆ ಕೆಲವೇ ವಾರಗಳ ಮೊದಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ನಿರ್ಧಾರ ಕೈಗೊಂಡಿದೆ. ಸುಗ್ರೀವಾಜ್ಞೆ ಹೊರಡಿಸಿದರೂ  ಯಾವುದೇ ಮಸೂದೆ ಆರು ತಿಂಗಳೊಳಗೆ  ಸಂಸತ್ತಿನ ಉಭಯ ಸದನಗಳ ಅಂಗೀಕಾರ ಪಡೆಯುವುದು ಕಡ್ಡಾಯ.

`ಅಂತ್ಯೋದಯ ಅನ್ನ ಯೋಜನೆ' (ಎಎವೈ) `ಪಡಿತರ ವ್ಯವಸ್ಥೆ'ಯಡಿ ಲಾಭ ಪಡೆಯುತ್ತಿರುವ 2.43ಕೋಟಿ ಕಡು ಬಡ ಕುಟುಂಬಗಳು ಪ್ರತಿ ತಿಂಗಳು ತಲಾ 35ಕೆ.ಜಿ ಆಹಾರ ಧಾನ್ಯ ಪಡೆಯುವ ಅವಕಾಶ ಪಡೆಯಲಿವೆ.

ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕೆ ಅಗತ್ಯ ನಿಯಮಾವಳಿ ರೂಪಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT