ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಭದ್ರತೆಯಲ್ಲಿ ದೇಶದ ಸಾರ್ವಭೌಮತೆ

Last Updated 11 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕುಳಿತಿದ್ದೆವು - ಧರಣಿ ಹೂಡಿ. ಸುಮಾರು ಐದು ನೂರಕ್ಕೂ ಹೆಚ್ಚು ಜನರು ಆಹಾರ ಭದ್ರತಾ ಕಾನೂನು ಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಬೇಡಿಕೆ ಸಲ್ಲಿಸಲು ಬಂದಿದ್ದರು. ಹಾಡುಗಳಾದವು, ಘೋಷಣೆಗಳಾದವು. ಬಹಳ ಹೊತ್ತು ಕುಳಿತಿರುವಾಗ ಮಾಡುವುದೇನು, ಜನರ ಜೊತೆಗೇ ಚರ್ಚೆ ಆರಂಭವಾಯಿತು, ನಮಗೆ ನಮ್ಮ ಪ್ರಕಾರ ಆಹಾರ ಭದ್ರತೆ ಎಂದರೆ ಹೇಗಿರಬೇಕು, ಸರ್ಕಾರದಿಂದ ಅದನ್ನು ಹೇಗೆ ನಾವು ನಿರೀಕ್ಷಿಸುತ್ತೇವೆ ಎಂದು.

ಐದು ಜನರಿರುವ ಒಂದು ದುಡಿಯುವ ಕುಟುಂಬ ಗೌರವಯುತವಾಗಿ ಬದುಕಲು ಕನಿಷ್ಠ ಎಷ್ಟು ಆಹಾರ ಬೇಕು? ತಿಂಗಳಿಗೆ ಐವತ್ತು ಕೆಜಿ ಧಾನ್ಯ, ಐದು ಕೆಜಿ ಬೇಳೆ, ಎರಡು ಕೆಜಿ ಎಣ್ಣೆ. ತರಕಾರಿ, ಮೀನು ಮೊಟ್ಟೆಯ ವಿಚಾರ ಬಂತಾದರೂ ಪಡಿತರದಲ್ಲಿ ಅದನ್ನು ಹಾಕಲು ಜನರೇ ಒಪ್ಪಲಿಲ್ಲ. ಹಾಲು ಹಣ್ಣಿನ ವಿಚಾರ ಬರಲೇ ಇಲ್ಲ. ಆದರೆ ಸ್ಥಳೀಯವಾಗಿ ಬೆಳೆಯುವ ರಾಗಿ, ಜೋಳದಂಥ ಆಹಾರಧಾನ್ಯವೂ ಪಡಿತರದಲ್ಲಿ ಸಿಗಬೇಕು, ಗುಣಮಟ್ಟದ, ಪೌಷ್ಟಿಕ ಆಹಾರ ಸಿಗಲೇ ಬೇಕು ಎಂದು ಜಿಲ್ಲಾಧಿಕಾರಿಗಳು ಹೊರಗೆ ಬರುವತನಕ ಚರ್ಚೆಗಳು ಮುಂದುವರಿದವು.

ನಾವು ಪ್ರಧಾನಿಗೆ ಕಳಿಸಿಕೊಟ್ಟ ಮನವಿಯಲ್ಲಿ ಇವೇ ವಿಷಯಗಳಿದ್ದವು.ಇಂಥ ಮನವಿ ಕೇವಲ ಬೆಳಗಾವಿಯಿಂದಲ್ಲ, ಧಾರವಾಡ, ಹಾವೇರಿ, ಚಾಮರಾಜನಗರ, ಬಾಗಲಕೋಟೆ, ರಾಯಚೂರು ಮುಂತಾದ ರಾಜ್ಯದ ಕನಿಷ್ಠ 17 ಜಿಲ್ಲೆಗಳಿಂದ ಮನವಿಗಳು ಹೋಗಿದ್ದವು. ಒಂದು ಮನವಿಯೇನು, ಮತ್ತೆ ಮತ್ತೆ ಪತ್ರಾಂದೋಲನಗಳು, ಜಾಥಾಗಳು, ರಾಷ್ಟ್ರಮಟ್ಟದ ಧರಣಿಗಳು ಎಲ್ಲವೂ ನಡೆದವು.

ಸತತವಾಗಿ ತೀರಾ ಗ್ರಾಮ ಮಟ್ಟದಿಂದ ಹಿಡಿದು ರಾಜಧಾನಿಯವರೆಗೆ, ಪಂಚಾಯತಿ ಪ್ರತಿನಿಧಿಗಳಿಂದ ಹಿಡಿದು ದೇಶದ ನೇತಾರರವರೆಗೆ ಸಮಾಲೋಚನೆಗಳು ನಡೆದವು. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೆನ್, ಆಹಾರತಜ್ಞ ಸ್ವಾಮಿನಾಥನ್ ಇವರೆಲ್ಲ ಮತ್ತೆ ಮತ್ತೆ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು, ದೇಶದ ಆಹಾರ ಭದ್ರತೆ ಎಂದರೆ ಹೇಗಿರಬೇಕೆಂದು ಪ್ರತಿಪಾದಿಸಿದರು. ಜನರ ಬೇಡಿಕೆಗಳನ್ನು ಮನ್ನಿಸಿದ ಸೋನಿಯಾಗಾಂಧಿ `ಆಹಾರದ ಹಕ್ಕಿಗಾಗಿ ಆಂದೋಲನ'ದ ಮುಂಚೂಣಿಯಲ್ಲಿದ್ದ ಜೀನ್‌ಡ್ರ್ೀ, ಅರುಣಾರಾಯ್ ಅಂಥವರನ್ನು ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಸೇರಿಸಿಕೊಂಡಾಗ ಜನರಿಗೆ, ಇನ್ನೇನು ದೇಶಕ್ಕೆ ಕಾನೂನಿನ ಮೂಲಕ ಆಹಾರ ಭದ್ರತೆ ಬಂದೇ ಬಿಟ್ಟಿತು ಎಂಬ ಭ್ರಮೆ. ತಾವೇ ಮುಂದಾಗಿ ಹೇಳಿದ ವಿಚಾರಗಳು ನಮ್ಮ ಕಾನೂನಿನಲ್ಲಿ ಅಡಕವಾಗಲಿವೆ ಎಂಬ ಆಶಯ.

ಆದರೆ ಈ ಆಶಯ ನೀರ ಮೇಲಿನ ಗುಳ್ಳೆಯಂತೆ ಒಡೆದು ಹೋಗಲು ಬಹಳ ಕಾಲ ಬೇಕಾಗಲಿಲ್ಲ. ಅಂತರರಾಷ್ಟ್ರೀಯ ಖ್ಯಾತಿಯ ಆಹಾರತಜ್ಞರಿಂದ ಬಂದ ಸಲಹೆಗಳು ಮೂಲೆಗುಂಪಾಗಿ, ಆಹಾರ ಭದ್ರತಾ ಮಸೂದೆಯೊಳಗೆ `ಕಾಳಿನ ಬದಲಿಗೆ ಕಾಸು' ಕೊಡುವಂಥ ವಿಚಾರ ಹೇಗೋ ನುಸುಳಿಕೊಂಡಿತು. ಸಂಸತ್ತಿನ ಸ್ಥಾಯಿ ಸಮಿತಿಯ ಮೇಜಿನ ಮೇಲೆ ಅದು ದೂಳು ತಿನ್ನುತ್ತ ಬಿದ್ದಿರುವಾಗ ಒಂದೇ ವಾಕ್ಯವಾಗಿ ನುಸುಳಿದ್ದ ಆಹಾರದ ಬದಲಿಗೆ ಹಣಕೊಡುವ ವಿಚಾರ, ದೇಶದೆಲ್ಲೆಡೆಯಿಂದ ಪ್ರತಿರೋಧ ವ್ಯಕ್ತವಾಗುತ್ತಿದ್ದರೂ ಪೆಡಂಭೂತದಂತೆ ಬೆಳೆದು, ಕಾನೂನಿನ ಬೆಂಬಲವಿಲ್ಲದೆಯೂ ಜಾರಿಯಲ್ಲಿ ಬರುತ್ತಿರುವುದು ಮಾತ್ರ ನಂಬಲಸಾಧ್ಯವಾದ ವಿಚಾರವಾಗಿದೆ. ಆದರೆ ನಂಬಲೇ ಬೇಕು.ಯಾಕೆಂದರೆ ಅದು ಇಂದಿನ ಸತ್ಯ. ಮೊದಲು ಗೊಬ್ಬರ, ಕೃಷಿ ಸಲಕರಣೆಗಳ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತೇನೆಂದು ವಿಚಾರ ಮಂಡಿಸಿದ್ದ ಸರ್ಕಾರ ಇಂದು ಸಾಮಾಜಿಕ ಭದ್ರತಾ ವೇತನಗಳು, ಸ್ಕಾಲರ್‌ಶಿಪ್‌ಗಳು, ಇಂಧನದ ಸಬ್ಸಿಡಿ, ಹೀಗೆ 34 ವಿವಿಧ ರೀತಿಯ ಸಹಾಯವನ್ನು ನೇರ ನಗದು ವರ್ಗಾವಣೆ ಮಾಡುತ್ತೇನೆನ್ನುತ್ತಿದೆ.ಆಹಾರದ ಬದಲಿಗೆ ಹಣವೂ ಕಳ್ಳ ಹೆಜ್ಜೆಯಲ್ಲಿ ಈ ಸವಲತ್ತಿನೊಳಗೆ ಸೇರಿಕೊಳ್ಳಲು ಹೆಚ್ಚು ದಿನ ಬೇಕಿಲ್ಲ.

ಗೌರವದಿಂದ ಬದುಕಿಕೊಳ್ಳಲು ಮನುಷ್ಯನಿಗೆ ಆಹಾರ, ಬಟ್ಟೆ ಮತ್ತು ವಸತಿ ಬೇಕೇ ಬೇಕು.ಅದನ್ನು ಸಂವಿಧಾನವು ದಯಪಾಲಿಸಿರುವಾಗ ಅದಕ್ಕೆ ಅವಕಾಶ ಮಾಡಿಕೊಡುವ ಪೂರ್ಣಜವಾಬ್ದಾರಿ ಸರ್ಕಾರದ್ದಾಗುತ್ತದೆ. ಸಂವಿಧಾನದ ಈ ಮೂಲಭೂತ ಆಶಯವನ್ನೇ ಮೂಲೆಗೊತ್ತುತ್ತಿದೆಯೇ ನಮ್ಮ ಸರ್ಕಾರ? ಕಾಂಚಾಣವೆಂದಾದರೂ ತಿನ್ನುವ ಕೂಳಿಗೆ ಸಮನಾದೀತೇ?

`ಜೈಕಿಸಾನ್' ಮಂತ್ರದಿಂದ ದೇಶಕ್ಕೆಆಹಾರದ ಸುಭದ್ರತೆಯನ್ನು ನಮ್ಮ ರೈತರು ತಂದುಕೊಟ್ಟಿದ್ದಾರೆ. ಪ್ರತಿ ವರ್ಷ65 ದಶಲಕ್ಷ ಟನ್ ಆಹಾರಧಾನ್ಯವನ್ನು ಉತ್ಪಾದಿಸಿ ದೇಶಕ್ಕಾಗಿ ಕೊಡುತ್ತಾರೆ. ದೇಶಕ್ಕೆ ಆಹಾರ ಭದ್ರತೆ ಇದ್ದರೂ ಇನ್ನೂವರೆಗೆ ದೇಶದ ನಾಗರಿಕರಿಗೆ ಆಹಾರ ಭದ್ರತೆ ಇಲ್ಲವೆಂದರೆ ಅದು ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾರಣಕ್ಕಾಗಿಯೇ ಹೊರತು ಇನ್ನಾವ ಕಾರಣಕ್ಕೂ ಅಲ್ಲ.

65 ದಶಲಕ್ಷಟನ್ ಆಹಾರ ಸಂಗ್ರಹಿಸಿಡುವ ತಾಕತ್ತಿರುವ ಈ ನಾಡಿನ ಸ್ಥಾನ ಜಾಗತಿಕ ಹಸಿವಿನ ಕೋಷ್ಟಕದಲ್ಲಿ (88 ದೇಶಗಳ ಪೈಕಿ) 67ನೆಯದ್ದು. ಅದು ಸಹಾರ ಮರುಭೂಮಿಯ ಸುತ್ತಲಿನ ದೇಶಗಳ ಪರಿಸ್ಥಿತಿಗೆ ಸಮಾನವಾದದ್ದು. ಈ ಪ್ರಗತಿಪರ ದೇಶದಲ್ಲಿ ಶೇ 45 ರಷ್ಟು ಮಕ್ಕಳು ಅಪೌಷ್ಟಿಕವಾಗಿದ್ದಾರೆನ್ನುವುದು ನಾಚಿಕೆಯಿಂದ ತಲೆತಗ್ಗಿಸಬೇಕಾದ ವಿಚಾರ ಎಂದು ನಮ್ಮ ಮೃದು ಮಾತಿನ ಪ್ರಧಾನಿ ಮನಮೋಹನ ಸಿಂಗ್‌ರು ಹೇಳುತ್ತಾರೆ. ಪಡಿತರದಲ್ಲಿ ಮತ್ತು ಅಂಗನವಾಡಿಗಳಲ್ಲಿ ಸರ್ಕಾರವು ಸ್ವತಃ ಆಹಾರವನ್ನು ಹಂಚುವುದರಿಂದಾಗಿ ಇತ್ತ ಜನರಿಗೆ ಆಹಾರ ಸಿಗುವುದಷ್ಟೇ ಅಲ್ಲ, ಅತ್ತ ಧಾನ್ಯ ಬೆಳೆದ ರೈತನ ಸಂರಕ್ಷಣೆಯೂ ಆಗುತ್ತಿರುತ್ತದೆ. ಈ ವಿಚಾರ ಸರ್ಕಾರಕ್ಕೆ ಗೊತ್ತಿಲ್ಲವೇ? ತುಟಿಯಂಚಿನಲ್ಲಿರುವ ಕಾಳಜಿ ಕಠಿಣ ಕ್ರಮಕ್ಕೆದಾರಿ ಮಾಡಿಕೊಡದಿರುವುದಕ್ಕೆ ಕಾರಣವೇನು?.

ಗೋದಾಮುಗಳಲ್ಲಿ ಸಂಗ್ರಹಿತ ಆಹಾರ ಧಾನ್ಯಗಳು ಕೊಳೆತು ಹೋಗುತ್ತಿರುವುದನ್ನು ಕಳೆದ ವರ್ಷ ಮಾಧ್ಯಮಗಳು ಬಯಲಿಗೆಳೆದಾಗ ದೇಶವಿಡೀ ನಿಬ್ಬೆರಗಾಗಿ ನೋಡಿತ್ತು.`ಕಾಳನ್ನು ಹಾಳು ಮಾಡುವ ಬದಲಿಗೆ ಬಡವರಿಗೆ ಉಚಿತವಾಗಿ ಹಂಚಿ' ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಆದೇಶ ಕೊಟ್ಟಿತು. ಒಂದು ಕಡೆ  ಸರಿಯಾದ ಸಂರಕ್ಷಣೆ ಇಲ್ಲದೆಯೇ ದವಸ ಧಾನ್ಯಗಳು ಕೊಳೆತು ಹಾಳಾಗುತ್ತಿವೆ.

ಇನ್ನೊಂದು ಕಡೆ ಮಕ್ಕಳು, ಮಹಿಳೆಯರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಆ ಆಹಾರವನ್ನೇ ಇವರಿಗೆ ತಲುಪಿಸಿ ಆರೋಗ್ಯವಂತ ಮಕ್ಕಳಿರುವ ನಾಡನ್ನು ಕಟ್ಟಬಹುದು ಎಂದು ಸರಳವಾಗಿ ನಾವು ವಿಚಾರ ಮಾಡಬಹುದು. ಆದರೆ ಸರ್ಕಾರಕ್ಕೆ ವಿಶ್ವ ಬ್ಯಾಂಕು ಹೀಗೆ ವಿಚಾರ ಮಾಡಲಿಕ್ಕೆ ಬಿಡುವುದಿಲ್ಲ. ಎಲ್ಲಾ ರೀತಿಯ ಸಾಮಾಜಿಕ ಭದ್ರತಾ ನಿಯಮಗಳನ್ನೂ ಗಾಳಿಗೆ ತೂರಬೇಕೆಂದು ಒತ್ತಡ ಹೇರುವ ವಿಶ್ವ ಬ್ಯಾಂಕ್ ರೈತರಿಗೆ ಬೆಂಬಲ ಬೆಲೆ ಕೊಟ್ಟು ಆಹಾರ ಸಂಗ್ರಹಣೆ ಮಾಡುವುದೂ ಬೇಡ, ಜನರಿಗೆ ಸಬ್ಸಿಡಿದರದಲ್ಲಿ ರೇಶನ್ನು ಕೊಟ್ಟು ಕಾಪಾಡುವುದೂ ಬೇಡ ಎಂದು ಸ್ಪಷ್ಟವಾಗಿ ತಾಕೀತು ಮಾಡಿ ಅನ್ನಕೊಡುವ ಕೈಯನ್ನೇ ಕಟ್ಟಿ ಹಾಕುತ್ತಿದೆ.

ಅಂಗನವಾಡಿಗಳಲ್ಲಿ ಕೊಡುತ್ತಿದ್ದ ಧಾನ್ಯಗಳನ್ನು ಕಾರ್ಯಕರ್ತೆಯರು ಮನೆಗೊಯ್ಯುತ್ತಾರೆಂದು ನಮ್ಮ ಕರ್ನಾಟಕದಲ್ಲಿ ಸಿದ್ಧ ಆಹಾರ ಮಾಡಿ ಹಂಚುವುದನ್ನು ಕಂಪನಿಯೊಂದಕ್ಕೆ ಗುತ್ತಿಗೆ ಕೊಡಲಾಗಿತ್ತು. ಪರಿಣಾಮವನ್ನು ಎಲ್ಲರೂ ನೋಡಿಯೇ ಇದ್ದೇವೆ. ರಾಜ್ಯದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆತಾರಕಕ್ಕೇರಿತು.ಧಾನ್ಯಗಳು ಕಳುವಾಗುತ್ತಿದ್ದರೆ, ಕಾಳಸಂತೆಗೆ ಹೋಗುತ್ತಿದ್ದರೆ ಅದಕ್ಕೆ ಪರಿಹಾರ ಹುಡುಕಬೇಕೇ ಹೊರತು ಬೇರೊಂದು ನೀತಿಯನ್ನೇ ಮಾಡುವುದಲ್ಲ ಎಂಬುದನ್ನು ಈ ಉದಾಹರಣೆ ಸಾರಿ ಸಾರಿ ಹೇಳಿದೆ. 

ರೇಷನ್‌ಅಂಗಡಿಯಲ್ಲಿ ಆಹಾರ ಸಿಗುವವರೆಗೆ ಅದರ ಮೇಲೆ ತಾಯಂದಿರ ನಿಯಂತ್ರಣ ಇರುತ್ತದೆ. ಸೆರೆಕುಡುಕ ಗಂಡನೇ ರೇಷನ್ ತಂದರೂ ಕೂಡ ಅದು ಮನೆಯನ್ನು ತಲುಪಬಹುದೆಂಬ ಭರವಸೆ ಇದೆ. ಆದರೀಗ ಧಾನ್ಯವನ್ನೇ ಕೊಡದೆ `ಬ್ಯಾಂಕಿನಿಂದ ಹಣ ತಂದು ಏನಾದರೂ ಮಾಡಿಕೊಳ್ಳಿ' ಎಂಬ ಸ್ಥಿತಿಗೆ ಎಲ್ಲರನ್ನೂ ತಂದಿಟ್ಟರೆ ಆಹಾರದ ಮೇಲಿನ ನಿಯಂತ್ರಣ ಸಂಪೂರ್ಣವಾಗಿ ಆಕೆಯ ಕೈತಪ್ಪಿಹೋಗುತ್ತದೆ. ಬ್ಯಾಂಕಿನಲ್ಲಿ ಹಣ ಸಿಗುವುದೇ ದೊಡ್ಡ ಸಂಶಯ. ಅದು ಸಿಕ್ಕರೆ ಆ ದುಡ್ಡೇನಾಗುತ್ತದೆಂಬುದು ಓದುಗರ ಕಲ್ಪನೆಗೆ ಬಿಟ್ಟ ವಿಚಾರ. ಕೈಯಲ್ಲಿ ನೂರು ರೂಪಾಯಿ ಇದ್ದರೆ ಖರ್ಚು ಮಾಡಲು ನೂರು ದಾರಿಗಳು. ಆಸ್ಪತ್ರೆ, ಔಷಧ, ಮಕ್ಕಳ ಫೀಸು, ಸಂತೆ, ಜಾತ್ರೆ . . ಒಂದೇ ಎರಡೇ? ಕಾಳಿನ ಅಂಗಡಿ ಕಾಣುವ ಹೊತ್ತಿಗೆ ಕೈ ಖಾಲಿಯಾಗಿರುತ್ತದೆ. ಹಣ ಕೊಟ್ಟರೆ ಆಹಾರವನ್ನೇ ಖರೀದಿಸುತ್ತಾರೆಂದಾದರೆ ಇಂದು ವಲಸೆ ಹೋಗಿ ಕೈತುಂಬ ದುಡಿದು ತರುವ ಜನರ ಮನೆಯಲ್ಲೆಲ್ಲ ಧವಸಧಾನ್ಯ ತುಂಬಿ ತುಳುಕಬೇಕಾಗಿತ್ತು. ಇಂದು ಅರೆಹೊಟ್ಟೆ ಉಣ್ಣುವವರ ಮನೆಯಲ್ಲೂ ಇರುವ ಝಗಮಗಿಸುವ ಟಿವಿಗಳು ದುಡ್ಡು ಹೋಗುವ ದಾರಿಯನ್ನು ಸ್ಪಷ್ಟವಾಗಿ ತೋರಿಸುತ್ತಿವೆ.

ದು ಕಡೆ `ಆಹಾರದ ಬದಲಿಗೆ ಹಣಕೊಡುವುದು ಬೇಡವೇ ಬೇಡ' ಎಂದು ಜನರು, ಜನ ಸಂಘಟನೆಗಳು, ನಾಗರಿಕ ಸಮಿತಿಗಳು.`ದೇಶದ ಆಹಾರ ಭದ್ರತೆಗೆ ಆಹಾರ ಸಂಗ್ರಹಣೆ ಮತ್ತು ಪಡಿತರ ವ್ಯವಸ್ಥೆಬೇಕೇ ಬೇಕು' ಎನ್ನುವ ಆಹಾರತಜ್ಞರು, ಆರ್ಥಿಕತಜ್ಞರು. ಇನ್ನೊಂದೆಡೆ ಸಾಲದ ಹಣದ ಥೈಲಿ ಹಿಡಿದು ಕುಣಿಯುತ್ತಿರುವ ವಿಶ್ವ ಬ್ಯಾಂಕು ಮತ್ತು ಅಂತರರಾಷ್ಟ್ರೀಯ  ಷರತ್ತುಗಳು. ಸರ್ಕಾರಕ್ಕೆ ಎರಡರಲ್ಲೊಂದನ್ನು ಆಯ್ದುಕೊಳ್ಳದೆ ಬೇರೆ ದಾರಿಯಿಲ್ಲ.

ಆಹಾರ ಭದ್ರತೆಯ ಹೆಸರಲ್ಲಿ ನಡೆಯುತ್ತಿರುವ ಇದು ಸ್ವಾತಂತ್ರ್ಯ ಸಮರವೇ ಹೊರತು ಇನ್ನೊಂದಲ್ಲ. ದೇಶದ ಸಾರ್ವಭೌಮತೆಯ ಪ್ರಶ್ನೆ ಸರ್ಕಾರದ ಮುಂದಿದೆ. ಪ್ರಜೆಗಳ ಬೇಡಿಕೆಯನ್ನು ಮನ್ನಿಸಬೇಕೇ ಅಥವಾ ವಿದೇಶೀ ಬ್ಯಾಂಕಿನ ಒತ್ತಡಕ್ಕೆ ಮಣಿಯಬೇಕೇ? ಇದನ್ನು ಒಂದು ಕಾಂಗ್ರೆಸ್ ಪಕ್ಷ ಅಥವಾ ಯುಪಿಎ ಸರಕಾರ ವೋಟಿನಾಶೆಗಾಗಿ ನಿರ್ಧರಿಸಬಾರದು. ದೇಶದ ಜನಗಳು ನಿರ್ಧರಿಸುವಂತಾಗಬೇಕು. ಏಕೆಂದರೆ ಸುಪುಷ್ಟ ಪ್ರಜೆಗಳಿಂದ ದೇಶ ಸುಭಿಕ್ಷವಾಗಿದ್ದರೆ ಸುಭದ್ರವೂಆಗಿರುತ್ತದೆ. ದೇಶದ ಪ್ರಜೆಗಳೇ ಅಪೌಷ್ಟಿಕವಾಗಿ, ರಕ್ತ ಹೀನತೆಯಿಂದ ನರಳುತ್ತಿದ್ದರೆ ಅಂಥ ದೇಶಕ್ಕೆ ಗಡಿ ಇದ್ದೇನು, ಗಡಿಯಲ್ಲಿ ಸೈನಿಕರಿದ್ದೇನು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT